

ಶಾಸಕ ಎಸ್.ಎನ್.ನಾರಾಯಣಸ್ವಾಮಿ ಸ್ಪಷ್ಟನೆ
ಬಂಗಾರಪೇಟೆ: ಕೋಮುಲ್, ಡಿಸಿಸಿ ಬ್ಯಾಂಕ್ ಹಾಗೂ ಸೋಲಾರ್ ಪ್ಲಾಂಟ್‌ನಲ್ಲಿನ ಅಕ್ರಮಗಳ ಕುರಿತು ಈ ಹಿಂದೆ ಆರೋಪ ಮಾಡಿದ್ದೇವು. ಇದೀಗ ಕೋಮುಲ್ ಅಧ್ಯಕ್ಷ ಕೆ.ವೈ. ನಂಜೇಗೌಡ ಅವರೊಂದಿಗೆ ಸ್ನೇಹದಿಂದ ಇರುವುದನ್ನೇ ಮುಂದಿಟ್ಟುಕೊಂಡು ಕೆಲವರು ಅಕ್ರಮದೊಂದಿಗೆ ರಾಜಿಯಾಗಿದ್ದಾರೆ ಎಂಬ ಆರೋಪ ಮಾಡುತ್ತಿದ್ದು, ಇದು ಆಧಾರರಹಿತ ಟೀಕೆ ಎಂದು ಶಾಸಕ ಎಸ್.ಎನ್. ನಾರಾಯಣಸ್ವಾಮಿ ತಳ್ಳಿಹಾಕಿದರು.
ಕೋಮುಲ್ ವಿಚಾರದಲ್ಲಿ ರಾಜಕೀಯ ಒತ್ತಡಕ್ಕೆ ಮಣಿದು, ರಾಜಿಯಾಗಿದ್ದಾರೆ ಎಂಬ ರೀತಿಯಲ್ಲಿ ಸಾಮಾಜಿಕ ಹೋರಾಟಗಾರ ಕೆ.ಎಂ. ಅನಂತ್ ಕೀರ್ತಿ ಹಾಗೂ ಡಿ. ಮುನೀಫ್ ಮಾಡಿದ ಆರೋಪಗಳಿಗೆ ಪ್ರತಿಕ್ರಿಯಿಸಿ ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ವಾತನಾಡಿ, ನಂಜೇಗೌಡ ಅವರೊಂದಿಗೆ ವೈಯಕ್ತಿಕ ಸ್ನೇಹ ಮತ್ತು ಉತ್ತಮ ಸಂಬಂಧ ಹೊಂದಿರುವುದು ಬೇರೆ ವಿಚಾರ, ವೈಯಕ್ತಿಕ ಸ್ನೇಹಕ್ಕಿಂತ ಸಾರ್ವಜನಿಕರ ಹಿತವೇ ಮುಖ್ಯ. ಬಡವರು, ಮಹಿಳೆಯರು ಹಾಗೂ ರೈತರಿಗೆ ಅನ್ಯಾಯವಾದರೆ ಸಂಬಂಧ ಲೆಕ್ಕಿಸದೆ ಪ್ರಶ್ನಿಸುವುದಾಗಿ ತಿಳಿಸಿದರು.
ಕೋಮುಲ್ ಆಗಲಿ, ಡಿಸಿಸಿ ಬ್ಯಾಂಕ್ ಆಗಲಿ, ಯಾರೇ ತಪ್ಪು ವಾಡಿದರೂ ಕಾನೂನುಬದ್ಧವಾಗಿ ಪ್ರಶ್ನಿಸುತ್ತೇನೆ. ಈ ಹಿಂದೆ ಎತ್ತಿದ್ದ ಪ್ರಶ್ನೆಗಳು ಮತ್ತು ಮಾಡಿದ್ದ ಆರೋಪಗಳಿಂದ ಹಿಂದೆ ಸರಿದಿಲ್ಲ. ತಮ್ಮ ನಿಲುವಿನಲ್ಲಿ ಯಾವುದೇ ಬದಲಾವಣೆಯಾಗಿಲ್ಲ ಎಂದು ಸ್ಪಷ್ಟಪಡಿಸಿದರು.
ಕೋಮುಲ್‌ನಲ್ಲಿನ ಸಮಸ್ಯೆ ಕುರಿತು ಇಂದಿಗೂ ಹೋರಾಟ ಮುಂದುವರಿಸಿದ್ದು, ರೈತರು, ಬಡವರು ಹಾಗೂ ಮಹಿಳೆಯರ ಪರವಾಗಿ ಧ್ವನಿ ಎತ್ತುವುದೇ ನಮ್ಮ ಉದ್ದೇಶ, ಯಾವುದೇ ಸಾಕ್ಷ್ಯಧಾರವಿಲ್ಲದೇ ಆರೋಪ ಮಾಡುವುದು ಸರಿಯಲ್ಲ ಎಂದರು.
ವಿವಿಧ ಅಕ್ರಮಗಳ ಕುರಿತು ಸರ್ಕಾರಕ್ಕೆ ಸಲ್ಲಿಸಿರುವ ಮನವಿ, ಅರ್ಜಿ ಹಾಗೂ ದೂರು ಹಿಂಪಡೆದಿಲ್ಲ. ಅಗತ್ಯ ಕಾನೂನು ಹೋರಾಟ ಮುಂದುವರಿಯಲಿದೆ . ಕೋಮುಲ್‌ಗೆ ಭೇಟಿ ನೀಡಿ ರೈತರು ಹಾಗೂ ಬಡವರ ಪರ, ಜನಪರ ಕಾರ್ಯಕ್ರಮ ಕೈಗೊಂಡಿದ್ದೇನೆ. ಹೋರಾಟವನ್ನು ರಾಜಕೀಯ ಹೊಂದಾಣಿಕೆಗೆ ತಳುಕು ಹಾಕುವುದು ಸರಿಯಲ್ಲ ಎಂದರು.