ಕೋಮುಲ್ ಅಂಗಳದಲ್ಲಿ ಮೊಬೈಲ್ ನಿಷೇಧ!

ಕೋಲಾರ ಹಾಲು ಸಹಕಾರ ಸಂಘಗಳ ಒಕ್ಕೂಟ ಕಚೇರಿ.
ಕೋಲಾರ ಹಾಲು ಸಹಕಾರ ಸಂಘಗಳ ಒಕ್ಕೂಟ ಕಚೇರಿ.
Published on
ಕಿರುವಾರ ಎಸ್. ಸುದರ್ಶನ್ ಕೋಲಾರ
ಕೋಲಾರ ಹಾಲು ಸಹಕಾರ ಸಂಘಗಳ (ಕೋಮುಲ್) ಒಕ್ಕೂಟದ ಆವರಣದಲ್ಲಿ ಸ್ಮಾರ್ಟ್ ಫೋನ್ ಬಳಕೆ ನಿಷೇಧಿಸಲಾಗಿದೆ. ಈ ನಿಯಮ ಮಾ.2ರಿಂದಲೇ (ಸೋಮವಾರ) ಕಡ್ಡಾಯವಾಗಿ ಜಾರಿಗೆ ಬರಲಿದೆ. ಈ ಬೆನ್ನಲ್ಲೇ ಆಡಳಿತ ಮಂಡಳಿ ತೀರ್ಮಾನ ಚರ್ಚೆಗೆ ಗ್ರಾಸವಾಗಿದೆ.
ಹಾಲು ಉತ್ಪನ್ನಗಳ ತಯಾರಿಕಾ ಘಟಕದಲ್ಲಿ ಹಲವು ನ್ಯೂನತೆ ಕಂಡು ಬಂದಿದ್ದವು. ಇದನ್ನು ಕೆಲ ಸಿಬ್ಬಂದಿ, ಕಾರ್ಮಿಕರು ಮೊಬೈಲ್‌ನಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟಿದ್ದರು. ತಪ್ಪು ಮರೆ ಮಾಚುವ ಉದ್ದೇಶದಿಂದಲೇ ಈ ಕ್ರಮವಹಿಸಿದೆ ಎಂಬ ಟೀಕೆಗಳು ಶುರುವಾಗಿವೆ.
ಉತ್ಪಾದನಾ ಘಟಕದಲ್ಲಿ ತುಪ್ಪ ಸೋರಿಕೆ, ಹಾಲಿನ ಉತ್ಪನ್ನಗಳ ಕಳವು ಆಗಾಗ ಬೆಳಕಿಗೆ ಬರುತ್ತಲೇ ಇರುತ್ತದೆ. ಆದರೆ ನಿರ್ಲಕ್ಷ್ಯ ತೋರಿರುವವರ ವಿರುದ್ಧ ಕ್ರಮ ವಹಿಸಿರುವುದು ವಿರಳ. ಇತ್ತೀಚೆಗೆ ನೂರಾರು ಲೀಟರ್ ತುಪ್ಪ ಮಣ್ಣು ಪಾಲಾಗಿದ್ದನ್ನು ಸಿಬ್ಬಂದಿ ಫೋಟೋ, ವಿಡಿಯೋ ಮಾಡಿ ಮಾಧ್ಯಮಕ್ಕೆ ನೀಡಿದ್ದರು. ಇದು ಪತ್ರಿಕೆಗಳಲ್ಲಿ ಪ್ರಕಟಗೊಳ್ಳುತ್ತಿದ್ದಂತೆ ಬೆದರಿದ ಅಧಿಕಾರಿಗಳು, ಆಡಳಿತ ಮಂಡಳಿ ಸ್ಮಾರ್ಟ್‌ ಫೋನ್ ನಿಷೇಧಿಸಿ, ಕೀ ಪ್ಯಾಡ್ ಬಳಕೆ ಮಾಡಲು ಅವಕಾಶ ಕಲ್ಪಿಸಿದೆ.
ಒಕ್ಕೂಟದ ಅಧ್ಯಕ್ಷ ಕೆ.ವೈ.ನಂಜೇಗೌಡ ಅಧ್ಯಕ್ಷತೆಯಲ್ಲಿ ಫೆ.9ರಂದು ನಡೆದ ಆಡಳಿತ ಮಂಡಳಿ ಸಭೆಯಲ್ಲಿ ಈ ನಿರ್ಧಾರ ಕೈಗೊಂಡು ಮಾ.2ರಿಂದಲೇ ನಿಯಮ ಜಾರಿಗೆ ಬರಲಿದೆ. ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳಿಗೆ, ಸಿಬ್ಬಂದಿಗೆ ತಿಳಿವಳಿಕೆ ಪತ್ರ ಕಳಿಸಲಾಗಿದೆ. ಈ ಕ್ರಮಕ್ಕೆ ಕೆಲ ಅಧಿಕಾರಿಗಳು, ಸಿಬ್ಬಂದಿ ಹಾಗೂ ಗುತ್ತಿಗೆ ಕಾರ್ಮಿಕರಿಂದಲೂ ಆಕ್ಷೇಪ ವ್ಯಕ್ತವಾಗಿದೆ.
ಇತ್ತೀಚೆಗೆ ತುಪ್ಪ ವಿಭಾಗದ ಚಿತ್ರಗಳು ಎಲ್ಲೆಡೆ ಹಬ್ಬಿ ಆಡಳಿತ ಮಂಡಳಿ ನಿರ್ಬಂಧ ವಿಧಿಸಿದೆ ಎಂದು ಕೋಮುಲ್ ವ್ಯವಸ್ಥಾಪಕ ನಿರ್ದೇಶಕ ಕೆ.ಎನ್. ಗೋಪಾಲಮೂರ್ತಿ ಹೊರಡಿಸಿರುವ ಆದೇಶದಲ್ಲಿ ಉಲ್ಲೇಖಿಸಿದ್ದಾರೆ. ಕೋಮುಲ್ ಆಡಳಿತ ಮಂಡಳಿಯು ಒಕ್ಕೂಟದ ವಿವಿಧ ವಿಭಾಗಗಳಿಗೆ ಅವಶ್ಯವಿರುವ 19 ಕೀ ಪ್ಯಾಡ್ ಫೋನ್ ಹಾಗೂ 19 ಸಿಮ್ ಖರೀದಿಸಿ ಸಿಬ್ಬಂದಿಗೆ ಕೊಡಲಿದೆ. ವಿಭಾಗದ ದೈನಂದಿನ ಕೆಲಸ ಕಾರ್ಯಗಳಿಗೆ ಸಂಬಂಧಿಸಿದಂತೆ ಪಾಳಿಯಲ್ಲಿ ಹಾಜರಿರುವ ಸಿಬ್ಬಂದಿ ಬಳಸಲು ಸೂಚಿಸಿದೆ. ಮೊಬೈಲ್ ಬಳಕೆ ಸಂಬಂಧ ನಿಗಾ ಇಡಲು ಕಾರ್ಯಪಡೆ ರಚಿಸಲಾಗಿದೆ. ನಿಯಮ ಉಲ್ಲಂಘಿಸಿರುವುದು ಈ ಕಾರ್ಯಪಡೆಗೆ ಕಂಡುಬಂದರೆ ಶಿಸ್ತಿನ ಕ್ರಮ ಕೈಗೊಳ್ಳಲಾಗುವುದು ಎಂದು ಆದೇಶದಲ್ಲಿ ನಿರ್ದೇಶಕರು ಎಚ್ಚರಿಕೆ ನೀಡಿದ್ದಾರೆ.
ಕಾಲಹರಣವೂ ಕಾರಣ
ಕೆಲ ವಿಡಿಯೋಗಳು ಹೊರಗೆ ಗೊತ್ತಾಗುತ್ತದೆ ಎಂಬ ಕಾರಣ ಒಂದು ಕಡೆಯಾದರೆ ಮತ್ತೊಂದು ಕಡೆ ಸಿಬ್ಬಂದಿ, ಅಧಿಕಾರಿಗಳು ಮೊಬೈಲ್ ನಲ್ಲಿ ಹೆಚ್ಚಾಗಿ ಕಾಲಹರಣ ಮಾಡುವುದು. ಸಾಮಾಜಿಕ ಜಾಲತಾಣಗಳ ಬಳಕೆ ಹೆಚ್ಚಾಗಿದ್ದು ನಿಷೇಧಕ್ಕೆ ಕಾರಣವಾಗಿದೆ.
ಯಾರಿಗೆ ಸ್ಮಾರ್ಟ್, ಯಾರಿಗೆ ಕೀಪ್ಯಾಡ್ ?
ಚರ್ಚಿಸಿ ಆಡಳಿತಾತ್ಮಕ ದೃಷ್ಟಿಯಿಂದ ವಿಭಾಗಾಧಿಕಾರಿಗಳು ಸೂಚಿಸುವ ಕೆಲ ಅಧಿಕಾರಿಗಳು ಮಾತ್ರ ಸ್ಮಾರ್ಟ್ ಮೊಬೈಲ್ ಬಳಸಲು ಅವಕಾಶ, ಇನ್ನುಳಿದ ಸಿಬ್ಬಂದಿಗೆ ಕೀ ಪ್ಯಾಡ್ ಬಳಸಲು ಅವಕಾಶ ನೀಡಲಾಗಿದೆ. ಉಳಿದ ಅಧಿಕಾರಿಗಳು, ಗುತ್ತಿಗೆ ಸಮಾಲೋಚಕರು, ಗುತ್ತಿಗೆ ಕಾರ್ಮಿಕರು, ಭದ್ರತಾ ಸಿಬ್ಬಂದಿ ಯಾವುದೇ ರೀತಿಯ ಮೊಬೈಲ್ ತರುವಂತಿಲ್ಲ. ಯಾರು ಬಳಸಬೇಕು-ಯಾರು ಬಳಸಬಾರದು ಎಂಬುದರ ಪಟ್ಟಿ ಸಿದ್ಧಪಡಿಸಿದ್ದಾರೆ. ಮಾರುಕಟ್ಟೆ ವಿಭಾಗದ ಇಬ್ಬರು ಸಹಾಯಕ ವ್ಯವಸ್ಥಾಪಕರು ಹಾಗೂ ಮಾರುಕಟ್ಟೆ ಅಧಿಕಾರಿಯು ಆವರಣದಲ್ಲಿ ಸ್ಮಾರ್ಟ್ ಫೋನ್ ಬಳಸಬಹುದಾಗಿದೆ. ಹಾಗೆಯೇ ಆಡಳಿತ ವಿಭಾಗದ ಮೂವರು, ಲೆಕ್ಕ ವಿಭಾಗದ ಇಬ್ಬರು, ಎಂಐಎಸ್ ವಿಭಾಗದ ಒಬ್ಬರು, ಶೇಖರಣೆ ಮತ್ತು ತಾಂತ್ರಿಕ ವಿಭಾಗದ ನಾಲ್ವರು, ಮಾರುಕಟ್ಟೆ ವಿಭಾಗದ ಮೂವರು, ಇಂಜಿನಿಯರಿಂಗ್ ವಿಭಾಗದ ಇಬ್ಬರು, ಮೂವರು ಗುತ್ತಿಗೆ ಚಾಲಕರು ಕೀ ಪ್ಯಾಡ್ ಮೊಬೈಲ್ ಬಳಸಲು ಅನುಮತಿಸಲಾಗಿದೆ. ಆದೇಶದಲ್ಲಿ ಅವರ ಹೆಸರನ್ನೂ ನಮೂದಿಸಲಾಗಿದೆ. ಅಲ್ಲದೇ, ಒಕ್ಕೂಟದ ಕಾರ್ಮಿಕ, ಭದ್ರತಾ ಹಾಗೂ ಲೋಡಿಂಗ್ ಗುತ್ತಿಗೆದಾರರ ಮೇಲ್ವಿಚಾರಕರು ಮತ್ತು ಸೂಪರ್ವೈಸರ್‌ಗಳು ಕೀ ಪ್ಯಾಡ್ ಬಳಸಲು ಅನುಮತಿಸಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net