ಕೋಲಾರದ ನೂತನ ಸರ್ಕಾರಿ ಪ್ರೌಢ ಶಾಲೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಮಕ್ಕಳಿಗೆ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಅಜಯ್ ಕುಮಾರ್ ಕಲಿಕಾ ಸಾಮಗ್ರಿಗಳನ್ನು ವಿತರಿಸಿದರು. ಮೇಡಿಕಹಾಳ ರಾಘವೇಂದ್ರ, ತಿಮ್ಮರಾಯಪ್ಪ, ಕೆ.ಎಸ್.ಸುನಂದಮ್ಮ ಇದ್ದರು.
ಕೋಲಾರ: ಕೋವಿಡ್ ಸಮಯದಲ್ಲಿ ಅನಿವಾರ್ಯವಾಗಿ ಮಕ್ಕಳನ್ನು ಮೊಬೈಲ್‌ಗೆ ದಾಸರನ್ನಾಗಿ ಮಾಡಲಾಯಿತು. ಅದನ್ನು ಬಿಡಿಸುವುದು ಈಗ ಸವಾಲಾಗಿದೆ. ಮೊಬೈಲ್ ಮಕ್ಕಳ ಪಾಲಿಗೆ ದೊಡ್ಡ ಶತ್ರುವಾಗಿದೆ ಎಂದು ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಅಜಯ್ ಕುಮಾರ್ ಹೇಳಿದರು.
ನಗರದ ನೂತನ ಸರ್ಕಾರಿ ಪ್ರೌಢ ಶಾಲೆಯಲ್ಲಿ ಸೋಮವಾರ ಕನಾಟಕ ರಕ್ಷಣಾ ವೇದಿಕೆ ವತಿಯಿಂದ ಮಕ್ಕಳಿಗೆ ಕಲಿಕಾ ಸಾಮಗ್ರಿ ವಿತರಿಸಿ ಮಾತನಾಡಿದರು.
ಪ್ರೌಢಶಾಲಾ ಹಂತದಿಂದಲೇ ಓದಿನ ಜತೆಗೆ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸಬೇಕು. ಭವಿಷ್ಯದಲ್ಲಿ ಕೆಪಿಎಸ್ಸಿ, ಯುಪಿಎಸ್ಸಿ ಪರೀಕ್ಷೆಗಳನ್ನು ಎದುರಿಸುವ ಮೂಲಕ ಗುರಿ ಸಾಧನೆಯತ್ತ ಪಣತೊಡಬೇಕು. ಪ್ರತಿ ನಿತ್ಯ ಪತ್ರಿಕೆ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.
ವೇದಿಕೆಯ ಜಿಲ್ಲಾಧ್ಯಕ್ಷ ಮೇಡಿಹಾಳ ರಾಘವೇಂದ್ರ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಮಕ್ಕಳನ್ನು ಅಂಕಗಳಿಸುವ ಯಂತ್ರಗಳನ್ನಾಗಿ ಮಾಡಲಾಗಿದೆ. ಇದರಿಂದ ಕೌಶಲ್ಯ ತರಬೇತಿ ಕೊರತೆಯಿಂದ ಸ್ಥಳೀಯ ಕಂಪನಿಗಳಲ್ಲಿ ಕೆಲಸ ದೊರೆಯುತ್ತಿದೆ. ಕಂಪನಿಗಳಲ್ಲಿ ಲಭ್ಯವಿರುವ ಕೆಲಸಕ್ಕೆ ತಕ್ಕಂತೆ ಶಾಲಾ-ಕಾಲೇಜು ಹಂತದಿಂದಲೇ ಕೌಶಲ ತರಬೇತಿ ನೀಡಿದರೆ ಕೆಲಸ ಹುಡುಕಿಕೊಂಡು ಬರುತ್ತದೆ ಎಂದು ಹೇಳಿದರು.
ಉತ್ತರ ಭಾರತದ ಉದ್ಯೋಗಿಗಳು ಸ್ಥಳೀಯ ಕಾರ್ಖಾನೆಗಳಲ್ಲಿ ತುಂಬಿ ತುಳುಕುತ್ತಿದ್ದು. ಹೀಗಾಗಿ ಸ್ಥಳೀಯರಿಗೆ ಆದ್ಯತೆ ಇಲ್ಲವಾಗಿದೆ. ಹೀಗಾಗಿ ಕೋಲಾರ ಜಿಲ್ಲೆಯ ಕೈಗಾರಿಕೋದ್ಯಮ ಉತ್ತರ ಭಾರತದ ಮಂದಿಯ ಮೇಲೆ ಅವಲಂಭನೆ ಆಗಿದ್ದಾರೆ ಎಂದರು. ಸಿಎಎಸ್‌ಆರ್ ನಿಧಿ ಬಳಸಿಕೊಂಡು ಸರ್ಕಾರಿ ಶಾಲೆಗಳಲ್ಲಿ ಮೂಲ ಸೌಕರ್ಯ ಒದಗಿಸಲು ಜಿಲ್ಲಾಡಳಿತ ಮುಂದಾಗಬೇಕು. ರಾಜ್ಯದ ಪಠ್ಯ ಪುಸ್ತಕಕ್ಕೆ ಅನುಗುಣವಾಗಿ ನೀಟ್ ಪ್ರಶ್ನೆಪತ್ರಿಕೆ ರೂಪಿತವಾಗಬೇಕು ಎಂದು ಒತ್ತಾಯಿಸಿದರು.
ಅಕ್ಷರ ದಾಸೋಹದ ಶಿಕ್ಷಣಾಧಿಕಾರಿ ತಿಮ್ಮರಾಯಪ್ಪ, ಉಪ ಪ್ರಾಂಶುಪಾಲೆ ಕೆ.ಎಸ್. ಸುನಂದಮ್ಮ, ಕರವೇ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುನಿರಾಜು, ಕಾರ್ಮಿಕ ಘಟಕದ ಅಧ್ಯಕ್ಷ ಡಿ.ವಿ.ಮಂಜುನಾಥಗೌಡ, ಮುಖಂಡರಾದ ರಾಮಣ್ಣ, ಭದ್ರಮ್ಮ, ರೈತ ಘಟಕದ ಉಪಾಧ್ಯಕ್ಷ ಮಂಜುನಾಥಗೌಡ, ಗಣೇಶ್ ಶಿವಕುಮಾರ್, ಆನಂದ್, ಯಶವಂತ್ ಇದ್ದರು.