ಬೆಂಗಳೂರು-ಕೆಜಿಎಫ್ ನಡುವೆ ಮೆಟ್ರೋ ಸಂಚಾರ? |Metro

ಸಿಎಂ ಡಿ.ಕೆ.ಶಿವಕಮಾರ್ ನೇತೃತ್ವದಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಈ ಕುರಿತು ಸುದೀರ್ಘ ಚರ್ಚೆ ನಡೆದಿದ್ದು, ಬೆಂಗಳೂರು-ತುಮಕೂರು, ಬೆಂಗಳೂರು-ಮೈಸೂರು ಮತ್ತು ಬೆಂಗಳೂರು-ಕೆಜಿಎಫ್ ಕಾರಿಡಾರ್‌ಗಳನ್ನು ಸಂಪರ್ಕಿಸುವ 270ಕಿಮೀ ವ್ಯಾಪ್ತಿಯ ಆರ್‌ಆರ್‌ಟಿಎಸ್ ಸೌಲಭ್ಯ ಒದಗಿಸಲು ಉದ್ದೇಶಿಸಲಾಗಿದೆ.
Bangalore To kgf Metro
AI ಚಿತ್ರBangalore To kgf Metro
Published on: 
  • ಹೊಸ ಉದ್ಯಮಗಳನ್ನು ಸ್ಥಳಾಂತರಿಸಲು ಚಿಂತನೆ

  • ಉನ್ನತ ಮಟ್ಟದ ಸಭೆಯಲ್ಲಿ ಸುದೀರ್ಘ ಚರ್ಚೆ

ಕೋಲಾರ: ಬೆಂಗಳೂರಿನ ಮೇಲಿನ ಒತ್ತಡ ತಗ್ಗಿಸುವ ನಿಟ್ಟಿನಲ್ಲಿ ಮುಂದಿನ ವರ್ಷಗಳಲ್ಲಿ ಕೋಲಾರ, ತುಮಕೂರು ಮತ್ತು ಮೈಸೂರಿಗೆ ಸುಗಮ ಸಂಪರ್ಕ ವ್ಯವಸ್ಥೆ ಕಲ್ಪಿಸುವ ಮೂಲಕ ರಾಜ್ಯಕ್ಕೆ ಬರುವ ಹೊಸ ಉದ್ಯಮಗಳನ್ನು ಸ್ಥಳಾಂತರಿಸಲು ರಾಜ್ಯ ಸರ್ಕಾರ ಚಿಂತಿಸಿದೆ. ಇದರ ಭಾಗವಾಗಿ ಬೆಂಗಳೂರು-ಕೆಜಿಎಫ್ ನಡುವೆ ಮೆಟ್ರೋ ವ್ಯವಸ್ಥೆ ಕಲ್ಪಿಸಲು ಸರ್ಕಾರ ಮುಂದಾಗಿದೆ.

ಮುಖ್ಯಮಂತ್ರಿ ಡಿ.ಕೆ.ಶಿವಕುವಾರ್ ನೇತೃತ್ವದಲ್ಲಿ ಸೋಮವಾರ ಬೆಂಗಳೂರಿನಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಈ ಕುರಿತು ಸುದೀರ್ಘ ಚರ್ಚೆ ನಡೆದಿದ್ದು, ಬೆಂಗಳೂರು-ತುಮಕೂರು, ಬೆಂಗಳೂರು-ಮೈಸೂರು ಮತ್ತು ಬೆಂಗಳೂರು-ಕೆಜಿಎಫ್ ಕಾರಿಡಾರ್‌ಗಳನ್ನು ಸಂಪರ್ಕಿಸುವ 270ಕಿಮೀ ವ್ಯಾಪ್ತಿಯ ಆರ್‌ಆರ್‌ಟಿಎಸ್ ಸೌಲಭ್ಯ ಒದಗಿಸಲು ಉದ್ದೇಶಿಸಲಾಗಿದೆ. ಜತೆಗೆ ಮುಂಬೈ-ಬೆಂಗಳೂರು ಹೈಸ್ಪೀಡ್ ರೈಲನ್ನು ಮೈಸೂರುವರೆಗೂ ವಿಸ್ತರಿಸುವ ಬಗ್ಗೆಯೂ ಆಲೋಚಿಸಲಾಗಿದೆ ಎನ್ನಲಾಗಿದೆ.

ಬೆಂಗಳೂರಿನಲ್ಲಿ ಉದ್ಯಮಗಳ ಸ್ಥಾಪನೆಗೆ ಮೂಲ ಸೌಕರ್ಯಗಳ ಕೊರತೆಯು ಕಾಡುತ್ತಿದ್ದು, ಜನಸಂಖ್ಯೆ ಮತ್ತು ವಾಹನ ದಟ್ಟಣೆ ಹೆಚ್ಚಿದೆ. ಪರಿಣಾಮ ಬೆಂಗಳೂರಿನ ರಸ್ತೆಗಳಲ್ಲಿ ಸಂಚರಿಸುವುದೇ ದುಸ್ತರ ಎಂಬಂತಾಗಿದೆ. ಇದರಿಂದ ದೊಡ್ಡ ದೊಡ್ಡ ಉದ್ಯಮಗಳು ಬೆಂಗಳೂರಿಗೆ ಬರಲು ಹಿಂದೇಟು ಹಾಕುತ್ತಿವೆ. ಈ ಒತ್ತಡ ಕಡಿಮೆ ಮಾಡಲು ಹಾಗೂ ಬೆಂಗಳೂರಿನ ಟ್ರಾಫಿಕ್ ಸಮಸ್ಯೆ ನಿವಾರಿಸುವ ನಿಟ್ಟಿನಲ್ಲಿ ಮೈಸೂರು, ತುಮಕೂರು ಮತ್ತು ಕೆಜಿಎಫ್‌ಗಳಲ್ಲಿ ಕಾರಿಡಾರ್ ಅಭಿವೃದ್ಧಿಪಡಿಸಿ ಅಲ್ಲಿಗೆ ಬೆಂಗಳೂರಿನ ಒತ್ತಡವನ್ನು ಸ್ಥಳಾಂತರಿಸುವ ಚಿಂತನೆ ಸರ್ಕಾರದ್ದಾಗಿದೆ.

ಬೆಂಗಳೂರು-ಕೆಜಿಎಫ್ ನಡುವೆ ಮೆಟ್ರೋ?

2047ರ ವೇಳೆಗೆ ರಾಜ್ಯದ ಆರ್ಥಿಕತೆ 1 ಟ್ರಿಲಿಯನ್ ಡಾಲರ್ ತಲುಪುವ ಗುರಿ ಹೊಂದಲಾಗಿದ್ದು, 2037ರ ಅವಧಿಗೆ ರಾಜ್ಯದ ಆರ್ಥಿಕತೆ 400-420 ಬಿಲಿಯನ್ ಡಾಲರ್ ತಲುಪುವ ಯೋಜನೆ ರೂಪಿಸಲಾಗಿದೆ. ಇದಕ್ಕೆ ಪೂರಕವಾಗಿ ಬೆಂಗಳೂರು ವ್ಯಾಪ್ತಿಯಲ್ಲಿ ವಸತಿ, ಕೈಗಾರಿಕಾ ಅಭಿವೃದ್ಧಿಗೆ ರೂಪುರೇಷೆ ಸಿದ್ಧಪಡಿಸಲಾಗುತ್ತಿದೆ. ಬೆಂಗಳೂರು ನಗರ ಹಾಗೂ ಹೊರವಲಯದಲ್ಲಿ ಸುಗಮ ಸಂಚಾರ ಖಾತ್ರಿಪಡಿಸಲು 2037ರ ವೇಳೆಗೆ ಹೆಚ್ಚುವರಿ 312ಕಿಮೀ ಮೆಟ್ರೋ ಸಂಪರ್ಕ ವಿಸ್ತರಿಸಲು ಹಾಗೂ 72ಕಿಮೀ ಹೆಚ್ಚುವರಿ ಸಬ್‌ಅರ್ಬನ್ ರೈಲು ಸಂಪರ್ಕ ಯೋಜನೆ, 210ಕಿಮೀ ಹೆಚ್ಚುವರಿ 10 ಹಬ್‌ಗಳನ್ನು ಸಂಪರ್ಕಿಸುವ ವರ್ತುಲರಸ್ತೆ ನಿರ್ವಾಣಕ್ಕೆ ಉದ್ದೇಶಿಸಲಾಗಿದೆ. ಇದರ ಭಾಗವಾಗಿ ಬೆಂಗಳೂರಿನಿಂದ ಹೊಸಕೋಟೆ ಮತ್ತು ಕೋಲಾರ ವಾರ್ಗವಾಗಿ ಕೆಜಿಎಫ್‌ವರೆಗೂ ಮೆಟ್ರೋ ಸಂಪರ್ಕ ಯೋಜನೆ ಕಾರ್ಯಗತವಾಗುವ ನಿರೀಕ್ಷೆ ಹೊಂದಲಾಗಿದೆ ಎನ್ನಲಾಗಿದೆ.

ಏನಿದು ಆರ್‌ಆರ್‌ಟಿಎಸ್ ಸೌಲಭ್ಯ?

ಆರ್‌ಆರ್‌ಟಿಎಸ್ ಪ್ರಾದೇಶಿಕ ವೇಗದ ಸಾರಿಗೆ ವ್ಯವಸ್ಥೆ ಅಥವಾ ಸಾರಿಗೆ ಸಂಪರ್ಕದ ಕಾರಿಡಾರ್ ಆಗಿದೆ. ವೇಗದ ರೈಲು ಅಥವಾ ಮೆಟ್ರೋ ವಾದರಿಯ ಪ್ರಾದೇಶಿಕ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಮೂಲಕ ಮಹಾನಗರ ಮತ್ತು ಅದರ ಸುತ್ತಮುತ್ತಲಿನ ಪಟ್ಟಣಗಳ ನಡುವೆ ವೇಗವಾಗಿ ಕಡಿಮೆ ಸಮಯದಲ್ಲಿ, ಹೆಚ್ಚಿನ ಸಂಖ್ಯೆಯ ಪ್ರಯಾಣಿಕರನ್ನು ಸಾಗಿಸುವ ಸಂಪರ್ಕ ವ್ಯವಸ್ಥೆಯನ್ನು ಕಲ್ಪಿಸುತ್ತದೆ. ದೆಹಲಿ-ಮೀರತ್ ನಡುವೆ ಈಗಾಗಲೇ ಆರ್‌ಆರ್‌ಟಿಎಸ್ ಸಂಪರ್ಕ ವ್ಯವಸ್ಥೆ ಇದೆ. ಒಂದು ವೇಳೆ ಇದು ಜಾರಿಯಾದರೆ ಕೆ.ಆರ್.ಪುರಂನಿಂದ ಹೊಸಕೋಟೆ, ಕೋಲಾರ ಮಾರ್ಗವಾಗಿ ಕೆಜಿಎಫ್‌ವರೆಗೂ ಮೆಟ್ರೋ ಸೌಕರ್ಯ ದೊರಕಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net