ತರಕಾರಿ ಬೆಳೆಯುವ ಮಣ್ಣನ್ನೂ ಪರೀಕ್ಷೆಗೆ ಒಳಪಡಿಸಿದ್ದು, ಯಥೇಚ್ಛವಾಗಿ ಕೀಟನಾಶಕ ಅಂಶ ಪತ್ತೆಯಾಗಿದೆ. ಸಂಗ್ರಹವಾದ ಮಣ್ಣು ಕೂಡ ಕಲುಷಿತ ಎಂದು ತಿಳಿದು ಬಂದಿದೆ. ಮಣ್ಣಿನಲ್ಲಿ ಹೆಚ್ಚಿನ ಪ್ರಮಾಣದ ಸೆಲೆನಿಯಮ್ ಪತ್ತೆ ಮತ್ತು ಅಂತರ್ಜಲದ ಮಾದರಿ ಮತ್ತು ಸಂಸ್ಕರಿಸಿದ ನೀರಿನ ಸಂಗ್ರಹವೂ ಮಲಿನವಾಗಿದೆ ಎಂದು ಸಮಿತಿ ವರದಿಯಲ್ಲಿ ಉಲ್ಲೇಖಿಸಿದೆ. ಮಿತಿ ಮೀರಿದ ಸೀಸದ ಅಂಶ: ಸೋರೆಕಾಯಿಯಲ್ಲಿ 1.75 ಎಂಜಿ, ಬದನೆಕಾಯಿಯಲ್ಲಿ 1.953 ಎಂಜಿ ಸೀಸ ಪತ್ತೆಯಾಗಿದೆ. ತೊಂಡೆಕಾಯಿಯಲ್ಲಿ ಮಿತಿಗಿಂತ ಸುಮಾರು 18 ಪಟ್ಟು ಹೆಚ್ಚು ಕಂಡುಬಂದಿದೆ. ಚಪ್ಪರದ ಅವರೆಯಲ್ಲಿ 9 ಪಟ್ಟು, ಸೊಪ್ಪು ಮತ್ತು ಎಲೆಕೋಸಿನಲ್ಲಿ 5 ಪಟ್ಟು ಹೆಚ್ಚು ಸೀಸ ಪತ್ತೆಯಾಗಿದೆ. ಸೌತೆಕಾಯಿ, ಹೀರೆಕಾಯಿ, ದಪ್ಪ ಮೆಣಸಿನಕಾಯಿ, ಬೀಟ್‌ರೂಟ್, ಹಾಗಲಕಾಯಿ, ನವಿಲುಕೋಸು ಮತ್ತು ಮೆಣಸಿನಕಾಯಿ, ಬಜ್ಜಿ ಮೆಣಸಿನಕಾಯಿ ಮಾದರಿಗಳಲ್ಲೂ ಸೀಸದ ಅಂಶ ಮಿತಿ ಮೀರಿದೆ ಎಂದು ಸಮಿತಿಯ ವರದಿಯಲ್ಲಿ ಉಲ್ಲೇಖವಾಗಿದೆ.