ಜನವರಿ 17ಕ್ಕೆ ಜಲಾಗ್ರಹ ಸಮಾವೇಶ

ಕೋಲಾರ ನಗರದ ಪತ್ರಕರ್ತರ ಭವನದಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆಂಜನೇಯ ರೆಡ್ಡಿ ಮಾತನಾಡಿದರು. ವಿ.ಕೆ.ರಾಜೇಶ್​, ಹೊಳಲಿ ಪ್ರಕಾಶ್​, ಡಿ.ಕೆ.ರಮೇಶ್​ ಇದ್ದರು.
ಕೋಲಾರ ನಗರದ ಪತ್ರಕರ್ತರ ಭವನದಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆಂಜನೇಯ ರೆಡ್ಡಿ ಮಾತನಾಡಿದರು. ವಿ.ಕೆ.ರಾಜೇಶ್​, ಹೊಳಲಿ ಪ್ರಕಾಶ್​, ಡಿ.ಕೆ.ರಮೇಶ್​ ಇದ್ದರು.
Published on
ಕೋಲಾರ: ಶಾಶ್ವತ ನೀರಾವರಿ ಯೋಜನೆಗಾಗಿ ಒತ್ತಾಯಿಸಿ ಜನವರಿ 17ರಂದು ನಗರದ ಸರ್ವಜ್ಞ ಪಾರ್ಕ್​ ಸಮೀಪದ ರಸ್ತೆಯಲ್ಲಿ ಬೆಳಗ್ಗೆ 11.30ಕ್ಕೆ ಜಲಾಗ್ರಹ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಶಾಶ್ವತ ನೀರಾವರಿ ಹೋರಾಟ ವೇದಿಕೆ ಅಧ್ಯಕ್ಷ ಆರ್​.ಆಂಜನೇಯ ರೆಡ್ಡಿ ಹೇಳಿದರು.
ನಗರದ ಪತ್ರಕರ್ತರ ಭವನದಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನೀರಿಗಾಗಿ ಒತ್ತಾಯಿಸಿ ನಡೆಯುತ್ತಿರುವ ಸಮಾವೇಶದಲ್ಲಿ ಜಿಲ್ಲೆಯ ಪ್ರತಿ ಮನೆಯಿಂದ ಒಬ್ಬರು ಪಾಲ್ಗೊಂಡು ಹಕ್ಕು ಪಡೆದುಕೊಳ್ಳಲು ಮುಂದಾಗಬೇಕು ಎಂದು ಕೋರಿದರು.
ಸಮಾವೇಶದ ಭಾಗವಾಗಿ ಪ್ರತಿ ತಾಲೂಕುವಾರು ಪೂರ್ವ ಭಾವಿ ಸಭೆಗಳನ್ನು ನಡೆಸಿ ವಿವಿಧ ಸಂಟನೆಗಳ ಮುಖಂಡರನ್ನು ಒಂದೇ ವೇದಿಕೆಗೆ ತಂದು ನಡೆಸುವ ಹೋರಾಟದ ಮೂಲಕ ರಾಜ್ಯ, ಕೇಂದ್ರ ಸರ್ಕಾರಗಳಿಗೆ ಬಿಸಿ ಮುಟ್ಟಿಸುವ ಕೆಲಸ ಇದರಿಂದ ಆಗಬೇಕಿದೆ ಎಂದರು.
ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳು ಬಯಲು ಸೀಮೆ ಜಿಲ್ಲೆಗಳು ಎಂದು ಹಣೆ ಪಟ್ಟಿ ಕಟ್ಟಿಕೊಂಡಿವೆ. 30 ವರ್ಷಗಳಿಂದ ನೀರಿನ ಸಾಮಾಜಿಕ ನ್ಯಾಯ ಪಡೆಯುವಲ್ಲಿ ಬಯಲುಸೀಮೆ ಜಿಲ್ಲೆಗಳು ವಿಫಲವಾಗಿವೆ. ನೀರಿನ ಹೆಸರಲ್ಲಿ ಸುಮಾರು 30 ಸಾವಿರ ಕೋಟಿ ವೆಚ್ಚ ಮಾಡಿವೆ. ಆದರೆ ಯಾವುದೇ ಒಂದು ಯೋಜನೆ ಯಶಸ್ವಿಯಾಗಿ ಕಾರ್ಯಗತಗೊಂಡಿಲ್ಲ ಎಂದರು.
ತೆಲಂಗಾಣ ರಾಜ್ಯ ಕಟ್ಟಲು ನಡೆದ ಮಾದರಿಯಲ್ಲಿ ನೀರಿಗಾಗಿ ಹೋರಾಟ ನಡೆಸಬೇಕಿದೆ. ಬಿಡಿಬಿಡಿ ಹೋರಾಟವನ್ನು ಸಂಘಟಿತವಾಗಿ ಮಾಡುವಂಥದ್ದು. ಈಗಾಗಲೇ ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಜಲಾಗ್ರಹ ಸಮಾವೇಶ ನಡೆದಿದ್ದು, ಕೋಲಾರ ಸಮಾವೇಶದಲ್ಲೂ ಮುಂದಿನ ಹೋರಾಟ ಕುರಿತು ಮಹತ್ತರ ರ್ನಿಣಯ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಸರ್ಕಾರಿ ಕೋಟ್ಯಂತರ ರೂರು ಹಣ ವೆಚ್ಚ ಮಾಡುತ್ತಿದೆ ಹೊರತು ಒಂದು ಬೊಗಸೆ ನದಿ ನೀರು ಕೂಡಿಸುವಲ್ಲಿ ವಿಫಲವಾಗಿವೆ. ಇದರಲ್ಲಿ ಜನಪ್ರತಿಧಿಗಳು ಬದ್ಧತೆ ತೋರುತ್ತಿಲ್ಲ. ಪ್ರಜ್ಞಾವಂತ ಹೋರಾಟಗಾರರ ಮೌನವು ಸಹ ನೀರು ಸಿಗದಿರಲು ಕಾರಣವಾಗಿದೆ. ಇದೇ ಪರಿಸ್ಥಿತಿ ಮುಂದುವರೆದರೆ ಮುಂದಿನ 30 ವರ್ಷ ಕಳೆದರೂ ನೀರು ಸಿಗಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಮುಂದಿನ ಬಜೆಟ್​ನಲ್ಲಿ ಕೆ.ಸಿ.ವ್ಯಾಲಿ, ಎಚ್​ಎನ್​ ವ್ಯಾಲಿ ಯೋಜನೆಯ ಮೂರನೇ ಹಂತದ ಶುದ್ಧೀಕರಣಕ್ಕೆ ಅನುದಾನ ಮೀಸಲಿರಿಸಬೇಕು.ಆಂಧ್ರದ ಗಡಿ ಭಾಗದವರೆಗೆ ಕೃಷ್ಣಾ ನದಿ ನೀರು ಬಂದಿದ್ದು, ಇದನ್ನು ಜಿಲ್ಲೆಗೆ ಹರಿಸಿಕೊಳ್ಳುವ ಪ್ರಯತ್ನ ಜನಪ್ರತಿನಿಧಿಗಳಿಂದ ಆಗಬೇಕು. ಎತ್ತಿನಹೊಳೆಗೆ 24 ಸಾವಿರ ಕೋಟಿ ಖರ್ಚು ಮಾಡಿದ್ದು, ಒಂದು ಹನಿ ನೀರು ಬರಲಿಲ್ಲ. ಆದರೆ ರಾಜಕಾರಣಿಗಳ, ಗುತ್ತಿಗೆದಾರರ ಖಜಾನೆ ಮಾತ್ರ ತುಂಬಿದಿದೆ ಎಂದು ಲೇವಡಿ ಮಾಡಿದರು.
ಇದು ಕಟ್ಟಕಡೆಯ ಹೋರಾಟ. ಮೂರು ಜಿಲ್ಲೆಗಳ ಎಲ್ಲಾ ಚಳವಳಿದಾರರನ್ನು ಒಗ್ಗೂಡಿಸುತ್ತೇವೆ. ಪ್ರತಿ ಮನೆಗೊಬ್ನರಂತೆ ಹೋರಾಟಕ್ಕೆ ಧುಮಕಬೇಕು. ಇಲ್ಲದಿದ್ದರೆ ಕಲುಷಿತ ನೀರು ಕುಡಿದು ಅನಾರೋಗ್ಯ ಕೋಲಾರ ನಿಮಾರ್ಣವಾಗಲಿದೆ ಎಂದು ಎಚ್ಚರಿಸಿದರು.
* ಸರ್ಕಾರದ ಕಣ್ತೆರೆಸುವ ಹೋರಾಟ
ರಾಜ್ಯ ಒಕ್ಕಲಿಗರ ಸಂ ನಿರ್ದೇಶಕ ಡಾ.ಡಿ.ಕೆ.ರಮೇಶ್​ ಮಾತನಾಡಿ, ಬಯಲು ಸೀಮೆ ಜಿಲ್ಲೆಗಳಲ್ಲಿ ಲಭ್ಯವಾಗುತ್ತಿರುವ ನೀರಿನಲ್ಲಿ ಅರ್ಸೆನಲ್​, ಯುರೇನಿಯಂ, ್ಲೋರೈಡ್​ ಅಪಾಯಕಾರಕ ಅಂಶಗಳು ಮಿಶ್ರಣವಾಗಿರುವುದು ಸಂಶೋಧನೆಗಳಿಂದ ಖಚಿತವಾಗಿದೆ. ನೀರು ಸೇವನೆ ಮಾಡುತ್ತಿರುವವರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದ್ದರು ಸಹ ಸರ್ಕಾರಗಳು ಗಂಭೀರವಾಗಿ ಪರಿಗಣಿಸದೆ ಇರುವೆ, ಈ ಹೋರಾಟವು ಸರ್ಕಾರಗಳ ಕಣ್ತೆರುಸ ಚಳವಳಿಯಾಗಲಿದು, ಇದಕ್ಕೆ ಪ್ರತಿಯೊಬ್ಬರು ಸಹಕಾರ ನೀಡಬೇಕು ಎಂದು ಕೋರಿದರು.
ಪತ್ರಿಕಾಗೋಷ್ಠಿಯಲ್ಲಿ ವೇದಿಕೆಯ ಸಂಚಾಲಕರಾದ ವಿ.ಕೆ.ರಾಜೇಶ್​, ಅಬ್ಬಣಿ ಶಿವಪ್ಪ, ಸಿ.ವಿ.ನಾಗರಾಜ್​, ಕೆ.ಸಿ.ಸಂತೋಷ್​, ಚಂಬೆ ರಾಜೇಶ್​, ಸಲಾವುದ್ದೀನ್​ ಬಾಬು, ರಂಗಸ್ವಾಮಿ, ಶ್ರೀನಾಥ್​, ರಾಮು ಶಿವಣ್ಣ ಉಪಸ್ಥಿತರಿದ್ದರು.
ಕೋಟ್​...
ರಾಜ್ಯದಲ್ಲಿ ಧರ್ಮ, ಜಾತಿಗೊಂದು ಮಠಗಳಿದ್ದು, ಮಠಾಧೀಶರು ಸರ್ಕಾರಗಳ ಮೇಲೆ ಒತ್ತಡ ತಂದು ನೀರಾವರಿ ಯೋಜನೆ ಅನುಷ್ಠಾನಕ್ಕೆ ಒತ್ತಾಯ ಮಾಡಿದ ಉದಾಹರಣೆಯಿಲ್ಲ. ಇನ್ನಾದರು ನೀರಿನ ಗಂಭೀರ ಸಮಸ್ಯೆಯನ್ನು ಅರಿತು ಹೋರಾಟಕ್ಕೆ ಬೆಂಬಲ ನೀಡಬೇಕು.
- ಹೊಳಲಿ ಪ್ರಕಾಶ್​, ಸಂಚಾಲಕ, ನೀರಾವರಿ ಹೋರಾಟ ವೇದಿಕೆ, ಕೋಲಾರ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net