ದ್ವಿತಳಿ ಗೂಡು ಉತ್ಪಾದನೆಯಿಂದ ಆದಾಯ ವೃದ್ಧಿ

ಕೋಲಾರ ನಗರದ ತೋಟಗಾರಿಕೆ ಮಹಾವಿದ್ಯಾಲಯದ ಐಸಿಎಆರ್​ಟಿ ಕೇಂದ್ರದಲ್ಲಿ ನಡೆದ ರೇಷ್ಮೆ ಕೃಷಿಯನ್ನು ಉತ್ತೇಜಿಸುವ ಉದ್ದೇಶದಿಂದ ರೈತರಿಗಾಗಿ ಹಮ್ಮಿಕೊಂಡಿದ್ದ ಸಾಮರ್ಥ್ಯ ಅಭಿವೃದ್ಧಿ ತರಬೇತಿಯನ್ನು ಪ್ರಧಾನ ವಿಜ್ಞಾನಿ ಡಾ.ಮಹಾಂತೇಶ ಶಿರೂರ್​ ಉದ್ಘಾಟಿಸಿದರು.
ಕೋಲಾರ ನಗರದ ತೋಟಗಾರಿಕೆ ಮಹಾವಿದ್ಯಾಲಯದ ಐಸಿಎಆರ್​ಟಿ ಕೇಂದ್ರದಲ್ಲಿ ನಡೆದ ರೇಷ್ಮೆ ಕೃಷಿಯನ್ನು ಉತ್ತೇಜಿಸುವ ಉದ್ದೇಶದಿಂದ ರೈತರಿಗಾಗಿ ಹಮ್ಮಿಕೊಂಡಿದ್ದ ಸಾಮರ್ಥ್ಯ ಅಭಿವೃದ್ಧಿ ತರಬೇತಿಯನ್ನು ಪ್ರಧಾನ ವಿಜ್ಞಾನಿ ಡಾ.ಮಹಾಂತೇಶ ಶಿರೂರ್​ ಉದ್ಘಾಟಿಸಿದರು.
Published on
ಕೋಲಾರ: ರೈತರು ರೇಷ್ಮೆ ಕೃಷಿಯಲ್ಲಿ ಹೆಚ್ಚಾಗಿ ದ್ವಿತಳಿ ಗೂಡು ಉತ್ಪಾದನೆ ಮಾಡಿದರೆ ಆರ್ಥಿಕವಾಗಿ ಲಾಭಗಳಿಸಬಹುದು ಎಂದು ಪ್ರಧಾನ ವಿಜ್ಞಾನಿ ಡಾ.ಮಹಾಂತೇಶ ಶಿರೂರ್​ ಹೇಳಿದರು.
ನಗರದ ತೋಟಗಾರಿಕೆ ಮಹಾವಿದ್ಯಾಲಯದ ಐಸಿಎಆರ್​ಟಿ ಕೇಂದ್ರದಲ್ಲಿ ಹೈದರಬಾದಿನ ರಾಷ್ಟ್ರೀಯ ಕೃಷಿ ಸಂಶೋಧನಾ ನಿರ್ವಹಣಾ ಅಕಾಡೆಮಿ, ಮಡಿವಾಳ ಸಿಎಸ್​ಬಿ ಸಂಶೋಧನಾ ವಿಸ್ತರಣಾ ಕೇಂದ್ರದಿಂದ ರೇಷ್ಮೆ ಕೃಷಿಯನ್ನು ಉತ್ತೇಜಿಸುವ ಉದ್ದೇಶದಿಂದ ರೈತರಿಗಾಗಿ ಹಮ್ಮಿಕೊಂಡಿದ್ದ ಸಾಮರ್ಥ್ಯ ಅಭಿವೃದ್ಧಿ ತರಬೇತಿ ಉದ್ಘಾಟಿಸಿ ಮಾತನಾಡಿದರು.
ಮಿಶ್ರತಳಿ ರೇಷ್ಮೆ ಕೃಷಿಯಿಂದ ದ್ವಿತಳಿ ರೇಷ್ಮೆ ಕೃಷಿಯತ್ತ ರೈತರು ಹಂತ ಹಂತವಾಗಿ ರೂಪಾಂತರಗೊಳ್ಳಬೇಕು.ದ್ವಿತಳಿ ಗೂಡಿಗೆ ಮಾರುಕಟ್ಟೆಯಲ್ಲಿ ಹೆಚ್ಚು ಬೆಲೆಯಿದೆ. ಇದರಿಂದ ಉತ್ಪಾದಕತೆ, ಆದಾಯವನ್ನು ಹೆಚ್ಚಿಸಿಕೊಳ್ಳಬಹುದು ಎಂದು ಹೇಳಿದರು.
ಪರಿಶಿಷ್ಟ ಜಾತಿಯ ರೇಷ್ಮೆ ಬೆಳೆಗಾರರ ಜೀವನೋಪಾಯ ಭದ್ರತೆಯನ್ನು ಬಲಪಡಿಸುವ ಉದ್ದೇಶದಿಂದ ಐಸಿಎಆರ್​- ರಾಷ್ಟ್ರೀಯ ಕೃಷಿ ಸಂಶೋಧನಾ ನಿರ್ವಹಣಾ ಅಕಾಡೆಮಿ ನಿಧಿಯಿಂದ ಪರಿಶಿಷ್ಟ ಜಾತಿ ಉಪ ಯೋಜನೆ ಅಡಿಯಲ್ಲಿ ರೇಷ್ಮೆ ಬೆಳೆಗಾರರಿಗೆ ದ್ವಿತಳಿ ರೇಷ್ಮೆಕೃಷಿ ಕುರಿತು ಐದು ದಿನ ತರಬೇತಿ ಕಾರ್ಯಕ್ರಮ ಆಯೋಜಿಸಲಾಗಿದ್ದು, ಇದರ ಪ್ರಯೋಜ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಅಸ್ತಿತ್ವದಲ್ಲಿರುವ ಮಿಶ್ರತಳಿ ರೇಷ್ಮೆಬೆಳೆಗಾರರ ಕೌಶಲ್ಯಗಳನ್ನು ನವೀಕರಿಸುವುದು, ಕೃಷಿಯನ್ನು ಯಶಸ್ವಿಯಾಗಿ ಅಳವಡಿಸಿಕೊಳ್ಳುವ ಬಗ್ಗೆ ಮಾರ್ಗದರ್ಶನ ನೀಡಲಾಗುತ್ತದೆ. ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳು ರಾಜ್ಯದ ಒಟ್ಟು ರೇಷ್ಮೆ ಉತ್ಪಾದನೆಯಲ್ಲಿನ ಹೆಚ್ಚು ಪಾಲು ಹೊಂದಿದ್ದು, ದ್ವಿತಳಿಗೆ ಅಪಾರ ಅವಕಾಶವಿದೆ. ಆದರೆ ಕೌಶಲ್ಯಾಭಿವೃದ್ಧಿ, ನಿರಂತರ ತಾಂತ್ರಿಕ ಮಾರ್ಗದರ್ಶನದ ಕೊರತೆಯಿಂದ ಅನೇಕ ರೈತರು ಇನ್ನೂ ಮಿಶ್ರತಳಿ ಸಾಕಾಣಿಕೆಯಲ್ಲಿಯೇ ಮುಂದುವರಿದಿದ್ದಾರೆ. ಅವರೆಲ್ಲ ದ್ವಿತಳಿಯತ್ತ ರೂಪಾಂತರಗೊಳ್ಳಬೇಕು ಎಂದು ತಿಳಿಸಿದರು.
ಕೇಂದ್ರ ರೇಷ್ಮೆ ಮಂಡಳಿಯ ವಿಜ್ಞಾನಿ ಡಾ.ಕೆ.ಪರಮೇಶ್ವರ ನಾಯಕ್​ ಮಾತನಾಡಿ, ದ್ವಿತಳಿ ರೇಷ್ಮೆ ಕೃಷಿಯು ಉತ್ತಮ ಗುಣಮಟ್ಟದ ಗೂಡುಗಳನ್ನು, ಉತ್ತಮ ಆರ್ಥಿಕ ಲಾಭವನ್ನು ಒದಗಿಸುವ ಸಾಮರ್ಥ್ಯವನ್ನು ಹೊಂದಿದೆ. ಆದಾಗ್ಯೂ, ಸಣ್ಣ ಮತ್ತು ಅತಿ ಸಣ್ಣ ರೈತರು ಸಾಂಪ್ರದಾಯಿಕ ಮಿಶ್ರತಳಿ ಉತ್ಪಾದನೆಯ ಮೇಲೆ ಅವಲಂಬಿತರಾಗಿದ್ದಾರೆ. ಇದರಿಂದಾಗಿ ತರಬೇತಿಯು ಅವಶ್ಯಕವಾಗಿದೆ ಎಂದರು.
ಐಸಿಎಆರ್​-ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಡಾ.ಶಿವಾನಂದ ವಿ.ಹೊಂಗಲ ಮಾತನಾಡಿ, ಬೈವೋಲ್ಟಿನ್​ ಉತ್ಪಾದನಾ ಪದ್ಧತಿಗಳನ್ನು ಕ್ರಮೇಣ ಅಳವಡಿಸಿಕೊಳ್ಳುವ ಮೂಲಕ ಗುಣಮಟ್ಟದ ಬೈವೋಲ್ಟಿನ್​ ರೇಷ್ಮೆಗೂಡುಗಳನ್ನು ವಿಶ್ವಾಸಾರ್ಹ ಉತ್ಪಾದಕರನ್ನಾಗಿ ಅಭಿವೃದ್ಧಿಪಡಿಸುವುದು ಎಂದು ತಿಳಿಸಿದರು.
ಸರ್ಕಾರಿ ರೇಷ್ಮೆಗೂಡು ಮಾರುಕಟ್ಟೆಯ ರೇಷ್ಮೆ ಉಪನಿರ್ದೇಶಕ ಎಸ್​.ಎನ್​.ಶ್ರೀನಿವಾಸ್​, ರೇಷ್ಮೆ ಸಹಾಯಕ ನಿರ್ದೇಶಕ ಬೈರೇಗೌಡ, ಪ್ರಗತಿಪರ ದ್ವಿತಳಿ ರೇಷ್ಮೆ ಬೆಳೆಗಾರ ಹೊಸಕೋಟೆ ರಮೇಶ್​, ರೇಷ್ಮೆಕೃಷಿ ವಿಜ್ಞಾನಿಯಾದ ಡಾ.ಕೆ.ಆರ್​.ಶಶಿಧರ್​ ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net