ಸಮಗ್ರ ಕೃಷಿಯಿಂದ ಆದಾಯದ ಖುಷಿ

ರೈತ ಮಂಜುನಾಥ್ ತೋಟಕ್ಕೆ ಭೇಟಿ ನೀಡಿರುವ ಅಧಿಕಾರಿಗಳು ಕುರಿ ಸಾಕಣೆ ಮಾಹಿತಿ ಪಡೆದರು.
ರೈತ ಮಂಜುನಾಥ್ ತೋಟಕ್ಕೆ ಭೇಟಿ ನೀಡಿರುವ ಅಧಿಕಾರಿಗಳು ಕುರಿ ಸಾಕಣೆ ಮಾಹಿತಿ ಪಡೆದರು.
Published on
ಕಿರುವಾರ ಎಸ್. ಸುದರ್ಶನ್ ಕೋಲಾರ
ವ್ಯವಸಾಯದಲ್ಲಿ ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಂಡು ಬದುಕಲ್ಲಿ ಖುಷಿ ಕಂಡಿರುವ ಜಿಲ್ಲೆಯ ಶ್ರೀನಿವಾಸಪುರ ತಾಲೂಕು ತರ‍್ನಹಳ್ಳಿ ರೈತ ಟಿ.ಎಂ.ಮಂಜುನಾಥ್ ಇತರರಿಗೆ ಮಾದರಿಯಾಗಿದ್ದಾರೆ.
ಬರಪೀಡಿತ ಜಿಲ್ಲೆ ಎಂದ ತಕ್ಷಣ ನೆನಪಿಗೆ ಬರುವುದು ಕೋಲಾರ. ಇಲ್ಲೂ ಕೃಷಿ, ತೋಟಗಾರಿಕೆ, ಹೈನೋದ್ಯಮದಲ್ಲಿ ತೊಡಗಿಸಿಕೊಂಡು ವಿವಿಧ ಬೆಳೆ ಬೆಳೆದು ಸ್ಫೂರ್ತಿಯಾಗಿದ್ದಾರೆ. ಅಂತೆಯೇ, ಟಿ.ಎಂ.ಮಂಜುನಾಥ್ 4.34 ಎಕರೆ ಜಮೀನು ಹೊಂದಿದ್ದು, ಜಮೀನಿನಲ್ಲಿ ಸಮಗ್ರ ಕೃಷಿ ವ್ಯವಸ್ಥೆ ಅಳವಡಿಸಿಕೊಂಡಿದ್ದಾರೆ.
ಕೃಷಿ ಬೆಳೆಗಳಾದ ರಾಗಿ, ತೊಗರಿ, ಅವರೆ, ಹುರಳಿ, ತೋಟಗಾರಿಕೆಯಲ್ಲಿ ಟೊಮ್ಯಾಟೊ, ಮಾವು, ಕ್ಯಾಪ್ತಿಕಂ, ಸೇವಂತಿಗೆ ಮತ್ತು ಚೆಂಡು ಮಲ್ಲಿಗೆ ಹೂವು ಸೇರಿ ಮುಂತಾದ ಬೆಳೆಗಳಲ್ಲಿ ಸುಧಾರಿತ ತಂತ್ರಜ್ಞಾನ ಅಳವಡಿಸಿಕೊಂಡಿದ್ದಾರೆ. ಜತೆಗೆ ಅರಣ್ಯ ಪದ್ಧತಿ ಅನುಸರಿಸುತ್ತಿದ್ದು, ಸಿಲ್ವರ್ ಓಕ್. ಹೆಬ್ಬೇವು, ಹೊಂಗೆ, ಬೇವು ಮತ್ತು ಸಾಗುವಾನಿ ಮರಗಳನ್ನು ಬದುಗಳ ಮೇಲೆ ಬೆಳೆದಿದ್ದಾರೆ.
ಪ್ರಾಣಿ ಸಂಪನ್ಮೂಲಗಳಾದ ದೇಸಿ ಮತ್ತು ಮಿಶ್ರತಳಿ ಹಸು, ಎಮ್ಮೆ, ಕುರಿ, ಮೇಕೆ, ನಾಟಿ ಕೋಳಿ, ಮೀನು ಮತ್ತು ಜೇನು ಸಾಕಣೆಯಲ್ಲೂ ತೊಡಗಿಸಿಕೊಂಡಿದ್ದು, ಸುಲಭದ ಹಾದಿಯಲ್ಲಿ ಆದಾಯ ಗಳಿಸುವ ಮಾರ್ಗ ಕಂಡುಕೊಂಡಿದ್ದಾರೆ.
ಕಡಿಮೆ ಖರ್ಚಿನಲ್ಲಿ ಇಳುವರಿ
ಸದಾ ಕೃಷಿ ತಜ್ಞರ ಸಂಪರ್ಕದಲ್ಲಿರುವ ಮಂಜುನಾಥ್, ಸಾವಯುವ ಕೃಷಿ ಮತ್ತು ಸಮಗ್ರ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ವಿಷಯ ತಜ್ಞರ ಸಲಹೆಯಂತೆ ಮಾವಿನ ಬೆಳೆಯಲ್ಲಿ ಮಣ್ಣಿನ ಫಲವತ್ತತೆ ಹೆಚ್ಚಿಸಲು ಹಸಿರೆಲೆ ಗೊಬ್ಬರವಾಗಿ ಹುರಳಿ, ಸೆಣಬು ಮತ್ತು ನೀರಿನ ಸದ್ಬಳಕೆಗಾಗಿ ಬದು ನಿರ್ಮಿಸಿದ್ದಾರೆ. ಲಿಂಗಾಕರ್ಷಕ ಬಲೆಗಳ ಬಳಕೆಯಿಂದ ರಾಸಾಯನಿಕ ಪೀಡೆನಾಶಕಗಳ ಬಳಕೆ ಕಡಿಮೆ ಮಾಡುವ ಮೂಲಕ ಕಡಿಮೆ ಖರ್ಚಿನಲ್ಲಿ ಉತ್ತಮ ಇಳುವರಿ ಪಡೆಯುತ್ತಿದ್ದಾರೆ. ಇತರೆ ತೋಟಗಾರಿಕಾ ಬೆಳೆಗಳಾದ ಟೊಮ್ಯಾಟೊ, ಕ್ಯಾಪ್ತಿಕಂ, ಸೇವಂತಿ ಮತ್ತು ಮುಂತಾದ ಬೆಳೆಗಳಲ್ಲಿ ಏರು ಮಡಿ ಪದ್ಧತಿ, ಪ್ಲಾಸ್ಟಿಕ್ ಹೊದಿಕೆ, ಶೆಡ್ ನೆಟ್ ನಿರ್ಮಾಣ, ಪೋಷಕಾಂಶಗಳ ನಿರ್ವಹಣೆಗಾಗಿ ಸಾವಯುವ ಪರಿಕರಗಳನ್ನೇ ಉಪಯೋಗಿಸಿದ್ದಾರೆ.
ಕೊಟ್ಟಿಗೆ ಪದ್ಧತಿಯಲ್ಲಿ ಸಾಕಣೆ
ಕೋಲಾರದ ಹೈದರಾಬಾದ್‌ನ ರಾಷ್ಟ್ರೀಯ ಕೃಷಿ ವಿಸ್ತರಣಾ ನಿರ್ವಹಣಾ ಸಂಸ್ಥೆಯಿಂದ ನಗರದ ವಿಸ್ತರಣಾ ಶಿಕ್ಷಣ ಘಟಕದಲ್ಲಿ ನಡೆದ ಕುರಿ ಸಾಕಣೆ ಮತ್ತು ನಿರ್ವಹಣೆ ಕುರಿತ ಒಂದು ವಾರದ ಕೌಶಲಾಧಾರಿತ ತರಬೇತಿಯಲ್ಲಿ ಭಾಗವಹಿಸಿ ಹಲವು ವಿಚಾರಗಳ ಕುರಿತು ಅರಿವು ಪಡೆದು, ಕುರಿ ಮತ್ತು ಮೇಕೆ ಸಾಕಣೆ ಪ್ರಾರಂಭಿಸಿದರು. ಕೊಟ್ಟಿಗೆ ಪದ್ಧತಿಯಲ್ಲಿ ಪೌಷ್ಟಿಕ ಹಸಿರು ಮೇವು, ಒಣ ಮೇವು ಮತ್ತು ಸಮತೋಲನ ಆಹಾರ ನೀಡಿ, ಸಾಂಕ್ರಾಮಿಕ ರೋಗ ಮತ್ತು ಜಂತು ಹುಳುಗಳ ಹಾವಳಿ ಕಡಿಮೆ ಮಾಡಿ ನಿರ್ದಿಷ್ಟ ಅವಧಿಯಲ್ಲಿ ನಿಗದಿತ ತೂಕ ಗಳಿಸಬಹುದೆಂದು ಕೊಟ್ಟಿಗೆ ಪದ್ಧತಿಯಲ್ಲಿ ಕುರಿ ಸಾಕಣೆ ಮಾಡಲು ಪ್ರಾರಂಭಿಸಿದರು. ಒಟ್ಟು 40 ನಾರಿ ಸುವರ್ಣ ಕುರಿ ತಳಿ ಮೇಯಿಸುತ್ತಿದ್ದು ವರ್ಷಕ್ಕೆ ಎರಡು ಬಾರಿ ಮರಿ ಹಾಕುವುದು. ಒಂದು ಬಾರಿಗೆ ಎರಡರಿಂದ ಮೂರು ಮರಿ ಹಾಕುತ್ತದೆ. ಇದರಿಂದ ಹೈನೋದ್ಯಮದಲ್ಲೂ ಸೈ ಎನಿಸಿಕೊಂಡಿದ್ದಾರೆ.
ನೇರ ಮಾರುಕಟ್ಟೆಯಿಂದ ಅಧಿಕ ಲಾಭ
ವ್ಯವಸಾಯದಲ್ಲಿ ಕೃಷಿ ಯಂತ್ರೋಪಕರಣಗಳಿಗೆ ಒತ್ತು ನೀಡಿದ್ದು, ಭೂಮಿಯ ಸಿದ್ಧತೆಗಾಗಿ ಟ್ರ್ಯಾಕ್ಟರ್ ಚಾಲಿತ ಉಪಕರಣ ಬಳಸಿಕೊಂಡು ಬಂದಿದ್ದಾರೆ. ಕಳೆ ನಿರ್ವಹಣೆಗಾಗಿ ಸೈಕಲ್ ವೀಡರ್ ಬಳಕೆ, ಟೊಮ್ಯಾಟೊ ಮತ್ತು ಕ್ಯಾಪಿಕಂ ಗ್ರೇಡಿಂಗ್ ಯಂತ್ರ ಬಳಕೆಯಿಂದ ಕೂಲಿಯಾಳುಗಳ ಅವಲಂಬನೆ ಕಡಿಮೆ ಮಾಡಿದ್ದಾರೆ. ನೇರ ಮಾರುಕಟ್ಟೆ ಸ್ವಂತ ಮಾಡುವುದರಿಂದ ಅಧಿಕ ಲಾಭಗಳಿಸುತ್ತಿದ್ದಾರೆ. ಕೃಷಿ ವಿಶ್ವವಿದ್ಯಾನಿಲಯ, ಅಭಿವೃದ್ಧಿ ಇಲಾಖೆಗಳು ಮತ್ತು ಇತರೆ ಪ್ರಗತಿಪರ ರೈತರ ತಾಕುಗಳಿಗೆ ಭೇಟಿ ನೀಡುತ್ತಾ ಎಲ್ಲರಿಂದ ಮಾಹಿತಿ ಸಂಗ್ರಹಿಸಿ ಕೃಷಿಯಲ್ಲಿ ಅಳವಡಿಸಿಕೊಂಡಿರುವ ಕುರಿತು ಮಾಹಿತಿ ಕಲೆ ಹಾಕುತ್ತಿದ್ದಾರೆ.
ಕೃಷಿ ಚಟುವಟಿಕೆಯಿಂದಲೂ ಅಧಿಕ ಲಾಭಗಳಿಸುವುದರ ಜತೆಗೆ ಉತ್ತಮ ಆರೋಗ್ಯವನ್ನೂ ಸಹ ಪಡೆಯಬಹುದು. ಸಾವಯವ ಕೃಷಿಯಿಂದ ಪರಿಸರ ಸಂರಕ್ಷಣೆಗೆ ಕೊಡುಗೆ ನೀಡದಂತಾಗುತ್ತದೆ.
- ಟಿ.ಎಂ.ಮಂಜುನಾಥ್, ಪ್ರತಿಪರ ರೈತ
ವ್ಯವಸಾಯದ ಮಾಡುವ ರೈತರು ಆಧುನಿಕ ಪದ್ಧತಿ ಅಳವಡಿಸಿಕೊಂಡರೆ ಗುಣಮಟ್ಟದ ಇಳುವರಿ ಜತೆಗೆ ಆದಾಯ ಗಳಿಸಬಹುದು. ಆಸಕ್ತರು ತಜ್ಞರನ್ನು ಸಂಪರ್ಕಿಸಿ ಬೆಳೆ ನಿರ್ವಹಣೆ ಕುರಿತು ಮಾಹಿತಿ ಪಡೆದುಕೊಳ್ಳಬಹುದು.
- ಡಾ.ಸ್ವಾತಿ ವಿಜ್ಞಾನಿ, ಕೆವಿಕೆ, ಕೋಲಾರ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net