ಮಹರ್ಷಿ ವಾಲ್ಮೀಕಿ ಆದರ್ಶ ಅನುಸರಿಸಿ

ಅಖಿಲ ಕರ್ನಾಟಕ ಕಲಾವಿದರ ಒಕ್ಕೂಟದ ರಾಜ್ಯ ಉಪಾಧ್ಯಕ್ಷ ಡಿ.ಆರ್​.ರಾಜಪ್ಪ ಹೇಳಿಕೆ
Follow the ideals of Maharshi Valmiki
ಪುಲಗೋರಕೋಟೆಯ ಶ್ರೀ ಅಭಯಾಂಜನೇಯ ಸ್ವಾಮಿ ದೇವಾಲಯದ ಆವರಣದಲ್ಲಿ ವಾಲ್ಮೀಕಿ ಜಯಂತಿ ಅಂಗವಾಗಿ ಹಮ್ಮಿಕೊಂಡಿದ್ದ ತತ್ವಪದ ಮತ್ತು ಜಾನಪದ ಹಾಗೂ ಸಾಂಸತಿಕ ಕಾರ್ಯಕ್ರಮದಲ್ಲಿ ಮಹಿಳೆಯರು ಉತ್ಸವಕ್ಕೆ ಪೂರ್ಣಕುಂಭ ಸ್ವಾಗತ ಕೋರಿದರು. Follow the ideals of Maharshi Valmiki
Published on: 

ರಾಯಲ್ಪಾಡು: ಪವಿತ್ರ ರಾಮಾಯಣದ ಮೂಲಕ ಜೀವನ ಮೌಲ್ಯಗಳನ್ನು ಜಗತ್ತಿಗೆ ತಿಳಿಸಿದ ಆದಿಕವಿ ವಾಲ್ಮೀಕಿ. ಇಂತಹ ಮಹಾಪುರುಷನನ್ನು ನೆನೆಯುವುದು ನಮ್ಮೆಲ್ಲರ ಕರ್ತವ್ಯ ಎಂದು ಅಖಿಲ ಕರ್ನಾಟಕ ಕಲಾವಿದರ ಒಕ್ಕೂಟದ ಉಪಾಧ್ಯಕ್ಷ ಡಿ.ಆರ್​.ರಾಜಪ್ಪ ಹೇಳಿದರು.

ಸಮೀಪದ ಪುಲಗೋರಕೋಟೆಯ ಶ್ರೀ ಅಭಯಾಂಜನೇಯ ಸ್ವಾಮಿ ದೇವಾಲಯದ ಆವರಣದಲ್ಲಿ ಗುರುವಾರ ಪುಲಗೋರಕೋಟೆ ಶಾಖೆಯ ಅಖಿಲ ಕರ್ನಾಟಕ ಕಲಾವಿದರ ಒಕ್ಕೂಟದಿಂದ ವಾಲ್ಮೀಕಿ ಜಯಂತಿ ಅಂಗವಾಗಿ ಹಮ್ಮಿಕೊಂಡಿದ್ದ ತತ್ವಪದ, ಜಾನಪದ ಹಾಗೂ ಸಾಂಸತಿಕ ಕಾರ್ಯಕ್ರಮದಲ್ಲಿ ಮಾತನಾಡಿದರು.

ವಾಲ್ಮೀಕಿ ಮಹರ್ಷಿಯು ಸರ್ವತೋಮುಖಿ ಚಿಂತಕ, ಚರಿತ್ರೆಗಾರ, ಸಮಾಜ ಸುಧಾರಕ, ಶಿಕ್ಷಣ ತಜ್ಞ, ರಾಜನೀತಿ ತಜ್ಞ ಹಾಗೂ ಆದಿಕವಿಯಾಗಿ ಬಹು ವೈವಿಧ್ಯಮಯವಾಗಿ ಜನರ ಮನ ಸೆಳೆದಿದ್ದಾರೆ. ಅವರಲ್ಲಿ ಇದ್ದ ಸಾಧನೆಯ ಗುಣಗಳನ್ನು ಪ್ರತಿಯೊಬ್ಬರೂ ಅನುಸರಿಸಬೇಕು ಎಂದರು.

ಅಖಿಲ ಕರ್ನಾಟಕ ಕಲಾವಿದರ ಒಕ್ಕೂಟದ ಶ್ರೀನಿವಾಸಪುರ ಶಾಖೆ ಉಪಾಧ್ಯಕ್ಷ ಕಲ್ಲೂರು ವೆಂಕಟರೆಡ್ಡಿ ಮಾತನಾಡಿ, ಕೈವಾರ ತಾತಯ್ಯ ಹಾಗು ವೀರಬ್ರಹ್ಮಯ್ಯನವರು ಸಮುದಾಯದಲ್ಲಿ ಸಾಮಾನ್ಯರಂತೆ ಓಡಾಡುತ್ತಾ, ಜನರಿಗೆ ತತ್ವದ ಪದಗಳ ಮೂಲಕ ಪರಿಸರದ ಬಗ್ಗೆ ಅರಿವು ಮೂಡಿಸಿದರು. ಜನರಲಿ ನಾನು ಎಂಬ ಅಹಂಕಾರವನ್ನು ತೊಲಗಿಸಿ ನಾವೆಲ್ಲರು ಒಂದು ಎಂಬುದನ್ನು ತಿಳಿಸಿಕೊಡುತ್ತಾ ಅಜ್ಞಾನವೆಂಬ ಅಂಧಕಾರವನ್ನು ತೊಲಗಿಸಿ, ಜ್ಞಾನವೆಂಬ ಬೀಜ ಬಿತ್ತಿದ ಶ್ರೇಷ್ಠರು ಎಂದರು.

ಭಾಷೆಯ ಕುಂಟು ನೆಪದಲ್ಲಿ ತತ್ವಪದ ಗಾಯಕರನ್ನು ಕಡೆಗಣಿಸುವುದು ಕನ್ನಡತನಕ್ಕೆ ಮಾಡಿದ ಅವಮಾನ. ಅವರು ಮತ್ತು ಅವರು ಹಾಡುವ ಪದಗಳು ಕನ್ನಡ ಜಾನಪದದ ಭಾಗವೇ ಆಗಿದೆ ಎಂದರು.

ಅಖಿಲ ಕರ್ನಾಟಕ ಕಲಾವಿದರ ಒಕ್ಕೂಟ, ಕೈವಾರ ಯೋಗಿನಾರೇಯಣ ತತ್ವಪದ ಸಮಿತಿ ಹಾಗೂಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದಿಂದ 15 ದಿನಕ್ಕೊಮ್ಮೆ ತಾಲೂಕಿನ ಪ್ರತಿ ಗ್ರಾಪಂ ಕೇಂದ್ರಗಳಲ್ಲಿ ಕೀರ್ತನೆಗಳು, ತತ್ವಪದಗಳಿಗೆ ಅರ್ಥ ಸಹಿತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಸಂಘಟಕರು ತಿಳಿಸಿದರು.

ಅಖಿಲ ಕರ್ನಾಟಕ ಕಲಾವಿದರ ಒಕ್ಕೂಟದ ಜಿಲ್ಲಾ ಸಂಯೋಜಕ ಆರ್​.ನಾರಾಯಣಸ್ವಾಮಿ, ಎಸ್​ಎಸ್​ವೈನ ಪಾಲಕಎನ್​.ಗೋಪಾಲನ್​, ಅಖಿಲ ಕರ್ನಾಟಕ ಕಲಾವಿದರ ಒಕ್ಕೂಟದ ಶ್ರೀನಿವಾಸಪುರ ಶಾಖೆ ಅಧ್ಯಕ್ಷ ಹೊದಲಿ ನಾರಾಯಣಸ್ವಾಮಿ, ಪಿಡಿಒ ಕೃಷ್ಣಪ್ಪ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದ ತಾಲೂಕು ಯೋಜನಾಧಿಕಾರಿ ಆಶಾ ಮಹೇಶ್​, ಕೈವಾರ ಯೋಗಿನಾರೇಯಣ ತತ್ವಪದ ಪದಾಧಿಕಾರಿಗಳಾದ ಬುರ್ರಕಥಾ ವೆಂಕಟೇಶ್​, ಜಗದೀಶ್​, ಕಲಾವಿದರ ಒಕ್ಕೂಟದ ಪುಲಗೂರಕೋಟೆ ಶಾಖೆ ಅಧ್ಯಕ್ಷ ವಾಸುದೇವ್​, ಗೌರವಾಧ್ಯಕ್ಷ ಆರ್​.ವೆಂಕಟರಮಣಪ್ಪ, ಕಾರ್ಯದರ್ಶಿ ಆಂಜಪ್ಪ, ಉಪಾಧ್ಯಕ್ಷೆ ರಾಜಮ್ಮ, ಖಜಾಂಚಿ ಮೇನಕಮ್ಮ ಇದ್ದರು.