ಬಿಡದಿಗೆ ಹೊರಟ ರೈತರಿಗೆ ಗಡಿಭಾಗದಲ್ಲೇ ತಡೆ

ಪ್ರಸ್ತಾವಿತ ಗ್ರೇಟರ್ ಬೆಂಗಳೂರು ಇಂಟಿಗ್ರೇಟೆಡ್ ಟೌನ್‌ಶಿಪ್ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಕೊಡಗಿನಿಂದ ತೆರಳುತ್ತಿದ್ದ ರೈತರನ್ನು ಪೊಲೀಸರು ತಡೆದ ಹಿನ್ನೆಲೆಯಲ್ಲಿ ರೈತರು ಪ್ರತಿಭಟನೆ ನಡೆಸಿದರು. ಕಾಡ್ಯಮಾಡ ಮನು ಸೋಮಯ್ಯ, ಚೆಟ್ರುಮಾಡ ಸುಜಯ್ ಬೋಪಯ್ಯ, ಪುಚ್ಚಿಮಾಡ ಸುಬ್ಬಯ್ಯ ಮತ್ತಿತರರು ಇದ್ದರು.
ಪ್ರಸ್ತಾವಿತ ಗ್ರೇಟರ್ ಬೆಂಗಳೂರು ಇಂಟಿಗ್ರೇಟೆಡ್ ಟೌನ್‌ಶಿಪ್ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಕೊಡಗಿನಿಂದ ತೆರಳುತ್ತಿದ್ದ ರೈತರನ್ನು ಪೊಲೀಸರು ತಡೆದ ಹಿನ್ನೆಲೆಯಲ್ಲಿ ರೈತರು ಪ್ರತಿಭಟನೆ ನಡೆಸಿದರು. ಕಾಡ್ಯಮಾಡ ಮನು ಸೋಮಯ್ಯ, ಚೆಟ್ರುಮಾಡ ಸುಜಯ್ ಬೋಪಯ್ಯ, ಪುಚ್ಚಿಮಾಡ ಸುಬ್ಬಯ್ಯ ಮತ್ತಿತರರು ಇದ್ದರು.
Published on
ಗೋಣಿಕೊಪ್ಪಲು:
ಬೆಂಗಳೂರು ಸಮೀಪದ ಬಿಡದಿಯಲ್ಲಿ ಪ್ರಸ್ತಾವಿತ ಗ್ರೇಟರ್ ಬೆಂಗಳೂರು ಇಂಟಿಗ್ರೇಟೆಡ್ ಟೌನ್‌ಶಿಪ್ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಕೊಡಗಿನಿಂದ ಶುಕ್ರವಾರ ತೆರಳುತ್ತಿದ್ದ ರೈತರನ್ನು ಜಿಲ್ಲೆಯ ಗಡಿಭಾಗದಲ್ಲೇ ಪೊಲೀಸರು ತಡೆ ಹಿಡಿದರು. ಕೊಡ್ಲಿಪೇಟೆ, ತಿತಿಮತಿ ಸೇರಿದಂತೆ ಜಿಲ್ಲೆಯ ವಿವಿಧ ಭಾಗಗಳಿಂದ 30ಕ್ಕೂ ಹೆಚ್ಚು ಕಾರುಗಳು ಮತ್ತು 3 ಬಸ್ ಅನ್ನು ಪೊಲೀಸರು ತಡೆದರು. ಪೊಲೀಸರ ಕ್ರಮ ಖಂಡಿಸಿ ರೈತರು ಪ್ರತಿಭಟನೆ ನಡೆಸಿದರು. ರೈತರು ತೆರಳುತ್ತಿದ್ದ ಬಸ್ ಪೊಲೀಸರು ತಡೆದು ನಿಲ್ಲಿಸಿದ ಹಿನ್ನೆಲೆಯಲ್ಲಿ ತಿತಿಮತಿಯಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ಪೊಲೀಸರ ಕ್ರಮ ಖಂಡಿಸಿ ರೈತರು ಮಳೆಯ ನಡುವೆಯೇ ರಸ್ತೆಯಲ್ಲೇ ದಿಢೀರ್ ಧರಣಿ ಕುಳಿತು ತಮ್ಮ ಹಕ್ಕನ್ನು ಮೊಟಕುಗೊಳಿಸಿದ್ದಕ್ಕಾಗಿ ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತದ ವಿರುದ್ಧ ಘೋಷಣೆಗಳನ್ನು ಕೂಗಿದರು.
ನಾವು ಪ್ರಜಾಸತ್ತಾತ್ಮಕ ಮೂಲಭೂತ ಹಕ್ಕಿನಂತೆ ಶಾಂತಿಯುತವಾಗಿ ಪ್ರತಿಭಟನೆ ನಡೆಸಲು ತೆರಳುತ್ತಿದ್ದೇವೆ ಎಂದು ಹೋರಾಟಗಾರರು ಪೊಲೀಸರ ಜತೆ ವಾದಿಸಿದರು. ಆದರೆ, ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಯ್ದುಕೊಳ್ಳುವ ಮುನ್ನೆಚ್ಚರಿಕೆಯ ಕ್ರಮವಾಗಿ ಬಸ್ಸನ್ನು ಮಧ್ಯದಲ್ಲೇ ತಡೆಯಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಸ್ಪಷ್ಟಪಡಿಸಿದರು. ಈ ಸಂದರ್ಭ ಪೊಲೀಸರು ಮತ್ತು ರೈತ ಮುಖಂಡರ ನಡುವೆ ಬಿಸಿ ಬಿಸಿ ಚರ್ಚೆಗೆ ನಡೆಯಿತು. ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಸ್ಥಳಕ್ಕೆ ಆಗಮಿಸುವ ತನಕ ರಸ್ತೆಯಲ್ಲೇ ಪ್ರತಿಭಟನೆ ಮುಂದುವರಿಸುವುದಾಗಿ ರೈತರು ಪಟ್ಟುಹಿಡಿದರು. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿಸಿ ದೆಹಲಿಗೆ ಹೋಗಿ ಪ್ರತಿಭಟಿಸಬಹುದು, ಆದರೆ ರೈತರು ಇಲ್ಲಿ ಪ್ರತಿಭಟಿಸುವುದನ್ನು ಏಕೆ ತಡೆಯಲಾಗುತ್ತಿದೆ? ಎಂದು ಪ್ರಶ್ನಿಸಿದರು.
ಎಲ್ಲಾ ಜಿಲ್ಲೆಗಳಿಂದಲೂ ಬಿಡದಿಗೆ ರೈತರು ತೆರಳಲು ಅವಕಾಶ ಕೊಡಲಾಗಿದೆ. ಆದರೆ ಕೊಡಗಿನ ರೈತರನ್ನು ಅಲ್ಲಿಗೆ ತೆರಳದಂತೆ ಕೂಡಿ ಹಾಕಲಾಗಿದೆ. ಕೊಡಗಿಗೆ ಪ್ರತ್ಯೇಕ ಕಾನೂನು ಇದೆಯಾ ? ಈ ಬಗ್ಗೆ ಸರ್ಕಾರದ ಆದೇಶ ಇದ್ದರೆ ತೋರಿಸಿ ಎಂದು ಪೋಲಿಸರನ್ನು ಒತ್ತಾಯಿಸಿದರು. ಸ್ಥಳೀಯ ಜನಪ್ರತಿನಿಧಿಗಳ ವಿರುದ್ಧವೂ ಆಕ್ರೋಶ ಹೊರ ಹಾಕಿದರು.
ಪೊಲೀಸರು ಪ್ರತಿಭಟನಾನಿರತ ರೈತರ ಮನವೊಲಿಸಲು ಪ್ರಯತ್ನಿಸಿದರಾದರು ಫಲ ಕೊಡದ ಹಿನ್ನೆಲೆಯಲ್ಲಿ ವಶಕ್ಕೆ ಪಡೆದುಕೊಂಡು ನಂತರ ಬಿಡುಗಡೆ ಮಾಡಿದರು.
ರೈತ ಸಂಘದ ಜಿಲ್ಲಾಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ, ಪ್ರಧಾನ ಕಾರ್ಯದರ್ಶಿ ಚೆಟ್ರುಮಾಡ ಸುಜಯ್ ಬೋಪಯ್ಯ, ಸಂಚಾಲಕ ಪುಚ್ಚಿಮಾಡ ಸುಬ್ಬಯ್ಯ ಮತ್ತಿತರರು ಈ ಸಂದರ್ಭ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net