ಕೋಲಾರ: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಡೆಯುವ ಚುನಾವಣಾ ಪ್ರಕ್ರಿಯೆಯಲ್ಲಿ ಸುಧಾರಣೆಗಳನ್ನು ತರಬೇಕಾದ ಅವಶ್ಯಕತೆಯಿದೆ. ದೇಶದ ಚುನಾವಣಾ ವ್ಯವಸ್ಥೆ ಜಗತ್ತಿನಲ್ಲಿ ನ್ಯಾಯತೆ, ಪಾರದರ್ಶಕತೆ ಮತ್ತು ಕಾರ್ಯಕ್ಷಮತೆಕ್ಕಾಗಿ ಪ್ರಸಿದ್ಧವಾಗಿದೆ ಎಂದು ಸಂಸದ ಎಂ.ಮಲ್ಲೇಶ್ ಬಾಬು ಅಭಿಪ್ರಾಯವ್ಯಕ್ತಪಡಿಸಿದರು.
ದೆಹಲಿಯಲ್ಲಿ ನಡೆಯುತ್ತಿರುವ ಬುಧವಾರದ ಚಳಿಗಾಲದ ಅಧಿವೇಶನದಲ್ಲಿ ಮಾತನಾಡಿ, ಸುಧಾರಣೆಯಿಂದ ಇವಿಎಂ ಯಂತ್ರಗಳ ಮೇಲಿನ ಅನುಮಾವು ಜನರಿಂದ ದೂರವಾಗುತ್ತದೆ ಎಂದರು.
ಇವಿಎಂ ಯಂತ್ರಗಳು ಬುತ್ ಕಬಳಿಕೆ, ಅಮಾನ್ಯ ಮತಗಳು, ತಡವಾದ ಎಣಿಕೆ ಮುಂತಾದ ಸಮಸ್ಯೆಗಳನ್ನು ನಿವಾರಿಸಿದೆ. ನ್ಯಾಯಾಲಯಗಳು ಮತ್ತು ತಜ್ಞರು ಹಲವು ಬಾರಿ ಪರಿಶೀಲಿಸಿ ಯಂತ್ರಗಳ ನಂಬಿಗಸ್ತಿಕೆಯನ್ನು ದೃಢಪಡಿಸಿದ್ದಾರೆ ಎಂದು ತಿಳಿಸಿದರು.
2023ರ ಮಾಲೂರು ವಿಧಾನಸಭಾ ಚುನಾವಣೆಯ ಮತ ಎಣಿಕೆಯಲ್ಲಿ ಲೋಪಗಳು ಆಗಿವೆ ಎಂದು ಮಾಲೂರು ಕ್ಷೇತ್ರದ ಮರು ಎಣಿಕೆಯು ಸುಪ್ರೀಂ ಕೋರ್ಟ್ ಆದೇಶದಂತೆ ನ.11ರಂದು ನಡೆಯಿತು. ಅದರಲ್ಲಿ ಫಲಿತಾಂಶವೂ ಹಿಂದಿನಂತೆಯೇ ಇತ್ತು. ಇದು ಇವಿಎಂ ವಿಶ್ವಾಸಾರ್ಹತೆಯನ್ನು ಸ್ಪಷ್ಪಪಡಿಸಿದೆ ಎಂದು ಹೇಳಿದರು.
ಕರ್ನಾಟಕದಲ್ಲಿ ನಡೆಯುತ್ತಿರುವ ಸಹಕಾರ ಸಂಗಳ ಚುನಾವಣೆಯಲ್ಲಿ ಕೆಲ ಮತದಾರರನ್ನು ಮತದಾನಕ್ಕೂ ಮುಂಚಿನ ದಿನವೇ ಅನರ್ಹಗೊಳಿಸಲಾಗುತ್ತಿದೆ. ವೇಣುಗೋಪಾಲ್ ಜೀ ನಿಮ್ಮ ಪಕ್ಷದ ಸರ್ಕಾರವೇ ಅನೈತಿಕ ಕ್ರಮಗಳನ್ನು ಅನುಸರಿಸುತ್ತಿದೆ. ವಿಪಕ್ಷಗಳು ಪೇಪರ್ ಬ್ಯಾಲೆಟ್ ಬಳಸಬೇಕು ಎಂದು ಹೇಳುತ್ತಿದ್ದು, ಹಳೆಯ ವಿಧಾನ ಮತ್ತೆ ಸಮಸ್ಯೆಗಳ ಉಂಟುಮಾಡುತ್ತದೆ ಎಂದು ಗಮನ ಸೆಳೆದರು.
ಜೆಡಿಎಸ್ ಪಕ್ಷದ ವರಿಷ್ಠ ದೇವೇಗೌಡ, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರ ನೇತೃತ್ವದಲ್ಲಿ, ಚುನಾವಣಾ ವ್ಯವಸ್ಥೆಯ ಆಧುನೀಕರಣಕ್ಕೆ ಸಂಪೂರ್ಣ ಬೆಂಬಲ ನೀಡಲಾಗುವುದು. ಭವಿಷ್ಯದಲ್ಲಿ ನಿಜವಾದ ಮತದಾರರ ಗುರುತನ್ನು ಖಚಿತಪಡಿಸಲು ಐರಿಸ್ ಸ್ಕಾ$ನ್ ವ್ಯವಸ್ಥೆಯನ್ನು ಅಳವಡಿಸಬೇಕು ಎಂದು ಮನವಿ ಮಾಡಿದರು.