ಬರ ನಿರ್ವಹಣೆಗೆ ಜಿಲ್ಲಾಡಳಿತದಿಂದ ಕ್ರಮ

District administration takes action to manage drought
District administration takes action to manage drought
Published on
ಕೋಲಾರ: ಜಿಲ್ಲೆಯಲ್ಲಿ ಮಳೆ ಕೊರತೆ ಎದುರಾಗಿದ್ದು, ಬರ ಪರಿಸ್ಥಿತಿ ಎದುರಿಸಲು ಜಿಲ್ಲಾಡಳಿತವು ಕ್ರಮವಹಿಸಿದೆ. ಸಾರ್ವಜನಿಕರಿಗೆ ಯಾವುದೇ ರೀತಿ ತೊಂದರೆಯಾಗದಂತೆ ಎಚ್ಚರವಹಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್​.ರವಿ ಹೇಳಿದರು.
ನಗರದ ಜಿಲ್ಲಾಡಳಿತ ಭವನದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಾಡಿಕೆಗಿಂತ ಮಳೆ ಕೊರತೆಯಾಗಿದೆ. ಇದರಿಂದಾಗಿ ಕೃಷಿ ಚಟುವಟಿಕೆಗಳು ಕುಂಠಿತಗೊಂಡಿದ್ದು, ಬಿತ್ತನೆ ಬೀಜ, ರಸಗೊಬ್ಬರಕ್ಕೂ ಬೇಡಿಕೆಯಿಲ್ಲವಾಗಿದೆ ಎಂದರು.ಬೇಸಿಗೆಯಲ್ಲೂ ಸಹ ಯಾವುದೇ ಗ್ರಾಮ, ವಾರ್ಡ್​ನಲ್ಲಿ ಕುಡಿಯುವ ನೀರಿನ ಸಮಸ್ಯೆ ಕಂದುಬಂದಿಲ್ಲ. ಜಿಲ್ಲೆಯಲ್ಲಿ ನಡೆಸಿದ ನೀರಿನ ಆಡಿಟ್​, ಅದಾಲತ್​ನಿಂದ ನೀರಿನ ಲಭ್ಯತೆಯ ಬಗ್ಗೆ ಅಂದಾಜು ಸಿಕ್ಕಿದ್ದು, ಮುಂದಿನ ದಿನಗಳಲ್ಲೂ ಸಮಸ್ಯೆ ಎದುರಾಗದಂತೆ ಎಚ್ಚರಹಿಸಲಾಗುವುದು ಎಂದು ತಿಳಿಸಿದರು.
ಆಗಸ್ಟ್​ ಮಾಹೆಯಲ್ಲಿ ನೀರಿನ ಅಭಾವ ಉಂಟಾಗುವ ಸಂಭವ ಇದೆ. ಇದರ ಪೂರ್ವಭಾವಿ ಸಿದ್ಧತೆಯಾಗಿ 123 ಕೊಳವೆ ಬಾವಿಗಳನ್ನು ಗ್ರಾಮೀಣ ಪ್ರದೇಶದಲ್ಲಿ ಹಾಗೂ 45 ಕೊಳವೆ ಬಾವಿಗಳನ್ನು ನಗರ ಭಾಗದಲ್ಲಿ ಗುರುತಿಸಲಾಗಿದೆ. ರಾಸುಗಳಿಗೆ 31 ವಾರಕ್ಕೆ ಅಗತ್ಯವಿರುವಷ್ಟು ಮೇವು ಲಭ್ಯವಿದೆ ಎಂದು ತಿಳಿಸಿದರು.
ನೀರಿನ ಸಮಸ್ಯೆ ನೀಗಿಸಲು ಅನುದಾನದ ಸಮಸ್ಯೆಯಿಲ್ಲ. ದುಗ್ಗಸಂದ್ರ, ಕಾಮಸಮುದ್ರ, ಲಕ್ಕೂರು , ಮಾಸ್ತಿ ಹೋಬಳಿಗಳು ಸೇರಿ 5 ತಾಲೂಕುಗಳಲ್ಲಿ ನೀರಿನ ಕೊರತೆ ಉಂಟಾಗುವ ಸಾಧ್ಯತೆಯಿದೆ. ಜಿಲ್ಲೆಯಲ್ಲಿ 3,232 ಕೆರೆಗಳ ಪೈಕಿ 950 ಕೆರೆಗಳಲ್ಲಿ ನೀರಿಲ್ಲ. 300 ಕೆರೆಗಳಲ್ಲಿ ಶೇ.50ರಿಂದ ಶೇ.75 ಮಾತ್ರ ನೀರಿದೆ. ಯರಗೋಳ್​ ಡ್ಯಾಂಗೂ ನೀರು ಹರಿದು ಬರುತ್ತಿಲ್ಲ. ಹಾಗಾಗಿ ಶೇಖರಣೆಯಾದ ನೀರನ್ನು ಸಂಸ್ಕರಿಸಿ ಹರಿಸಲಾಗುತ್ತಿದೆ. ಕೋಲಾರದ 22 ವಾರ್ಡ್​ಗಳಿಗೆ, ಮಾಲೂರು 18 ವಾರ್ಡ್​ಗಳಿಗೆ, ಬಂಗಾರಪೇಟೆಯ 20 ವಾರ್ಡಗಳಿಗೆ ಮಾತ್ರ ನೀರು ಪೂರೈಕೆ ಮಾಡಲಾಗುತ್ತಿದೆ ಎಂದು ಹೇಳಿದರು.
ಮಾವು ಬೆಂಬಲ ಬೆಲೆ ಯೋಜನೆ ಖರೀದಿಯಡಿ ಈಗಾಗಲೇ 12,551 ಮಂದಿ ಬೆಳೆಗಾರರು ನೋಂದಣಿ ಮಾಡಿಕೊಂಡಿದ್ದಾರೆ. ಖರೀದಿಗೆ ಗರಿಷ್ಠ 1.30 ಲಕ್ಷ ಮೆಟ್ರಿಕ್​ ಟನ್​ ಖರೀದಿಗೆ ಮಾತ್ರ ಅವಕಾಶ ನೀಡಿರುವುದರಿಂದ ಮಾವು ಖರೀದಿಯನ್ನು ಈಗ ನಿಲ್ಲಿಸಲಾಗಿದೆ ಎಂದು ಸ್ಪಷ್ಟಪಡಿಸಿದರು. ಯೋಜನೆಯಡಿ ಗುರಿ ನೀಡಿರುವುದಕ್ಕಿಂತ ಹೆಚ್ಚು ಮಾವು ಖರೀದಿ ಮಾಡಲಾಗಿದೆ. ಉಳಿಕೆ ಮಾವು ಖರೀದಿಸಲು ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಜಿಲ್ಲಾಡಳಿತದಿಂದ ಪ್ರಸಾವನೆ ಸಲ್ಲಿಸಲಾಗಿದೆ. ರಾಜ್ಯವು ಕೇಂದ್ರದಲ್ಲಿ ಸಂಬಂಧ ಪಟ್ಟವರೊಂದಿಗೆ ಮಾತುಕತೆ ನಡೆಸಿ ಹೆಚ್ಚುವರಿ ನೋಂದಣಿ ಮಾಡಿಸಿಕೊಳ್ಳಲು ಅನುಮತಿ ಕೊಟ್ಟಲ್ಲಿ ನೋಂದಣಿ ಮಾಡಿಕೊಂಡು ಖರೀದಿಸಲಾಗುವುದು ಎಂದು ಹೇಳಿದರು.
ಈವರೆಗೆ 7,076 ರೈತರು ಮಾತ್ರ ಬಿಲ್​ಗಳನ್ನು ನೀಡಿದ್ದಾರೆ. ಈವರೆಗೆ 85 ಸಾವಿರ ಟನ್​ ಖರೀದಿಸಲಾಗಿದೆ. ಇನ್ನು 4 ಸಾವಿರ ಮಂದಿ ಬಿಲ್​ಗಳನ್ನು ಕೊಡಬೇಕಾಗಿದೆ. 1.30 ಲಕ್ಷ ಟನ್​ ಮಂಜೂರಾತಿಯ ಪೈಕಿ 85 ಟನ್​ ಮಾತ್ರ ಖರೀದಿಸಿದ್ದ ಉಳಿದಂತೆ ನೋಂದಣಿದಾರರಿಂದ ಬಿಲ್​ ಬರಬೇಕಾಗಿದೆ. ಕೇಂದ್ರ ಅನುಮತಿ ನೀಡಿದರೆ ಮಾತ್ರ ಹೆಚ್ಚುವರಿಯಾಗಿ ಖರೀದಿಸಲು ಸಾಧ್ಯವಾಗಲಿದೆ ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net