ಕೃಷ್ಣಾ ನದಿ ನೀರು ಹರಿಸಲು ಒತ್ತಾಯ

ದೆಹಲಿಯಲ್ಲಿ ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಅವರಿಗೆ ಸಂಸದ ಎಂ.ಮಲ್ಲೇಶ್​ ಬಾಬು ಮನವಿ ಸಲ್ಲಿಸಿದರು. ಸಚಿವರಾದ ಎಚ್​.ಡಿ.ಕುಮಾರಸ್ವಾಮಿ, ಭೂಪತಿರಾಜು ಶ್ರೀನಿವಾಸ ವರ್ಮ ಇದ್ದರು.
ದೆಹಲಿಯಲ್ಲಿ ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಅವರಿಗೆ ಸಂಸದ ಎಂ.ಮಲ್ಲೇಶ್​ ಬಾಬು ಮನವಿ ಸಲ್ಲಿಸಿದರು. ಸಚಿವರಾದ ಎಚ್​.ಡಿ.ಕುಮಾರಸ್ವಾಮಿ, ಭೂಪತಿರಾಜು ಶ್ರೀನಿವಾಸ ವರ್ಮ ಇದ್ದರು.
Published on
ಕೋಲಾರ: ಬಯಲು ಸೀಮೆ ಜಿಲ್ಲೆಗಳಿಗೆ ಕುಡಿಯುವ ನೀರಿನ ಒದಗಿಸುವ ಉದ್ದೇಶದಿಂದ ಕೃಷ್ಣಾ ನದಿಯಿಂದ ಹೆಚ್ಚುವರಿ ನೆರೆ ನೀರು ಹರಿಸಬೇಕು ಎಂದು ಒತ್ತಾಯಿಸಿ, ಆಂಧ್ರ ಪ್ರದೇಶದ ಮುಖ್ಯಮಂತ್ರಿ ಎನ್​. ಚಂದ್ರಬಾಬು ನಾಯ್ಡು ಅವರಿಗೆ ಸಂಸದ ಮಲ್ಲೇಶ್​ ಬಾಬು ಅವರು ಮನವಿ ಸಲ್ಲಿಸಿದರು.
ನವದೆಹಲಿಯಲ್ಲಿ ಮಂಗಳವಾರ ಸಂಸತ್​ ಭವನದಲ್ಲಿರುವ ಕೇಂದ್ರ ಸಚಿವರಾದ ಎಚ್​.ಡಿ. ಕುಮಾರಸ್ವಾಮಿ ಅವರ ಕಚೇರಿಗೆ ರಾಜ್ಯಕ್ಕೆ ಸಂಬಂಧಿಸಿದ ಅಭಿವೃದ್ಧಿ ವಿಚಾರಗಳ ಬಗ್ಗೆ ಚರ್ಚಿಸಲು ಆಂಧ್ರ ಪ್ರದೇಶದ ಮುಖ್ಯಮಂತ್ರಿ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಮಲ್ಲೇಶ್​ ಬಾಬು ಅವರು ಮನವಿ ಸಲ್ಲಿಸಿ ಬೇಡಿಕೆ ಮುಂದಿಟ್ಟರು.
ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಕುಡಿಯುವ ನೀರಿನ ಅಹಾಕಾರ ಎದುರಾಗಿದೆ. ಕೃಷ್ಣಾ ನದಿಯಿಂದ ಸಮುದ್ರಕ್ಕೆ ಹರಿದು ಹೋಗುತ್ತಿರುವ ನೆರೆ ನೀರಿನಲ್ಲಿ ಸ್ವಲ್ಪ ಪ್ರಮಾಣ ನೀರನ್ನು ಜಿಲ್ಲೆಗಳಿಗೆ ಹರಿಸಬೇಕು. ಈ ನೀರನ್ನು ಕೇವಲ ಕುಡಿಯುವ ನೀರಿನ ಉದ್ದೇಶಕ್ಕೆ ಬಳಕೆ ಮಾಡಲಾಗುವುದು ಎಂದು ಕೋರಿದರು.
ಜಿಲ್ಲೆಯ ಗಡಿ ಆಂಧ್ರ ಪ್ರದೇಶ ಸರ್ಕಾರವು ಹಂದ್ರಿ ಸುಜಲಾ ಶ್ರವಂತಿ ಯೋಜನೆ (ಎಚ್​ಎನ್​ಎಸ್​ಎಸ್​) ಯೋಜನೆಯ ಮೂಲಕ ರಾಜ್ಯದ ಈ ಮೂರು ಜಿಲ್ಲೆಗಳಿಗೆ ಕುಡಿಯುವ ನೀರಿನ ಉದ್ದೇಶಕ್ಕಾಗಿ ಹೆಚ್ಚುವರಿ ನೆರೆ ನೀರನ್ನು ಕೊಡಬೇಕು. ಇದನ್ನು ಮಾನವೀಯ ನೆಲೆಗಟ್ಟಿನಲ್ಲಿ ಪರಿಶೀಲನೆ ನಡೆಸಬೇಕು ಎಂದು ಮನವಿ ಮಾಡಿದರು.
ಆಂಧ್ರ ಪ್ರದೇಶದ ಗಡಿಯನ್ನು ಕೋಲಾರ, ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳು ಹಂಚಿಕೊಂಡಿವೆ. ಪಾಲಾರ್​ ಮತ್ತು ಪೆನ್ನಾರ್​ ಜಲಾನಯನ ಪ್ರದೇಶದ ವ್ಯಾಪ್ತಿಗೆ ಬರುತ್ತವೆ. ಈ ಭಾಗದಲ್ಲಿ ಅಂತರ್ಜಲ ಮಟ್ಟ ಪಾತಾಳಕ್ಕೆ ಕುಸಿದಿದ್ದು, ಲಭ್ಯವಿರುವ ನೀರು ಕುಡಿಯಲು ಯೋಗ್ಯವಾಗಿಲ್ಲ. ಹೀಗಾಗಿ ಮಾನವೀಯ ದೃಷ್ಟಿಯಿಂದ ನಮ್ಮ ಮನವಿಯನ್ನು ಪರಿಗಣಿಸಬೇಕು ಎಂದರು.
ಮನವಿಗೆ ಸ್ಪಂದಿಸಿದ ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಅವರು, ಮೂರು ಜಿಲ್ಲೆಗಳ ನೀರಿನ ಸಮಸ್ಯೆ ಬಗ್ಗೆ ಗಮನದಲ್ಲಿದೆ. ಅಧಿಕಾರಿಗಳ ಜತೆ ಚರ್ಚೆ ಮುಂದಿನ ಕ್ರಮವಹಿಸಲಾಗುವುದುಎ ಂದು ಭರವಸೆ ನೀಡಿದರು.
ಕೇಂದ್ರದ ಬೃಹತ್​ ಕೈಗಾರಿಕೆ ಮತ್ತು ಉಕ್ಕು ಖಾತೆ ರಾಜ್ಯ ಸಚಿವ ಭೂಪತಿರಾಜು ಶ್ರೀನಿವಾಸ ವರ್ಮ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net