

ಮುಳಬಾಗಿಲು: ಭಜನೆ ಮತ್ತು ಸಂಕೀರ್ತನೆಗಳ ಮೂಲಕ ಜನರಲ್ಲಿ ಆಧ್ಯಾತ್ಮಿಕ ಆಸಕ್ತಿ ಬೆಳೆಸುವುದು ಹಾಗೂ ಕೈವಾರ ತಾತಯ್ಯನವರ ಸಂದೇಶವನ್ನು ಗ್ರಾಮೀಣ ಜನರಿಗೆ ತಲುಪಿಸುವ ಉದ್ದೇಶದಿಂದ ಶ್ರೀರಾಮದಂಡು ಸಂಕೀರ್ತನಾ ಪಾದಯಾತ್ರೆ ಆಯೋಜಿಸಲಾಗಿದೆ ಎಂದು ಕೈವಾರ ಕ್ಷೇತ್ರದ ಧಮಾರ್ಧಿಕಾರಿ ಡಾ.ಎಂ.ಆರ್.ಜಯರಾಮ್ ತಿಳಿಸಿದರು.
ತಾಲೂಕಿನ ಮುಡಿಯನೂರು ಶ್ರೀ ಸೋಮೇಶ್ವರಸ್ವಾಮಿ ದೇವಾಲಯದಿಂದ ಕುರುಡುಮಲೆ ಶ್ರೀ ಲಕ್ಷಿ$್ಮ ವಿನಾಯಕ ದೇವಾಲಯದವರೆಗೆ ಶನಿವಾರ ಹಮ್ಮಿಕೊಂಡಿದ್ದ ಪಾದಯಾತ್ರೆಯಲ್ಲಿ ಮಾತನಾಡಿ, ಕೈವಾರ ತಾತಯ್ಯನವರ 300ನೇ ಜಯಂತಿ ಅಂಗವಾಗಿ ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳಲ್ಲಿ ವರ್ಷವಿಡೀ ವಿವಿಧ ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಇದರ ಭಾಗವಾಗಿ ಮುಳಬಾಗಿಲು ತಾಲೂಕಿನಲ್ಲಿ ಶ್ರೀರಾಮದಂಡು ಸಂಕೀರ್ತನಾ ಪಾದಯಾತ್ರೆ ನಡೆಸಲಾಗಿದ್ದು, ಭಜನೆ, ಸಂಕೀರ್ತನೆ, ಧಾರ್ಮಿಕ ಚಟುವಟಿಕೆಗಳಲ್ಲಿ ಹೆಚ್ಚಿನ ಜನರು ಪಾಲ್ಗೊಳ್ಳಲು ಪ್ರೇರಣೆ ನೀಡಲಿದೆ. ಯಾತ್ರೆಯು ಭಕ್ತರಲ್ಲಿ ಆಧ್ಯಾತ್ಮಿಕ ಚಿಂತನೆ ಬೆಳೆಸುವ ಜತೆಗೆ ಧಾರ್ಮಿಕ ಪರಂಪರೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸಲು ಸಹಕಾರಿಯಾಗಲಿದೆ. ತಾಲೂಕಿನ ಗ್ರಾಮಸ್ಥರು ತೋರಿದ ಸಹಕಾರ ಮತ್ತು ಆತಿಥ್ಯ ಸಂತಸ ತಂದಿದೆ ಎಂದರು.
ಶ್ರೀ ಯೋಗಿನಾರೇಯಣ ಸಂಕೀರ್ತನಾ ಯೋಜನೆಯ ಸಂಚಾಲಕ ವಾನರಾಶಿ ಬಾಲಕೃಷ್ಣ ಭಾಗವತರ್ ಮಾತನಾಡಿ, ಧಾರ್ಮಿಕ ಕಾರ್ಯಕ್ರಮಗಳು ಭಕ್ತರನ್ನು ಒಗ್ಗೂಡಿಸುವುದರ ಜತೆಗೆ ನಮ್ಮ ಪರಂಪರೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸಲು ನೆರವಾಗುತ್ತವೆ ಎಂದರು.
ಬೆಳಗ್ಗೆ 6ಕ್ಕೆ ಮುಡಿಯನೂರು ಶ್ರೀ ಸೋಮೇಶ್ವರಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಬಳಿಕ ಪಾದಯಾತ್ರೆಗೆ ಚಾಲನೆ ನೀಡಲಾಯಿತು. ನಾರಾಯಣ ಧ್ವಜಗಳನ್ನು ಹಿಡಿದ ಭಕ್ತರು ಭಜನೆ ಹಾಗೂ ಸಂಕೀರ್ತನೆಗಳೊಂದಿಗೆ ಹೆಜ್ಜೆ ಹಾಕಿದರು.
ಮುಡಿಯನೂರಿನಿಂದ ಆರಂಭವಾದ ಯಾತ್ರೆ ಜೆ.ವಮ್ಮಸಂದ್ರ ಕ್ರಾಸ್, ಗುಜ್ಜನಹಳ್ಳಿ, ನಿಜ್ಜನಕುಂಟೆ ಕ್ರಾಸ್, ಕೆ.ಹೊಸಹಳ್ಳಿ, ಕೊಲದೇವಿ ಗರುಡ ದೇವಾಲಯ, ಮಂಡಿಕಲ್, ದುಗ್ಗಸಂದ್ರ ಮಾರ್ಗವಾಗಿ ಕುರುಡುಮಲೆ ತಲುಪಿತು.
ಪಾದಯಾತ್ರೆ ಮಾರ್ಗಮಧ್ಯದ ಗ್ರಾಮಗಳಲ್ಲಿ ರಸ್ತೆಗಳ ಸ್ವಚ್ಛತೆಗೆ ಆದ್ಯತೆ ನೀಡಿ, ತಳಿರು ತೋರಣ, ರಂಗೋಲಿಗಳಿಂದ ಅಲಂಕರಿಸಲಾಗಿತ್ತು. ಶ್ರೀರಾಮ ಮತ್ತು ಕೈವಾರ ತಾತಯ್ಯನವರ ಭಾವಚಿತ್ರಗಳಿಗೆ ವಿಶೇಷ ಪೂಜೆ ಸಲ್ಲಿಸಿ, ಆರತಿ ಬೆಳಗಿ ಸ್ವಾಗತಿಸಲಾಯಿತು. ಯಾತ್ರೆಯಲ್ಲಿ ಪಾಲ್ಗೊಂಡವರಿಗೆ ವಿವಿಧೆಡೆ ನೀರು, ಹಾಲು, ಮಜ್ಜಿಗೆ, ಪಾನಕ, ಕೋಸಂಬರಿ ವಿತರಿಸಲಾಯಿತು.
ಶ್ರೀ ಪೋತನ ಭಾಗವತ ಹಾಗೂ ಅಮರನಾರಾಯಣ ಶತಕದ ಪ್ರವಚನ ಸಪ್ತಾಹಕ್ಕೂ ಚಾಲನೆ ನೀಡಲಾಯಿತು.
ಸದಸ್ಯರಾದ ಕೆ.ನರಸಿಂಹಪ್ಪ, ಕೆ.ವಿ.ಸುರೇಶ್, ತ್ಯಾಗರಾಜ್, ನಿವೃತ್ತ ಐಎಎಸ್ ಅಧಿಕಾರಿ ಬಿ.ಎನ್.ಕೃಷ್ಣಯ್ಯ, ಕುರುಡುಮಲೆ ಮಂಜುನಾಥ್, ಬ್ಯಾಂಕ್ ನಾರಾಯಣಸ್ವಾಮಿ, ಪ್ರಭಾಕರ್ ಇತರರು ಇದ್ದರು.
25 ಎಂಬಿಎಲ್ ಕುರುಡುಮಲೆ ಪೋಲ್ಡರ್
ಕೈವಾರ ತಾತಯ್ಯನವರ 300ನೇ ಜಯಂತಿ ಅಂಗವಾಗಿ ಮುಳಬಾಗಿಲು ತಾಲೂಕು ಕುರುಡುಮಲೆ ಶ್ರೀ ಲಕ್ಷಿ$್ಮ ವಿನಾಯಕ ದೇವಾಲಯದಲ್ಲಿ ಹಮ್ಮಿಕೊಂಡಿದ್ದ ಧಾರ್ಮಿಕ ಕಾರ್ಯಕ್ರಮದಲ್ಲಿ ಕೈವಾರ ಧಮಾರ್ಧಿಕಾರಿ ಡಾ. ಎಂ.ಆರ್.ಜಯರಾಮ್, ಯೋಗಿನಾರೇಯಣ ಸಂಕೀರ್ತನಾ ಯೋಜನೆಯ ಸಂಚಾಲಕ ವಾನರಾಶಿ ಬಾಲಕೃಷ್ಣ ಭಾಗವತರ್, ಟ್ರಸ್ಟ್ ಉಪಾಧ್ಯಕ್ಷ ಜೆ.ವಿಭಾಕರರೆಡ್ಡಿ, ಖಜಾಂಚಿ ಆರ್ಪಿಎಂ ಸತ್ಯನಾರಾಯಣ ಇದ್ದರು.
** ಕೈವಾರ ತಾತಯ್ಯನವರ 300ನೇ ಜಯಂತಿ ಅಂಗವಾಗಿ ಹಮ್ಮಿಕೊಂಡಿದ್ದ ಪಾದಯಾತ್ರೆ.