ಪಹಣಿಯಲ್ಲಿ ಬೆಳೆ ಕಾಲಂ ದೋಷ

ಮಾವು ಮಾರಾಟ ನೋಂದಣಿಗೆ ಸಾಲಿನಲ್ಲಿ ನಿಂತಿರುವ ರೈತರು.
ಮಾವು ಮಾರಾಟ ನೋಂದಣಿಗೆ ಸಾಲಿನಲ್ಲಿ ನಿಂತಿರುವ ರೈತರು.
Published on
ಕಿರುವಾರ ಎಸ್.ಸುದರ್ಶನ್ ಕೋಲಾರ
ಬೆಲೆ ಕುಸಿತದಿಂದ ಕಂಗಾಲಾಗಿದ್ದ ಮಾವು ಬೆಳೆಗಾರರಿಗೆ ಸರ್ಕಾರಗಳು ಸಹಾಯಧನ ಘೋಷಣೆ ಮಾಡಿದ್ದು, ಪಹಣಿ. ಕಾಲಂನಲ್ಲಿ ಮಾವು ಬೆಳೆ ನಮೂದು ಆಗದಿರುವುದರಿಂದ ಯೋಜನೆಯ ಪ್ರಯೋಜನ ಪಡೆದುಕೊಳ್ಳುವುದು ಹೇಗೆ ಎಂಬ ಗೊಂದಲ ಸೃಷ್ಟಿಯಾಗಿದೆ.
ಮಾರುಕಟ್ಟೆಯಲ್ಲಿ ಮಾವಿಗೆ ಬೇಡಿಕೆಯಿಲ್ಲದೆ ಬೆಲೆಯೂ ಪಾತಾಳಕ್ಕೆ ಕುಸಿದಿತ್ತು. ಬೆಳೆಗಾರರ ಸತತ ಹೋರಾಟದ ಫಲವಾಗಿ ಕೇಂದ್ರ ಸರ್ಕಾರ ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ ಸೇರಿ ಪ್ರಮುಖ ಜಿಲ್ಲೆಗಳ ತೋತಾಪುರಿ ಮಾವು ಬೆಳೆಗಾರರ ಸಂಕಷ್ಟಕ್ಕೆ ಸ್ಪಂದಿಸಿ ಬೆಂಬಲ ಬೆಲೆ ಯೋಜನೆಯಡಿ ಪ್ರತಿ ಕ್ವಿಂಟಾಲ್‌ಗೆ 1,750 ರಂತೆ ಆರ್ಥಿಕ ನೆರವು ಘೋಷಿಸಿದೆ. ಇದನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರವು 50:50ರ ಅನುಪಾತದಲ್ಲಿ ದರ ಪಾವತಿ ಮಾಡಲಿವೆ. ಜಿಲ್ಲೆಯಲ್ಲಿ ಒಟ್ಟು 45 ಸಾವಿರ ಹೆಕ್ಟೇರ್‌ನಲ್ಲಿ ಮಾವು ಬೆಳೆಯಿದ್ದು, ಸುಮಾರು 25 ಸಾವಿರ ಮೆಟ್ರಿಕ್ ಟನ್‌ ಅಂದಾಜಿಸಲಾಗಿದೆ.
ಇದಕ್ಕೆ ರಾಜ್ಯ ಸರ್ಕಾರವೂ ಸಾಥ್ ನೀಡಿದ್ದು, ತೋತಾಪುರಿ ಒಂದು ಟನ್‌ಗೆ 4,375 ರೂ. ಸಹಾಯಧನ ಹಾಗೂ ಮಾರುಕಟ್ಟೆಯ ಬೆಲೆ ದೊರೆಯಲಿದೆ. ಯೋಜನೆಯ ಪರಿಹಾರ ಹೇಗೆ ಪಡೆದುಕೊಳ್ಳಬೇಕು ಎಂಬ ಮಾರ್ಗಸೂಚಿ ಹೊರಡಿಸಿದೆ. ಪಹಣಿಯಲ್ಲಿ ಮಾವು ಬದಲು ಬೇರೆ ಬೆಳೆ ಹೆಸರು ನಮೂದಾಗಿರುವುದು ಸೌಲಭ್ಯ ಪಡೆದುಕೊಳ್ಳುವುದು ಹೇಗೆ ಎಂಬುದು ತಲೆನೋವಾಗಿ ಪರಿಣಮಿಸಿದೆ.
ಪ್ರತಿ ಮುಂಗಾರು ಮತ್ತು ಹಿಂಗಾರು ಆರಂಭದಲ್ಲಿ ಬೆಳೆ ಸರ್ವೇ ನಡೆಸಿ ಪಹಣಿಯಲ್ಲಿ ಬೆಳೆ ನಮೂದು ಮಾಡುವುದು ಕಡ್ಡಾಯ. ಕಂದಾಯ, ತೋಟಗಾರಿಕೆ ಮತ್ತು ಕೃಷಿ ಇಲಾಖೆ ಅಧಿಕಾರಿಗಳು ಬೆಳೆ ಸರ್ವೇ ನಡೆಸಿ ಯಾವ ರೈತ ಏನು ಬೆಳೆದಿದ್ದಾನೆ ಎಂಬುದನ್ನು ಭೂಮಿ ನಮೂದಿಸಬೇಕು. ತಂತ್ರಾಂಶದಲ್ಲಿ ಅದಕ್ಕಾಗಿ ಪ್ರತಿ ಊರಿನಲ್ಲೂ ಪಿಆರ್ ಪ್ರತಿನಿಧಿಗಳನ್ನು ನೇಮಿಸಿದೆ. ಅಲ್ಲದೆ ಸ್ವತಃ ರೈತು ಸಹ ಮೊಬೈಲ್ ಆ್ಯಪ್ ಬಳಸಿ ನಮೂದಿಸಲು ಅವಕಾಶವಿದೆ. ಹೀಗಿದ್ದರೂ ಭೂಮಿ ತಂತ್ರಾಂಶದಿಂದ ಪಡೆಯುವ ರೈತರ ಪಹಣಿಗಳ ಬೆಳೆ ಕಾಲಂನಲ್ಲಿ ಮಾವು ಜಾಗದಲ್ಲಿ ಬೇರೆ ಬೆಳೆ ನಮೂದಾಗಿದೆ. ಇನ್ನು ಕೆಲ ರೈತರ ಪಹಣಿಯ ಕಾಲಂನಲ್ಲಿ ಖಾಲಿ ತೋರಿಸುತ್ತಿದೆ.
ಕುಳಿತಲ್ಲೇ ಬೆಳೆ ಸಮೀಕ್ಷೆ
ಜಮೀನಿನಲ್ಲಿ ರೈತ ಬೆಳೆದಿರುವ ಬೆಳೆ ಒಂದಾದರೆ ಪಹಣಿಯಲ್ಲಿ ಮತ್ತೊಂದು ತೋರಿಸುತ್ತಿದೆ. ಇದು ಸಹ ವಿವಿಧ ಸೌಲಭ್ಯಗಳಿಗೆ ತಾಂತ್ರಿಕ ಸಮಸ್ಯೆಯಾಗಿ ಪರಿಣಮಿಸಿದೆ. ಬೆಳೆ ಸರ್ವೇ ವೇಳೆ ಅಧಿಕಾರಿಗಳು ರೈತರ ಭೂಮಿಗೆ ಖುದ್ದು ಭೇಟಿ ನೀಡಿ ಎಲ್ಲಿ ಯಾವ ಬೆಳೆ ಇದೆ ಎಂಬುದನ್ನು ನಮೂದಿಸಬೇಕಿತ್ತು. ಆದರೆ, ಅವರು ಸ್ಥಳಕ್ಕೆ ಬಾರದೆ ಕಚೇರಿಯಲ್ಲೇ ಕುಳಿತು ತಮಗೆ ತೋಚಿದಂತೆ ನಮೂದಿಸುತ್ತಾರೆ. ಹೀಗಾಗಿ ಪಹಣಿಯಲ್ಲಿ ತಪ್ಪು ಬೆಳೆಗಳು ನಮೂದಾಗುತ್ತಿವೆ ಎಂಬುದು ಮಾವು ಬೆಳೆಗಾರರ ಆಕ್ರೋಶಕ್ಕೆ ಕಾರಣವಾಗಿದೆ. ಮಾವು ಮಾರಾಟ ಸಂದರ್ಭದಲ್ಲಿ ರೈತರು ನೋಂದಾಯಿಸಿಕೊಳ್ಳಲು ಎಪಿಎಂಸಿ, ರೈತ ಸಂಪರ್ಕ ಕೇಂದ್ರಗಳಲ್ಲಿ ಅವಕಾಶ ಕಲ್ಪಿಸಿದ್ದು, ನೋಂದಣಿ ವೇಳೆ ಪಹಣಿಯಲ್ಲಿ ಮಾವು ಬೆಳೆ ಇಲ್ಲದೆ ಇರುವುದನ್ನು ಕಂಡು ಆತಂಕಕ್ಕೆ ಒಳಗಾಗಿದ್ದಾರೆ.
ಲೋಪದೋಷ ಸರಿಪಡಿಸಲು ಒತ್ತಾಯ
ಸರ್ಕಾರಗಳು ಗುತ್ತಿಗೆ ಸಂಸ್ಥೆಗಳಿಗೆ ಬೆಳೆ ಸಮೀಕ್ಷೆ ಜವಾಬ್ದಾರಿ ನೀಡಿದ್ದು, ಅವರು ಎಲ್ಲೋ ಕುಳಿತು ಸಮೀಕ್ಷೆ ನಿಖರ ಮಾಹಿತಿ ನಮೂದು ಮಾಡದೆ ಬೇಜವಾಬ್ದಾರಿತನ ತೋರಿದ್ದಾರೆ. ಪಹಣಿ ಹಾಗೂ ಬೆಳೆ ಸಮೀಕ್ಷೆ ತಂತ್ರಾಂಶದಲ್ಲಿ ಮಾವು ಬೆಳೆ ನಮೂದಾಗಿದ್ದರೆ ಮಾರುಕಟ್ಟೆ ಮಧ್ಯಸ್ಥಿಕೆ ಯೋಜನೆ ಪಡೆದುಕೊಳ್ಳಲು ಸಾಧ್ಯ, ಇದೀಗ ಲೋಪದೋಷ ಇರುವುದರಿಂದ ವಂಚನೆಗೆ ಒಳಗಾಗು ಸಾಧ್ಯತೆಯಿದೆ. ಕಳೆದ ಬಾರಿಯೂ ಈ ಸಮಸ್ಯೆ ಇತ್ತು, ಜಿಲ್ಲಾಡಳಿತ ಮಧ್ಯ ಪ್ರವೇಶ ಮಾಡಿ ಸಮಸ್ಯೆಗೆ ಪರಿಹಾರ ಕಲ್ಪಿಸಿ ರೈತರಿಗೆ ನೆರವು ಕಲ್ಪಿಸಬೇಕು ಎಂದು ಮಾವು ಬೆಳೆಗಾರರ ಸಂಘವು ಒತ್ತಾಯಿಸಿದೆ. ಶೇ.60 ಮಂದಿ ರೈತರು ತೋತಾಪುರಿ ಮಾವು ಕೋಯ್ದು ಮಾಡಿದ್ದು, ಉಳಿದ ರೈತರಿಗಾದರು ಪ್ರಯೋಜನ ದೊರೆಯಲಿ ಎಂಬುದು ರೈತರ ಬೇಡಿಕೆಯಾಗಿದೆ.
ರೈತರೇ ಬೆಳೆ ಸಮೀಕ್ಷೆಯಲ್ಲಿ ಪಾಲ್ಗೊಂಡು ಬೆಳೆ ವಿವರವನ್ನು ತಂತ್ರಾಂಶದಲ್ಲಿ ದಾಖಲಿಸಲು ಅವಕಾಶವಿದೆ. ಸಮೀಕ್ಷೆಯು ಎರಡು ವರ್ಷಕ್ಕೊಮ್ಮೆ ನಡೆಯಲಿದೆ.. ಪಹಣಿ ಕಾಲಂನಲ್ಲಿ ಮಾವು ಬೆಳೆ ದಾಖಲಾಗದೆ ಇರುವ ಬಗ್ಗೆ ತಾಂತ್ರಿಕ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮವಹಿಸಲಾಗುವುದು.
- ಕುಮಾರಸ್ವಾಮಿ, ಜಂಟಿ ನಿರ್ದೇಶಕ, ತೋಟಗಾರಿಕೆ ಇಲಾಖೆ, ಕೋಲಾರ
ತಹಸೀಲ್ದಾ‌ರ್, ಕೃಷಿ, ತೋಟಗಾರಿಕೆ ಅಧಿಕಾರಿಗಳು ಯಾರು ಸಮಸ್ಯೆಯನ್ನು ಒಪ್ಪುಕೊಳ್ಳುತ್ತಿಲ್ಲ. ಈ ಸಮಸ್ಯೆಯನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದಿದ್ದು, ಲೋಪದೋಷನ್ನು ಸರಿಪಡಿಸಿ, ರೈತರಿಗೆ ಅನುಕೂಲ ಮಾಡಿಕೊಡಬೇಕು.
- ಚಿನ್ನಪ್ಪರೆಡ್ಡಿ ಜಿಲ್ಲಾಧ್ಯಕ್ಷ, ಮಾವು ಬೆಳೆಗಾರರ ಕ್ಷೇಮಾಭಿವೃದ್ಧಿ ಸಂಘ, ಶ್ರೀನಿವಾಸಪುರ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net