ಎಸ್ಪಿ ಎದುರು ಸಾಲು ಸಾಲು ಸವಾಲು

ಕೋಲಾರ ತಾಲೂಕು ವೇಮಗಲ್ ಠಾಣೆಗೆ ನೂತನ ಪೊಲೀಸ್ ವರಿಷ್ಠಾಧಿಕಾರಿ ಕನ್ನಿಕಾ ಸಿಕ್ರಿವಾಲ್ ಭೇಟಿ ನೀಡಿದರು.
ಕೋಲಾರ ತಾಲೂಕು ವೇಮಗಲ್ ಠಾಣೆಗೆ ನೂತನ ಪೊಲೀಸ್ ವರಿಷ್ಠಾಧಿಕಾರಿ ಕನ್ನಿಕಾ ಸಿಕ್ರಿವಾಲ್ ಭೇಟಿ ನೀಡಿದರು.
Published on
ಕೋಲಾರ: ಜಿಲ್ಲೆಗೆ ನೂತನವಾಗಿ ಆಗಮಿಸಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕನ್ನಿಕಾ ಸಿಕ್ರಿವಾಲ್ ಇತ್ತೀಚೆಗೆ ಅಧಿಕಾರ ವಹಿಸಿಕೊಂಡಿದ್ದು. ಜಿಲ್ಲಾ ಪೊಲೀಸ್ ವಲಯದಲ್ಲಿ ಸಾಕಷ್ಟು ಬದಲಾವಣೆಯ ಗಾಳಿ ಬೀಸಬೇಕಿದೆ., ಅಂತೆಯೇ ಎಸ್ಪಿ ಎದುರು ಮುಂದೆ ಸಾಲು ಸಾಲು ಸವಾಲುಗಳಿವೆ.
2026ರ ಮೊದಲ ದಿನವೇ ಪೊಲೀಸ್ ಇಲಾಖೆಯಲ್ಲಿ ಬದಲಾವಣೆ ಆಗಿ ಕೋಲಾರ ಎಸ್ಪಿ ಬಿ.ನಿಖಿಲ್ ಅವರ ಜಾಗಕ್ಕೆ ಸರ್ಕಾರ ಕನ್ನಿಕಾ ಸಿಕ್ರಿವಾಲ್ ಅವರನ್ನು ನೇಮಿಸಿದೆ.
ಕೋಲಾರ ಜಿಲ್ಲೆ ಎಂದರೆ ಮೂಗು ಮುರಿಯುವ ಅಧಿಕಾರಿಗಳೇ ಜಾಸ್ತಿ. ಇದಕ್ಕೆ ಭಿನ್ನ ಎಂಬಂತೆ ಕಲಬುರಗಿಯಿಂದ ಕೋಲಾರಕ್ಕೆ ವರ್ಗಾವಣೆ ಆದ ಮರು ದಿನವೇ ಅಧಿಕಾರವಹಿಸಿಕೊಂಡ ನೂತನ ಎಸ್ಪಿ, ಇಲಾಖೆಯ ಅಧಿಕಾರಿಗಳ ಸಭೆ ನಡೆಸಿ, ಜಿಲ್ಲಾ ಪೊಲೀಸ್ ವ್ಯಾಪ್ತಿಯಲ್ಲಿ ಠಾಣೆಗಳಿಗೆ ಭೇಟಿ ನೀಡಿ ಮಾಹಿತಿ ಕಲೆ ಹಾಕಿದ್ದಾರೆ. ಕೋಳಿ ಪಂದ್ಯ, ಇಸ್ಪೀಟ್, ಅಕ್ರಮವಾಗಿ ಮದ್ಯ ಮಾರಾಟ, ಪೋಕ್ಲೋ బాలు వివాయ, ಬಾಲ ಗರ್ಬಿಣಿ. ಪ್ರಕರಣಗಳು, ಅಕ್ರಮ ಮಾದಕ ವಸ್ತುಗಳ ಸೇವನೆ, ಸಾಗಾಟ ಸೇರಿ ನಾನಾ ರೀತಿಯ ಕಾನೂನು ಬಾಹಿರ ಚಟುವಟಿಕೆಗಳು ಪೊಲೀಸರು ಕಣ್ಣು ತಪ್ಪಿಸಿ ನಡೆಯುತ್ತಿದ್ದು, ಈಗಾಲೇ ಎಲ್ಲಾ ಪೊಲೀಸ್ ಅಧಿಕಾರಿಗಳ ಸಭೆ ನಡೆಸಿ ಮಾಹಿತಿ ಪಡೆದಿದ್ದಾರೆ. ಅಲ್ಲದೇ, ವೇಮಗಲ್, ನರಸಾಪುರ ಔಟ್ ಪೋಸ್ಟ್ ಶ್ರೀನಿವಾಸಪುರ, ಮುಳಬಾಗಿಲು ತಾಲೂಕಿನ ಪೊಲೀಸ್ ಠಾಣೆಗೆ ತೆರಳಿ ಪರಿಶೀಲನೆ ನಡೆಸಿದ್ದಾರೆ.
* ಸುಧಾರಣೆ ತಂದಿದ್ದ ನಿಖಿಲ್
ನಿರ್ಗಮಿತ ಎಸ್ಪಿ ಬಿ.ನಿಖಿಲ್ ಒಂದೂವರೆ ವರ್ಷದಲ್ಲಿ ಕಡ್ಡಾಯ ಹೆಲೈಟ್ ಜಾರಿ, ಅಪರಾಧ ಚಟುವಟಿಕೆಗಳ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು, ಕಳವು, ಕೊಲೆ ನಡೆದ ಕೆಲವೇ ತಾಸುಗಳಲ್ಲಿ ಆರೋಪಿಗಳನ್ನು ಬಂಧಿಸುವುದು ಹಾಗೂ ಇಲಾಖೆಯಲ್ಲಿ ಸುಧಾರಣೆ ತಂದು ಜನರ ಮನೆಮಾತಾಗಿದ್ದರು. ಕಾನೂನು ಮತ್ತು ಸುವ್ಯವಸ್ಥೆ ಕಾಯ್ದುಕೊಳ್ಳುವ, ಅಪರಾಧ ಪ್ರಕರಣ ನಿಯಂತ್ರಿಸುವುದರೊಂದಿಗೆ ಇಲಾಖೆಗಳೊಂದಿಗೆ ಸಮನ್ವಯದಿಂದ ಕೆಲಸ ಮಾಡಿದ್ದಾರೆ.
* ಅಕ್ರಮಗಳಿಗಿಲ್ಲ ತಡೆ
ಜಿಲ್ಲೆಯ ಮುಳಬಾಗಿಲು, ಶ್ರೀನಿವಾಸಪುರ, ಕೋಲಾರ, ಮಾಲೂರಿನಲ್ಲಿ ಜೂಜಾಟ ಪ್ರಕರಣಗಳು ನಿಯಂತ್ರಣಕ್ಕೆ ಬರುತ್ತಿಲ್ಲ. ಇದನ್ನೆಲ್ಲ ಮಟ್ಟ ಹಾಕಲು ಪೊಲೀಸ್ ಇಲಾಖೆಯಿಂದ ಡೋಣ್ ಗಸ್ತು ಹಮ್ಮಿಕೊಂಡಿದ್ದು, ಇದರಲ್ಲಿ ಕೆಲವು ಪತ್ತೆ ಆಗಿವೆ. ಜತೆಗೆ, ಜಿಲ್ಲೆಯಲ್ಲಿ ಸಿಎಲ್-2, ಸಿಎಲ್-7, ಸಿಎಲ್- 9, ಎಂಎಸ್ ಐಎಸ್ ಹೀಗೆ ಹಲವು ಬಾರ್ ಮತ್ತು ರೇಸ್ಟೋರೆಂಟ್ ಗಳು ನಾಯಿಕೊಡೆಗಳಂತೆ ತಲೆಯೆತ್ತಿದ್ದು, ನಿಯಮ ಉಲ್ಲಂಘನೆ ಅವ್ಯಾಹತವಾಗಿದೆ. ಅಬಕಾರಿ ಇಲಾಖೆ ಅಧಿಕಾರಿಗಳು ಮೌನಕ್ಕೆ ಶರಣಾಗಿದೆ. ಬೆಳ್ಳಂಬೆಳ್ಳಗೆ ಬಾರ್ ತೆರೆದು ವಹಿವಾಟು ನಡೆಸುವುದು, ಹಳ್ಳಿಗಳಲ್ಲಿನ ಚಿಲ್ಲರೆ ಅಂಗಡಿಗಳಿಗೆ ಸಾಗಣೆ ಮಾಡುವುದು ಜೋರಾಗಿದೆ.
* ಕೈಗಾರಿಕೆ ಪ್ರದೇಶಗಳಲ್ಲಿ ಗಾಂಜಾ ಘಾಟು
ಜಿಲ್ಲೆಯ ಮಾಲೂರು, ನರಸಾಪುರ, ವೇಮಗಲ್ ಕೈಗಾರಿಕೆ ಪ್ರದೇಶದಲ್ಲಿ ಮಾದಕ ವಸ್ತುಗಳ ಸಾಗಣೆ, ಮಾರಾಟ ಅವ್ಯಾಹತವಾಗಿದೆ. ಮಾರಾಟಗಾರರಿಗೆ ಕೆಲ ಪೊಲೀಸ್ ಸಿಬ್ಬಂದಿಯೇ ಕುಮ್ಮಕ್ಕು ನೀಡುತ್ತಿರುವ ಆಪಾದನೆಯೂ ಇದೆ. ಈ ಸಂಬಂಧ ಜಿಲ್ಲೆಯಲ್ಲಿ ಕಳೆದ ವರ್ಷದಲ್ಲಿ 30 ಪ್ರಕರಣ ದಾಖಲಾಗಿದ್ದವು. ಆ ಪೈಕಿ ಕೈಗಾರಿಕಾ ಪ್ರದೇಶದಲ್ಲಿಯೇ ಜಾಸ್ತಿ. ಜತೆಗೆ ಕಾರ್ಮಿಕರ ನಡುವೆ ಕಿರಿಕ್, ಜಗಳ ಹೆಚ್ಚಿದ್ದು ಅದಕ್ಕೆ ಡ್ರಗ್ಸ್ ಸೇವನೆ ಕಾರಣ ಎನ್ನಲಾಗುತ್ತಿದೆ. ಈಚೆಗೆ ಹೊರರಾಜ್ಯದ ಇಬ್ಬರ ಕಾರ್ಮಿಕರು ಕೊಲೆಯೂ ಇದೇ ಕಾರಣಕ್ಕೆ ನಡೆದಿದೆ ಎಂಬದು ತನಿಖೆಯಲ್ಲಿ ಬಯಲಾಗಿದೆ.
* ರೌಡಿಶೀಟರ್‌ಗಳ ವಿರುದ್ಧ ಕ್ರಮ ಅಗತ್ಯ
ವಿವಿಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಸೌಹಾರ್ದಕ್ಕೆ ಧಕ್ಕೆ ತಂದ ಕೆಲ ವ್ಯಕ್ತಿಗಳ ವಿರುದ್ಧ ರೌಡಿಶೀಟರ್ ತೆರೆಯಲಾಗಿದೆ. ಅಂತಹವರೇ ಸರ್ಕಾರಿ ಹಾಗೂ ರಾಜಕೀಯ ಕಾರ್ಯಕ್ರಮಗಳಲ್ಲಿ ರಾಜಾರೋಷವಾಗಿ ಕಾಣಿಸಿಕೊಳ್ಳುತ್ತಿರುವುದು ಚರ್ಚೆಗೆ ಗ್ರಾಸವಾಗಿದ್ದು, ಇಂತಹವರ ಆಟಾಟೋಪಕ್ಕೆ ಕಡಿವಾಣ ಹಾಕಬೇಕಿದೆ.
* ದಾಖಲಾಗಿರುವ ಪ್ರಕರಣಗಳ ವಿವರ
ಜಿಲ್ಲೆಯ ವಿವಿಧ ಠಾಣೆಯಗಳಲ್ಲಿ ಸರಗಳ್ಳತನ, ಮನೆಗಳ್ಳತನ ಸೇರಿ 533 ಪ್ರಕರಣಗಳ ದಾಖಲಾಗಿದ್ದವು. ಅವುಗಳನ್ನು ಪತ್ತೆ ಮಾಡಿ 2.57 ಕೋಟಿ ರೂ. ಮೌಲ್ಯದ ವಸ್ತುಗಳನ್ನು ಮಾಲೀಕರಿಗೆ ಹಿಂತಿರುಗಿಸಲಾಗಿದೆ. ಕೊಲೆ 2, ಡಕಾಯಿತಿ 1, ಸರಗಳ್ಳತನ 12, ಮನೆ ಕಳವು 35, ಸಾಮಾನ್ಯ ಕಳವು 16. ಶ್ರೀಗಂಧ ಮರ ಕಳವು 2, ಗಮನ ಬೇರೆಡೆ ಸೆಳೆದು ಕಳವು 4. ಮೊಬೈಲ್ ಕಳವು 461 ಕೇಸ್ ದಾಖಲಾಗಿವೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net