ಕತ್ತಿರಾಜಪೇಟೆಯಲ್ಲಿ ಸೌಲಭ್ಯ ಮರೀಚಿಕೆ

ಕತ್ತಿ ರಾಜಪೇಟೆಯಲ್ಲಿ ರಸ್ತೆ ಕಾಮಗಾರಿ ಅಪೂರ್ಣವಾಗಿರುವುದು.
ಕತ್ತಿ ರಾಜಪೇಟೆಯಲ್ಲಿ ರಸ್ತೆ ಕಾಮಗಾರಿ ಅಪೂರ್ಣವಾಗಿರುವುದು.
Published on
ವಲಕುಪ್ಪ ಆ‌ರ್.ಬಾಬು ಶ್ರೀನಿವಾಸಪುರ
ತಾಲೂಕಿನ ಆಂಧ್ರಪ್ರದೇಶದ ಗಡಿಭಾಗದ ಬೆಟ್ಟಗುಡ್ಡಗಳ ಮಧ್ಯೆ ಇರುವ ಮಜರಾ ಕತ್ತಿ ರಾಜಪೇಟೆ ಗ್ರಾಮವು ಎಐ ಯುಗದಲ್ಲೂ ಕನಿಷ್ಠ ಮೂಲಸೌಕರ್ಯಗಳಿಂದ ವಂಚಿತವಾಗಿದೆ. ಪರಿಶಿಷ್ಟ ವರ್ಗ (ವಾಲ್ಮೀಕಿ ಸಮಾಜ) ಸಮುದಾಯದ ಕೇವಲ 10 ಕುಟುಂಬಗಳು ವಾಸಿಸುವ ಈ ಪುಟ್ಟ ಗ್ರಾಮದ ಕಡೆಗೆ ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ಗಮನ ಹರಿಸುತ್ತಿಲ್ಲ.
ತಾಲೂಕಿನ ಯಾರಂವಾರಪಲ್ಲಿ ಗ್ರಾಪಂ ವ್ಯಾಪ್ತಿಯ ಬೂರಗಮಾಕಲಹಳ್ಳಿ ಮಜರಾ ಕತ್ತಿ ರಾಜಪೇಟೆ ಗ್ರಾಮಸ್ಥರು ನಿತ್ಯ ಅನುಭವಿಸುತ್ತಿರುವ ನರಕಯಾತನೆ ಅನುಭವಿಸುತ್ತಿದ್ದು, ಮಂಡಲ ಮುಖ್ಯರಸ್ತೆಯಿಂದ ಸುಮಾರು ಎರಡು ಕಿ.ಮೀ ದೂರವಿರುವ ಈ ಗ್ರಾಮಕ್ಕೆ ಸರಿಯಾದ ರಸ್ತೆ ಸಂಪರ್ಕವಿಲ್ಲ. ಮೂರು ವರ್ಷಗಳ ಹಿಂದೆ ರಸ್ತೆಗೆ ಹಾಕಿದ್ದ ಜಲ್ಲಿಕಲ್ಲುಗಳು ಈಗ ಮೇಲಕ್ಕೆ ಎದ್ದಿದ್ದು, ಪ್ರತಿದಿನ ಶಾಲಾ ಮಕ್ಕಳು, ವೃದ್ಧರು ಹಾಗೂ ವಾಹನ ಸವಾರರು ಸಂಚರಿಸಲು ತೀವ್ರ ತೊಂದರೆ ಎದುರಿಸುತ್ತಿದ್ದಾರೆ.
ಜೆಜೆಎಂ ಕಾಮಗಾರಿ ಅಪೂರ್ಣ:
ಗ್ರಾಮದಲ್ಲಿ ಸುಮಾರು 10 ವರ್ಷಗಳ ಹಿಂದೆ ಸಿಸಿ ರಸ್ತೆ ನಿರ್ಮಿಸಲಾಗಿದ್ದರೂ, ಇಲ್ಲಿಯವರೆಗೆ ಚರಂಡಿ ವ್ಯವಸ್ಥೆ ಮಾಡಿಲ್ಲ. ಇನ್ನು ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ 'ಜಲ ಜೀವನ ಮಿಷನ್' ಯೋಜನೆಯಡಿ ಕಳಪೆ ಕಾಮಗಾರಿ ನಡೆದಿದೆ ಎಂದು ಗ್ರಾಮಸ್ಥರು ದೂರಿದ್ದಾರೆ. ನಲ್ಲಿ ಹಾಗೂ ಪೈಪ್ ಅಳವಡಿಸಲು ಇದ್ದ ಸಿಸಿ ರಸ್ತೆಯನ್ನು ಅಗೆದಿರುವ ಗುತ್ತಿಗೆದಾರರು. ಅದನ್ನು ಸರಿಯಾಗಿ ದುರಸ್ತಿ ಮಾಡದೆ ಹಾಗೇ ಬಿಟ್ಟು ಹೋಗಿದ್ದಾರೆ. ನಿರ್ಮಾಣ ಹಂತದಲ್ಲಿರುವ ನೀರಿನ ಓವರ್ ಹೆಡ್ ಟ್ಯಾಂಕ್ ಕಾಮಗಾರಿಯೂ ಅತ್ಯಂತ ಕಳಪೆಯಾಗಿದೆ ಎಂದು ಜನ ಆರೋಪಿಸಿದ್ದಾರೆ.
ಪಿಡಿಒ ವಿರುದ್ಧ ಗ್ರಾಮಸ್ಥರ ಆಕ್ರೋಶ
ಗ್ರಾಮದ ಚರಂಡಿ ಹಾಗೂ ಬೀದಿ ದೀಪಗಳ ಸಮಸ್ಯೆ ಬಗ್ಗೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಏಜಾಜ್ ಪಾಷಾ ಅವರಿಗೆ ಹಲವು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಅಧಿಕಾರಿ ಒಮ್ಮೆಯೂ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿಲ್ಲ. ಸ್ಥಳೀಯ ಚುನಾಯಿತ ಪ್ರತಿನಿಧಿಗಳು ಕೇವಲ ಚುನಾವಣೆ ಸಮಯದಲ್ಲಿ ಮಾತ್ರ ಬಂದು ಮತ ಕೇಳಿ ಹೋಗುತ್ತಾರೆ, ವಿನಃ ಆ ಬಳಿಕ ಇತ್ತ ಮುಖ ಮಾಡುವುದಿಲ್ಲ ಎಂದು ನಾಗರಾಜ್, ರಮೇಶ್, ವಿಶ್ವನಾಥ್, ಆದಿನಾರಾಯಣ, ನರೇಶ್, ಚಂದ್ರಪ್ಪ, ನೀಲಮ್ಮ, ನಾರಾಯಣಸ್ವಾಮಿ, ಸುಧಾಕರ್ ಸೇರಿದಂತೆ ಗ್ರಾಮಸ್ಥರು ಅಸಮಾಧಾನ ಹೊರಹಾಕಿದ್ದಾರೆ.
ಯೋಜನೆಯಡಿ ಲೋಕೋಪಯೋಗಿ ಇಲಾಖೆ (ಕೋಲಾರ ಉಪವಿಭಾಗ) ವತಿಯಿಂದ ಈ ಗ್ರಾಮಕ್ಕೆ 1.32 ಕಿ.ಮೀ ಉದ್ದದ ರಸ್ತೆ ನಿರ್ಮಾಣಕ್ಕಾಗಿ 32 ಲಕ್ಷ ರೂ. ಅನುದಾನ ಬಿಡುಗಡೆಯಾಗಿತ್ತು. ಆದರೆ ಈ ಕಾಮಗಾರಿ ಕೇವಲ ನಾಮಫಲಕಕ್ಕೆ ಸೀಮಿತವಾಯಿತು. ಶಾಸಕ ಜಿ.ಕೆ. ವೆಂಕಟಶಿವಾರೆಡ್ಡಿ ಅವರು ಆಯ್ಕೆಯಾದ ನಂತರ, ಅಂದಿನ ಸಿಎಂ ರಾಜಕೀಯ ಕಾರ್ಯದರ್ಶಿಯಾಗಿದ್ದ ನಜೀರ್ ಅಹ್ಮದ್ ಅವರ ಶಿಫಾರಸ್ಸಿನ ಮೇರೆಗೆ ನಡೆಯುತ್ತಿದ್ದ ಕಾಮಗಾರಿಗೆ ಅಡ್ಡಿಪಡಿಸಲಾಗಿದೆ ಎಂದು ಹೇಳಲಾಗುತ್ತಿದ್ದು, ರಾಜಕೀಯ ದ್ವೇಷಕ್ಕೆ ರಸ್ತೆ ಕಾಮಗಾರಿ ನನೆಗುದಿಗೆ ಬಿದ್ದಿದೆ ಎಂಬ ಆರೋಪ ಕೇಳಿಬಂದಿದೆ.
ಮಂಗಳವಾರ ಖುದ್ದಾಗಿ ಪಿಡಿಒ ಜತೆ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತೇನೆ. ಶೀಘ್ರದಲ್ಲೇ ಚರಂಡಿ ಹಾಗೂ ಬೀದಿ ದೀಪಗಳ ವ್ಯವಸ್ಥೆ ಕಲ್ಪಿಸಲಾಗುವುದು.
-ಡಾ.ಸರ್ವೇಶ್ ತಾಪಂ ಕಾರ್ಯನಿರ್ವಹಣಾಧಿಕಾರಿ
ಕೆಲವು ರಾಜಕೀಯ ಪಿತೂರಿಗಳಿಂದಾಗಿ ಈ ರಸ್ತೆ ಕಾಮಗಾರಿ ನನೆಗುದಿಗೆ ಬಿದ್ದಿತ್ತು. ಇದಕ್ಕೆ ನಜೀ‌ರ್ ಅಹ್ಮದ್ ಅವರೂ ಅಡ್ಡಿಪಡಿಸಿದ್ದರು. ಆದರೆ ಈಗ ಎಲ್ಲ ಸಮಸ್ಯೆ ನಿವಾರಣೆಯಾಗಿದ್ದು, ಮುಂದಿನ 2-3 ದಿನಗಳಲ್ಲಿ ಈ ಗ್ರಾಮಕ್ಕೆ ಡಾಂಬರು ರಸ್ತೆ ನಿರ್ಮಾಣ ಕಾಮಗಾರಿ ಆರಂಭವಾಗಲಿದೆ. ಗುತ್ತಿಗೆದಾರ ಎ.ಎಸ್. ಮಂಜುನಾಥ್ ರೆಡ್ಡಿ ಅವರು ಈ ಕೆಲಸವನ್ನು ಕೈಗೆತ್ತಿಕೊಳ್ಳಲಿದ್ದಾರೆ.
- ಜಿ.ಕೆ. ವೆಂಕಟಶಿವಾರೆಡ್ಡಿ ಶಾಸಕ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net