ಜಿಲ್ಲೆಗೆ ಕೈ ತಪ್ಪಿದ ಮಂತ್ರಿಗಿರಿ!

ಕೋಲಾರ ನಕ್ಷೆ.
ಕೋಲಾರ ನಕ್ಷೆ.
Published on
ಕಿರುವಾರ ಎಸ್.ಸುದರ್ಶನ್ ಕೋಲಾರ
ಡಿಕೆಶಿ ನೇತೃತ್ವದ ಸಂಪುಟದಲ್ಲಿ ಸಚಿವ ಸ್ಥಾನದ ಅವಕಾಶವು ಜಿಲ್ಲೆಗೆ ಕೈ ತಪ್ಪಿದ್ದು, ಶಾಸಕರ ನಿರೀಕ್ಷೆಗೆ ನಿರಾಸೆಯಾಗಿದೆ. ಅವಕಾಶ ಕೈ ತಪ್ಪಲು ಬಣ ಬೇಗುದಿ ಕಾರಣ ಎಂಬುದು ರಾಜಕೀಯ ಚರ್ಚೆಗೆ ಗ್ರಾಸವಾಗಿದೆ.
2023ರ ವಿಧಾನಸಭೆ ಚುನಾವಣೆಯಲ್ಲಿ ಜಿಲ್ಲೆಯಿಂದ 6 ಕ್ಷೇತ್ರಗಳ ಪೈಕಿ 4 ಕ್ಷೇತ್ರಗಳಲ್ಲಿ ಕೈ ಶಾಸಕರು ಆಯ್ಕೆಯಾಗಿದ್ದು, ಸರ್ಕಾರ ರಚನೆಯಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಮೊದಲ ಅವಧಿಯಲ್ಲಿ ಸಿದ್ದರಾಮಯ್ಯ ಅವರು 3 ವರ್ಷ ಅಧಿಕಾರ ನಿರ್ವಹಿಸಿದ್ದು, ಅಲ್ಲೂ ಸಹ ಜಿಲ್ಲೆಗೆ ಮಂತ್ರಿಸ್ಥಾನ ದೊರೆತಿರಲಿಲ್ಲ.
ಈಗ ಎರಡನೇ ಅವಧಿಗೆ ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿದ್ದು, ಅವಧಿಯಲ್ಲಿ ಅವಕಾಶ ಸಿಗುತ್ತದೆ ಎಂಬ ನಿರೀಕ್ಷೆ ಇತ್ತು. ಜತೆಗೆ ಶಾಸಕರು, ಎಂಎಲ್ಸಿಗಳು ಸಹ ನಾನಾ ರೀತಿಯ ಕಸರತ್ತು ನಡೆಸಿದ್ದರೂ ಸಹ ನೀರಿನಲ್ಲಿ ಹೋಮ ಮಾಡಿದಂತಾಗಿದೆ.
ಅವಕಾಶಕ್ಕಾಗಿ ರೂಪಕಲಾ ಕೆಜಿಎಫ್‌ನ ಹೊರತುಪಡಿಸಿ, ಶಾಸಕರಾದ ಕೆ.ವೈ. ನಂಜೇಗೌಡ, ಎಸ್. ಎನ್.ನಾರಾಯಣಸ್ವಾಮಿ, ಎಸ್.ಎನ್.ನಾರಾಯಣಸ್ವಾಮಿ ಹಾಗೂ ಎಂಎಲ್ಲಿಗಳಾದ ಎಂ.ಎಲ್.ಅನಿಲ್ ಕುಮಾರ್, ನಸೀರ್ ಅಹ್ಮದ್ ಅವರು ಬೇಡಿಕೆ ಪತ್ರಕ್ಕೆ ಸಹಿ ಹಾಕಿ ಎಐಸಿಸಿ, ಪಕ್ಷದ ಉಸ್ತುವಾರಿಗಳಿಗೆ ಸಲ್ಲಿಸಿ ಜಿಲ್ಲೆಗೆ ಸಚಿವ ಸ್ಥಾನದ ಅವಕಾಶ ಕಲ್ಪಿಸಲು ಬೇಡಿಕೆ ಇಟ್ಟಿದ್ದರು. ಆದರೆ, ಬೇಡಿಕೆ ಈಡೇರಿಲ್ಲ. ಪಕ್ಷದ ವರಿಷ್ಠರನ್ನೂ ಭೇಟಿ ಮಾಡಿ ತೀವ್ರ ಲಾಭಿ ನಡೆಸಿದ್ದರು.
ಈ ಎಲ್ಲ ಬೆಳೆವಣಿಗೆ ಗಮನಿಸುತ್ತಿದ್ದರೆ ಶಾಸಕರಲ್ಲಿ ಮೇಲ್ನೋಟಕ್ಕೆ ಒಂದಾಗಿದ್ದು, ಒಳಗೆ ಭಿನ್ನಾಭಿಪ್ರಾಯಗಳಿವೆ. ಇದರಿಂದಲೇ ಮೊದಲ ಹಂತದಲ್ಲಿ ಅವಕಾಶ ಕೈ ತಪ್ಪಿದೆ ಎಂಬ ಮಾತುಗಳು ಕೇಳಿ ಬಂದಿವೆ. ಶಾಸಕರಿಗೆ ಮಂತ್ರಿ ಸ್ಥಾನ ದೊರೆಯದೇ ಇರುವುದು ಬೆಂಬಲಿಗರ ಆಕ್ರೋಶಕ್ಕೆ ಕಾರಣವಾಗಿದೆ. ಸಿಎಂ ಪ್ರಮಾಣ ವಚನದ ಜತೆಗೆ ಕೆಲವೇ ಮಂದಿ ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದು, ಎರಡನೇ ಆಯ್ಕೆಯಲ್ಲಾದರೂ ಅವಕಾಶ ದೊರೆಯುವುದೇ ಎಂಬ ಆಶಾಭಾವನೆಯಲ್ಲಿದೆ ಕೋಲಾರ ಜಿಲ್ಲೆ.
* ಮುಂದಿನ ನಿಲುವೇನು?
ಕೋಲಾರ ಜಿಲ್ಲೆ ಕಳೆದ ಲೋಕಸಭೆ ಚುನಾವಣೆಯ ಟಿಕೆಟ್ ಅನ್ನು ಸಚಿವ ಕೆ.ಎಚ್.ಮುನಿಯಪ್ಪ ಅವರ ಅಳಿಯ ಚಿಕ್ಕಪೆದ್ದನ್ನ ಅವರಿಗೆ ನೀಡಲು ಪ್ರಯತ್ನಗಳು ಆಗಿದ್ದವು. ಆದರೆ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ, ಕೆ.ಚ್.ಮುನಿಯಪ್ಪ ಅವರನ್ನು ಕಣಕ್ಕೆ ಇಳಿಸಲು ಹೈಕಮಾಂಡ್ ನಿರ್ಧಾರವಾಗಿತ್ತು. ಆದರೆ ಇದಕ್ಕೆ ಶಾಸಕರಾದ ಚಿಂತಾಮಣಿ ಡಾ.ಎಂ.ಸಿ.ಸುಧಾಕರ್, ಕೋಲಾರ ಕೊತ್ತೂರು ಜಿ.ಮಂಜುನಾಥ್, ಮಾಲೂರು ಕೆ.ವೈ.ನಂಜೇಗೌಡ, ಎಂಎಲ್ಸಿಗಳಾದ ನಸೀರ್ ಅಹ್ಮದ್, ಎಂ.ಎಲ್.ಅನಿಲ್ ಕುಮಾರ್ ಅವರು ಸ್ವೀಕರ್‌ಗೆ ರಾಜೀನಾಮೆ ನೀಡಲು ಮುಂದಾಗುವ ಮೂಲಕ ಹೈಡ್ರಾಮ ಮಾಡಿದ್ದರು. ಇದೀಗ ಸಚಿವ ಸ್ಥಾನಕ್ಕೂ ಸಹ ಗಟ್ಟಿ ಹೋರಾಟ ಮುಂದುವರಿಸಿದ್ದು, ಅವಕಾಶ ದೊರೆಯದಿದ್ದರೆ ಮುಂದಿನ ನಿಲುವು ಏನಾಗಲಿದೆ ಎಂಬುದು ಕುತೂಹಲ ಮೂಡಿಸಿದೆ.
* ಹಿಡಿತ ತಪ್ಪಿಸಿಕೊಳ್ಳಲಾಗದ ಹಿರಿಯ ನಾಯಕರು
ಶಾಸಕರಾದ ಎಸ್.ಎನ್.ನಾರಾಯಣಸ್ವಾಮಿ, ಕೆ.ವೈ.ನಂಜೇಗೌಡ, ಕೊತ್ತೂರು ಜಿ.ಮಂಜುನಾಥ್, ರೂಪಕಲಾ ಅವರಲ್ಲಿ ಯಾರೊಬ್ಬರಿಗಾದರೂ ಮಂತ್ರಿ ಅವಕಾಶ ಕಲ್ಪಿಸಿದರೆ ನಾಯಕತ್ವದ ಬದಲಾವಣೆಯಾಗುವ ಸಾಧ್ಯತೆಯಿದೆ. ಪಕ್ಷದಲ್ಲಿ ಹಿಡಿತ ಸಾಧಿಸಿದ ಮಾಜಿ ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್ ವರ್ಭಸ್ಸು ಕುಗ್ಗುತ್ತದೆ. ನಾಲ್ವರ ಪೈಕಿ ಯಾರಿಗೂ ಸಚಿವ ಸ್ಥಾನ ಸಿಗಬಾರದು ಎಂದು ಜಿಲ್ಲೆಯ ನಾಯಕರು ರಾಜ್ಯ ನಾಯಕರ ಮೇಲೆ ಒತ್ತಡ ಹೇರಿದ್ದಾರೆ ಎಂಬ ಗುಸುಗುಸು ಗುಟ್ಟಾಗಿಯೇನೂ ಉಳಿದಿಲ್ಲ. ಈ ಎಲ್ಲರನ್ನು ತಪ್ಪಿಸಿ ಕೆ.ಎಚ್.ಮುನಿಯಪ್ಪ ಅವರಿಗೆ ಸಚಿವ ಸ್ಥಾನ ನೀಡಿರುವುದು ಮುಂದಿನ ದಿನಗಳಲ್ಲಿ ಎದುರಾಗುವ ವ್ಯತ್ಯಾಸ ಸರಿದೂಗಿಸಬಹುದು ಎಂಬ ಉದ್ದೇಶದಿಂದ ಅಳೆದು ತೂಗಿ ಜಿಲ್ಲೆಯಿಂದ ಅವಕಾಶ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ಜಿಲ್ಲಾ ಉಸ್ತುವಾರಿಯಾಗಿಯೂ ಸಹ ಕೆ.ಎಚ್.ಮುನಿಯಪ್ಪ ಅವರೇ ಆಗಲಿದ್ದಾರೆ ಎಂಬುದು ಪಕ್ಷದ ಮೂಲಗಳಿಂದ ತಿಳಿದು ಬಂದಿದೆ.
* ಹೈಕಮಾಂಡ್‌ ಸವಾಲಾದ ಚಿನ್ನದನಾಡು
ಜಿಲ್ಲೆಯಲ್ಲಿ ನಾಲ್ವರು ಶಾಸಕರು, ಇಬ್ಬರು ಎಂಎಲ್ಸಿಗಳಿದ್ದಾರೆ. ಸರ್ಕಾರದ ರಚನೆಯಲ್ಲಿ ಪ್ರಮುಖ ಪಾತ್ರವಹಿಸಿರುವ ಶಾಸಕರಿಗೆ ಸಚಿವ ಸ್ಥಾನ ಕಲ್ಪಿಸಬೇಕೊ, ಬೇಡವೋ ಎಂಬುದು ಹೈಕಮಂಡ್‌ಗೆ ಸವಾಲಾಗಿದೆ.
ಗುಂಪುಗಾರಿಕೆ, ಒಬ್ಬರ ಮೇಲೊಬ್ಬರಿಗೆ ಭಿನ್ನಾಭಿಪ್ರಾಯಕ್ಕೆ ಜಿಲ್ಲಾ ಕಾಂಗ್ರೆಸ್ ಸಾಕ್ಷಿಯಾಗಿದೆ. ಇಲ್ಲಿ ಶಾಸಕರ ನಡುವೆ, ಮುಖಂಡರ ನಡುವೆ ಭಿನ್ನಾಭಿಪ್ರಾಯಗಳಿಂದ ಬೀದಿ ಜಗಳಗಳು ನಡೆದಿರುವುದಕ್ಕೆ ಸಾಕ್ಷಿಯಿದೆ. ನಾಲ್ವರು ಶಾಸಕರ ಪೈಕಿ ಒಬ್ಬೊಬ್ಬರ ಮೇಲೆ ಒಂದೊಂದು ರೀತಿ ಆರೋಪಗಳಿವೆ, ಇದೆಲ್ಲವೂ ಸಚಿವ ಸ್ಥಾನದ ಅವಕಾಶ ದೊರೆಯಲು ಮುಳುವಾಯಿತೆ ಎಂಬುದು ಅನುಮಾನಕ್ಕೆ ಕಾರಣವಾಗಿದೆ.ಮಂತ್ರಿ ಸ್ಥಾನದ ಅವಕಾಶಕ್ಕಾಗಿ
ಬಂಗಾರಪೇಟೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ, ಮಾಲೂರು ಶಾಸಕ ಕೆ.ವೈ.ನಂಜೇಗೌಡ ವರಿಷ್ಠರನ್ನು ಭೇಟಿ ಮಾಡುವ ಮೂಲಕ ಲಾಬಿ ನಡೆಸುತ್ತಿದ್ದರು. ಇದೆಲ್ಲದರ ನಡುವೆ ಕೆಜಿಎಫ್ ಶಾಸಕಿ ರೂಪಕಲಾ ಹೆಸರು ಸಂಭಾವ್ಯ ಪಟ್ಟಿಯಲ್ಲಿ ಕೇಳಿ ಬಂದಿತ್ತು. ಕೆ.ಎಚ್.ಮುನಿಯಪ್ಪ ಅವರು ಮಗಳಿಗೆ ಸಚಿವ ಸ್ಥಾನ ತ್ಯಾಗ ಮಾಡಿದರು ಎಂಬ ಮಾತುಗಳು ಬಲವಾಗಿದ್ದವು. ಇದಾಗುತ್ತಿದ್ದಂತೆ ಇತರ ಶಾಸಕರಿಂದ ಅಪಸ್ವರವೂ ಕೇಳಿ ಬಂದಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net