ಡಿಪಿಆರ್​ ತಯಾರಿಗೆ 15 ದಿನ ಗಡವು

 ಸರ್ಕಾರಿ ಮೆಡಿಕಲ್​ ಕಾಲೇಜು ನಿರ್ಮಾಣ ಸಂಬಂಧ ಡಿಪಿಆರ್​ ತಯಾರಿಸಲು ಶಾಸಕ ಕೊತ್ತೂರು ಜಿ.ಮಂಜುನಾಥ್​ ಬುಧವಾರ ಸ್ಥಳ ಪರಿಶೀಲನೆ ನಡೆಸಿದರು. ಎಂ.ಎಲ್​.ಅನಿಲ್​ ಕುಮಾರ್​, ನವೀನ್​ ಚಂದ್ರ, ಡಾ.ಜಿ.ಶ್ರೀನಿವಾಸ್​ ಇದ್ದರು.
ಸರ್ಕಾರಿ ಮೆಡಿಕಲ್​ ಕಾಲೇಜು ನಿರ್ಮಾಣ ಸಂಬಂಧ ಡಿಪಿಆರ್​ ತಯಾರಿಸಲು ಶಾಸಕ ಕೊತ್ತೂರು ಜಿ.ಮಂಜುನಾಥ್​ ಬುಧವಾರ ಸ್ಥಳ ಪರಿಶೀಲನೆ ನಡೆಸಿದರು. ಎಂ.ಎಲ್​.ಅನಿಲ್​ ಕುಮಾರ್​, ನವೀನ್​ ಚಂದ್ರ, ಡಾ.ಜಿ.ಶ್ರೀನಿವಾಸ್​ ಇದ್ದರು.
Published on
ಕೋಲಾರ: ಬಜೆಟ್​ನಲ್ಲಿ ಜಿಲ್ಲೆಗೆ ರಾಜ್ಯ ಸರ್ಕಾರವು ಸರ್ಕಾರಿ ಮೆಡಿಕಲ್​ ಕಾಲೇಜು ನಿರ್ಮಾಣಕ್ಕಾಗಿ ಅಂದಾಜು ವೆಚ್ಚ (ಡಿಪಿಆರ್​) ತಯಾರಿಸಲು ಅನುಮತಿ ನೀಡಿದ್ದು, ಅದರಂತೆ ಶಾಸಕ ಕೊತ್ತೂರು ಜಿ.ಮಂಜುನಾಥ್​, ಎಂಎಲ್ಸಿ ಎಂ.ಎಲ್​.ಅನಿಲ್​ ಕುಮಾರ್​ ಅವರು, ಅಧಿಕಾರಿಗಳೊಂದಿಗೆ ಬುಧವಾರ ಸ್ಥಳ ಪರಿಶೀಲನೆ ನಡೆಸಿದರು.
ಆರೋಗ್ಯ, ಲೋಕೋಪಯೋಗಿ, ಸರ್ವೇ, ಗ್ರಾ.ಪಂ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳೊಂದಿಗೆ ನಗರದ ಸ್ಯಾನಿಟೋರಿಯಂ (ಡಿಎಚ್​ಒ ಕಚೇರಿ ಆವರಣ) ಸ್ಥಳ ಪರಿಶೀಲನೆ ನಡೆಸಿ ಶಾಸಕ ಮಂಜುನಾಥ್​, ಅಧಿಕಾರಿಗಳೊಂದಿಗೆ ಮಾಹಿತಿ ಪಡೆದುಕೊಂಡರು. ಇಷ್ಟರೊಳಗೆ ಸರ್ಕಾರಕ್ಕೆ ಡಿಪಿಆರ್​ ವರದಿ ಸಲ್ಲಿಸಬೇಕಿತ್ತು, ಅಧಿಕಾರಿಗಳು ಇನ್ನು ತಡ ಮಾಡಬಾರದು ಎಂದು ಸೂಚಿಸಿದರು.
ಮುಂದಿನ 25 ವರ್ಷಗಳ ಜನಸಂಖ್ಯೆಯನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ವೈದ್ಯಕಿಯ ಕಾಲೇಜು ನಿಮಾರ್ಣ ಮಾಡಲಾಗುವುದು. ಆರೋಗ್ಯ ಇಲಾಖೆಯೊಂದಿಗೆ ತಹಶೀಲ್ದಾರ್​, ಸರ್ವೆ ಇಲಾಖೆ, ನಗರಸಭೆ, ತಾಲ್ಲೂಕು ಪಂಚಾಯಿತಿ ಇಒ, ಪಿಡಿಒಗಳು ಸಮನ್ವಯ ಸಾಧಿಸಿ ಕೆಲಸ ಮಾಡಬೇಕು. ವಾಸ್ತು ಪ್ರಕಾರವೇ ಕಟ್ಟಡ ನಿರ್ಮಿಸಲು ಯೋಜನೆ ರೂಪಿಸಬೇಕು ಎಂದು ನಿರ್ದೇಶನ ನೀಡಿದರು.
ಬಳಿಕ ಸಚಿವ ಸಂಪುಟದ ಮುಂದಿಟ್ಟು, ಒಪ್ಪಿಗೆ ಪಡೆದು ಮೂರು ತಿಂಗಳಲ್ಲಿ ಕಾಮಗಾರಿ ಆರಂಭಿಸುವ ಗುರಿ ಇಟ್ಟುಕೊಂಡಿದ್ದೇವೆ, ವಾಟ್ಸ್​ಆಪ್​ ಗ್ರೂಪ್​ ಮಾಡಿಕೊಂಡು ಪರಸ್ಪರ ಸಂಪರ್ಕದಲ್ಲಿರಬೇಕು. ಇದು ಪ್ರಮುಖ ವಿಚಾರವಾಗಿದ್ದು, ಎಲ್ಲಾ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿ ಆದ್ಯತೆ ಮೇಲೆ ಕೆಲಸ ಮಾಡಬೇಕು ಎಂದು ಸೂಚನೆ ನೀಡಿದರು.
ಸ್ಥಳ ಪರಿಶೀಲನೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಕೊತ್ತೂರು ಜಿ.ಮಂಜುನಾಥ್​, ಮೆಡಿಕಲ್​ ಕಾಲೇಜಿಗೆ ಗುರುತಿಸಿರುವುದು ಅರಣ್ಯ ಇಲಾಖೆಗೆ ಸೇರಿದಾಗಿದ್ದು, ಅವರಿಗೆ ಪರ್ಯಾಯ ಜಾಗ ಕೊಟ್ಟು, ಇಲ್ಲಿ ಕಟ್ಟಡ ನಿರ್ಮಾಣ ಮಾಡಲು ಕ್ರಮವಹಿಸಲಾಗುವುದು ಎಂದು ಹೇಳಿದರು.
ಅರಣ್ಯ ಇಲಾಖೆಗೆ ಪರ್ಯಾಯವಾಗಿ ಮದನಹಳ್ಳಿ ಬಳಿ ಸರ್ವೆ ನಂಬರ್​ 125ರಲ್ಲಿ ಅರಣ್ಯ ಇಲಾಖೆಯ ಜಾಗ ನೀಡುತ್ತೇವೆ. ಇದಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಕೂಡ ಒಪ್ಪಿಕೊಂಡಿದ್ದಾರೆ. ಅಲ್ಲದೇ, ಮರ ಕಡಿಯುವುದಕ್ಕೂ ಹಣ ನೀಡುತ್ತೇವೆ. ಆದಷ್ಟು ಮರಗಳನ್ನು ಉಳಿಸಿಕೊಂಡು ಕಟ್ಟಡ ಕಟ್ಟುವುದು ನಮ್ಮ ಉದ್ದೇಶವಾಗಿದೆ ಎಂದು ಹೇಳಿದರು.
ಬಜೆಟ್​ನಲ್ಲಿ ಜಿಲ್ಲೆಗೆ ಸರ್ಕಾರಿ ಮೆಡಿಕಲ್​ ಕಾಲೇಜು ನಿರ್ಮಾಣಕ್ಕಾಗಿ ಡಿಪಿಆರ್​ ತಯಾರಿಸಲು ಅನುಮೋದನೆ ದೊರೆಯಿದೆ. ಸರ್ಕಾರದಿಂದ ಪತ್ರ ಬಂದಿದ್ದು ತಡವಾಗಿದ್ದರಿಂದ ಸಲ್ಲಿಸಲು ಸರ್ಕಾರ ನೀಡಿದ್ದ 15 ದಿನಗಳ ಗಡುವು ಮುಗಿದಿದೆ. ಮತ್ತೆ 15 ದಿನ ನಿಗದಿಪಡಿಸಿದ್ದು, ಅಷ್ಟರೊಳಗೆ ಡಿಪಿಆರ್​ ಸಲ್ಲಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.
ಮೆಡಿಕಲ್​ ಕಾಲೇಜಿಗೆ 22 ಎಕರೆ 36 ಗುಂಟೆ ಜಾಗ ಲಭ್ಯವಿದೆ. ಈಗಾಗಲೇ ಎಸ್​ಎನ್​ಆರ್​ ಜಿಲ್ಲಾಸ್ಪತ್ರೆ ಇದ್ದು, ಇಲ್ಲಿ ಶೈಕ್ಷಣಿಕ, ಆಡಳಿತ ಕಟ್ಟಡ ಹಾಗೂ ಹಾಸ್ಟೆಲ್​ ಬರಲಿವೆ. ಡಿಎಚ್​ಓ ಕಚೇರಿಯೂ ಇಲ್ಲೆ ಮುಂದುವರೆಯಲಿದೆ ಎಂದು ಮಾಹಿತಿ ನೀಡಿದರು.
ರಾಜ್ಯದಲ್ಲಿ ಹೊಸದಾಗಿ ವೈದ್ಯಕಿಯ ಕಾಲೇಜು ನಿಮಾರ್ಣಕ್ಕೆಂದು ಬಜೆಟ್​ನಲ್ಲಿ 800 ಕೋಟಿ ಮೀಸಲಿಡಲಾಗಿದೆ. ಅದರಲ್ಲಿ ವಿಜಯಪುರ ಹಾಗೂ ಕೋಲಾರದಲ್ಲಿ ಕಾಲೇಜು ನಿರ್ಮಿಸಲಾಗುತ್ತಿದೆ. ಹೀಗಾಗಿ, ನಮಗೆ 400 ಕೋಟಿ ಸಿಗುವ ನಿರೀೆಯಿದೆ. ಆರಂಭದಲ್ಲಿ ನಮಗೆ 200 ಕೋಟಿ ಲಭಿಸಿದರೆ ಮೊದಲ ಹಂತದ ಕಾಮಗಾರಿ ಪೂರ್ಣಗೊಳಿಸಬಹುದು ಎಂದು ತಿಳಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್​ ಸಹಕಾರ ನೀಡಿ ತ್ವರಿತಗತಿಯಲ್ಲಿ ಕೆಲಸ ಆಗಲು ಕಾರಣರಾಗಿದ್ದಾರೆ.
ಹಿಂದೆ 5 ಸಾವಿರ ಕೋಟಿಯಲ್ಲಿ ಕ್ಯಾನ್ಸರ್​ ಆಸ್ಪತ್ರೆ ನಿಮಾರ್ಣ ಮಾಡಲು ಟಾಟಾ ಸಂಸ್ಥೆ ಮುಂದೆ ಬಂದಿತ್ತು. ಆದರೆ, ಅರಣ್ಯ ಇಲಾಖೆಯ ಜಾಗವಾಗಿದ್ದ ಕಾರಣ ಯೋಜನೆ ಕೈಗೆತ್ತಿಕೊಳ್ಳಲು ಸಾಧ್ಯವಾಗಲಿಲ್ಲ. ಆ ಆಸ್ಪತ್ರೆ ಬೇರೆ ಕಡೆ ಹೋಯಿತು ಎಂದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್​ ಸದಸ್ಯ ಎಂ.ಎಲ್​.ಅನಿಲ್​ ಕುಮಾರ್​, ಕುಡಾ ಅಧ್ಯಕ್ಷ ಮೊಹಮ್ಮದ್​ ಹನೀಫ್​, ತಹಶೀಲ್ದಾರ್​ ಡಾ.ಎಂ.ನಯನಾ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಜಿ.ಶ್ರೀನಿವಾಸ್​, ನಗರಸಭೆ ಆಯುಕ್ತ ನವೀನ್​ ಚಂದ್ರ ಮತಿತರರ ಅಧಿಕಾರಿಗಳು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net