

ಕೋಲಾರ: ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿದ್ದು, ರೈತರಿಗೆ ಅವಶ್ಯವಿರುವ ಬಿತ್ತನೆ ಬೀಜ, ರಸಗೊಬ್ಬರದ ಕೊರತೆ ಆಗದಂತೆ ಎಚ್ಚರ ವಹಿಸುವಂತೆ ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷೆ ಸಿ. ನಿರ್ಮಲಾ ಅಧಿಕಾರಿಗಳಿಗೆ ಸೂಚಿಸಿದರು.
ಜಿಪಂ ಸಭಾಂಗಣದಲ್ಲಿ ಸೋಮವಾರ ನಡೆದ ಸ್ಥಾಯಿ ಸಮಿತಿ ಸಭೆಯಲ್ಲಿ ಮಾತನಾಡಿ, ಉತ್ತಮ ಮಳೆಯಾಗಿದ್ದರೂ ಕರೊನಾ ನಡುವೆ ಕೆಲಸ ಮಾಡುವುದು ಕಷ್ಟ. ಹಾಗಾಗಿ ರೈತರಿಗೆ ಸಕಾಲದಲ್ಲಿ ಬಿತ್ತನೆ ಬೀಜ, ರಸಗೊಬ್ಬರ ಸಿಗುವಂತೆ ಮಾಡಬೇಕು ಹಾಗೂ ಯಾವುದೇ ಸಂದರ್ಭದಲ್ಲಿ ಕೊರತೆ ಆಗದಂತೆ ನೋಡಿಕೊಳ್ಳಬೇಕು ಎಂದರು.
ಜಂಟಿ ಕೃಷಿ ನಿರ್ದೇಶಕ ಡಾ.ಎಚ್.ಕೆ.ಶಿವಕುಮಾರ್ ಮಾತನಾಡಿ, ಜಿಲ್ಲೆಯಾದ್ಯಂತ 1832 ಕ್ವಿಂಟಾಲ್ ಶೇಂಗಾ, ತೊಗರಿ, ರಾಗಿ ಇನ್ನಿತರ ಬಿತ್ತನೆ ಬೀಜಗಳನ್ನು ರೈತ ಸಂಪರ್ಕ ಕೇಂದ್ರಗಳ ಮೂಲಕ ರೈತರಿಗೆ ವಿತರಿಸಲಾಗಿದೆ. ಶೇಂಗಾ ಹೂವು ಬಿಡುವ ಹಂತದಲ್ಲಿದೆ. ರಾಗಿ ಬಿತ್ತನೆ ಪ್ರಗತಿಯಲ್ಲಿದೆ. ರಸಗೊಬ್ಬರದ ಅಭಾವ ಇಲ್ಲ ಎಂದರು. ನೆಲಗಡಲೆಗೆ ಬೆಳೆ ವಿಮೆಗೆ ಜು.31 ಕೊನೇ ದಿನ, ರಾಗಿಗೆ ಆಗಸ್ಟ್ 14ರವರೆಗೆ ಕಲಾವಕಾಶವಿದೆ. ಕಳೆದ ವರ್ಷದ ಬೆಳೆ ವಿಮೆ 1340 ರೈತರಿಗೆ 12 ಕೋಟಿ ರೂ. ಬರಬೇಕಿದೆ ಎಂದರು.
ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಉಪನಿರ್ದೇಶಕ ಎನ್. ರವಿಚಂದ್ರ ಮಾತನಾಡಿ, ಇಲಾಖೆಯಲ್ಲಿ ಹೊಲಿಗೆ ಯಂತ್ರ, ವೃತ್ತಿ ಕಸುಬುದಾರರಿಗೆ ಸಾಧನ ಸಲಕರಣೆ ನೀಡುವ ಕಾರ್ಯಕ್ರಮದಡಿ ಕಳೆದ ವರ್ಷ ಬಿಡುಗಡೆಯಾದ ಅನುದಾನದಲ್ಲಿ ಫಲಾನುಭವಿಗಳನ್ನು ಜಿಪಂ ಸದಸ್ಯರು ಗುರುತಿಸಿ ಕೊಟ್ಟರೆ ಸೌಲಭ್ಯ ಕಲ್ಪಿಸಲು ಸಿದ್ಧ ಎಂದರು.
ಸ್ಥಾಯಿ ಸಮಿತಿ ಸದಸ್ಯ ಮಹೇಶ್ ಮಾತನಾಡಿ, ಇಲಾಖೆಯಲ್ಲಿ ಹುಳು ಸಾಕಾಣಿಕೆ ಮನೆ ಸೇರಿ ವಿವಿಧ ಯೋಜನೆಯಡಿ ಸೌಲಭ್ಯ ಪಡೆದ ರೈತರೇ ಮತ್ತೆ ಸೌಲಭ್ಯ ಪಡೆದಿರುವ ಬಗ್ಗೆ ಬಂಗಾರಪೇಟೆ ಸಹಾಯಕ ನಿರ್ದೇಶಕರ ಗಮನಕ್ಕೆ ತಂದಿದ್ದರೂ ಕ್ರಮ ವಹಿಸಿಲ್ಲ. ಸೂಕ್ತ ದಾಖಲೆ ಒದಗಿಸುತ್ತೇನೆ. ಕ್ರಮ ಕೈಗೊಳ್ಳಿ ಎಂದು ಸೂಚಿಸಿದರು.
ತೋಟಗಾರಿಕೆ ಇಲಾಖೆ ಉಪನಿರ್ದೇಶಕಿ ಎಂ. ಗಾಯತ್ರಿ ಮಾತನಾಡಿ, ಲಾಕ್‌ಡೌನ್ ಸಂದರ್ಭದಲ್ಲಿ ನಷ್ಟ ಅನುಭವಿಸಿದ, ಬೆಳೆ ಸಮೀಕ್ಷೆಯಲ್ಲಿದ್ದಂತೆ 906 ಹೂವು ಬೆಳೆಗಾರರಿಗೆ ಮೊದಲ ಹಂತದಲ್ಲಿ 42 ಲಕ್ಷ ರೂ. ಖಾತೆಗೆ ಜಮಾ ಮಾಡಲಾಗಿದೆ. ಅರ್ಜಿ ಸಲ್ಲಿಸಲು ಸರ್ಕಾರ ಅವಕಾಶ ನೀಡಿದ್ದರಿಂದ 2500 ಅರ್ಜಿ ಬಂದಿವೆ. ಇವರಿಗೆ ಪರಿಹಾರ ನೀಡಲು 3.21 ಕೋಟಿ ರೂ. ಅವಶ್ಯವಿದೆ. ಬಿಡುಗಡೆಯಾಗಿರುವ 2.43 ಕೋಟಿ ರೂ.ಗಳಲ್ಲಿ ಇನ್ನೂ 1.62 ಕೋಟಿ ಕೊರತೆ ಉಂಟಾಗುವುದರಿಂದ ಬೇಡಿಕೆ ಸಲ್ಲಿಸಲಾಗಿದೆ ಎಂದರು.
ಸಮಗ್ರ ತೋಟಗಾರಿಕೆ ಯೋಜನೆ ಹಣವನ್ನು ಹೂವು ಬೆಳೆಗಾರರಿಗೆ ನಷ್ಟ ಪರಿಹಾರಕ್ಕೆ ಹಾಗೂ ಕೃಷಿಭಾಗ್ಯ ಯೋಜನೆ ಹಣವನ್ನು ಹಣ್ಣು, ತರಕಾರಿಗಳ ಬೆಳೆ ನಷ್ಟ ಪರಿಹಾರಕ್ಕೆ ಬಳಸುತ್ತಿರುವುದರಿಂದ ಈ ಎರಡೂ ಯೋಜನೆಗಳಲ್ಲಿ ಹೊಸ ಕಾರ್ಯಕ್ರಮಗಳಿಲ್ಲ ಎಂದರು. ಸ್ಥಾಯಿ ಸಮಿತಿ ಸದಸ್ಯ ಜಯಪ್ರಕಾಶ್, ಜಿಪಂ ಉಪಕಾರ್ಯದರ್ಶಿ ಸಂಜೀವಪ್ಪ ಹಾಜರಿದ್ದರು.
ಶೇ. 85 ಸಿಬ್ಬಂದಿ ಕೊರತೆ ನಡುವೆಯೂ ಹಿಪ್ಪುನೇರಳೆ ಹೊಸದಾಗಿ ನಾಟಿ ಮಾಡುವ ಕಾರ್ಯಕ್ರಮ, ಬೈವೋಲ್ಟಿನ್ ಗೂಡು ಉತ್ಪಾದನೆಯಲ್ಲಿ ಗುರಿ ಮೀರಿ ಸಾಧನೆ ಮಾಡಲಾಗಿದೆ. ನರೇಗಾದಲ್ಲಿ ಕಳೆದ ವರ್ಷ 5.95 ಲಕ್ಷ ಮಾನವ ದಿನ ಸೃಜನೆ ಗುರಿಗೆ 7.20 ಲಕ್ಷ ಮಾನವ ದಿನ ಸೃಜಿಸಲಾಗಿದೆ. ಎಂ.ಕೆ. ಪ್ರಭಾಕರ್, ರೇಷ್ಮೆ ಇಲಾಖೆ ಉಪನಿರ್ದೇಶಕ