

ಕೋಲಾರ: ಅಮೆರಿಕದ ಫೂಂಡಾ ಚೆಕ್ಕಾಸ್ನಲ್ಲಿ ಸೋಮವಾರ ಸಂಭವಿಸಿದ ಅಪಘಾತದಲ್ಲಿ ಕೋಲಾರ ನಿವಾಸಿ ಮೃತಪಟ್ಟಿದ್ದಾನೆ. ಕೋಲಾರ ಗಾಂಧಿನಗರದ ನಿವಾಸಿ ಬಾಡಿಬಿಲ್ದರ್ ಸುರೇಶ್ ಬಾಬು (42) ಮೃತ. ಮೂರು ದಿನಗಳ ಹಿಂದೆ ಫ್ಲೋರಿಡಾದಿಂದ ಚೆಕ್ಕಾಸ್ಗೆ ತೆರಳುವಾಗ ರಸ್ತೆ ಅಪಘಾತದಲ್ಲಿ ಸುರೇಶ್ ಗಂಭೀರ ಗಾಯಗೊಂಡಿದ್ದು, ಚಿಕಿತ್ಸೆ ಫಲಕಾರಿಯಾಗದೆ ಖಾಸಗಿ ಆಸ್ಪತ್ರೆಯಲ್ಲಿ ಮಂಗಳವಾರ ಮೃತಪಟ್ಟಿದ್ದಾರೆ. ಪ್ರೇಮಾ, ಪ್ರಿಯಾಮಣಿ ಸೇರಿ ಹಲವು ನಟಿಯರ ಜತೆ ಮಾಡಲಿಂಗ್ನಲ್ಲಿ ಪೋಸ್ ಕೊಟ್ಟಿದ್ದರು. ಉಪ್ಪಿ&2 ಸೇರಿ ಹಲವು ಚಲನಚಿತ್ರಗಳಲ್ಲಿಯೂ ನಟಿಸಿದ್ದಾರೆ. ಜತೆಗೆ ಫಿಜಿಯೋಥೆರಪಿಸ್ಟ್ ಆಗಿ ಸ್ವಂತ ಉದ್ಯಮ ಆರಂಭಿಸಿದ್ದಲ್ಲದೇ ನಟ&ನಟಿಯರಿಗೆ ದೈಹಿಕ ತರಬೇತುದಾರರಾಗಿದ್ದರು. ದೆಹಲಿ ಮೂಲದ ಯುವತಿಯನ್ನು ಪ್ರೀತಿಸಿ ವಿವಾಹವಾಗಿದ್ದರು. ಸುರೇಶ್ ಬಾಬು ಅವರು ರಾಜ್ಯಮಟ್ಟದ ಹಲವು ಪ್ರಶಸ್ತಿ ಪಡೆದಿದ್ದು, ಎರಡು ವಾರದ ಹಿಂದೆ ಕೋಲಾರಕ್ಕೆ ಆಗಮಿಸಿ ಪತ್ನಿ ಮತ್ತು ಮಕ್ಕಳನ್ನು ಅಮೆರಿಕಕ್ಕೆ ಕರೆದುಕೊಂಡು ಹೋಗಿದ್ದರು. ಮಿಸ್ಟರ್ ಕರ್ನಾಟಕ ಮತ್ತು ಮಿಸ್ಟರ್ ಇಂಡಿಯಾ ಶೀರ್ಷಿಕೆಗಳನ್ನು ಗೆದ್ದಿದ್ದ ಅವರು, ದೇಹದಾರ್ಢ್ಯ ಕ್ಷೇತ್ರದಲ್ಲಿ ಯುವಕರಿಗೆ ಸ್ಫೂರ್ತಿಯಾಗಿದ್ದರು.
ಮಗನಿಗಾಗಿ ತಾಯಿಯ ಮನವಿ : ಮೃತ ದೇಹವನ್ನು ಅಮೆರಿಕದಿಂದ ಭಾರತಕ್ಕೆ ತರಬೇಕಾದರೆ ಹೆಚ್ಚು ವೆಚ್ಚವಾಗುತ್ತದೆ. ರಾಜ್ಯ, ಕೇಂದ್ರ ಸರ್ಕಾರ ಗಮನ ಹರಿಸಿ ಮೃತದೇಹ ತರಿಸಿಕೊಟ್ಟು ಕೊನೆಯದಾಗಿ ಸುರೇಶ್ ಬಾಬು ಮುಖ ನೋಡುವ ಅವಕಾಶ ಕಲ್ಪಿಸಿಕೊಡಬೇಕು ಎಂದು ತಾಯಿ ಮುನಿಯಮ್ಮ ಮನವಿ ಮಾಡಿದ್ದಾರೆ.
ಬಂಗಾರಪೇಟೆ: ತಾಲೂಕಿನ ಎರಡು ಪ್ರತ್ಯೇಕ ವೇಶ್ಯಾವಾಟಿಕೆ ಅಡ್ಡೆಗಳ ಮೇಲೆ ಪೊಲೀಸರು ದಾಳಿ ನಡೆಸಿ 7 ಮಂದಿ ಹೊರರಾಜ್ಯದ ಯುವತಿಯರ ರಕ್ಷಣೆ ಮಾಡಿದ್ದಾರೆ. ಬಂಗಾರಪೇಟೆ ತಾಲೂಕು ದೇಶಿಹಳ್ಳಿ ಹಾಗೂ ದೊಡ್ಡೂರು ಹರಪನಹಳ್ಳಿ ಪ್ಲಾಂಟೇಷನ್ ಬಳಿ ಮನೆಯೊಂದರಲ್ಲಿ ವೈಶ್ಯಾವಾಟಿಕೆ ನಡೆಯುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಸಿಪಿಐ ದಯಾನಂದ್ ನೇತೃತ್ವದಲ್ಲಿ ಪೊಲೀಸರು ದಾಳಿ ನಡೆಸಿದ್ದು, ಒಬ್ಬ ಆರೋಪಿ ಪರಾರಿಯಾಗಿದ್ದಾನೆ. ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೋಲಾರ/ಟೇಕಲ್: ಮಾಲೂರು ತಾಲೂಕಿನ ಟೇಕಲ್ ಹೋಬಳಿಯ ಹುಣಸೀಕೋಟೆ ಗ್ರಾಮದ ಬೆಟ್ಟದ ಬಳಿ ಮಂಗಳವಾರ ರಾತ್ರಿ ಕಲ್ಲು ಸ್ಫೋಟಿಸುವ ವೇಳೆ ಗುಡ್ಡ ಕುಸಿದು ಒಬ್ಬ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದ್ದು, ಮತ್ತೊಬ್ಬ ತೀವ್ರ ಗಾಯಗೊಂಡಿದ್ದಾರೆ. ಹುಣಸೀಕೋಟೆ ಗ್ರಾಮದ ಕಲ್ಲು ಕುಟಿಗ ಮಂಜುನಾಥ್ (40) ಕಲ್ಲುಬಂಡೆ ಕೆಳಗೆ ಸಿಲುಕಿಕೊಂಡಿದ್ದು, ಹುಡುಕಾಟ ನಡೆಯುತ್ತಿದೆ. ಹೊರ ರಾಜ್ಯದ ಕಾರ್ಮಿಕ ನವೀನ್ ಎಂಬುವರನ್ನು ಚಿಕಿತ್ಸೆಗಾಗಿ ಕೋಲಾರ ಆಸ್ಪತ್ರೆಗೆ ದಾಖಲಾಗಿಸಲಾಗಿದೆ. ಕಾರ್ಮಿಕ ನವೀನ್ ಜಿಲೆಟಿನ್ ಕಡ್ಡಿ ಇಟ್ಟು ಕಲ್ಲು ಸ್ಫೋಟಕ್ಕೆ ಮುಂದಾಗಿದ್ದರು. ಆ ಸಂದರ್ಭದಲ್ಲಿ ಗುಡ್ಡ ಕುಸಿತ ಸಂಭವಿಸಿದೆ. ಮಾಸ್ತಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.