

ಮಾಲೂರು: ತನ್ನ ಅಜ್ಜನಿಗೆ ಸೇರಿದ ನಿವೇಶನದಲ್ಲಿ ಅಪ್ಪ ಅಮ್ಮ ಕಟ್ಟಿದ್ದ ಮನೆಯಲ್ಲಿ ವಾಸವಾಗಿದ್ದ ವಿದ್ಯಾರ್ಥಿನಿಯನ್ನು ಗುಂಪೊಂದು ಬಲವಂತವಾಗಿ ಮನೆಯಿಂದ ಹೊರ ದಬ್ಬಿ ಜೆಸಿಬಿಯಿಂದ ಮನೆಯನ್ನು ನೆಲಸಮ ಮಾಡಿ ಪರಾರಿಯಾಗಿರುವ ಘಟನೆ ಪಟ್ಟಣದ ಇಂದಿರಾನಗರದಲ್ಲಿ ಮಂಗಳವಾರ ನಡೆದಿದೆ.
ಮನೆ ಇಲ್ಲದೆ ಸಂತ್ರಸ್ಥಳಾಗಿರುವ ಕಾವ್ಯ(21), ನೆರೆ ಹೊರೆಯವರ ಸಹಾಯದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಸದ್ಯಕ್ಕೆ ಸಂಬಂಧಿಕರ ಮನೆಯಲ್ಲಿ ಆಶ್ರಯ ಪಡೆದಿದ್ದಾರೆ.
ಘಟನೆ ಸಂಬಂಧ ವನಿತಾ, ಮಂಜುಳ, ವಿಜಯಮ್ಮ, ಸುಭಾಷ್‌ನಗರದ ಮಂಜುನಾಥ್, ಚೇತನ್, ಅಪ್ಪಿ ಸೇರಿದಂತೆ 10 ಜನರ ವಿರುದ್ಧ ಪಟ್ಟಣದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಘಟನೆಯ ವಿವರ: ತನ್ನ ಅಜ್ಜ ಮುನಿಸ್ವಾಮಿ ಅವರಿಗೆ 1992ರಲ್ಲಿ ಪುರಸಭೆಯಿಂದ ಆಶ್ರಯ ಯೋಜನೆಯಡಿ ಮಂಜೂರು ಆಗಿದ್ದ 25*30 ಅಡಿ ನಿವೇಶನದಲ್ಲಿ ತಾಯಿ ಜಯಮ್ಮ,ತಂದೆ ಅರುಣ್ ಸಿಂಗ್ ಮನೆಯನ್ನು ನಿರ್ಮಿಸಿ ವಾಸ ಮಾಡುತ್ತಿದ್ದರು. ತಂದೆ ತಾಯಿ ನಿಧನದಿಂದಾಗಿ ಕಾವ್ಯ ಒಂಟಿಯಾಗಿ ಮನೆಯಲ್ಲಿ ವಾಸ ಮಾಡುತ್ತಿದ್ದರು.
ಅಂತಿಮ ಬಿಕಾಂ ಓದುತ್ತಿರುವ ಕಾವ್ಯ ಕಾಲೇಜು ಮುಗಿಸಿ ಮನೆಯಲ್ಲಿದ್ದಾಗ ಜೆಸಿಬಿಯೊಂದಿಗೆ ಬಂದ ಆರೋಪಿಗಳು ಕಾವ್ಯ ಅವರನ್ನು ಮನೆಯಿಂದ ಹೊರದಬ್ಬಿ ಮನೆ ನೆಲಸಮ ಮಾಡಿದ್ದು ಕಾಲೇಜು ಪುಸ್ತಕಗಳು, ಪಾತ್ರೆ, ಬಟ್ಟೆ ಸೇರಿದಂತೆ 6 ಲಕ್ಷ ರೂ ಮೌಲ್ಯದ ಸಾಮಗ್ರಿಗಳನ್ನು ನಾಶ ಪಡಿಸಲಾಗಿದೆ ಎಂದು ದೂರಿದ್ದಾರೆ.
ಸದರಿ ಮನೆಯ ವಿಚಾರವಾಗಿ ಇಂದಿರಾನಗರದ ವನಿತಾ, ಮಂಜುಳ, ವಿಜಯಮ್ಮ ಎಂಬುವರು ಪಟ್ಟಣದ ಸಿವಿಲ್ ನ್ಯಾಯಾಲಯದಲ್ಲಿ ನಮಗೆ ಸೇರಿದ ನಿವೇಶನದಲ್ಲಿ ಮನೆ ನಿರ್ಮಿಸಿದ್ದು ಬಿಡಿಸಿಕೊಡುವಂತೆ ದಾವೆ ಹೂಡಿದ್ದು ವಿಚಾರಣೆ ಪೂರ್ಣಗೊಳ್ಳುವ ಮುನ್ನವೇ ಮನೆಯನ್ನು ಧ್ವಂಸಗೊಳಿಸಿದ್ದಾರೆಂದು ಕಾವ್ಯ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ಪ್ರತಿಭಟನೆ: ಕಾವ್ಯಳ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕೆಗೆ ಸೂಕ್ತ ನ್ಯಾಯ ಒದಗಿಸುವಂತೆ ಒತ್ತಾಯಿಸಿ ಇಂದಿರಾನಗರದ ನಿವಾಸಿಗಳು ಪುರಸಭೆಯವರೆಗೆ ಕಾಲ್ನಡಿಗೆಯಲ್ಲಿ ಬಂದು ಪ್ರತಿಭಟನೆ ನಡೆಸಿದರು.
ಪುರಸಭೆ ಮಾಜಿ ಸದಸ್ಯ ಪಚ್ಚಪ್ಪ ಇಂದಿರಾ ನಗರದ ಮುಖಂಡರಾದ ತಂಗರಾಜು, ವೆಂಕಟೇಶ್, ಸಂದೀಪ್ ಸೇರಿದಂತೆ ನೂರಕ್ಕೂ ಹೆಚ್ಚು ಜನರು ಪಾಲ್ಗೊಂಡು ಆರೋಪಿಗಳನ್ನು ಕೂಡಲೇ ಬಂಧಿಸುವಂತೆ ಒತ್ತಾಯಿಸಿದರು.