ರಾಜ್ಯೋತ್ಸವಕ್ಕೆ ಕೋಲಾರ ಸಜ್ಜು

FotoJet (1)
Published on

ಕೋಲಾರ: ಪ್ರತಿ ವರ್ಷದಂತೆ ಈ ವರ್ಷವೂ ಜಿಲ್ಲಾಡಳಿತದೊಂದಿಗೆ ಭುವನೇಶ್ವರಿ ಕನ್ನಡ ಸಂಘ ಸೇರಿ ವಿವಿಧ ಕನ್ನಡಪರ ಸಂಘಟನೆಗಳ ಜತೆಗೂಡಿ ರಾಜ್ಯೋತ್ಸವ ಆಚರಿಸಲು ಸಜ್ಜಾಗಿದ್ದು, ವಿವಿಧ ಪ್ರಮುಖ ರಸ್ತೆಗಳ ವಿದ್ಯುತ್​ ಕಂಬಗಳಿಗೆ ಬೃಹತ್​ ಕನ್ನಡ ಧ್ವಜಗಳನ್ನು ಕಟ್ಟಲಾಗಿದೆ.

ರಾಜ್ಯೋತ್ಸವಕ್ಕೆ ಇನ್ನೂ ಮೂರು ದಿನಗಳು ಬಾಕಿ ಇರುವಾಗಲೇ ನಗರದ ಕ್ಲಾಕ್​ ಟವರ್​ ವೃತ್ತದಿಂದ ಡ್ಯೂಂಲೈಟ್​ ವೃತ್ತ, ಬಸ್​ಸ್ಟಾಂಡ್​, ಬಂಗಾರಪೇಟೆ ವೃತ್ತ ಸೇರಿ ವಿವಿಧ ವೃತ್ತಗಳಲ್ಲಿ ಕನ್ನಡ ಧ್ವಜಗಳನ್ನು ಹಾಗೂ ರಸ್ತೆಯ ಉದ್ದಕ್ಕೂ ಇರುವ ವಿದ್ಯುತ್​ ಕಂಬಗಳಿಗೆ ಕನ್ನಡ ಧ್ವಜಗಳನ್ನು ಕಟ್ಟಿ ಸಿಂಗರಿಸುತ್ತಿದ್ದಾರೆ.

ಪ್ರತಿ ವರ್ಷದಂತೆ ಈ ವರ್ಷವೂ ಭುವನೇಶ್ವರಿ ಕನ್ನಡ ಸಂಘದಿಂದ ಆನೆ ಕರೆಯಿಸಿ ಕೋಲಾರಮ್ಮ ದೇವಿಯ ಮೆರವಣಿಗೆ ನಡೆಸಲಿದ್ದಾರೆ. ಗಾಂಧಿವನದಿಂದ ಆನೆಯ ಮೇಲೆ ಕೋಲಾರಮ್ಮ ದೇವಿಯ ಮೆರವಣಿಗೆ ಸಾಗಲಿದೆ. ಮೆರವಣಿಗೆ ಉದ್ದಕ್ಕೂ ನಗರ ಮತ್ತು ಗ್ರಾಮೀಣ ಭಾಗದದಿಂದ ಬರುವ ಪಲ್ಲಕಿಗಳು ಡೊಳ್ಳು ಸೇರಿ ವಿವಿಧ ಕಲಾ ಸಂಘಗಳು ಭಾಗವಹಿಸಲಿವೆ.

ಮೆರವಣಿಗೆ ಪ್ರತಿ ವರ್ಷದಂತೆ ಗಾಂಧಿವನದಿಂದ ಅಮ್ಮಾರಪೇಟೆ ವೃತ್ತ, ಮೆಕ್ಕೆ ವೃತ್ತದಿಂದ ಹಳೇ ಬಸ್​ಸ್ಟಾಂಡ್​ ಮಾರ್ಗವಾಗಿ ಕಾಲೇಜು ವೃತ್ತ, ಬಂಗಾರಪೇಟೆ ವೃತ್ತದ ನಂತರ ಕನಕ ಮಂದಿರದ ಬಳಿ ಮುಕ್ತಾಯಗೊಳ್ಳಲಿದೆ.

ಡ್ಯೂಂಲೈಟ್​ ವೃತ್ತ, ಟವರ್​ ಹಾಗೂ ಹೊಸ ಬಸ್​ ನಿಲ್ದಾಣದ ತನಕವೂ ಮೆರವಣಿಗೆ ಹೋಗಬೆಂಕೆಂಬುದು ಕನ್ನಡಾಭಿಮಾನಿಗಳ ಒತ್ತಾಯವಾಗಿದೆ. ಆದರೆ ಜಿಲ್ಲಾಡಳಿತದೊಂದಿಗೆ ಚರ್ಚೆಯಾಗಿಲ್ಲ. ಈ ಬಾರಿ ಚರ್ಚೆ ನಡೆಸಿ ತೀಮಾರ್ಣ ತೆಗೆದುಕೊಳ್ಳಬೇಕೆಂಬುದು ಕನ್ನಡಪರ ಸಂಘಟನೆಗಳ ಮುಖಂಡರ ಅಭಿಪ್ರಾಯವಾಗಿದೆ.

ಈ ವರ್ಷವೂ ಅದ್ದೂರಿ ರಾಜ್ಯೋತ್ಸವಕ್ಕೆ ಸಿದ್ಧತೆ ನಡೆಯುತ್ತಿವೆ. ವಿಶೇಷವಾಗಿ ಎಲ್ಲ ಪ್ರಮುಖ ರಸ್ತೆಗಳ ಮಧ್ಯ ಭಾಗದಲ್ಲಿರುವ ವಿದ್ಯುತ್​ ಕಂಬಗಳಿಗೆ ಕನ್ನಡ ಧ್ವಜಗಳನ್ನು ಕಟ್ಟುವ ಕೆಲಸ ಮುಂದುವರಿದಿದೆ. ಪ್ರಮುಖ ರಸ್ತ್ತೆಗಳಲ್ಲಿ ದೊಡ್ಡ ಕನ್ನಡ ಧ್ವಜಗಳನ್ನು ಕಟ್ಟಲಾಗುತ್ತಿದೆ.ಮೆರವಣಿಗೆಗೆ ದೇವಿಯ ಆನೆ ತರಿಸಲಾಗುವುದು. ರಾಜ್ಯೋತ್ಸವ ದಿನದಿಂದ 5 ದಿನಗಳ ಕಾಲ ಕನ್ನಡ ಚಲನಚಿತ್ರ ಗಾಯಕರಿಂದ ರಸಸಂಜೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು.

 -ತ್ಯಾಗರಾಜ್​

ಭುವನೇಶ್ವರಿ ಕನ್ನಡಪರ ಸಂಘಟನೆಯ ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net