ಸೌಲಭ್ಯ ಕಲ್ಪಿಸುವಾಗ ಪಾರದರ್ಶಕತೆ ಇರಲಿ ; ಜಿಲ್ಲಾ ಅಭಿವದ್ಧಿ ಮತ್ತು ಸಮನ್ವಯ ಉಸ್ತುವಾರಿ ಸಮಿತಿ ಸಭೆಯಲ್ಲಿ ಸಂಸದ ಮುನಿಸ್ವಾಮಿ ಸೂಚನೆ

14-klr-004 disha meeting new
Published on

ಕೋಲಾರ: ಕೇಂದ್ರ ಮತ್ತು ರಾಜ್ಯ ಸರ್ಕಾರವು ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು, ಸೌಲಭ್ಯಗಳು ಪಾರದರ್ಶಕವಾಗಿ ಫಲಾನುಭವಿಗಳಿಗೆ ದೊರಕಬೇಕು. ಈ ನಿಟ್ಟಿನಲ್ಲಿ ಅಧಿಕಾರಿಗಳು ಕರ್ತವ್ಯ ನಿರ್ವಹಿಸಬೇಕು ಎಂದು ಸಂಸದ ಎಸ್.ಮುನಿಸ್ವಾಮಿ ಹೇಳಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಜಿಲ್ಲಾ ಅಭಿವೃದ್ಧಿ ಮತ್ತು ಸಮನ್ವಯ ಉಸ್ತುವಾರಿ ಸಮಿತಿ ಸಭೆಯಲ್ಲಿ ಮಾತನಾಡಿ, ಅಧಿಕಾರಿಗಳು ಕ್ಷೇತ್ರದಲ್ಲಿ ಕೆಲಸ ಮಾಡಬೇಕು. ಜನರಿಗೆ ಯೋಜನೆಗಳ ಅರಿವು ಮೂಡಿಸಬೇಕು. ತಾಲೂಕು ಕೇಂದ್ರಗಳಲ್ಲೂ ಕಾರ್ಯಕ್ರಮ ವಾಡಿ ಬೆಳೆ ಹಾನಿ, ಮಳೆಹಾನಿ ಪರಿಹಾರವನ್ನು ವಿತರಣೆ ವಾಡಬೇಕು ಎಂದು ಕೃಷಿ ಮತ್ತು ತೋಟಗಾರಿಕೆ ಅಧಿಕಾರಿಗಳಿಗೆ ಸೂಚಿಸಿದರು.

ಕೋಲಾರದಲ್ಲಿ ಹೆಚ್ಚು ರೇಷ್ಮೆ ಬೆಳೆಯುತ್ತಿದ್ದು ಸಿದ್ಧ ಉಡುಪು ತಯಾರಿಸಲು ಟೆಕ್ಸ್‌ಟೈಲ್ ಪಾರ್ಕ್ ನಿರ್ಮಿಸುವುದಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು ಎಂದು ಸಿಇಒಗೆೆ ಸೂಚಿಸಿದರು. ನರೇಗಾದಡಿ ಎಷ್ಟು ಕೆಲಸವಾಗಿದೆ ಎಂಬ ಸಮಗ್ರ ಮಾಹಿತಿಯನ್ನು ತಾಲೂಕು ಪಂಚಾಯಿತಿ ಇಒ ಒದಗಿಸಬೆಕು. ವಾರದಲ್ಲಿ ಒಂದು ದಿನ ಪ್ರತಿ ತಾಲೂಕಿನ ಒಂದು ಹಳ್ಳಿಗೆ ಭೇಟಿ ನೀಡಿ ರೈತರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಇತ್ತೀಚಿನ ದಿನಗಳಲ್ಲಿ ವಿದ್ಯಾವಂತರೇ ಹೆಚ್ಚಾಗಿ ಕೃಷಿ ವಾಡುತ್ತಿದ್ದಾರೆ. ಅವರಿಗೆ ಮಾತ್ರ ಕೇಂದ್ರದಿಂದ ಬರುವ ಅನುದಾನ ಸಿಗುತ್ತಿದೆ. ಆದರೆ ಅವಿದ್ಯಾವಂತ, ಬಡ ರೈತರಿಗೆ ಸಿಗುತ್ತಿಲ್ಲ. ಗ್ರಾಮ ಪಂಚಾಯಿತಿಯಲ್ಲಿ ನಡೆಯುವ ಭೂಮಿಪೂಜೆ, ಉದ್ಘಾಟನೆ ಕಾರ್ಯಕ್ರಮಗಳಿಗೆ ಜನಪ್ರತಿನಿಧಿಗಳಿಗೆ ಶಿಷ್ಠಾಚಾರದ ರೀತಿ ಆಹ್ವಾನ ನೀಡಬೇಕು. ಸಭೆಗಳಲ್ಲಿ ಒಂದು ಲೈನ್ ಉತ್ತರ ನೀಡದೆ ಪುಸ್ತಕದ ರೂಪದಲ್ಲಿ ಸಂಪೂರ್ಣ ಮಾಹಿತಿ ಮಾತೃಭಾಷೆ ಕನ್ನಡದಲ್ಲಿ ನೀಡಬೇಕು ಎಂದರು.

ಎನ್‌ಆರ್‌ಎಂಡಿಯಡಿ 6 ಸಾವಿರ ಸ್ವಸಹಾಯ ಗುಂಪುಗಳಿವೆ. ಫಲಾನುಭವಿಗಳು, ಅವರ ಸಂದ ಹೆಸರು, ಅವರಿಗೆ ಬಿಡುಗಡೆಯಾದ ಅನುದಾನದ ಮಾಹಿತಿಯನ್ನು ಮುಂದಿನ ಸಭೆಯೊಳಗೆ ತಿಳಿಸಬೇಕು. ಅಧಿಕಾರಿಗಳು ನೀಡುವ ಎಲ್ಲ ವಾಹಿತಿಯನ್ನು ದಿಶಾ ಕಮಿಟಿ ಸದಸ್ಯರು ಗಮನಿಸಿ, ಕಾಮಗಾರಿ ನಡೆದಿವೆಯೇ ಎಂಬುದನ್ನು ಪರಿಶೀಲಿಸಬೇಕು. ಹಳ್ಳಿಗಳಲ್ಲಿ ಮನೆ, ಅಂಗಡಿಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟವಾಗುತ್ತಿದೆ. ಈ ಕುರಿತು ಅಬಕಾರಿ ಮತ್ತು ಪೊಲೀಸ್ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಜಿಲ್ಲೆಯಲ್ಲಿ 500ಕ್ಕೂ ಹೆಚ್ಚು ಶಾಲೆಗಳು ಮಳೆ ಬಂದಾಗ ಸೋರುತ್ತಿದ್ದು, ದುರಸ್ತಿಗೆ ಒಂದೊಂದು ಶಾಲೆಗೆ ಒಂದು ಲಕ್ಷ ರೂ. ಒದಗಿಸಿದರೂ ಉಪಯೋಗವಾಗುತ್ತದೆ. ಈ ಬಗ್ಗೆ ಪರಿಶೀಲಿಸಬೆಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಜಿಪಂ ಸಿಇಒ ಉಕೇಶ್ ಕುಮಾರ್ ವಾತನಾಡಿ, ಕೇಂದ್ರದಿಂದ ಹನಿ ನೀರಾವರಿ ಪದ್ಧತಿ ಅಳವಡಿಕೆಗೆ ಶೇ.45 ಸಹಾಯಧನ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ ರೇಷ್ಮೆಗೂಡು ಹೆಚ್ಚು ಬೆಳೆಯುತ್ತಿದ್ದು ಟೆಕ್ಸ್‌ಟೈಲ್ ಪಾರ್ಕ್ ನಿರ್ವಾಣಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು. ಅಧಿಕಾರಿಗಳು ಅಧಿಕಾರವನ್ನು ಸಾರ್ವಜನಿಕರಿಗೆ ಅನುಕೂಲವಾಗುವಂತೆ ಬಳಕೆ ಮಾಡಬೇಕು ಎಂದರು. ಜಿಲ್ಲಾಧಿಕಾರಿ ವೆಂಕಟ್ ರಾಜಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ. ದೇವರಾಜ್, ಜಿಪಂ ಉಪಕಾರ್ಯದರ್ಶಿ ಸಂಜೀವಪ್ಪ, ದಿಶಾ ಕಮಿಟಿ ಸದಸ್ಯರಾದ ದ್ರಾಕ್ಷಾಯಣಿ, ಸೂರ್ಯನಾರಾಯಣರಾವ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net