ಕೋಲಾರ-ಚಿಕ್ಕಬಳ್ಳಾಪುರ ಹಾಲು ಒಕ್ಕೂಟ ವಿಭಜನೆಗೆ ರೈತ ಸಂಘ ವಿರೋಧ

9-klr-12
Published on

ಕೋಲಾರ: ಕೋಲಾರ-ಚಿಕ್ಕಬಳ್ಳಾಪುರ ಹಾಲು ಒಕ್ಕೂಟವನ್ನು ವಿಭಜನೆ ಮಾಡುವ ಆದೇಶ ವಾಪಸ್ ಪಡೆಯಬೇಕು ಮತ್ತು 130 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಮೆಗಾ ಡೇರಿಗೆ ಸಂಬಂಧಿಸಿದ ಟೆಂಡರ್ ಪ್ರಕ್ರಿಯೆಯನ್ನು ರದ್ದು ಮಾಡಿರುವ ಆದೇಶ ಹಿಂದಕ್ಕೆ ಪಡೆಯಬೇಕೆಂದು ರೈತ ಸಂಘದಿಂದ ಸೋಮವಾರ ನಗರದ ಮೆಕ್ಕೆ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.

ಉಪಾಧ್ಯಕ್ಷ ಕೆ.ನಾರಾಯಣಗೌಡ ಮಾತನಾಡಿ, ಅವಿಭಾಜಿತ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಯ ಹಾಲು ಉತ್ಪಾದಕರ ಸಲುವಾಗಿ ನಿರ್ಮಿಸಲಾಗಿರುವ ಕೋಲಾರ ಡೇರಿಗೆ ಪ್ರಸ್ತುತ 4.50 ಲಕ್ಷ ಲೀಟರ್ ಹಾಗೂ ಚಿಕ್ಕಬಳ್ಳಾಪುರದಿಂದ 3.25 ಲಕ್ಷ ಲೀಟರ್ ಹಾಲು ಸರಬರಾಜು ಆಗುತ್ತಿದೆ. ಹೊಸದಾಗಿ ಮೆಗಾ ಡೇರಿ ನಿರ್ಮಿಸಿ 10 ಲಕ್ಷ ಲೀಟರ್ ಹಾಲನ್ನು ಮಾರುಕಟ್ಟೆಗೆ ಒದಗಿಸಲು ಚಿಂತನೆ ನಡೆದಿದೆ.

ಆದರೆ ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಸುಧಾಕರ್ ವೈಯಕ್ತಿಕ ಕಾರಣಗಳಿಂದ ಅಡ್ಡಿಪಡಿಸುತ್ತಿರುವುದು ರೈತರಿಗೆ ಮಾಡಿದ ದ್ರೋಹವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಹೈನೋದ್ಯಮಕ್ಕೆ ಜೀವ ತುಂಬಿದ ಕೇಂದ್ರ ಮಾಜಿ ಸಚಿವ ಎಂ.ವಿ.ಕೃಷ್ಣಪ್ಪ ಅವರ ಹೆಸರು ಉಳಿಸುವ ಸಲುವಾಗಿ ಮೆಗಾ ಡೇರಿಗೆ ಅವರ ಹೆಸರಿಡಲು ನಿರ್ಧರಿಸಲಾಗಿದೆ, ಸರ್ಕಾರದ ಮಟ್ಟದಲ್ಲಿ ಅನುಮೋದನೆ ಸಿಕ್ಕಿದೆ, ಎನ್‌ಡಿಡಿಬಿಯಿಂದ ಸಾಲ ಸಹ ಸಿಗಲಿದೆ. ಈ ನಡುವೆ ಆಡಳಿತ ಮಂಡಳಿ ಹಾಗೂ ಕೋಲಾರ ಜಿಲ್ಲೆಯ ಜನಪ್ರತಿನಿಧಿಗಳ ಗಮನಕ್ಕೆ ತರದೆ ಟೆಂಡರ್‌ಗೆ ತಡೆಯಾಜ್ಞೆ ಮಾಡಿಸಿರುವುದು ಸರಿಯಲ್ಲ. ಈ ವಿಚಾರದಲ್ಲಿ ನಮ್ಮ ಜಿಲ್ಲೆಯ ಸಂಸದರು, ಶಾಸಕರು ಬೀದಿಗಿಳಿದು ಟೆಂಡರ್ ಪ್ರಕ್ರಿಯೆ ಆರಂಭಕ್ಕೆ ಹೋರಾಟ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.

ಜಿಲ್ಲಾಧ್ಯಕ್ಷ ಮರಗಲ್‌ಶ್ರೀನಿವಾಸ್, ಜಿಲ್ಲಾಧ್ಯಕ್ಷೆ ಎ.ನಳಿನಿ, ಜಿಲ್ಲಾ ಗೌರವಾಧ್ಯಕ್ಷ ಮಂಗಸಂದ್ರ ತಿಮ್ಮಣ್ಣ, ಮುಖಂಡರಾದ ಪಿ.ಮುನಿಯಪ್ಪ, ನಾಗೇಶ್, ವೆಂಕಟೇಶಪ್ಪ, ವಕ್ಕಲೇರಿ ಹನುಮಯ್ಯ, ಸಹದೇವಣ್ಣ, ಮೀಸೆವೆಂಕಟೇಶಪ್ಪ, ಭಕ್ತನ್, ಸುಪ್ರಿಂಚಲ, ವಡ್ಡಹಳ್ಳಿ ಮಂಜುನಾಥ ಮುಂತಾದವರು ಹಾಜರಿದ್ದರು. ಶಿರಸ್ತೇದಾರ್ ಕೊಂಡಪ್ಪ ಮನವಿ ಸ್ವೀಕರಿಸಿ, ಸರ್ಕಾರಕ್ಕೆ ಕಳುಹಿಸುವ ಭರವಸೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net