

ಕೋಲಾರ: ಕರೊನಾ ಸಂಕಷ್ಟದ ನಡುವೆ ಬೆಳೆದ ಬೆಳೆಗೆ ಬೆಲೆ ಸಿಗದೆ ರೈತ ಕಣ್ಣೀರಿಡುತ್ತಿರುವ ಸಂದರ್ಭದಲ್ಲಿ ಭರವಸೆ ಬಿಟ್ಟು ಸೂಕ್ತ ಮಾರುಕಟ್ಟೆ ಹಾಗೂ ರಫ್ತಿನ ಉಸ್ತುವಾರಿಗೆ ಓರ್ವ ದಕ್ಷ ಹಿರಿಯ ಐಎಎಸ್ ಅಧಿಕಾರಿ ನೇಮಿಸಿ ಅನ್ನದಾತನ ನೆರವಿಗೆ ಬರಬೇಕು ಎಂದು ಶಾಸಕ ಕೆ.ಶ್ರೀನಿವಾಸಗೌಡ ಸರ್ಕಾರಕ್ಕೆ ಆಗ್ರಹಿಸಿದರು.
ಮನ್ವಂತರ ಜನಸೇವಾ ಟ್ರಸ್ಟ್ ಆಶ್ರಯದಲ್ಲಿ ಟ್ರಸ್ಟ್ ಅಧ್ಯಕ್ಷರೂ ಆಗಿರುವ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ರೈತರಿಂದ ನೇರವಾಗಿ ಖರೀದಿಸಿದ 15 ಟನ್‌ಗೂ ಅಧಿಕ ತರಕಾರಿಗಳನ್ನು ಖಾದ್ರಿಪುರ ವ್ಯಾಪ್ತಿಯ ಸಾವಿರಾರು ಕುಟುಂಬಗಳಿಗೆ ಭಾನುವಾರ ವಿತರಿಸಿ ಮಾತನಾಡಿ, ಲಾಕ್‌ಡೌನ್‌ನಿಂದ ತರಕಾರಿ ಮಾರಾಟವಾಗುತ್ತಿಲ್ಲ. ಕೆಲವೆಡೆ ತೋಟದ ಗಿಡಗಳಲ್ಲೇ ಕೊಳೆಯುತ್ತಿದೆ. ಕೆಲವು ರೈತರು ಮಾರುಕಟ್ಟೆಗೆ ತಂದು ಸಾಗಾಣಿಕೆಯ ವೆಚ್ಚವೂ ಸಿಗದೆ ರಸ್ತೆಬದಿ ಸುರಿದು ಹೋಗುತ್ತಿದ್ದಾರೆ. ಸರ್ಕಾರ ಪ್ಯಾಕೇಜ್ ರೈತರ ಕಣ್ಣೀರು ಒರೆಸಲು ಸಾಧ್ಯವಿಲ್ಲ. ಯಾವ ಯಾವ ತರಕಾರಿ ಯಾವ ರಾಜ್ಯ, ದೇಶಕ್ಕೆ ಅಗತ್ಯವಿದೆ ಎಂಬುದನ್ನು ಅರಿತು ಅಲ್ಲಿಗೆ ಸಾಗಾಣಿಕೆ, ರಫ್ತು ಮಾಡುವ ಪ್ರಯತ್ನ ಮಾಡಬೇಕು ಎಂದು ಸಲಹೆ ನೀಡಿದರು.
ಮನ್ವಂತರ ಟ್ರಸ್ಟ್ ಅಧ್ಯಕ್ಷ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಮಾತನಾಡಿ, ಅನ್ನದಾತ ಕಣ್ಣೀರು ಹಾಕಿದರೆ ಸಮಾಜ, ದೇಶಕ್ಕೆ ಕಂಟಕ. ರೈತರು ಆತ್ಮಸ್ಥೈರ್ಯ ಕಳೆದುಕೊಳ್ಳುವ ಮುನ್ನ ಅವರಿಗೆ ನೆರವಾಗಬೇಕು. ಲಾಕ್‌ಡೌನ್ ಆರಂಭದಿಂದಲೂ ತಮ್ಮ ಕೈಲಾದಷ್ಟು ರೈತರ ನೆರವಿಗೆ ಧಾವಿಸುತ್ತಿದ್ದೇನೆ ತಿಳಿಸಿದರು.
ಅನ್ನ ನೀಡುವವನೇ ಅನ್ನಕ್ಕಾಗಿ ಪರಿತಪಿಸುವ ಪರಿಸ್ಥಿತಿ ಬಂದರೆ ಸಹಿಸಲಾಗದು. ಸರ್ಕಾರ ಕೂಡಲೆ ಬೆಳೆಗಳಿಗೆ ಮಾರುಕಟ್ಟೆ ಒದಗಿಸುವ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಒತ್ತಾಯಿಸಿದರು.
ಮನ್ವಂತರ ಜನಸೇವಾ ಟ್ರಸ್ಟ್ ಸಂಸ್ಥಾಪಕ ಕಾರ್ಯದರ್ಶಿ ಪಾ.ಶ್ರೀ.ಅನಂತರಾಮ್ ಮಾತನಾಡಿ, ಲಾಕ್‌ಡೌನ್ ಮುಗಿಯುವವರೆಗೂ ಟ್ರಸ್ಟ್ ಸಾಮಾಜಿಕ ಕಾರ್ಯ ಮುಂದುವರಿಯಲಿದೆ. ಬಡವರೇ ಹೆಚ್ಚಿರುವ ಪ್ರದೇಶಗಳನ್ನು ಗುರುತಿಸಿ ರೈತರ ತೋಟದಿಂದ ನೇರವಾಗಿ ಖರೀದಿಸಿದ ತರಕಾರಿಯನ್ನು ವಿತರಿಸಲಾಗುವುದು ಎಂದರು.
ಖಾದ್ರಿಪುರ, ಕಾರಂಜಿಕಟ್ಟೆ ಮತ್ತಿತರ ಬಡಾವಣೆಗಳ ಕುಟುಂಬಗಳಿಗೆ ಟೊಮ್ಯಾಟೊ, ಆಲೂಗಡ್ಡೆ, ಪಡವಲಕಾಯಿ, ಸೊರೆಕಾಯಿ, ಎಲೆಕೋಸು ಮತ್ತಿತರ ತರಕಾರಿ ವಿತರಿಸಲಾಯಿತು.
ಡಿಸಿಸಿ ಬ್ಯಾಂಕ್ ನಿರ್ದೇಶಕ ನಾಗನಾಳ ಸೋಮಣ್ಣ, ಸಹಕಾರಿ ಯೂನಿಯನ್ ನಿರ್ದೇಶಕಿ ಅರುಣಮ್ಮ, ಅಣ್ಣಿಹಳ್ಳಿ ಎಸ್‌ಎಫ್‌ಸಿಎಸ್ ಅಧ್ಯಕ್ಷ ನಾಗರಾಜ್, ಭಾರತ ಸೇವಾದಳ ಅಧ್ಯಕ್ಷ ಕೆ.ಎಸ್.ಗಣೇಶ್, ರೋಟರಿ ಸೆಂಟ್ರಲ್ ಅಧ್ಯಕ್ಷ ಸುಧಾಕರ್, ಗ್ರಾಪಂ ಸದಸ್ಯರಾದ ಎಲ್.ನಿರಂಜನ್, ಎಂ.ರಾಜೇಶ್, ಕುಡಾ ಸದಸ್ಯ ಸತ್ಯನಾರಾಯಣರಾವ್, ಮನ್ವಂತರ ಜನ ಸೇವಾ ಸಂಸ್ಥೆಯ ಬಾಲನ್ ಇತರರು ತರಕಾರಿ ವಿತರಣೆಯಲ್ಲಿ ಕಾರ್ಯನಿರ್ವಹಿಸಿದರು.