69 ವಲಸಿಗರು ಮರಳಿ ಗೂಡಿಗೆ

30-klr-1
Published on

ಕೋಲಾರ: ಕೂಲಿ ಕೆಲಸಕ್ಕಾಗಿ ಬಂದು ಲಾಕ್‌ಡೌನ್ ಆಗಿದ್ದ ಕಲಬುರಗಿ ಜಿಲ್ಲೆಯ 68 ಕಾರ್ಮಿಕರನ್ನು ತಾಲೂಕು ಆಡಳಿತ ಗುರುವಾರ ತವರಿಗೆ ಬೀಳ್ಕೊಟ್ಟಿತು.

ಕಳೆದ ವರ್ಷ ಸೇಡಂ ತಾಲೂಕಿನ 19, ಚಿಂಚೋಳಿಯ 49 ಕೂಲಿ ಕಾರ್ಮಿಕರನ್ನು ಖಾಸಗಿ ವ್ಯಕ್ತಿಯೊಬ್ಬರು ಕರೆಸಿಕೊಂಡಿದ್ದರು. ಇವರೆಲ್ಲರಿಗೂ ನಗರದ ಕಠಾರಿಪಾಳ್ಯದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಂಭಾಗದ ಎಲೆ ಛತ್ರದ ಜಾಗದಲ್ಲಿ ಉಳಿದುಕೊಳ್ಳಲು ಅವಕಾಶ ಮಾಡಿಕೊಟ್ಟಿದ್ದರಿಂದ ಟೆಂಟ್ ನಿರ್ಮಿಸಿಕೊಂಡು ಬದುಕುತ್ತಿದ್ದರು. ಎಲ್ಲ ಕಾರ್ಮಿಕರಿಗೆ ಜಿಲ್ಲಾಡಳಿತ ನೆರವು ಕಲ್ಪಿಸಿತ್ತು, ದಾನಿಗಳು ಪ್ರತಿನಿತ್ಯ ಊಟ, ತರಕಾರಿ ಜತೆಗೆ ದಿನಸಿ ಕಿಟ್ ನೀಡುತ್ತಿದ್ದರು.

ಬಸ್ ವ್ಯವಸ್ಥೆ: ವಲಸಿಗರನ್ನು ಅವರವರ ಊರಿಗೆ ಕಳುಹಿಸಲು ಸರ್ಕಾರ ಆಯಾ ಜಿಲ್ಲಾಡಳಿತಕ್ಕೆ ಅನುಮತಿ ನೀಡಿತ್ತು. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಸಿ.ಸತ್ಯಭಾಮಾ ಸೂಚನೆ ಮೇರೆಗೆ ತಹಸೀಲ್ದಾರ್ ಶೋಭಿತಾ, ಸೇಡಂ ಮತ್ತು ಚಿಂಚೋಳಿ ತಹಸೀಲ್ದಾರ್ ಗಮನಕ್ಕೆ ತಂದು ಮೂರು ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಕಳುಹಿಸಿಕೊಟ್ಟರು. ತೆರಳುವ ಮುನ್ನ ಆರೋಗ್ಯ ತಪಾಸಣೆ ಮಾಡಲಾಯಿತು. ಅಧಿಕಾರಿಗಳು ಹಾಗೂ ಸಂಘ-ಸಂಸ್ಥೆಯವರಿಗೆ ಕೃತಜ್ಞತೆ ಸಲ್ಲಿಸಿದರು.

ವಲಸಿಗರು ಆಯಾ ತಾಲೂಕಿಗೆ ತಲುಪಿದ ಮೇಲೆ ಸಂಬಂಧಪಟ್ಟ ತಹಸೀಲ್ದಾರ್ ಅವರನ್ನು ಭೇಟಿಯಾಗಿ ಹಾಜರಾತಿ ದೃಢಪಡಿಸಬೇಕು. ಅಲ್ಲೂ ಆರೋಗ್ಯ ತಪಾಸಣೆ ಮಾಡಲಾಗುತ್ತದೆ, ಲಾಕ್‌ಡೌನ್ ತೆರವುಗೊಂಡ ನಂತರ ಮತ್ತೆ ಕೋಲಾರಕ್ಕೆ ಬರಲು ಇಚ್ಛಿಸಿದರೆ ಸರ್ಕಾರದ ಮಾರ್ಗ ಸೂಚಿಯನ್ವಯ ಅವಕಾಶ ಕಲ್ಪಿಸಲಾಗುತ್ತದೆ. ಶೋಭಿತಾ, ತಹಸೀಲ್ದಾರ್, ಕೋಲಾರ ಲಾಕ್‌ಡೌನ್‌ನಿಂದ ನಮ್ಮೂರಿಗೆ ಹೋಗಲು ಸಾಧ್ಯವಾಗಿರಲಿಲ್ಲ, ಇದರಿಂದ ಸಂಬಂಧಿಕರು ಭಯಭೀತರಾಗಿದ್ದರು. ನಾವು ವಾಪಸ್ ಹೋಗುತ್ತಿರುವುದರಿಂದ ಖುಷಿಪಟ್ಟಿದ್ದಾರೆ. ಅಧಿಕಾರಿಗಳು, ಸಂಘ-ಸಂಸ್ಥೆಯವರು ನಮ್ಮನ್ನು ಚೆನ್ನಾಗಿ ನೋಡಿಕೊಂಡಿದ್ದಾರೆ. ಅವಶ್ಯಕತೆಯಿದ್ದರೆ ಮತ್ತೆ ಕೋಲಾರಕ್ಕೆ ಬರುತ್ತೇವೆ. ಭೀಮಪ್ಪ, ಚಿಂಚೋಳಿ, ಕಲಬುರಗಿ ಜಿಲ್ಲೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net