ಕೋಲಾರ: ಕೈ ಕೈ ಮಿಲಾಯಿಸಿದ ಕೈ ಕಾರ್ಯಕರ್ತರು; ಎರಡು ಬಣಗಳ ನಡುವೆ ಮಾತಿನ ಚಕಮಕಿ

ambriosh
Published on

ವಿಜಯವಾಣಿ ಸುದ್ದಿಜಾಲ ಕೋಲಾರ

ಜಿಲ್ಲಾ ಕಾಂಗ್ರೆಸ್​ನ ಗುಂಪುಗಾರಿಕೆ ಮತ್ತೆ ಸ್ಪೋಟಗೊಂಡಿದ್ದು, ಬೀದಿ ರಂಪಾಟಕ್ಕೆ ಶನಿವಾರ ಸಾಕ್ಷಿಯಾಯಿತು.

ನಗರ ಹೊರವಲಯದ ಖಾಸಗಿ ಕಲ್ಯಾಣ ಮಂಟಪದಲ್ಲಿ ಶನಿವಾರ ಕಾಂಗ್ರೆಸ್​ನ ವಿವಿಧ ಘಟಕಗಳ ಪದಾಧಿಕಾರಿಗಳ ಸಭೆ ಆಯೋಜಿಸಲಾಗಿತ್ತು. ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಸಾದ್ ಬಾಬು ಸಭೆ ಪ್ರಾರಂಭವಾಗುವ ಮುನ್ನವೇ ಸಭೆಯನ್ನು ನಗರದಿಂದ ಹೊರಗೆ ಆಯೋಜಿಸಲಾಗಿದೆ. ಇಲ್ಲಿಗೆ ಕಾರ್ಯಕರ್ತರು ಬರುವುದು ಕಷ್ಟಸಾಧ್ಯ, ಕನಿಷ್ಠಪಕ್ಷ ಒಂದು ಬ್ಯಾನರ್ ಸಹ ಕಟ್ಟಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು. ವೇದಿಕೆ ಮೇಲಿದ್ದ ಹೂವಿನ ಕುಂಡಗಳನ್ನು ಕೆಳಗೆ ತಳ್ಳಿ, ನೀರಿನ ಬಾಟಲ್ ಎಸೆದು ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಮಧ್ಯೆ ಪ್ರವೇಶಿಸಿದ ಶಾಸಕ ಕೆ.ವೈ.ನಂಜೇಗೌಡ ಹಾಗೂ ಜಿಲ್ಲಾ ಉಸ್ತುವಾರಿ ನಾರಾಯಣಸ್ವಾಮಿ ಅವರು ಪ್ರಸಾದ್ ಬಾಬು ಅವರನ್ನು ಸಮಾಧಾನಪಡಿಸಲು ಯತ್ನಿಸಿದರು. ಆದರೆ, ಶಾಸಕ ಹಾಗೂ ಉಸ್ತುವಾರಿ ಮಾತು ಕೇಳದ ಪ್ರಸಾದ್ ಬಾಬು, ಮತ್ತೊಂದು ಗುಂಪಿನ ಕಾರ್ಯಕರ್ತರ ನಡುವೆ ವಾಗ್ವಾದಕ್ಕೆ ಇಳಿದರು. ಈ ವೇಳೆ ಮಾತಿನ ಚಕಮಕಿ ನಡೆದು, ಕೈಕೈ ಮಿಲಾಯಿಸಿಕೊಂಡರು. ಈ ವೇಳೆ, ಮಾಜಿ ಸ್ಪೀಕರ್ ರಮೇಶ್ ಕುಮಾರ್ ಬೆಂಬಲಿಗರು ವೇದಿಕೆ ಮೇಲೆ ಹತ್ತಿ, ಪಕ್ಷ ಕಟ್ಟಿದವರಿಗೆ ಸಭೆಗೆ ಆಹ್ವಾನ ನೀಡಿಲ್ಲ. ಏಕೆ ತಾರತಮ್ಯ ಮಾಡಿದ್ದೀರಾ ಎಂದು ಪ್ರಶ್ನಿಸಿದರು. ವೇದಿಕೆ ಮೇಲಿದ್ದ ಕೆಲ ಮುಖಂಡರು ಕಾರ್ಯಕರ್ತರನ್ನು ಸಮಾಧಾನಪಡಿಸಲು ಪ್ರಯತ್ನಿಸಿದರೂ ಪರಿಸ್ಥಿತಿ ತಿಳಿಯಾಗಲಿಲ್ಲ.

ಮಾಹಿತಿ ಇಲ್ಲ: ಮಾಜಿ ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್, ಶ್ರೀನಿವಾಸಪುರ, ಮುಳಬಾಗಿಲು ಹಾಗೂ ಕೋಲಾರದಲ್ಲಿರುವ ವಿವಿಧ ಘಟಕಗಳ ಪದಾಧಿಕಾರಿಗಳಿಗೂ ಸಭೆಯ ಮಾಹಿತಿ ನೀಡಿಲ್ಲ. ಇಲ್ಲಿ ತಾರತಮ್ಯ ನಡೆದಿದೆ ಎಂದು ಆರೋಪಿಸಿ ಕೆಲವರು ವೇದಿಕೆಗೆ ಏರಿದರು. ಆಗ ಎರಡೂ ಗುಂಪುಗಳ ಕಾರ್ಯಕರ್ತರ ನಡುವೆ ನೂಕುನುಗ್ಗಲಾಯಿತು. ಇದು ವೇದಿಕೆಯ ಮೇಲಿದ್ದ ಮುಖಂಡರನ್ನು ಮುಜುಗರಕ್ಕೀಡುಮಾಡಿತು. ಕಾಂಗ್ರೆಸ್ ಜಿಲ್ಲಾ ಉಸ್ತುವಾರಿ ಹಾಗೂ ಮಾಜಿ ಎಂಎಲ್ಸಿ ಎಂ.ನಾರಾಯಣಸ್ವಾಮಿ ಅಧ್ಯಕ್ಷತೆಯಲ್ಲಿ ಕರೆಯಲಾಗಿದ್ದ ಸಭೆಗೆ ಸಿಎಂ ರಾಜಕೀಯ ಕಾರ್ಯದರ್ಶಿ ನಜೀರ್ ಅಹ್ಮದ್, ಶಾಸಕರಾದ ಕೆ.ವೈ.ನಂಜೇಗೌಡ, ಕೊತ್ತೂರು ಮಂಜುನಾಥ್, ಪರಿಷತ್ ಸದಸ್ಯ ಅನಿಲ್ ಕುಮಾರ್ ಹಾಜರಿದ್ದರು. ಇವರ ಸಮ್ಮುಖದಲ್ಲೇ ಗಲಾಟೆಯಾಗಿದ್ದು, ನಜೀರ್ ಅಹ್ಮದ್ ಅವರು ಎರಡೂ ಗುಂಪಿನ ಕಾರ್ಯಕರ್ತರನ್ನು ಸಮಾಧಾನಪಡಿಸಿ, ಸಭೆಯನ್ನು ಮುಂದುವರಿಸಿದರು.

ವೇದಿಕೆ ಮೇಲೆಯೇ ಜಗಳ

ರಮೇಶ್​ ಕುಮಾರ್ ಬೆಂಬಲಿಗರು ವೇದಿಕೆ ಮೇಲಿದ್ದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಲಕ್ಷ್ಮೀನಾರಾಯಣ, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಸಾದ್ ಬಾಬು ಅವರನ್ನು ಕೆಳಗೆ ತಳ್ಳಿ ಕಾರ್ಯಕ್ರಮದಿಂದ ಹೊರ ಹೋಗುವಂತೆ ತಾಕೀತು ಮಾಡಿದರು. ಆಗ ಮತ್ತೆ ಮಾತಿನ ಚಕಮಕಿ ನಡೆಯಿತು. ಇದ್ದಕ್ಕಿದ್ದಂತೆ ಲಕ್ಷ್ಮೀನಾರಾಯಣ, ಪ್ರಸಾದ್ ಬಾಬು ಅವರನ್ನು ಬಲವಂತವಾಗಿ ಕೆಳಗೆ ತಳ್ಳಿದರು. ಆಗ ಲಕ್ಷ್ಮೀನಾರಾಯಣ ಅವರು ಕಾರ್ಯಕ್ರಮದಿಂದ ಸ್ವಲ್ಪ ಹೊತ್ತು ಹೊರನಡೆದಾದರೂ ಪ್ರಸಾದ್ ಬಾಬು ಎದುರು ಗುಂಪಿನವರ ಮೇಲೆ ಪ್ರತಿರೋಧ ವ್ಯಕ್ತಪಡಿಸಿದರು. ಪಟ್ಟು ಬಿಡದ ಇನ್ನೊಂದು ಬಣ ಪ್ರಸಾದ್​ಬಾಬು ಅವರನ್ನೂ ವೇದಿಕೆಯಿಂದ ಕೆಳ ತಳ್ಳಿತು.

ಅವಕಾಶ ಸಿಗುವತನಕ ತಾಳ್ಮೆಯಿಂದಿರಿ

ಸಿಎಂ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್ ಮಾತನಾಡಿ, ಸಭೆಯಲ್ಲಿ ಉಂಟಾದ ಗೊಂದಲವು ರಾಜ್ಯಮಟ್ಟದಲ್ಲಿ ಮಾತನಾಡಿಕೊಳ್ಳುವಂತಾಯಿತು, ಸಣ್ಣಪುಟ್ಟ ವಿಷಯಗಳನ್ನು ಬಹಿರಂಗ ಸಭೆಗಳಲ್ಲಿ ಪ್ರಸ್ತಾಪ ಮಾಡದೆ ಮುಖಂಡರ ಬಳಿ ಮಾತನಾಡಿ, ಬಗೆಹರಿಸಿ ಕೊಳ್ಳಬೇಕು ಎಂದ ಅವರು, ಪಕ್ಷಕ್ಕಾಗಿ ದುಡಿದವರನ್ನು ಗುರುತಿಸಿ ಸೂಕ್ತ ಸ್ಥಾನಮಾನ ಕಲ್ಪಿಸಲಾಗಿದೆ. ಜಿಲ್ಲೆಯ ಶಾಸಕರಿಗೂ ಅವಕಾಶಗಳು ಸಿಕ್ಕಿದ್ದು, ಕಾರ್ಯಕರ್ತರನ್ನು ಗುರುತಿಸಿ ಜವಾಬ್ದಾರಿ ನೀಡಲಾಗುತ್ತದೆ. ಅಲ್ಲಿಯತನಕ ತಾಳ್ಮೆಯಿಂದ ಇರಬೇಕು ಎಂದು ಕಿವಿಮಾತು ಹೇಳಿದರು. ಸಿಎಂ ಸಿದ್ದರಾಮಯ್ಯ ಅವರ ಕಳೆದ 45 ವರ್ಷಗಳ ರಾಜಕೀಯ ಇತಿಹಾಸದಲ್ಲಿ ಯಾವುದೇ ಹಗರಣಗಳಲ್ಲಿ ಭಾಗಿಯಾಗಿರುವ ಉದಾಹರಣೆ ಇಲ್ಲ. ಕಾಂಗ್ರೆಸ್ ಅಧಿಕಾರಕ್ಕೆ ಬಂದಿರುವುದನ್ನು ಸಹಿಸಿಕೊಳ್ಳಲಾಗದ ಬಿಜೆಪಿ ಮತ್ತು ಜೆಡಿಎಸ್ ಕುತಂತ್ರದಿಂದ ಮುಡಾ ಪ್ರಕರಣ ಹುಟ್ಟು ಹಾಕಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವೈಯಕ್ತಿಕ ಹಿತಾಸಕ್ತಿಗೆ ಪಕ್ಷಕ್ಕೆ ದ್ರೋಹ ಎಸಗದಿರಿ

ಕೋಲಾರ: ಅನೇಕ ಮಹನೀಯರ ತ್ಯಾಗ ಬಲಿದಾನದಿಂದ ಕಟ್ಟಿರುವ ಪಕ್ಷವು ದೇವಾಲಯವಿದ್ದಂತೆ. ಅದು ತಾಯಿಗೆ ಸಮನಾದದ್ದು. ದ್ರೋಹಬಗೆಯಬಾರದು. ವೈಯಕ್ತಿಕ ಕಾರಣ ಇದ್ದರೆ ಕೂತು ಬಗೆಹರಿಸಿಕೊಳ್ಳಬೇಕು ಎಂದು ಕಾಂಗ್ರೆಸ್ ಜಿಲ್ಲಾ ಉಸ್ತುವಾರಿ ಎಂ.ನಾರಾಯಣಸ್ವಾಮಿ ಕೈ ಕಾರ್ಯಕರ್ತರಿಗೆ ಸೂಚಿಸಿದರು.

ನಗರ ಹೊರವಲಯದ ಖಾಸಗಿ ಕಲ್ಯಾಣ ಮಂಟದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕಾಂಗ್ರೆಸ್ ವಿವಿಧ ಘಟಕಗಳ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿ, ರಾಜ್ಯದಲ್ಲಿ ಪಕ್ಷವು ಬಲಿಷ್ಠವಾಗಿದೆ. ಜಿಲ್ಲೆಯ 6 ವಿಧಾನಸಭಾ ಕ್ಷೇತ್ರಗಳ ಪೈಕಿ 4 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರನ್ನು ಆಯ್ಕೆ ಮಾಡಿದ್ದೀರಿ. 6 ವಿಧಾನ ಸಭೆಯ ನಗರಸಭೆ, ಪುರಸಭೆಗಳು ನಮ್ಮ ಅಧಿಕಾರದಲ್ಲಿದೆ. ಹೀಗಿರುವಾಗಿ ರಂಪಾಟ ಬೇಕಿತ್ತೆ ಎಂದು ಪ್ರಶ್ನಿಸಿದರು.

ಪಕ್ಷದಲ್ಲಿ ಪ್ರಮುಖವಾಗಿ ಐದು ಘಟಕಗಳು ಇದ್ದು, ಸಮರ್ಪಕವಾಗಿ ಪದಾಧಿಕಾರಿಗಳ ಆಯ್ಕೆಯಾಗಿಲ್ಲ, ಇದು ಪಕ್ಷದ ಸಂಘಟನೆಯ ಮೇಲೂ ಪರಿಣಾಮ ಬೀರುತ್ತದೆ. ಆಯಾ ವ್ಯಾಪ್ತಿಯ ಶಾಸಕರೊಂದಿಗೆ ರ್ಚಚಿಸಿ ಪದಾಧಿಕಾರಿಗಳನ್ನು ನೇಮಕ ಮಾಡಬೇಕು. ಪಕ್ಷಕ್ಕಾಗಿ ದುಡಿಯುತ್ತಿರುವ ಪ್ರಾಮಾಣಿಕ, ನಿಷ್ಠಾವಂತವರನ್ನು ಗುರುತಿಸಿ ಸ್ಥಾನಮಾನ ನೀಡಬೇಕು ಎಂದು ನಿರ್ದೇಶಿಸಿದರು.

ಕಾರ್ಯಕರ್ತರು, ಮುಖಂಡರ ನಡುವೆ ಏನೇ ಭಿನ್ನಾಭಿಪ್ರಾಯಗಳಿದ್ದರೂ ನನಗೆ ಪ್ರತ್ಯೇಕವಾಗಿ ತಿಳಿಸಿದರೆ ಬಗೆಹರಿಸಲು ಪ್ರಯತ್ನಿಸುತ್ತೇನೆ. ಗಂಭೀರ ವಿಷಯಗಳಾದರೆ ಕೆಪಿಸಿಸಿ ಅಧ್ಯಕ್ಷರ ಗಮನಕ್ಕೆ ತಂದು ಬಗೆಹರಿಸುತ್ತೇವೆ. ಯಾವುದೇ ಕಾರಣಕ್ಕೂ ಬಹಿರಂಗ ಸ್ಥಳಗಳಲ್ಲಿ ಪ್ರಸ್ತಾಪಿಸುವ ಮೂಲಕ ಗೊಂದಲಕ್ಕೆ ಎಡೆ ಮಾಡಿ ಕೊಡಬೇಡಿ ಎಂದರು.

ಶಾಸಕ ಕೊತ್ತೂರು ಜಿ.ಮಂಜುನಾಥ್, ಎಂಎಲ್ಸಿ ಎಂ.ಎಲ್.ಅನಿಲ್ ಕುಮಾರ್, ಕಾಂಗ್ರೆಸ್ ಮುಖಂಡರಾದ ಗೌತಮ್ ರಾಜ್ಯಸಂಚಾಲಕಿ ವಸಂತ ಕವಿತಾ, ಜಿಲ್ಲಾಧ್ಯಕ್ಷ ಲಕ್ಷ್ಮೀನಾರಾಯಣ. ಜಿಲ್ಲಾ ಕಾರ್ಯಧ್ಯಕ್ಷ ಊರುಬಾಗಿಲು ಶ್ರೀನಿವಾಸ್, ಗ್ಯಾರಂಟಿ ಅನುಷ್ಠನಾ ಸಮಿತಿ ಅಧ್ಯಕ್ಷ ವೈ.ಶಿವಕುಮಾರ್, ಬ್ಲಾಕ್ ಅಧ್ಯಕ್ಷರಾದ ಪ್ರಸಾದ್ ಬಾಬು, ಉದಯಶಂಕರ್, ಎಸ್​ಸಿ ಘಟಕ ಅಧ್ಯಕ್ಷ ಜಯದೇವ, ಕುಡಾ ಅಧ್ಯಕ್ಷ ಮಹಮದ್ ಹನೀಫ್, ನಗರಸಭೆ ಅಧ್ಯಕ್ಷೆ ಲಕ್ಷ್ಮೀದೇವಮ್ಮ, ಉಪಾಧ್ಯಕ್ಷೆ ಸಂಗೀತಾ, ಕಾಂಗ್ರೆಸ್ ಜಿಲ್ಲಾ ಮಹಿಳಾ ಅಧ್ಯಕ್ಷೆ ರತ್ನಮ್ಮ ಹಾಜರಿದ್ದರು.

ಬಿಜೆಪಿಯವರು ಹಿಂದೆ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧ ಷಡ್ಯಂತರ ನಡೆಸಿದರು. ಆದರೆ ಅದು ವಿಫಲವಾಗಿತು. ಈಗ ಸಿದ್ದರಾಮಯ್ಯ ಅವರ ಮೇಲೆ ಪ್ರಯೋಗಿಸುತ್ತಿದ್ದಾರೆ. | ಕೆ.ವೈ.ನಂಜೇಗೌಡ ಶಾಸಕ, ಮಾಲೂರು ಕಾಂಗ್ರೆಸ್ ಅಧಿಕಾರದಲ್ಲಿ ಇರಲಿ ಬಿಡಲಿ ರಾಷ್ಟŠದಲ್ಲಿಯೇ ಒಂದು ಜವಾಬ್ದಾರಿಯುತ ಪಕ್ಷವಾಗಿದೆ. ಪಕ್ಷದ ಬೆಳವಣಿಗೆಯನ್ನು ಸಹಿಸದೆ ವಿಪಕ್ಷಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಮುಡಾ ಪ್ರಕರಣದ ಆಪಾಧನೆ ಮಾಡಿ ಮಸಿ ಬಳಿಯುವ ಕುತಂತ್ರ ಮಾಡುತ್ತಿವೆ. | ವಿ.ಆರ್.ಸುದರ್ಶನ್ , ವಿಧಾನಪರಿಷತ್ ಮಾಜಿ ಸಭಾಪತಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net