

ಕೋಲಾರ: ಸೊಸೈಟಿಗಳ ಗಣಕೀಕರಣ ಹಾಗೂ ಆಡಿಟ್ ಕೆಲಸ ಜುಲೈ ಒಳಗೆ ಪೂರ್ಣಗೊಳಿಸದಿದ್ದರೆ ಹೊಸ ಸಾಲ ನೀಡುವುದಿಲ್ಲ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ತಿಳಿಸಿದರು.
ನಗರದ ಜಿಲ್ಲಾ ಸಹಕಾರ ಯೂನಿಯನ್ ಸಭಾಗಂಣದಲ್ಲಿ ಶನಿವಾರ ಡಿಸಿಸಿ ಬ್ಯಾಂಕಿನ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಸಿಬ್ಬಂದಿ ವಿಳಂಬ ನೀತಿ ಹಾಗೂ ಉದಾಸೀನದಿಂದ ಸಾಲ ವಿತರಣೆಗೆ ಅಡ್ಡಿಯಾದರೆ ಸೊಸೈಟಿಗಳ ಸಿಬ್ಬಂದಿಯೇ ಹೊಣೆಯಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.
ಜುಲೈ ಒಳಗೆ ಎಲ್ಲ ಡೇರಿ ಸದಸ್ಯರ ವೈಯಕ್ತಿಕ ಖಾತೆಯನ್ನು ಡಿಸಿಸಿ ಬ್ಯಾಂಕಿನಲ್ಲಿ ತೆರೆಯುವ ಸಂಬಂಧ ಕೋಚಿಮುಲ್ ಆಡಳಿತ ಮಂಡಳಿಗೆ ಮನವಿ ಮಾಡಲಾಗಿದೆ. ಖಾತೆ ತೆರೆಯುವ ಡೇರಿ ಸಂಘದ ಸದಸ್ಯರಿಗೆ ಎಟಿಎಂ ಕಾರ್ಡ್ ವಿತರಿಸಬೇಕೆಂದು ಸೂಚಿಸಿದರು.
ಈ ಸಾಲಿನಲ್ಲಿ ಕೋಲಾರ ಶಾಖೆ 50 ಕೋಟಿ, ಕೆಜಿಎಫ್, ಮಾಲೂರು-50 ಕೋಟಿ, ಶ್ರೀನಿವಾಸಪುರ 25 ಕೋಟಿ, ಮುಳಬಾಗಿಲು 30 ಕೋಟಿ, ಬಂಗಾರಪೇಟೆ 25 ಕೋಟಿ, ಬಾಗೇಪಲ್ಲಿ 45 ಕೋಟಿ, ಶಿಢ್ಲಘಟ್ಟ 30 ಕೋಟಿ, ಗುಡಿಬಂಡೆ 15, ಚಿಕ್ಕಬಳ್ಳಾಪುರ ಶಾಖೆ 15 ಕೋಟಿ, ಗೌರಿಬಿದನೂರು 45 ಕೋಟಿ ರೂ. ಠೇವಣಿ ಸಂಗ್ರಹದ ಗುರಿ ಸಾಧನೆ ಮಾಡಲು ಆಯಾ ವ್ಯವಸ್ಥಾಪಕರು ಭರವಸೆ ನೀಡಿದರು.
ಬ್ಯಾಂಕ್ ನಿರ್ದೇಶಕ ಎಂ.ಎಲ್.ಅನಿಲ್ ಕುಮಾರ್ ಮಾತನಾಡಿ, ಬ್ಯಾಂಕಿಗೆ ಯಾರಪ್ಪನ ಮನೆಯಿಂದಲೂ ದುಡ್ಡು ತಂದು ಹಾಕಲು ಸಾಧ್ಯವಿಲ್ಲ, ನಮ್ಮ ಆಡಳಿತ ಮಂಡಳಿ ವಿರುದ್ಧ ಟೀಕೆ ಮಾಡುವಾಗ ಡಿಸಿಸಿ ಬ್ಯಾಂಕಿನ ಇತಿಹಾಸ ಅರಿತಿರಬೇಕು ಎಂದು ವಿರೋಧಿಗಳವಿಗೆ ಮಾತಿನಿಂದ ತಿವಿದರು.
ನಿರ್ದೇಶಕ ಯಲವಾರ ಸೊಣ್ಣೇಗೌಡ ಮಾತನಾಡಿ, ದಾಖಲೆಗಳ ನಿರ್ವಹಣೆ ಸರಿಯಾಗಿ ಮಾಡಿ, ನಿಮ್ಮ ವರ್ತನೆ ಬದಲಾಗಬೇಕು, ಜವಾಬ್ದಾರಿ ನಿರ್ವಹಣೆಯಲ್ಲಿ ವಿಫಲರಾದ ಸಿಬ್ಬಂದಿಯನ್ನು ಬೇರೆಕಡೆ ಹಾಕಿದರೆ ಬುದ್ಧಿ ಬರುತ್ತದೆ ಎಂದರು.
ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ರವಿ, ಎಜಿಎಂಗಳಾದ ಬೈರೇಗೌಡ, ಶಿವಕುಮಾರ್, ನಾಗೇಶ್, ಖಲೀಮುಲ್ಲಾ, ಚೌಡಪ್ಪ, ವ್ಯವಸ್ಥಾಪಕ ಹುಸೇನ್ ದೊಡ್ಡಮನಿ ಉಪಸ್ಥಿತರಿದ್ದರು.