

ಕೋಲಾರ: ಸಾಂವಿಧಾನಿಕ ಸಂಸ್ಥೆಗಳನ್ನು ದುರುಪಯೋಗ ಮಾಡಿಕೊಂಡು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ವಿರುದ್ಧ ದ್ವೇಷ ರಾಜಕಾರಣ ಮಾಡಲಾಗುತ್ತಿದೆ ಎಂದು ಆರೋಪಿಸಿ ಕೇಂದ್ರ ಸರ್ಕಾರದ ವಿರುದ್ಧ ಜಿಲ್ಲಾ ಕಾಂಗ್ರೆಸ್ ಶುಕ್ರವಾರ ಹಮ್ಮಿಕೊಂಡಿದ್ದ ಪ್ರತಿಭಟನೆ ಎರಡು ಗುಂಪುಗಳ ಶಕ್ತಿ ಪ್ರದರ್ಶನಕ್ಕೆ ವೇದಿಕೆಯಾಯಿತು.
ರಮೇಶ್ ಕುಮಾರ್ ಮತ್ತು ಕೆ.ಎಚ್.ಮುನಿಯಪ್ಪ ಬಣಗಳು ಮಹಾತ್ಮ ಗಾಂಧಿ ಪ್ರತಿಮೆ ಎದುರು ಪ್ರತ್ಯೇಕವಾಗಿ ನಡೆಸಿದ ಈ ಹೋರಾಟಕ್ಕೆ ಕಾಂಗ್ರೆಸ್ ವೀಕ್ಷಕರು ಮತ್ತು ಕಾರ್ಯಕರ್ತರು ಸಾಕ್ಷಿಯಾದರು.
ಕೆಪಿಸಿಸಿ ಜಿಲ್ಲಾ ಉಸ್ತುವಾರಿ ಎಂ.ನಾರಾಯಣಸ್ವಾಮಿ 2 ದಿನದ ಹಿಂದೆಯೇ ಗಾಂಧಿವನದ ಬಳಿ ಶುಕ್ರವಾರ ಬೆಳಗ್ಗೆ 10.30ಕ್ಕೆ ಪ್ರತಿಭಟನೆ ನಡೆಸುವುದಾಗಿ ಪ್ರಕಟಣೆಯಲ್ಲಿ ತಿಳಿಸಿದ್ದರು. ಮಾಜಿ ಸಚಿವ ಟಿ.ಬಿ.ಜಯಚಂದ್ರ, ಕೋಲಾರ, ಕೆಜಿಎಫ್ ಉಸ್ತುವಾರಿ ಎನ್.ಸಂಪಂಗಿ, ಬಂಗಾರಪೇಟೆ, ಮುಳಬಾಗಿಲು ಮತ್ತು ಶ್ರೀನಿವಾಸಪುರ ಉಸ್ತುವಾರಿ ಎಂಲ್ಸಿ ಅನಿಲ್ ಕುಮಾರ್ ಮತ್ತು ಜಿಲ್ಲೆಯ ಎಲ್ಲ ಶಾಸಕರು, ಪಕ್ಷದ ವಿವಿಧ ಘಟಕಗಳ ಪದಾಧಿಕಾರಿಗಳು, ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುತ್ತಿರುವುದಾಗಿ ಹೇಳಿದ್ದರು. ಇದನ್ನು ರಮೇಶ್ ಕುಮಾರ್ ಬಣದವರು ಮಾಧ್ಯಮಗಳಿಗೆ ತಲುಪಿಸಿದ್ದರು.
ರಾಷ್ಟ್ರಾದ್ಯಂತ ಪ್ರತಿಭಟನೆಗೆ ಕರೆ ನೀಡಿದ್ದ ಹಿನ್ನೆಲೆಯಲ್ಲಿ, ಕೆ.ಎಚ್.ಎಂ ಬಣದ ಕಿಸಾನ್ಖೇತ್ ಜಿಲ್ಲಾಧ್ಯಕ್ಷ ಊರುಬಾಗಿಲು ಶ್ರೀನಿವಾಸ್ ಮತ್ತಿತರರು ಗುರುವಾರ ಸುದ್ದಿಗೋಷ್ಠಿ ನಡೆಸಿ, ಅದೇ ಗಾಂಧಿ ವನದಲ್ಲಿ ಬೆಳಗ್ಗೆ 9.30ಕ್ಕೆ ಪ್ರತಿಭಟನೆ ನಡೆಸುವುದಾಗಿ ತಿಳಿಸಿದ್ದರು. ಇದೂ ಸಾಲದೆಂಬಂತೆ ಒಬಿಸಿ ಉಪಾಧ್ಯಕ್ಷ ಮಂಜುನಾಥ್ ಅದೇ ಗಾಂಧಿವನದಲ್ಲಿ ಬೆಳಗ್ಗೆ 10ಗಂಟೆಗೆ ಕಾಂಗ್ರೆಸ್ ಪ್ರತಿಭಟನೆ ಇದೆ ಎಂದು ಪ್ರಕಟಣೆ ನೀಡಿದ್ದರು. ಇದೆಲ್ಲದರ ಪರಿಣಾಮ ರಾಜ್ಯದ ನಾಯಕರು, ಜಿಲ್ಲೆಯ ಎಲ್ಲ ಮುಖಂಡರು, ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರಾದರೂ, ವೇದಿಕೆ ಮೇಲೆ ಕೆ.ಎಚ್.ಮುನಿಯಪ್ಪ ಮತ್ತು ತಂಡ, ವೇದಿಕೆ ಕೆಳಗೆ ರಸ್ತೆಯಲ್ಲಿ ರಮೇಶ್ ಕುಮಾರ್, ಶಾಸಕರು ಮತ್ತು ಕಾರ್ಯಕರ್ತರು ಪ್ರತ್ಯೇಕವಾಗಿ ಕುಳಿತು ಧರಣಿ ನಡೆಸಿದರು.
ಇನ್ನು ಪಕ್ಷದ ಅಧಿನಾಯಕಿ ಸೋನಿಯಾಗಾಂಧಿ ಪರ ಮತ್ತು ಬಿಜೆಪಿ ವಿರುದ್ಧ ದೆಹಲಿ ತಲುಪುವಂತೆ ಮೊಳಗಬೇಕಿದ್ದ ಘೋಷಣೆಗಳನ್ನು ಮುಖಂಡರ ಭಾಷಣಕ್ಕೆ ಅಡ್ಡಿಪಡಿಸುವಂತೆ ಕೂಗಲಾಯಿತು. ಇದೇ ವಿಚಾರಕ್ಕೆ ಒಂದು ಹಂತದಲ್ಲಿ ಎರಡೂ ಕಡೆಯ ಕಾರ್ಯಕರ್ತರು ಕೈಕೈ ಮಿಲಾಯಿಸುವ ಹಂತಕ್ಕೆ ಹೋಗಿದ್ದರು.
ಮೊದಲಿಗೆ ಬಂದು ಕೆ.ಎಚ್.ಎಂ ಬಣ ಧರಣಿ ಕುಳಿತಿದ್ದರಿಂದ ವೇದಿಕೆಗೆ ಆಗಮಿಸಿದ ಜಿಲ್ಲಾ ಉಸ್ತುವಾರಿ ಎಂ.ನಾರಾಯಣಸ್ವಾಮಿ, ಕೆ.ಎಚ್.ಮುನಿಯಪ್ಪ ಮತ್ತೊಮ್ಮೆ ಸಂಸದರಾಗಬೇಕು, ರಮೇಶ್ಕುಮಾರ್ ಸಚಿವರಾಗಬೇಕು ಎಂದು ಬಡಿದಾಡದೆ, ಬಿಜೆಪಿ ಸರ್ಕಾರ ಬಂದ ಮೆಲೆ ಜನರು ಎದುರಿಸುತ್ತಿರುವ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಹೋರಾಟ ನಡೆಸಿ ಎಂದು ಸಲಹೆ ನೀಡಿದರು. ಅವರು ಸ್ವಾಗತಿಸುವಾಗ ವೇದಿಕೆಯಲ್ಲಿದ್ದವರು, ರಸ್ತೆಯಲ್ಲಿ ಕುಳಿತಿದ್ದ ರಮೇಶ್ಕುಮಾರ್ ಬಣದವರನ್ನು ಸಹ ಸ್ವಾಗತಿಸಿದ್ದು ಗಮನಾರ್ಹವಾಗಿತ್ತು.
ಕೇಂದ್ರ ಮಾಜಿ ಸಚಿವ ಕೆ.ಎಚ್.ಮುನಿಯಪ್ಪ ಮಾತನಾಡಿ, ದೇಶಕ್ಕೆ ಸೋನಿಯಾ ಗಾಂಧಿಗಾಗಿ ಪ್ರಾಣ ಕೊಡ್ತೀವಿ. ಪ್ರಧಾನಿ ಮೋದಿ ಅವರು ಸೋನಿಯಾ, ರಾಹುಲ್ಗಾಂಧಿ ಅವರನ್ನು ಹಣಿಯುವುದು ಬಿಟ್ಟು ಸಂಕಷ್ಟದಲ್ಲಿರುವ ರೈತರ ಸಾಲ ಮನ್ನಾ ಮಾಡಲಿ ಎಂದು ಒತ್ತಾಯಿಸಿದರು. ಮುನಿಯಪ್ಪ ಭಾಷಣ ಮಾಡುವಾಗ ರಮೇಶ್ ಕುಮಾರ್ ಬಣದ ಕಾರ್ಯಕರ್ತರು ಏರುದನಿಯಲ್ಲಿ ಘೋಷಣೆಗಳನ್ನು ಕೂಗಿ ಅಡ್ಡಿಪಡಿಸಲೆತ್ನಿಸಿದರಾದರೂ ಭಾಷಣ ಮುಂದುವರಿಸಿದರು.
ಕೆಎಚ್ ಬಣದ ಪ್ರತಿಭಟನೆಯಲ್ಲಿ ಕಿಸಾನ್ ಕೇತ್ ಜಿಲ್ಲಾಧ್ಯಕ್ಷ ಊರುಬಾಗಿಲು ಶ್ರೀನಿವಾಸ್, ಒಬಿಸಿ ಘಟಕದ ರಾಜ್ಯ ಉಪಾಧ್ಯಕ್ಷ ಮಂಜುನಾಥ್, ಎಸ್ಸಿ ಘಟಕದ ಜಿಲ್ಲಾಧ್ಯಕ್ಷ ಜಯದೇವ, ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಉದಯಶಂಕರ್, ಮುಖಂಡರಾದ ಎಲ್.ಎ.ಮಂಜುನಾಥ್, ಇಕ್ಬಾಲ್, ಶಿಡ್ಲಘಟ್ಟ ನಾರಾಯಣಸ್ವಾಮಿ, ಲಾಲ್ ಬಹದ್ದೂರ್ ಶಾಸ್ತ್ರಿ, ರವಿಕುಮಾರ್ ಇತರರು ಪಾಲ್ಗೊಂಡಿದ್ದರು.
ರಮೇಶ್ ಕುಮಾರ್ ಬಣದಲ್ಲಿ ಶಾಸಕರಾದ ಕೆ.ಶ್ರೀನಿವಾಸಗೌಡ, ಎಸ್.ಎನ್.ನಾರಾಯಣಸ್ವಾಮಿ, ಕೆ.ವೈ,ನಂಜೇಗೌಡ, ಎಂಎಲ್ಸಿಗಳಾದ ನಸೀರ್ ಅಹ್ಮದ್, ಎಂ.ಎಲ್.ಅನಿಲ್ ಕುಮಾರ್, ಮಾಜಿ ಶಾಸಕ ಕೊತ್ತೂರು ಮಂಜುನಾಥ್ ಇತರರು ಭಾಗವಹಿಸಿದ್ದರು.
ಪ್ರಧಾನಿ ಮೋದಿ ವಿರುದ್ಧ ಏಕವಚನ ಪ್ರಯೋಗ: ಮೋದಿ ನೀನು ಯಾರು? ಎಲ್ಲಿಂದ ಬಂದೆ? ನಿನ್ನವಂಶ ಯಾವುದು ಗೊತ್ತಾ… ನಿನ್ನದು ಆರ್ಎಸ್ಎಸ್, ಬಿಜೆಪಿ ವಂಶ. ಸ್ವಾತಂತ್ರ$್ಯ ಹೋರಾಟದಲ್ಲಿ ನಿನ್ನ ವಂಶಸ್ಥರು(ಸಂಘ ಪರಿವಾರ) ಬ್ರಿಟಿಷರ ಬೂಟಿನ ಬಳಿ ಬಿದ್ದಿದ್ದರು. ಆದರೆ ನನ್ನ ಕಾಂಗ್ರೆಸ್ ವಂಶಸ್ಥರು ಗಾಂಧಿ, ನೆಹರು, ಇಂದಿರಾಗಾಂಧಿಯಾಗಿದ್ದು, ಸ್ವಾತಂತ್ರ$್ಯಕ್ಕಾಗಿ ಹೋರಾಡಿ, ದೇಶಕ್ಕಾಗಿ ಪ್ರಾಣಕೊಟ್ಟವರು. ನಿನಗೆ ಲೆಕ್ಕ ಹೇಳಿಕೊಟ್ಟವರ್ಯಾರು? ಐನೂರು, ಸಾವಿರ ರೂಪಾಯಿ ಬ್ಯಾನ್ ಮಾಡಿ 2 ಸಾವಿರ ಹಾಗೇ ಬಿಟ್ರೆ ಹ್ಯಾಗಪ್ಪಾ ಕಪು$್ಪಹಣ ಹೊರತೆಗೀತೀಯ? ನಿನಗಿಂತ ಚೆನ್ನಾಗಿ ಅಡ್ಡಗಲ್ ಮೇಸ್ಟು ನನಗೆ ಪಾಠ ಹೇಳಿಕೊಟ್ಟಿದ್ದಾರಪ್ಪಾ. ಸೋನಿಯಾಗೆ ಮಾನಸಿಕ ಹಿಂಸೆ ಕೊಟ್ರೆ ನಾವೆಲ್ಲ ಹೆದರಿಕೊಳ್ತೇವೆ ಅಂತ ನೋಡ್ತಿದ್ದೀಯಾ? ಇದಕ್ಕೆ ನನ್ನ ಧಿಕ್ಕಾರ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ವಿರುದ್ಧ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅಸಮಾಧಾನ ಹೊರಹಾಕಿದರು.
ಕೋಲಾರವೇನಾದರೂ ಇವರಪ್ಪನ ಮನೆ ಆಸ್ತೀನಾ?: ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ ಕಾಂಗ್ರೆಸ್ನಲ್ಲಿದ್ದು, ಅಧಿಕಾರ ಅನುಭವಿಸಿದವರು. ಆದರೆ ಬಿಜೆಪಿ ಆಪರೇಷನ್ ಕಮಲಕ್ಕೆ ಬಲಿಯಾಗಿ ತನ್ನನ್ನು ತಾನು ಮಾರಿಕೊಂಡು ಈಗ ಅಲ್ಲಿ ಅಧಿಕಾರ ಅನುಭವಿಸುತ್ತಿದ್ದಾರೆ. ಅಂತಹ ವ್ಯಕ್ತಿಯಿಂದ ಕಾಂಗ್ರೆಸ್, ಸಿದ್ದರಾಮಯ್ಯ ಬುದ್ಧಿಹೇಳಿಸಿಕೊಳ್ಳುವ ಸ್ಥಿತಿ ಬಂದಿಲ್ಲ. ಇನ್ನು ಸಿದ್ದರಾಮಯ್ಯ ನನ್ನ ಗುರು ಎನ್ನುತ್ತಿದ್ದ ಮಾಜಿ ಶಾಸಕ ವರ್ತೂರು ಪ್ರಕಾಶ್ ಏಕವಚನದಲ್ಲಿ ಸಿದ್ದರಾಮಯ್ಯ ಅವರನ್ನು ಜರಿದಿದ್ದಾರೆ. ಸಿದ್ದರಾಮಯ್ಯ ಕ್ಷೇತ್ರಕ್ಕೆ ಬಂದ್ರೆ ಸೋಲಿಸ್ತೀನಿ ಎನ್ನಲು ಕೋಲಾರವೇನಾದರೂ ಇವರಪ್ಪನ ಮನೆ ಆಸ್ತೀನಾ? ತಾಕತ್ ಇದ್ರೆ ಸ್ಪರ್ಧೆ ಮಾಡು, ಕಾಂಗ್ರೆಸ್ ತಾಕತ್ ತೋರಿಸ್ತೀವಿ ಎಂದು ಕಾಂಗ್ರೆಸ್ ಉಸ್ತುವಾರಿ ಎಂ.ನಾರಾಯಣಸ್ವಾಮಿ ಸವಾಲೆಸೆದರು.