

ಕೋಲಾರ: ಜಿಲ್ಲೆಯಲ್ಲಿ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್‌ಗಳು ಜಿಲ್ಲಾ ಕೇಂದ್ರದಿಂದ ತಾಲೂಕು ಕೇಂದ್ರಗಳಿಗೆ ಸಂಚಾರ ಆರಂಭಿಸಿ ಎರಡು ವಾರಗಳಾಗುತ್ತಾ ಬಂದರೂ ಪ್ರಯಾಣಿಸುವವರ ಸಂಖ್ಯೆ ಸರಾಸರಿ 2000 ದಾಟಿಲ್ಲ.
ಲಾಕ್‌ಡೌನ್ ಸಡಿಲಿಕೆ ಹಿನ್ನೆಲೆಯಲ್ಲಿ ಜಿಲ್ಲೆಯ 5 ಡಿಪೋಗಳಿಂದ ಒಟ್ಟು 30 ಬಸ್‌ಗಳನ್ನು ಬೆಳಗ್ಗೆ 7 ರಿಂದ ಸಂಜೆ 7 ರವರೆಗೆ ಕಾರ್ಯಾಚರಣೆಗೆ ಉದ್ದೇಶಿಸಿ ಪ್ರಾಥಮಿಕ ಹಂತದಲ್ಲಿ ಜಿಲ್ಲಾ ಕೇಂದ್ರದಿಂದ ಇತರ ತಾಲೂಕುಗಳಿಗೆ, ತಾಲೂಕಿನಿಂದ ತಾಲೂಕುಗಳಿಗೆ ಬಸ್ ಆರಂಭಿಸಿದೆ. ಜನದಟ್ಟಣೆಗೆ ಅನುಗುಣವಾಗಿ ಹಂತ-ಹಂತವಾಗಿ ಕಾರ್ಯಾಚರಣೆ ಹೆಚ್ಚಿಸುವ ಉದ್ದೇಶವನ್ನು ನಿಗಮದ ಅಧಿಕಾರಿಗಳು ಹೊಂದಿದ್ದರು.
ಹಸಿರು ವಲಯದಲ್ಲಿದ್ದ ಜಿಲ್ಲೆಯಲ್ಲಿ ಮೇ 4ರ ಮಧ್ಯಾಹ್ನದ ನಂತರ ಕೆಎಸ್‌ಆರ್‌ಟಿಸಿ ಬಸ್ ಸಂಚಾರ ಅಧಿಕೃತವಾಗಿ ಆರಂಭಗೊಂಡು ಪ್ರತಿದಿನ ಒಟ್ಟು 120 ಟ್ರಿಪ್‌ಗಳಲ್ಲಿ 30 ಬಸ್‌ಗಳು ಸಂಚರಿಸುತ್ತಿವೆ. ಬಸ್‌ಗಳಲ್ಲಿ ಶೇ.50 ಅಂದರೆ 25 ರಿಂದ 27 ಮಂದಿ ಪ್ರಯಾಣಕ್ಕೆ ಅವಕಾಶ ಕಲ್ಪಿಸಲಾಗಿದೆಯಾದರೂ ಕೆಲವೊಂದು ಟ್ರಿಪ್‌ಗಳಲ್ಲಿ ನಿಗದಿತ 27 ಪ್ರಯಾಣಿಕರಿಲ್ಲದೆ ಪರದಾಡುವಂತಾಗಿದೆ.
ಪ್ರಸ್ತುತ ಪ್ರತಿದಿನ ಸರಾಸರಿ 2000 ಪ್ರಯಾಣಿಕರು ಸಂಚರಿಸುತ್ತಿದ್ದಾರೆ. ದಿನಕಳೆದಂತೆ ಪ್ರಯಾಣಿಕರ ಹೆಚ್ಚಳದ ನಿರೀಕ್ಷೆಯಲ್ಲಿ ಅಧಿಕಾರಿಗಳಿದ್ದರು. ಆದರೆ ನಿಲ್ದಾಣಕ್ಕೆ ಬಸ್ ಬಂದರೂ ಜನ ಮಾತ್ರ ಪ್ರಯಾಣಿಸಲು ಒಲ್ಲೆ ಎನ್ನುತ್ತಿದ್ದಾರೆ.
ಕೆಎಸ್‌ಆರ್‌ಟಿಸಿಯ ಒಂದು ಬಸ್ ಸಂಚರಿಸಲು ಪ್ರತಿ ಕಿ.ಮೀ. ಗೆ 36 ರೂ. ಖರ್ಚು ಬರುತ್ತದೆ. ಪ್ರಸ್ತುತ ಪ್ರತಿ ಕಿ.ಮೀ.ಗೆ ಕೇವಲ 20 ರೂ.ಆದಾಯ ಬರುತ್ತಿದ್ದು, 16 ರೂ. ಹೊರೆ ಆಗುತ್ತಿದೆ. ಶೇ.50 ಮಾತ್ರ ಪ್ರಯಾಣಿಕರನ್ನು ಕರೆದೊಯ್ಯಬೇಕಿರುವುದರಿಂದ ಲುಕ್ಸಾನು ಅನುಭವಿಸುತ್ತಿದೆ.
ಗ್ರಾಮಗಳಿಗಿಲ್ಲ ಸಂಪರ್ಕ: ಜಿಲ್ಲಾ ಕೇಂದ್ರದಿಂದ ತಾಲೂಕು ಕೇಂದ್ರಕ್ಕೆ ಮಾತ್ರ ಬಸ್ ಸೇವೆ ನೀಡುತ್ತಿರುವುದರಿಂದ ಕೇಂದ್ರ ಸ್ಥಾನದಿಂದ ಗ್ರಾಮೀಣ ಭಾಗಕ್ಕೆ ಬಂದು ಹೋಗಲು ಸಾರಿಗೆ ವ್ಯವಸ್ಥೆ ಇಲ್ಲ. ಈ ಅನನುಕೂಲದಿಂದ ಜನ ಹೊರಗಡೆ ಬರುವ ಗೋಜಿಗೆ ಹೋಗುತ್ತಿಲ್ಲ. ಬಂದರೂ ವಾಪಸ್ ಹೋಗಲು ಹರಸಾಹಸ ಪಡಬೇಕು. ಗ್ರಾಮೀಣ ಸಂಪರ್ಕ ಇಲ್ಲದಿರುವುದೇ ಬಸ್ ಪ್ರಯಾಣಿಕರ ಸಂಖ್ಯೆ ಏರದಿರಲು ಕಾರಣ.
ಬಣ್ಣ ಬದಲು-ಇನ್ನಷ್ಟು ಹೊಡೆತ: ಮೇ 4ರಂದು ಬಸ್ ಸಂಚಾರ ಆರಂಭವಾದಾಗ ಜಿಲ್ಲೆ ಹಸಿರು ವಲಯದಲ್ಲಿತ್ತು. ರಾಜ್ಯದಲ್ಲಿ ಲಾಕ್‌ಡೌನ್ ಘೋಷಣೆ ನಂತರ 50 ದಿನ ಕೋಲಾರದಲ್ಲಿ ಕರೊನಾ ಹಾವಳಿ ಇರಲಿಲ್ಲ. ಆದರೆ ಮಂಗಳವಾರ ಮುಳಬಾಗಿಲಿನಲ್ಲಿ 5 ಪಾಸಿಟಿವ್ ಪ್ರಕರಣ ಪತ್ತೆಯಾಗುವುದರೊಂದಿಗೆ ಹಸಿರು ವಲಯದಲ್ಲಿದ್ದ ಕೋಲಾರ ಕಿತ್ತಳೆ ಬಣ್ಣಕ್ಕೆ ತಿರುಗಿದೆ. ಮುಳಬಾಗಿಲಿನ ಜನತೆ ಸಹಜವಾಗಿಯೇ ಆತಂಕಕ್ಕೆ ಈಡಾಗಿದ್ದು, ಇದರ ಎಫೆಕ್ಟ್ ಸಾರಿಗೆ ನಿಗಮಕ್ಕೂ ಆಗಿದೆ. ನಿಲ್ದಾಣದಲ್ಲಿ ಸಾಂಕೇತಿಕವಾಗಿ ಒಂದು ಬಸ್ ನಿಂತಿದ್ದು, ಜನರೇ ಇಲ್ಲದೆ ಬಿಕೋ ಎನ್ನುತ್ತಿದೆ. ಕೋಲಾರದಿಂದ ಮುಳಬಾಗಿಲಿಗೆ ಹೋಗಲೂ ಜನ ಹಿಂಜರಿಯುತ್ತಿದ್ದಾರೆ. ಜಿಲ್ಲೆಯಲ್ಲಿ ಇನ್ನಷ್ಟು ಕರೊನಾ ಪ್ರಕರಣಗಳು ದೃಢಪಟ್ಟಿದ್ದೇ ಆದಲ್ಲಿ ಸಾರಿಗೆ ಬಸ್‌ನಲ್ಲಿ ಸಂಚರಿಸುವ ಪ್ರಯಾಣಿಕರ ಸಂಖ್ಯೆ ಮತ್ತಷ್ಟು ಕಡಿಮೆಯಾಗಬಹುದು.
ಖಾಸಗಿ ಬಸ್‌ಗಳ ಸಂಕಟ: ಕೆಎಸ್ಸಾರ್ಟಿಸಿ ಬಸ್‌ಗಳದ್ದೇ ಈ ಕತೆಯಾದರೆ ಖಾಸಗಿ ಬಸ್‌ಗಳದ್ದು ಇನ್ನೊಂದು ಸಂಕಟ. 51 ದಿನಗಳಿಂದ ಬಸ್ ನಿಂತಲ್ಲೇ ನಿಂತಿದ್ದು, ಚಾಲಕರು, ನಿರ್ವಾಹಕರು, ಕ್ಲೀನರ್‌ಗಳ ಕೈಗೆ ಕೆಲಸವಿಲ್ಲದೆ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಬಹುತೇಕ ಖಾಸಗಿ ಬಸ್‌ಗಳು ಜಿಲ್ಲೆ, ತಾಲೂಕು ಕೇಂದ್ರದಿಂದ ಬೆಂಗಳೂರು ಹಾಗೂ ನೆರೆಯ ಆಂಧ್ರ, ಪುಂಗನೂರು, ಚಿತ್ತೂರು ಜಿಲ್ಲೆಗೆ ಸಂಚರಿಸುತ್ತಿದ್ದವು. ಈ ಎಲ್ಲ ಪ್ರದೇಶಗಳು ಕರೊನಾ ರೆಡ್‌ಜೋನ್‌ನಲ್ಲಿರುವುದರಿಂದ ಸದ್ಯಕ್ಕಂತೂ ಈ ಮಾರ್ಗಗಳಲ್ಲಿ ಬಸ್ ಸಂಚಾರ ಕಷ್ಟಸಾಧ್ಯ.
ಕರೊನಾ ಸಂಕಷ್ಟದ ಸಂದರ್ಭದಲ್ಲಿ ನಿಗಮವು ಲಾಭ-ನಷ್ಟದ ಲೆಕ್ಕಾಚಾರಕ್ಕಿಂತ ಸಾರ್ವಜನಿಕರ ಅನುಕೂಲಕ್ಕೆ, ಆತ್ಮಸ್ಥೈರ್ಯ ಮೂಡಿಸುವ ಸಲುವಾಗಿ ಪ್ರತಿ ಬಸ್‌ನಲ್ಲಿ ಶೇ. 50 ಸೀಟುಗಳನ್ನು ಭರ್ತಿ ಮಾಡಿಕೊಂಡು ಕಾರ್ಯಾಚರಣೆ ನಡೆಸಲಾಗುತ್ತಿದೆ. ನಿತ್ಯ 120 ಟ್ರಿಪ್‌ಗಳಲ್ಲಿ ಸರಾಸರಿ 2000 ಪ್ರಯಾಣಿಕರು ಸಂಚರಿಸುತ್ತಿದ್ದಾರೆ. ಎನ್. ಎಸ್.ಚಂದ್ರಶೇಖರ್, ಡಿಸಿ ಕೆಎಸ್ಸಾರ್ಟಿಸಿ, ಕೋಲಾರ