

ಬೆಂಗಳೂರು : ಕೋಲಾರ ಸಮಗ್ರ ಕೃಷಿ ಪದ್ಧತಿಯಡಿಯೇ ಇಸ್ರೇಲ್ ತಂತ್ರಜ್ಞಾನವನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಬಳಕೆ ಮಾಡಿಕೊಳ್ಳುವ ಕುರಿತು ಚಿಂತನೆ ನಡೆದಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ ತಿಳಿಸಿದರು.
ವಿಕಾಸಸೌಧದಲ್ಲಿ ತಮ್ಮನ್ನು ಭೇಟಿ ಮಾಡಿದ ಇಸ್ರೇಲ್ ಕಾನ್ಸುಲೇಟ್ ಜನರಲ್ ಜೊನಾಥನ್ ಜಡ್ಕಾ ಹಾಗೂ ಮಿಷನ್ ಉಪಮುಖ್ಯಸ್ಥ ಏರಿಯನಲ್ ಸೀಡ್ಮನ್ ಜತೆ ಚರ್ಚಿಸಿ ಮಾತನಾಡಿದರು. ಕೋಲಾರ ರೈತರು ಅತ್ಯಂತ ಕಡಿಮೆ ನೀರಿನಲ್ಲಿಯೇ ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಂಡು ಇಡೀ ರಾಜ್ಯಕ್ಕೆ ಮಾದರಿಯಾಗಿದ್ದಾರೆ. ರಾಜ್ಯದಲ್ಲಿ ಕೋಲಾರ ಸಮಗ್ರ ಕೃಷಿ ಪದ್ಧತಿಯಡಿಯಲ್ಲಿಯೇ ಇಸ್ರೇಲ್ ತಂತ್ರಜ್ಞಾನವನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಬಳಕೆ ಮಾಡಿಕೊಳ್ಳುವ ಬಗ್ಗೆ ಇಸ್ರೇಲ್ ಪ್ರತಿನಿಧಿಗಳ ಜತೆ ಮಾಹಿತಿ ಹಂಚಿಕೊಂಡಿದ್ದು, ಮುಂದಿನ ಹೆಜ್ಜೆ ಕುರಿತು ಇಲಾಖೆಯ ಅಧಿಕಾರಿಗಳ ಜತೆ ಚರ್ಚಿಸಿ ಕ್ರಮಕೈಗೊಳ್ಳುವುದಾಗಿ ಹೇಳಿದರು.
ಸಹಭಾಗಿತ್ವ ಕುರಿತು ಮಹತ್ವದ ಚರ್ಚೆ: ಕೃಷಿ ಕ್ಷೇತ್ರದಲ್ಲಿ ಇಸ್ರೇಲ್ ಮತ್ತು ಕರ್ನಾಟಕದ ನಡುವೆ ನಡೆಯುತ್ತಿರುವ ಸಹಭಾಗಿತ್ವ ಮತ್ತು ಮುಂದಿನ ದಾರಿ ಕುರಿತು ಮಹತ್ವದ ಚರ್ಚೆ ನಡೆಸಿದರು.
ಸೆನ್ಸಾರ್ ಸೂಕ್ಷ್ಮ ನೀರಾವರಿ ಪದ್ಧತಿ: ಕೊಡಗಿನಲ್ಲಿ ಆಧುನಿಕ ಸೆನ್ಸಾರ್ ಸೂಕ್ಷ್ಮ ನೀರಾವರಿ ಪದ್ಧತಿಯನ್ನು ಈಗಾಗಲೇ ಇಸ್ರೇಲ್ ಸಹಭಾಗಿತ್ವದಲ್ಲಿ ಕಾಫಿ ಬೆಳೆಯಲ್ಲಿ ಅಳವಡಿಸಲಾಗುತ್ತಿದೆ. ಇದನ್ನು ರಾಜ್ಯದ ಬೇರೆ ಜಿಲ್ಲೆಗಳಲ್ಲಿ ಅಳವಡಿಸಲು ಉತ್ತೇಜನ ನೀಡಬೇಕೆಂದು ಇಸ್ರೇಲ್ ಕಾನ್ಸುಲೇಟ್ ಪ್ರತಿನಿಧಿಗಳು ಮನವಿ ಮಾಡಿದರು.
ವಿ.ವಿ.ಗಳ ಜತೆ ಒಡಂಬಡಿಕೆ: ರಾಜ್ಯದ ಕೃಷಿ ವಿಶ್ವವಿದ್ಯಾಲಯಗಳು ಹಾಗೂ ಇಸ್ರೇಲ್‌ನ ಟೆಲಿವಿವಾ ವಿಶ್ವವಿದ್ಯಾಲಯ , ಮಾಶೋಮ್ ತರಬೇತಿ ಸಂಸ್ಥೆಗಳೊಂದಿಗೆ ಒಡಂಬಡಿಕೆ ಮಾಡಿಕೊಳ್ಳುವ ಕುರಿತು ಸಚಿವರ ಜತೆ ಸಮಾಲೋಚನೆ ನಡೆಸಿದರು.
ಇಸ್ರೇಲ್ ಪ್ರತಿನಿಧಿಗಳ ಮೆಚ್ಚುಗೆ: ರೈತರನ್ನು ರೈತೋದ್ಯಮಿಗಳನ್ನಾಗಿಸಲು ಕೃಷಿ ನವೋದ್ಯಮಕ್ಕೆ ಇಲಾಖೆ ಹಾಗೂ ಕೃಷಿ ಸಚಿವರು ಉತ್ತೇಜನ ನೀಡುತ್ತಿರುವುದಕ್ಕೆ ಇಸ್ರೇಲ್ ಪ್ರತಿನಿಧಿಗಳು ಮೆಚ್ಚುಗೆ ವ್ಯಕ್ತಪಡಿಸಿದರು.