18ರಂದು ಕೋಲಾರದಲ್ಲಿ ಕವಿನಮನ ಕಾರ್ಯಕ್ರಮ

14-klr-2
Published on

ಕೋಲಾರ: ಮನ್ವಂತರ ಪ್ರಕಾಶನ ಹಾಗೂ ಮನ್ವಂತರ ಜನಸೇವಾ ಟ್ರಸ್ಟ್ ಆಶ್ರಯದಲ್ಲಿ ಆ.18ರ ಬೆಳಗ್ಗೆ 9.30ಕ್ಕೆ ನಗರದ ಕೆಇಬಿ ಸಮುದಾಯ ಭವನದಲ್ಲಿ ಸಾಹಿತ್ಯ ಲೋಕಕ್ಕೆ ಗ್ರಾಮೀಣ ಸೊಗಡು ಪರಿಚಯಿಸುತ್ತಿರುವ ಕವಿ, ಲೇಖಕ, ಪತ್ರಕರ್ತ ಆರ್.ಚೌಡರೆಡ್ಡಿ ಪಣಸಮಾಕನಹಳ್ಳಿ ಅವರಿಗೆ ‘ಕವಿ ನಮನ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಡಿಸಿಸಿ ಬ್ಯಾಂಕ್ ಹಾಗೂ ಟ್ರಸ್ಟ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಹೇಳಿದರು.

ನಮ್ಮ ಸಂಸ್ಕೃತಿಯನ್ನು ಜನ ಮರೆಯುತ್ತಿರುವ ಸಂದರ್ಭದಲ್ಲಿ ಗ್ರಾಮೀಣ ಸೊಗಡನ್ನು ಸಮಾಜಕ್ಕೆ ಪರಿಚಯಿಸುತ್ತಿರುವ ಚೌಡರೆಡ್ಡಿ ಅವರನ್ನು ಅಭಿನಂದಿಸುತ್ತಿರುವುದು ಸಂತಸದ ವಿಷಯ ಎಂದು ನಗರದ ಪತ್ರಕರ್ತರ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಜಿಲ್ಲೆಯಲ್ಲಿ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ಉತ್ತಮ ಸಾಧನೆ ಮಾಡಿರುವ ವಿದ್ಯಾರ್ಥಿಗಳನ್ನು ಟ್ರಸ್ಟ್‌ನಿಂದ ಪುರಸ್ಕರಿಸುವ ಕಾರ್ಯವನ್ನು ಮುಂದಿನ ದಿನಗಳಲ್ಲಿ ಹಮ್ಮಿಕೊಳ್ಳಲಿದ್ದು, ಈ ಸಂಬಂಧ ಡಿಡಿಪಿಐ ಜತೆ ಮಾತನಾಡಿ ಸಾಧಕರ ಪಟ್ಟಿ ಪಡೆದು ಕಾರ್ಯಕ್ರಮದ ದಿನಾಂಕ ಪ್ರಕಟಿಸಲಾಗುವುದು ಎಂದರು.

ಕವಿ ನಮನದ ಕುರಿತು ಮಾಹಿತಿ ನೀಡಿದ ಪರಿಸರ ಲೇಖಕ ಎಚ್.ಎ.ಪುರುಷೋತ್ತಮರಾವ್, ಕಾರ್ಯಕ್ರಮವನ್ನು ಡಿಸಿ ಸಿ.ಸತ್ಯಭಾಮ ಉದ್ಘಾಟಿಸುವರು. ಸಾಹಿತಿ ಸಾ.ರಘುನಾಥ್ ಅಭಿನಂದನಾ ಭಾಷಣ ಮಾಡುವರು. ಕಸಾಪ ನಿಕಟಪೂರ್ವ ಅಧ್ಯಕ್ಷ ಜೆ.ಜಿ.ನಾಗರಾಜ್ ಆಶಯನುಡಿಗಳನ್ನಾಡುವರು. ಶ್ರೀನಿವಾಸಪುರದ ಕನ್ನಡಸಿರಿ ನರಸಿಂಹಮೂರ್ತಿ ತಂಡದಿಂದ ಸಾಹಿತಿ ಚೌಡರೆಡ್ಡಿ ವಿರಚಿತ ಕವಿತೆ ಗಾಯನ, ಸಾಹಿತಿ ದೊಡ್ಡಕಲ್ಲಹಳ್ಳಿ ನಾರಾಯಣಪ್ಪ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ನಡೆಯಲಿದೆ. ಲೇಖಕ ಡಾ. ಡಿ.ಎಸ್. ಶ್ರೀನಿವಾಸಪ್ರಸಾದ್ ಸಮಾರೋಪ ನುಡಿಗಳನ್ನಾಡುವರು ಎಂದರು.

ಅತಿಥಿ ಉಪನ್ಯಾಸಕ ಡಾ.ಶರಣಪ್ಪ ಗಬ್ಬೂರು, ಕಸಾಪ ನಿಕಟಪೂರ್ವ ಅಧ್ಯಕ್ಷ ಜೆ.ಜಿ.ನಾಗರಾಜ್, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ವಿ.ಮುನಿರಾಜು, ಟ್ರಸ್ಟ್ ಸಂಸ್ಥಾಪಕ ಕಾರ್ಯದರ್ಶಿ ಪಾ.ಶ್ರೀ.ಅನಂತರಾಮ್, ಖಜಾಂಚಿ ಎಸ್.ಎನ್.ಪ್ರಕಾಶ್, ಮನ್ವಂತರ ಪರಿಸರ ಪಡೆಯ ಸಂಚಾಲಕ ಎ. ಬಾಲನ್, ಆಧ್ಯಾತ್ಮಿಕ ವಿಭಾಗದ ಸಂಚಾಲಕ ಎಸ್.ಮಂಜುನಾಥ್, ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ, ಜಿಲ್ಲಾ ಕನ್ನಡಸಿರಿ ಸಾಹಿತ್ಯ ಪರಿಷತ್ ಅಧ್ಯಕ್ಷ ಟಿ.ಸುಬ್ಬರಾಮಯ್ಯ, ಕೆ.ಎನ್.ಪರಮೇಶ್ವರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net