ದೈವೀವನದಲ್ಲಿಲ್ಲ ಮೂಲ ಸೌಲಭ್ಯ

08 mbl ph 1a
Published on

ಎ.ಅಪ್ಪಾಜಿಗೌಡ ಮುಳಬಾಗಿಲು

ಸರ್ಕಾರದ ಯೋಜನೆಗಳು ಆಕರ್ಷಣೀಯವಾಗಿರುತ್ತದೆ ಅನುಷ್ಠಾನವಾಗುವ ಸಂದರ್ಭದಲ್ಲಿ ಅಪೂರ್ಣ ಕಾಮಗಾರಿಗಳಿಂದ ಯೋಜನೆಗಳು ಹಳ್ಳ ಹಿಡಿಯುತ್ತವೆ ಎಂಬುದಕ್ಕೆ ತಾಲೂಕಿನ ಕುರುಡುಮಲೆಯ ಶ್ರೀವಿನಾಯಕ ದೈವೀವನ ಸಾಕ್ಷಿಯಾಗಿದೆ.

ಕುರುಡುಮಲೆಯ ಪುರಾಣ ಪ್ರಸಿದ್ಧ ವಿನಾಯಕ ದೇವಾಲಯ ಮುಂಭಾಗದ ಕೂಟಾದ್ರಿ ಬೆಟ್ಟದ ತಪ್ಪಲಿನಲ್ಲಿ ಪ್ರಾದೇಶಿಕ ಆರಣ್ಯ ಇಲಾಖೆಯಿಂದ ಶ್ರೀವಿನಾಯಕ ದೈವೀವನವನ್ನು 2017ರ ಡಿ.30ರಂದು ಆಗಿನ ಶಾಸಕ ಕೊತ್ತೂರು ಜಿ.ಮಂಜುನಾಥ್ ಉದ್ಘಾಟಿಸಿದ್ದರು. ನಂತರ ಈ ಪದೇಶದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ನಡೆಯದೆ ಉದ್ಯಾನವನ ಪ್ರಯೋಜನಕ್ಕೆ ಬರದಂತಾಗಿದೆ.

ವನದಲ್ಲಿ ಮಕ್ಕಳ ಆಟಿಕೆ ಸಾಮಗ್ರಿಗಳನ್ನು ಇನ್ನೂ ಅಳವಡಿಸಿಲ್ಲ. ದಾರಿ ನಿರ್ಮಾಣ ಸಹ ಆಗಿಲ್ಲ. ಬೆಟ್ಟದಿಂದ ಬರುವ ನೀರು ಸಂಗ್ರಹಿಸಲು ಸಣ್ಣ-ಪುಟ್ಟ ಕುಂಟೆ ನಿರ್ಮಿಸಿದ್ದು, ಇವು ಮಳೆಯಿಂದ ತುಂಬಿವೆ. ಉಳಿದಂತೆ ಯಾವುದೇ ಮೂಲ ಸೌಲಭ್ಯ ಇಲ್ಲವಾಗಿದೆ. ಒಟ್ಟಾರೆ ತಾಲೂಕಿನಲ್ಲಿ ಇರುವುದರಲ್ಲಿ ಉತ್ತಮ ಉದ್ಯಾನವನವಿದು ಎನ್ನೂವುದೊಂದೇ ಸಮಾಧಾನಕರ ಸಂಗತಿ.

ಮಕ್ಕಳಿಗಿಲ್ಲ ಅವಕಾಶ: ಕುರಡುಮಲೆಗೆ ವಿವಿಧ ಕಡೆಗಳಿಂದ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಇದಲ್ಲದೆ ಕಿತ್ತೂರುರಾಣಿ ಚೆನ್ನಮ್ಮ ಮುರಾರ್ಜಿ ದೇಸಾಯಿ ವಸತಿ ಶಾಲೆ ಸಹ ಈ ವನದ ಸಮೀಪವಿದ್ದು 250 ಸರ್ಕಾರಿ ಪ್ರೌಢಶಾಲೆಯ 200 ವಿದ್ಯಾರ್ಥಿಗಳು ಸೇರಿ ಪ್ರಾಥಮಿಕ ಶಾಲೆಯ ಮಕ್ಕಳು ಸಹ ರಜೆ ದಿನಗಳಲ್ಲಿ ಈ ವನಕ್ಕೆ ಭೇಟಿ ನೀಡಿ ಆಟವಾಡಲು ಅವಕಾಶವೇ ಇಲ್ಲವಾಗಿದೆ.

ಇನ್ನಾದರು ತಾಲೂಕಿನ ಜನಪ್ರತಿನಿಧಿಗಳು ಸಂಬಂಧಿಸಿದ ಇಲಾಖೆ ಅಧಿಕಾರಿಗಳು, ಜಿಲ್ಲಾಡಳಿತ ಈ ಬಗ್ಗೆ ಗಮನ ಹರಿಸಿ ಪ್ರವಾಸಿ ಕ್ಷೇತ್ರವಾಗಿರುವ ಕುರುಡುಮಲೆ ದೈವೀವನ ಅಭಿವೃದ್ಧಿಗೆ ಗಮನ ಹರಿಸಬೇಕಿದೆ.

ಕನ್ನಡ ಭಾಷೆ ನಿರ್ಲಕ್ಷ್ಯ: ರಾಜ್ಯದಲ್ಲಿ ಕನ್ನಡ ಭಾಷೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂಬ ಒತ್ತಾಯವಿದ್ದರೂ ದೈವೀವನದಲ್ಲಿ ಮಾತ್ರ ಕನ್ನಡ ಭಾಷೆ ಫಲಕಗಳ ಬದಲು ಆಂಗ್ಲ ಭಾಷೆ ಫಲಕಗಳು ರಾರಾಜಿಸುತ್ತಿವೆ. ಮಾತೃಭಾಷೆಯನ್ನು ನಿರ್ಲಕ್ಷಿಸಲಾಗಿದೆ. ಈ ಬಗ್ಗೆ ಗಮನಹರಿಸಿ ಕನ್ನಡದ ಫಲಕ ಅಳವಡಿಸಿ ಸರ್ಕಾರದ ಆದೇಶ ಅನುಷ್ಠಾನ ಮಾಡಬೇಕಿದೆ.

ಇರುವಷ್ಟು ಅನುದಾನದಲ್ಲಿ ದೈವೀವನ ಅಭಿವೃದ್ಧಿ ಪಡಿಸಲಾಗಿದೆ. ಅನುದಾನದ ಕೊರತೆಯಿಂದ ಉಳಿದ ಕಾಮಗಾರಿಗೆ ತಡೆಯಾಗಿದೆ. ಅಳವಡಿಸಿರುವ ನಾಮಫಲಕಗಳು ದಾನಿಗಳು ನೀಡಿರುವ ಕೊಡುಗೆ. ಇದಕ್ಕೆ ಇಲಾಖೆಯ ಅನುದಾನ ಬಳಸಿಲ್ಲ. ಅನುದಾನ ಬಿಡುಗಡೆ ಮಾಡಿದ ನಂತರ ಅಭಿವೃದ್ಧಿ ಪಡಿಸಲಾಗುವುದು. ಎಂ.ಆರ್.ಭರತ್ ಕುಮಾರ್, ಉಪ ಅರಣ್ಯಾಧಿಕಾರಿ ಪ್ರದೇಶಿಕ ವಿಭಾಗ ಮುಳಬಾಗಿಲು ಆರಣ್ಯ ಇಲಾಖೆಯಿಂದ ನಿರ್ಮಿಸಿರುವ ದೈವೀವನದಲ್ಲಿ ಆಂಗ್ಲ ನಾಮಫಲಕಗಳು ರಾರಾಜಿಸಿದ್ದು ಕನ್ನಡ ನಾಮಫಲಕಗಳನ್ನು ಆದೇ ಮಾದರಿಯಲ್ಲಿ ಅಳವಡಿಸಬೇಕು. ಇಲ್ಲದಿದ್ದಲ್ಲಿ ಕನ್ನಡಪರ ಸಂಘಟನೆಗಳಿಂದ ಪ್ರತಿಭಟನೆ ನಡೆಸಲಾಗುವುದು. ಕೆ.ಶಂಕರಕೇಸರಿ ಮತ್ತು ವಿ.ಜಯಪ್ಪ. ಕನ್ನಡಪರ ಸಂಘಟನೆ ಮುಖಂಡರು. ಮುಳಬಾಗಿಲು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net