ರೈತರನ್ನು ಭೂಮಿಯಿಂದ ಹೊರಹಾಕುವ ಹುನ್ನಾರ

7-klr-4
Published on

ಕೋಲಾರ: ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ಮಾಡಿ ಭೂಮಿ ಮೂಲಕ ಕಳ್ಳಹಣವನ್ನು ಬಿಳಿ ಹಣವನ್ನಾಗಿಸುವ, ಬಹುಸಂಖ್ಯಾತ ಸಣ್ಣ, ಅತಿಸಣ್ಣ ರೈತರನ್ನು ವ್ಯವಸ್ಥಿತವಾಗಿ ಭೂಮಿಯಿಂದ ಹೊರಹಾಕುವ ವ್ಯವಸ್ಥಿತ ಹುನ್ನಾರ ಅಡಗಿದೆ ಎಂದು ಸಿಐಟಿಯು ಕಾರ್ಯದರ್ಶಿ ಡಾ. ಕೆ. ಪ್ರಕಾಶ್ ಹೇಳಿದರು.

ನಗರದ ಪತ್ರಕರ್ತರ ಭವನದಲ್ಲಿ ರೈತ, ದಲಿತ, ಮತ್ತು ಕಾರ್ಮಿಕ ಸಂಘಟನೆಗಳ ವೇದಿಕೆ ಶುಕ್ರವಾರ ಆಯೋಜಿಸಿದ್ದ ಭೂ ಸುಧಾರಣಾ ಕಾಯ್ದೆಯ ಸಾಧಕ ಬಾಧಕಗಳ ವಿಚಾರಗೋಷ್ಠಿಯಲ್ಲಿ ವಿಷಯ ಮಂಡಿಸಿ, 2011-11ರ ಭೂಮಿ ಗಣತಿ ಪ್ರಕಾರ ಕೃಷಿ ಮತ್ತು ಸಂಬಂಧಿತ ಚಟುವಟಿಕೆಗಳಲ್ಲಿ ಶೇ.49 ಮಂದಿ ತೊಡಗಿದ್ದರೆ ಕೃಷಿಯೇತರ ಚಟುವಟಿಕೆಗಳಲ್ಲಿ ಶೇ.51 ಮಂದಿ ತೊಡಗಿದ್ದು, ಭೂ ಹಿಡುವಳಿದಾರರು 65 ಲಕ್ಷ, ಭೂ ರಹಿತರು ಶೇ.51ರಷ್ಟಿದ್ದಾರೆ. ಕರ್ನಾಟಕ ಕೃಷಿ ಪ್ರಧಾನ ರಾಜ್ಯವಾಗಿ ಉಳಿದಿಲ್ಲ. ಭೂ ಸುಧಾರಣಾ ಕಾಯ್ದೆ ತಿದ್ದುಪಡಿಯಿಂದ 2021ರ ಗಣತಿ ವೇಳೆ ಅಂಕಿ-ಅಂಶ ಇನ್ನಷ್ಟು ಕೆಟ್ಟದಾಗಿರಲಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ಮೂಲಕ ಕೃಷಿಯೇತರ ಉದ್ದೇಶಕ್ಕೆ ಭೂಮಿ ಖರೀದಿಸಲು ನಿಗದಿಪಡಿಸಿದ್ದ ಹೃದಯ ಮತ್ತು ಆತ್ಮದಂತಿದ್ದ ಆದಾಯ ಮಿತಿ ರದ್ದುಪಡಿಸಿ ಖರೀದಿಗೆ ಮುಕ್ತ ಅವಕಾಶ ಕಲ್ಪಿಸಿದೆ ಎಂದು ಟೀಕಿಸಿದರು.

ಕೇಂದ್ರ ಸರ್ಕಾರ ಕೃಷಿ ಸೇವೆ ಕುರಿತಾದ ರೈತ ಸಶಕ್ತೀಕರಣ ಕಾಯ್ದೆಯನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಸಿದ್ದು, ಪೂರಕವಾಗಿ ರಾಜ್ಯ ಸರ್ಕಾರವೂ ತಿದ್ದುಪಡಿ ತಂದು ಕಾರ್ಪೋರೇಟ್ ಕಂಪನಿಗಳನ್ನು ಬೇಸಾಯಕ್ಕೆ ಒಳಪಡಿಸುವ, ಗುತ್ತಿಗೆ, ಒಪ್ಪಂದ ಕೃಷಿಗೆ ಅವಕಾಶ ಕಲ್ಪಿಸಿರುವುದು ಸಾಮಾಜಿಕವಾಗಿ ದುಷ್ಪರಿಣಾಮ ಬೀರಲಿದೆ ಎಂದರು.

ದಸಂಸ ಮುಖಂಡ ಟಿ. ವಿಜಯಕುಮಾರ್, ವಕೀಲ ಸತೀಶ್, ಗಮನ ಮಹಿಳಾ ಸಮೂಹದ ಅಧ್ಯಕ್ಷೆ ಶಾಂತಮ್ಮ. ವೇದಿಕೆ ಸಂಚಾಲಕ ಹೂಹಳ್ಳಿ ನಾಗರಾಜ್, ಎಸ್‌ಎಫ್‌ಐ ಮುಖಂಡ ವಿ. ಅಂಬರೀಷ್, ಮುಖಂಡರಾದ ಕೆ.ನಾರಾಯಣಗೌಡ, ನಳಿನಿ, ಅಬ್ಬಣಿ ಶಿವಪ್ಪ, ನಾಗನಾಳ ಮುನಿಯಪ್ಪ, ಟಿ.ಎಂ.ವೆಂಕಟೇಶ್, ಸಿ.ವಿ ನಾಗರಾಜ್ ಉಪಸ್ಥಿತರಿದ್ದರು.

ಹಿಂದಿನ ಭೂ ಸುಧಾರಣಾ ಕಾಯ್ದೆಯಡಿ ರೈತರಿಗೆ ಹಾಗೂ ಗೇಣಿದಾರರಿಗೆ ಇದ್ದ ಎಲ್ಲ ರಕ್ಷಣಗಳ ಕಲಂ ತಿದ್ದುಪಡಿ ತಂದು ಸುಗ್ರೀವಾಜ್ಞೆ ಮೂಲಕ ಅನುಷ್ಠಾನಗೊಳಿಸುತ್ತಿದೆ. ರಾಜ್ಯದ ಎಲ್ಲ ರೈತ, ದಲಿತ, ಕಾರ್ಮಿಕ ಸಂಘಗಳು ಒಗ್ಗಟ್ಟಾಗಿ ದಮನಕಾರಿ ಕಾಯ್ದೆ ಹಿಂಪಡೆಯುವಂತೆ ಹೋರಾಟ ರೂಪಿಸಬೇಕು. ಎನ್.ವೆಂಕಟೇಶ್, ದಸಂಸ ರಾಜ್ಯ ಸಂಚಾಲಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net