

ಕೋಲಾರ: ಜಿಲ್ಲೆಯಲ್ಲಿ ಈ ವಾರ ಸುರಿದ ಉತ್ತಮ ಮಳೆಯಿಂದ ಕೃಷಿ ಚಟುವಟಿಕೆ ನಿಧಾನವಾಗಿ ಚೇತರಿಸಿಕೊಳ್ಳಲಾರಂಭಿಸಿದ್ದು, ಇದುವರೆಗೆ ಒಟ್ಟು ಶೇ.13.4 ಬಿತ್ತನೆ ಪೂರ್ಣಗೊಂಡಿದೆ.
ಮುಂಗಾರು ಹಂಗಾಮು ಆರಂಭವಾಗಿ ಒಂದೂವರೆ ತಿಂಗಳು ಕಳೆದಿದೆ. ಜೂನ್ ಮತ್ತು ಜುಲೈ ತಿಂಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದ್ದರೂ ಬಿತ್ತನೆ ನಿರೀಕ್ಷಿತ ಮಟ್ಟದಲ್ಲಿ ಚುರುಕುಗೊಂಡಿರಲಿಲ್ಲ. ಆದರೆ ಈ ವಾರದಲ್ಲಿ ಬಿದ್ದ ಉತ್ತಮ ಮಳೆಯಿಂದ ಉಳುಮೆ, ಬಿತ್ತನೆ ಕಾರ್ಯ ಚುರುಕು ಪಡೆದುಕೊಳ್ಳುತ್ತಿದೆ.
ನೀರಾವರಿ ಪ್ರದೇಶದಲ್ಲಿ 6290 ಹೆಕ್ಟೇರ್ ಹಾಗೂ ಮಳೆ ಆಶ್ರಯದಲ್ಲಿ 95,710 ಹೆಕ್ಟೇರ್ ಸೇರಿ ಒಟ್ಟು 1.02 ಹೆಕ್ಟೇರ್ ಬಿತ್ತನೆ ಗುರಿ ಹೊಂದಲಾಗಿದೆ.
ಇದುವರೆಗೆ ನೀರಾವರಿ ಪ್ರದೇಶದಲ್ಲಿ 89 ಹೆಕ್ಟೇರ್ ಹಾಗೂ ಮಳೆ ಆಶ್ರಯ ಪ್ರದೇಶದಲ್ಲಿ 13,596 ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದ್ದು, ಶೇ.13.4ರ ಸಾಧನೆ ಆಗಿದೆ.
5633 ಹೆಕ್ಟೇರ್ ನೆಲಗಡಲೆ: ಮುಂಗಾರಿನ ಆರಂಭದಲ್ಲೇ ನೆಲಗಡಲೆ, ಎಳ್ಳು ಬಿತ್ತನೆ ಆರಂಭಗೊಳ್ಳುತ್ತದೆ. ಒಟ್ಟು 13,000 ಹೆಕ್ಟೇರ್ ಗುರಿಗೆ 5633 ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದೆ. ಎಳ್ಳು 365 ಹೆಕ್ಟೇರ್ ಗುರಿಗೆ 22 ಹೆಕ್ಟೇರ್, ಹುಚ್ಚೆಳ್ಳು 195 ಹೆಕ್ಟೇರ್, ಸಾಸಿವೆ 360 ಹೆಕ್ಟೇರ್ ಬಿತ್ತನೆಯಾಗಿದ್ದರೆ ಹರಳು 150 ಹೆಕ್ಟೆರ್ ಗುರಿ ಇದ್ದರೂ ರೈತರು ಈವರೆಗೆ ಬಿತ್ತನೆಗೆ ಮನಸ್ಸು ಮಾಡಿಲ್ಲ.
ತೊಗರಿ 4500 ಹೆಕ್ಟೇರ್ ಗುರಿಗೆ 1706 ಹೆಕ್ಟೇರ್ ಬಿತ್ತನೆಯಾಗಿದೆ. ಅಲಸಂದೆ 2000 ಹೆಕ್ಟೇರ್ ಗುರಿಗೆ 240 ಹೆಕ್ಟೇರ್, ಅವರೆ 9000 ಹೆಕ್ಟೇರ್‌ಗೆ 373 ಹೆಕ್ಟೇರ್ ಬಿತ್ತನೆ ನಡೆದಿದೆ.
ರಾಗಿ 67950 ಹೆಕ್ಟೇರ್ ಬಿತ್ತನೆ ಗುರಿ ಹೊಂದಿದ್ದು, ಬಿತ್ತನೆ ಶುರುವಾಗಿದೆ. ಬಂಗಾರಪೇಟೆಯಲ್ಲಿ 16,610 ಹೆಕ್ಟೇರ್ ಗುರಿಗೆ 2097 ಹೆಕ್ಟೇರ್, ಕೋಲಾರದಲ್ಲಿ 14580 ಹೆಕ್ಟೇರ್ ಗುರಿಗೆ 270 ಹೆಕ್ಟೇರ್, ಮುಳಬಾಗಿಲಿನಲ್ಲಿ 1393 ಹೆಕ್ಟೇರ್ ಗುರಿಗೆ 1676 ಹೆಕ್ಟೇರ್, ಶ್ರೀನಿವಾಸಪುರದಲ್ಲಿ 9640 ಹೆಕ್ಟೇರ್‌ಗೆ 1334 ಹೆಕ್ಟೇರ್ ಸೇರಿ ಒಟ್ಟು 6750 ಹೆಕ್ಟೇರ್ ಬಿತ್ತನೆ ಗುರಿಗೆ 5711 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಮೊಳಕೆ ಒಡೆದು 20 ದಿನ ಕಳೆದಿರುವ ಹೊಲಗಳಲ್ಲಿ ಒತ್ತಾಗಿರುವ ಸಸಿ ಬೇರ್ಪಡಿಸುವ, ಕಳೆ ತೆಗೆಯಲಾಗುತ್ತಿದೆ.
ಮೇವಿನ ಜೋಳಕ್ಕೆ ಬೇಡಿಕೆ ಇದ್ದು, 150 ಹೆಕ್ಟೇರ್ ಗುರಿಗೆ 289 ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದೆ. ಜಾನುವಾರುಗಳ ಮೇವಿಗೆ ಅನುಕೂಲವಾಗುವುದರಿಂದ ಜಿಲ್ಲೆಯ ರೈತರು ಹೆಚ್ಚಿನ ಪ್ರದೇಶದಲ್ಲಿ ಬಿತ್ತನೆಗೆ ಒಲವು ವ್ಯಕ್ತಪಡಿಸಿದ್ದು, ಗುರಿ ಮೀರಿ ಸಾಧನೆ ಆಗಿದೆ. ಮುಸುಕಿನ ಜೋಳ 660 ಹೆಕ್ಟೇರ್ ಗುರಿಗೆ 28 ಹೆಕ್ಟೇರ್ ಮಾತ್ರ ಬಿತ್ತನೆ ಆಗಿದೆ.
ವಾಡಿಕೆಗಿಂತ ಹೆಚ್ಚು ಮಳೆ: ಜಿಲ್ಲೆಯಲ್ಲಿ ಈವರೆಗೆ ವಾಡಿಕೆಗಿಂತ ಉತ್ತಮ ಮಳೆಯಾಗಿದೆ. ಜನವರಿಯಿಂದ ಮೇ ಅಂತ್ಯದವರೆಗೆ 117ಮಿಮೀ ವಾಡಿಕೆಗೆ 129 ಮಿಮೀ ಮಳೆಯಾಗಿದೆ. ಜೂನ್‌ನಲ್ಲಿ 66 ಮಿಮೀ ಮಳೆಗೆ 77 ಮಿಮೀ ಆಗಿದ್ದು, ಶೇ.12 ಹೆಚ್ಚು ಮಳೆಯಾಗಿದೆ. ಜುಲೈನಲ್ಲಿ ಮಳೆ 37ಮಿಮೀ ಗಳಾಗಿದ್ದು, ಶುಕ್ರವಾರದವರೆಗೆ 152 ಮಿಮೀ ಮಳೆಯಾಗಿದೆ. ಭಾನುವಾರವೂ ಮಧ್ಯಾಹ್ನ 2.50ರಿಂದಲೇ ಗುಡುಗು ಸಹಿತ ಧಾರಾಕಾರ ಮಳೆ ಸುರಿದಿದ್ದು, ಬಿತ್ತನೆ ಚುರುಕುಗೊಳ್ಳಲಿದೆ.
ಜಿಲ್ಲೆಯಲ್ಲಿ ಮುಂಗಾರು ಹಂಗಾಮಿಗೆ ಬಿತ್ತನೆ ಬೀಜಗಳ ಕೊರತೆ ಇಲ್ಲ, ರೈತ ಸಂಪರ್ಕ ಕೇಂದ್ರಗಳಲ್ಲಿ ದಾಸ್ತಾನಿದ್ದು, ರೈತರು ಖರೀದಿಸುತ್ತಿದ್ದಾರೆ. ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗುತ್ತಿದೆ. ರಾಗಿ ಬಿತ್ತನೆಗೆ ಇನ್ನಷ್ಟು ಕಾಲಾವಕಾಶವಿದ್ದು, ಈ ವರ್ಷ ಬಿತ್ತನೆಯಲ್ಲಿ ಉತ್ತಮ ಸಾಧನೆಯಾಗುವ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ಡಾ.ಎಚ್.ಕೆ. ಶಿವಕುಮಾರ್, ಜಂಟಿ ನಿರ್ದೇಶಕರು, ಕೋಲಾರ