15ನೇ ಹಣಕಾಸು ಯೋಜನೆಯ ಅನುದಾನ ಹಂಚಿಕೆಗೆ ಪರ-ವಿರೋಧ

16-klr-3
Published on

ಕೋಲಾರ ಜಿಪಂ ವ್ಯಾಪ್ತಿಯ ವಿವಿಧ ಇಲಾಖೆ, ಅನಿರ್ಬಂಧಿತ ಅನುದಾನ, 15ನೇ ಹಣಕಾಸು ಯೋಜನೆ ಅನುದಾನಕ್ಕೆ ಕ್ರಿಯಾಯೋಜನೆ ರೂಪಿಸುವ ಸಂಬಂಧ ಪರ-ವಿರೋಧ ಅಭಿಪ್ರಾಯದ ನಡುವೆ ಆಯಾ ಸದಸ್ಯರ ಕ್ಷೇತ್ರಗಳಿಗೆ ಹಂಚಿಕೆ ಮಾಡಲು ತೀರ್ಮಾನಿಸಲಾಯಿತು.

ಜಿಪಂ ಸಭಾಂಗಣದಲ್ಲಿ ಗುರುವಾರ ನಡೆಸಿದ ಅನೌಪಚಾರಿಕ ಸಭೆಯಲ್ಲಿ ಸದಸ್ಯರ ನಡುವೆ ಒಮ್ಮತ ಅಭಿಪ್ರಾಯ ಮೂಡದೆ ಕಾವೇರಿದ ಚರ್ಚೆ ನಡೆಯಿತಾದರೂ ಸದಸ್ಯರ ಒಮ್ಮತ ಅಭಿಪ್ರಾಯದಂತೆ ತೀರ್ಮಾನ ತೆಗೆದುಕೊಳ್ಳೋಣ ಎಂದು ಜಿಪಂ ಅಧ್ಯಕ್ಷ ಸಿ.ಎಸ್.ವೆಂಕಟೇಶ್ ಸಲಹೆ ನೀಡಿದರು.

ಲಿಂಕ್ ಡಾಕ್ಯುಮೆಂಟ್‌ನಡಿ 11 ಇಲಾಖೆಗಳಿಗೆ 6.54 ಕೋಟಿ, ಅನಿರ್ಬಂಧಿತ ಅನುದಾನ 5.43 ಕೋಟಿ ಹಾಗೂ 15ನೇ ಹಣಕಾಸು ಯೋಜನೆಯಡಿ 4.51 ಕೋಟಿ ಸೇರಿ ಒಟ್ಟು 16.48 ಕೋಟಿ ರೂ.ಗಳನ್ನು ಸರ್ಕಾರ ಒದಗಿಸಿದೆ, ಇದನ್ನು ಬಳಸುವ ಬಗ್ಗೆ ಸದಸ್ಯರು ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಬೇಕೆಂದು ಜಿಪಂ ಉಪಕಾರ್ಯದರ್ಶಿ ಸಂಜೀವಪ್ಪ ಹೇಳಿದರು.

ಕಳೆದ ಸಾಲಿನಲ್ಲಿ ವಿವಿಧ ಇಲಾಖೆಯಿಂದ 7.54 ಕೋಟಿ ರೂ. ಸರ್ಕಾರಕ್ಕೆ ವಾಪಸಾಗಿದೆ. ಇದಕ್ಕೆ ಯಾರು ಹೊಣೆ, ಹಣ ವಾಪಸ್ ಪಡೆಯುವ ಬಗ್ಗೆ ಸಿಇಒ ಭರವಸೆ ನೀಡಿದ್ದರು, ಸಭೆಗೆ ಮಾಹಿತಿ ಒದಗಿಸುವಂತೆ ಸದಸ್ಯರಾದ ಶ್ರೀನಿವಾಸ್, ಅರವಿಂದ್ ಹಾಗೂ ಕೃಷ್ಣಪ್ಪ ಆಗ್ರಹಿಸಿದರು.

ಉತ್ತರಿಸಿದ ಸಿಇಒ ಎಚ್.ವಿ. ದರ್ಶನ್, ಆಡಳಿತಾತ್ಮಕ ಹಾಗೂ ಖಜಾನೆಯಲ್ಲಿನ ಕೆ-2ಸಮಸ್ಯೆಯಿಂದ ಹಣ ಬಳಕೆಯಾಗಲಿಲ್ಲ. ಇತರ ಜಿಲ್ಲೆಗಳಲ್ಲೂ ಸಮಸ್ಯೆಯಾಗಿದೆ. ಮೇಲಧಿಕಾರಿಗಳ ಜತೆ ಚರ್ಚಿಸಿದಾಗ ಕರೊನಾ ಹಿನ್ನೆಲೆಯಲ್ಲಿ ಮೊದಲು ಶೇ.50 ಹಣ ಬಿಡುಗಡೆ ಮಾಡುವುದಾಗಿ ಹಾಗೂ ಆದ್ಯತೆ ಮೇರೆಗೆ ಕೆಲಸ ಕೈಗೆತ್ತಿಕೊಳ್ಳುವಂತೆ ತಿಳಿಸಿದ್ದಾರೆ ಎಂದರು.

ಸದಸ್ಯ ಬಿ.ವಿ.ಮಹೇಶ್ ಮಾತನಾಡಿ, ವಿವಿಧ ಇಲಾಖೆಯಲ್ಲಿ ಕಳೆದ ಸಾಲಿನಲ್ಲೇ ಕೆಲಸ ಆಗಿದೆ, ಬಿಲ್ ಆಗದೆ ಗುತ್ತಿಗೆದಾರರು ಕಷ್ಟದಲ್ಲಿದ್ದಾರೆ. ಈ ಸಾಲಿನಲ್ಲಿ ಬಿಡುಗಡೆಯಾಗಿರುವ ಅನುದಾನವನ್ನು ಕ್ಷೇತ್ರವಾರು ಹಂಚಿಕೆ ಮಾಡಿ, ಅವರವರ ಇಷ್ಟ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

2015-16ನೇ ಸಾಲಿನಲ್ಲಿ ಹಿಂದಿನ ವರ್ಷದ ಉಳಿಕೆ ಕೆಲಸಕ್ಕೆ ಹಣ ಮೀಸಲಿಟ್ಟು ನಂತರ ಹೊಸ ಕಾಮಗಾರಿ ತೆಗೆದುಕೊಂಡಂತೆ ಈ ಸಲವೂ ಅನುದಾನ ಮೀಸಲಿಟ್ಟು ಉಳಿಕೆ ಹಣ ಹಂಚಿಕೆ ಮಾಡೋಣವೆಂದು ಸದಸ್ಯ ಅರವಿಂದ್ ಹೇಳುತ್ತಿದ್ದಂತೆ ಬಿ.ವಿ.ಮಹೇಶ್ ಇತರರು ಆಕ್ಷೇಪಿಸಿದರು. ಅಸಮಾಧಾನಗೊಂಡ ಅರವಿಂದ್ ಅಭಿಪ್ರಾಯ ವ್ಯಕ್ತಪಡಿಸಲು ಅವಕಾಶ ನೀಡದಿದ್ದರೆ ಸಭೆಯ ಅಗತ್ಯವಿಲ್ಲ, ಸಾಮಾನ್ಯ ಸಭೆಯಲ್ಲೇ ತೀರ್ಮಾನ ತೆಗೆದುಕೊಳ್ಳೋಣ ಎಂದು ಎದ್ದು ಹೊರಡಲು ಅನುವಾದಾಗ ಸಹ ಸದಸ್ಯರು ಸಮಾಧಾನಪಡಿಸಿದರು.

ಜಿಪಂ ಉಪಾಧ್ಯಕ್ಷೆ ಯಶೋದಾ ಕೃಷ್ಣಮೂರ್ತಿ, ವಿವಿಧ ಸ್ಥಾಯಿ ಸಮಿತಿ ಅಧ್ಯಕ್ಷರಾದ ಅರುಣ್‌ಕುಮಾರ್, ಚಿನ್ನಸ್ವಾಮಿಗೌಡ ಹಾಗೂ ಸದಸ್ಯರು ಹಾಜರಿದ್ದರು. ಅನೌಪಚಾರಿಕ ಚರ್ಚೆಯಲ್ಲಿ ಮಹಿಳಾ ಸದಸ್ಯೆಯರ ಬದಲು ಅವರ ಪತಿ ಪಾಲ್ಗೊಂಡು ತನ್ಮ ಕ್ಷೇತ್ರದ ಹಕ್ಕು ಮಂಡಿಸಿದ್ದು ಕಂಡುಬಂತು.

ಸದಸ್ಯರ ಕ್ಷೇತ್ರಕ್ಕೆ ಅನುದಾನ ಬಿಡಿ: ಜಿಪಂ ಅಧ್ಯಕ್ಷ, ಉಪಾಧ್ಯಕ್ಷರಿಗೆ ಹೆಚ್ಚುವರಿ ಅನುದಾನ ಮೀಸಲಿಡುವ ಬಗ್ಗೆ ಅಧ್ಯಕ್ಷ ವೆಂಕಟೇಶ್ ಕೋರಿದಾಗ ಇದು ಆಡಳಿತಾವಧಿಯ ಕಡೇ ವರ್ಷ. ಅನುದಾನವನ್ನು ಸದಸ್ಯರ ಕ್ಷೇತ್ರಕ್ಕೆ ಬಿಟ್ಟು ಬಿಡಿ, ಸರ್ಕಾರದಿಂದ ವಿಶೇಷ ಅನುದಾನ ಪಡೆದುಕೊಳ್ಳಿ ಎಂದು ಕಡ್ಡಿ ಮುರಿದಂತೆ ಉತ್ತರ ವ್ಯಕ್ತವಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net