ಸಾಮಾಜಿಕ ನ್ಯಾಯದಡಿ ಸರ್ಕಾರದ ಸವಲತ್ತು

2-klr-7 Alternative
Published on

ಕೋಲಾರ: ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸರ್ಕಾರದಿಂದ ಜಾರಿಗೊಂಡಿರುವ ಯೋಜನೆಗಳನ್ನು ಪಾರದರ್ಶಕವಾಗಿ ಅನುಷ್ಠಾನಕ್ಕೆ ತರಲು ಸಮಾಜ ಕಲ್ಯಾಣ ಇಲಾಖೆ, ಅಂಬೇಡ್ಕರ್ ಮತ್ತು ಜಗಜೀವನರಾಂ ಅಭಿವೃದ್ಧಿ ನಿಗಮದ ಅಧಿಕಾರಿಗಳು ಬದ್ಧತೆಯಿಂದ ಕೆಲಸ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಸಿ.ಸತ್ಯಭಾಮ ಸೂಚಿಸಿದರು.

ಜಿಲ್ಲಾಧಿಕಾರಿಗಳ ನ್ಯಾಯಾಂಗ ಸಭಾಂಗಣದಲ್ಲಿ ಗುರುವಾರ ನಡೆದ ಜಿಲ್ಲಾ ಜಾಗೃತಿ ಸಭೆಯಲ್ಲಿ ಮಾತನಾಡಿ, ಎಸ್‌ಸಿ ಮತ್ತು ಎಸ್‌ಟಿ ಅಭಿವೃದ್ಧಿಗೆ ಸರ್ಕಾರ ಅನುದಾನ ನೀಡುತ್ತಿದ್ದು, ಅರ್ಹರಿಗೆ ತಲುಪಿಸಬೇಕು ಎಂದರು.

ಭೂರಹಿತರಿಗೆ ನ್ಯಾಯಬದ್ಧವಾಗಿ ಭೂಮಿ ಮಂಜೂರು ಮಾಡಲಾಗುವುದು, ಜಿಲ್ಲೆಯಲ್ಲಿ ಲಭ್ಯವಿರುವ ಭೂಮಿಯನ್ನು ಸಾಮಾಜಿಕ ನ್ಯಾಯದಡಿ ಹಂಚಿಕೆ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದರು.

1ರಿಂದ 5ರವರೆಗಿನ ದುರಸ್ತಿ ಕಾರ್ಯ ಮಾಡುತ್ತಿದ್ದು, ಮೊದಲ ಹಂತದಲ್ಲಿ ಎಲ್ಲ ದಾಖಲೆ ಸರಿಯಿರುವ ದರಖಾಸ್ತು ಜಮೀನು ಸಾಗುವಳಿದಾರರಿಗೆ ಸಾಗುವಳಿ ಚೀಟಿ ನೀಡಲಾಗುತ್ತಿದೆ. ಸಾಗುವಳಿ ಚೀಟಿ ಇಲ್ಲದವರ ಪಟ್ಟಿ ತಯಾರಿಸಿ ಅರ್ಹರಿಗೆ ಸಾಗುವಳಿ ಚೀಟಿ ನೀಡಲಾಗುವುದು ಎಂದರು.

ನಗರಸಭೆ ಸದಸ್ಯ ಅಂಬರೀಷ್ ಮಾತನಾಡಿ, ಕೈಗಾರಿಕೆ ಸ್ಥಾಪನೆಗೆ ಏಕಗವಾಕ್ಷಿ ಪದ್ಧತಿಯಲ್ಲಿ ಎಸ್ಸಿ, ಎಸ್ಟಿಗಳಿಗೆ ಸಾಲ ಸೌಲಭ್ಯ ನೀಡಲು ಬ್ಯಾಂಕುಗಳು ಹಿಂದೇಟು ಹಾಕುತ್ತಿವೆ. ಜವಳಿ ಇಲಾಖೆಯಲ್ಲಿ ಕೈಗಾರಿಕೆ ಸ್ಥಾಪನೆಗೆ ಸಾಲ ನೀಡಲು ಅವಕಾಶ ಇದ್ದರೂ ಈವರೆಗೆ ಸೌಲಭ್ಯ ದೊರೆತಿಲ್ಲ ಎಂದರು.

ವಾಲ್ಮೀಕಿ ಸಮುದಾಯದ ಮುಖಂಡ ವೆಂಕಟರಾಮು, ಅಟ್ರಾಸಿಟಿ ಪ್ರಕರಣಗಳಲ್ಲಿ ಶೇ.80 ಭೂ ವ್ಯವಹಾರಕ್ಕೆ, ಶೇ.15 ನೀರಿಗೆ ಹಾಗೂ ಶೇ.5 ದೇವಸ್ಥಾನ ಪ್ರವೇಶಕ್ಕೆ ಸಂಬಂಧಿಸಿದ್ದಾಗಿದೆ. ಅಟ್ರಾಸಿಟಿ ಪ್ರಕರಣಗಳಲ್ಲಿ ಸಾಕ್ಷಿ ಮತ್ತು ಪಬ್ಲಿಕ್ ಪ್ರಾಸಿಕ್ಯೂಟರ್ ಸೂಕ್ತ ಸಹಕಾರವಿಲ್ಲದೆ ಸೋಲಾಗುತ್ತಿದೆ ಎಂದರು.

ಪ್ರತಿಕ್ರಿಯಿಸಿದ ಸಮಾಜ ಕಲ್ಯಾಣ ಇಲಾಖೆಯ ಪ್ರಭಾರ ಜಂಟಿ ನಿರ್ದೇಶಕ ಬಾಲಾಜಿ, ಮುಂದಿನ ಸಭೆಗೆ ಪಿಪಿ ಅವರನ್ನು ಆಹ್ವಾನಿಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗುವುದು ಎಂದರು.

ಶಾಸಕ ಕೆ.ಶ್ರೀನಿವಾಸಗೌಡ, ಎಂಎಲ್‌ಸಿ ಇಂಚರ ಗೋವಿಂದರಾಜು, ಜಿಪಂ ಸಿಇಒ ಎಚ್.ವಿ ದರ್ಶನ್, ಎಸ್ಪಿಗಳಾದ ಕಾರ್ತಿಕ್ ರೆಡ್ಡಿ, ಸುಜೀತಾ, ಎಎಸ್‌ಪಿ ಜಾಹ್ನವಿ, ಉಪ ವಿಭಾಗಾಧಿಕಾರಿ ಸೋಮ್‌ಶೇಖರ್, ಜಿಪಂ ಉಪಕಾರ್ಯದರ್ಶಿ ಸಂಜೀವಪ್ಪ, ಸಮಿತಿ ಸದಸ್ಯರಾದ ವೆಂಕಟೇಶ್, ರವೀಂದ್ರಕುಮಾರ್, ನಗರಸಭೆ ಆಯುಕ್ತ ಶ್ರೀಕಾಂತ್, ನಗರಾಭಿವೃಧಿ ಕೋಶದ ಯೋಜನಾಧಿಕಾರಿ ಕೆ.ರಂಗಸ್ವಾಮಿ ಉಪಸ್ಥಿತರಿದ್ದರು.

ಭೂಮಿ ಹಂಚಿಕೆಯಲ್ಲಿ ಸಾಕಷ್ಟು ಲೋಪ: ಕೋಲಾರ ತಾಲೂಕಿನಲ್ಲಿ ದರಖಾಸ್ತು ಭೂಮಿ ಹಂಚಿಕೆಯಲ್ಲಿ ಸಾಕಷ್ಟು ಲೋಪವಾಗಿದೆ. ಗೋಮಾಳ, ಸ್ಮಶಾನಕ್ಕೆ ಮೀಸಲಾದ ಜಾಗವನ್ನು ರಾಜಕಾರಣಿಗಳು ದರಖಾಸ್ತು ಯೋಜನೆಯಡಿ ಬೆಂಬಲಿಗರಿಗೆ ಹಂಚಿದ್ದಾರೆ, ಸರ್ಕಾರದ ನಿಯಮ ಉಲ್ಲಂಘಿಸಿರುವವರ ವಿರುದ್ಧ ಕ್ರಮ ಕೈಗೊಳ್ಳುವಂತ ಸಮಿತಿ ಸದಸ್ಯ ನಾಗನಾಳ ಮುನಿಯಪ್ಪ ಒತ್ತಾಯಿಸಿದಾಗ ಕಾನೂನು ಮೀರಿ ಭೂ ಮಂಜೂರಾತಿ ಮಾಡಿದಲ್ಲಿ ಭೂಮಿ ವಶಕ್ಕೆ ಪಡೆಯಲು ಉಪವಿಭಾಗಾಧಿಕಾರಿಗೆ ಅಧಿಕಾರವಿದೆ ಎಂದು ಡಿಸಿ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net