ಕಾರ್ಪೋರೇಟರ್ ರಾಜಕೀಯ ಬಿಟ್ಟು ಕೆಲಸ ಮಾಡಿ

2-klr-3
Published on

ಕೋಲಾರ: ದೇಶದ 544 ಸಂಸದರಲ್ಲಿ ನೀವೂ ಒಬ್ಬರು, ಕಾರ್ಪೋರೇಟರ್ ರೀತಿ ರಾಜಕೀಯ ಮಾಡೋದನ್ನು ಬಿಟ್ಟು ಕ್ಷೇತ್ರದ ಅಭಿವೃದ್ಧಿಗೆ ಜವಾಬ್ದಾರಿಯುತ ಸಂಸದರಾಗಿ ಕೆಲಸ ಮಾಡಿ ಎಂದು ನಗರಸಭೆ ಮಾಜಿ ಅಧ್ಯಕ್ಷ, ಸದಸ್ಯ ಬಿ.ಎಂ. ಮುಬಾರಕ್ ಸಂಸದ ಮುನಿಸ್ವಾಮಿಗೆ ಟಾಂಗ್ ನೀಡಿದರು.

ಬೈರೇಗೌಡ ನಗರದ ಬೃಹತ್ ವೇದಿಕೆಯಲ್ಲಿ ಕೆಪಿಸಿಸಿ ಅಧ್ಯಕ್ಷರ ಪದಗ್ರಹಣದ ಡಿಜಿಟಲ್ ನೇರ ವೀಕ್ಷಣೆ ಕಾರ್ಯಕ್ರಮದ ನೇತೃತ್ವ ವಹಿಸಿಕೊಂಡು ಪ್ರತಿಜ್ಞೆ ಸ್ವೀಕರಿಸಿ, ನಿವೃತ್ತ ಯೋಧರನ್ನು ಸನ್ಮಾನಿಸಿ, ಬಡವರಿಗೆ ಕಂಬಳಿ ವಿತರಿಸಿ ಮಾತನಾಡಿದರು.

ಕೋಲಾರ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 8 ವಿಧಾನಸಭೆಗಳಿವೆ. ಸಂಸದರು ಶಾಸಕರಾದ ಕೆ.ವೈ. ನಂಜೇಗೌಡ, ಎಂ.ರೂಪಕಲಾ ಹಾಗೂ ಜಿಲ್ಲೆಯ ಸಹಕಾರಿ ಸಂಸ್ಥೆಗಳನ್ನು ಟೀಕಿಸುವುದನ್ನೇ ಕಾಯಕವನ್ನಾಗಿಸದೆ ಅಭಿವೃದ್ಧಿಯೊಂದಿಗೆ ಎಲ್ಲ ಜಾತಿಗಳನ್ನು ಸಮನಾಗಿ ನೋಡುವ ಪ್ರವೃತ್ತಿ ಬೆಳೆಸಿಕೊಳ್ಳಲಿ ಎಂದು ಸಲಹೆ ನೀಡಿದರು.

ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾಗಿರುವುದರಿಂದ ಕಾರ್ಯಕರ್ತರಲ್ಲಿ ಹುರುಪು ಬಂದಿದ್ದು, ಬೂತ್‌ಮಟ್ಟದಲ್ಲಿ ಪಕ್ಷ ಸಂಘಟಿಸಿ ಮಾಜಿ ಸಂಸದ ಕೆ.ಎಚ್.ಮುನಿಯಪ್ಪ ನೇತೃತ್ವದಲ್ಲಿ ಕ್ಷೇತ್ರದಲ್ಲಿ ಮತ್ತೆ ಕಾಂಗ್ರೆಸ್ ಬಾವುಟ ಹಾರಿಸುವುದು ಶತಸಿದ್ಧ ಎಂದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ವೆಂಕಟೇಶಲು ಮಾತನಾಡಿ, ಪಕ್ಷದ ಮುಖಂಡ, ಕಾರ್ಯಕರ್ತರು ಪ್ರಜಾಪ್ರತಿನಿಧಿಯಾಗಿ ಜನರ ಕಷ್ಟ-ಸುಖಗಳಿಗೆ ಸ್ಪಂದಿಸಿದರೆ ಚುನಾವಣೆಯಲ್ಲಿ ಮತ ಕೇಳಲು ಹಕ್ಕಿರುತ್ತದೆ. ಈ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕು. ಸಂವಿಧಾನದ ಅರಿವು ಮೂಡಿಸಲು ಪೀಠಿಕೆಯನ್ನು ಕಾರ್ಯಕರ್ತರಿಗೆ ಮನನ ಮಾಡಿಸಿ ಉತ್ಸಾಹ ತುಂಬುವ ಕೆಲಸಕ್ಕೆ ಡಿಕೆಶಿ ಪದಗ್ರಹಣವನ್ನು ವೇದಿಕೆಯಾಗಿ ಬಳಸಲಾಗಿದೆ ಎಂದರು.

ಮುಖಂಡರಾದ ಕಾಡುಗುರು ನಾಗಭೂಷಣ್, ಜೆಕೆ.ಜಯರಾಂ, ನಗರಸಭೆ ಮಾಜಿ ಸದಸ್ಯ ರಮೇಶ್, ಬಾಬಾಜಾನ್, ನವಾಜ್, ಸದಸ್ಯರಾದ ನಾರಾಯಣಮ್ಮ, ಅಸ್ಲಂ, ಶಫಿವುಲ್ಲಾ, ರಮೇಶ್, ಜನಾರ್ದನ್, ಮುಖಂಡರಾದ ಜನ್ನಘಟ್ಟ ಕೃಷ್ಣಪ್ಪ, ರಾಮಲಿಂಗಾರೆಡ್ಡಿ, ನಾರಾಯಣಸ್ವಾಮಿ, ಪವನ್ ನಾರಾಯಣಸ್ವಾಮಿ, ರಾಮಯ್ಯ, ಗೋವಿಂದರಾಜು ಮತ್ತಿತರರಿದ್ದರು.

ವಿಶಿಷ್ಟ ಕಾರ್ಯಕ್ರಮ: ಬೆಳಗ್ಗೆ ಸರ್ವಧರ್ಮ ಪ್ರಾರ್ಥನೆ, ಲೋಕಕಲ್ಯಾಣಾರ್ಥ ಗಣಪತಿ ಹೋಮ ನಡೆಯಿತು. 2ನೇ ಮಹಾಯುದ್ಧದಲ್ಲಿ ಪಾಲ್ಗೊಂಡಿದ್ದ ಕೆಜಿಎಫ್‌ನ 96 ವರ್ಷದ ಲೆಪ್ಟಿನೆಂಟ್ ಕರ್ನಲ್ ಮುನಿಸ್ವಾಮಿ ಸೇರಿ ನಿವೃತ್ತ ಯೋಧರಾದ ವೆಂಕಟೇಶನಾಯಕ್, ಜಗನ್ನಾಥ್, ಶಂಕರ್, ಹಿನಾಕುಮಾರ್, ಡೇವಿಡ್, ಜನಾರ್ದನ್, ನಾರಾಯಣಪ್ಪ, ಶ್ರೀರಾಮಯ್ಯ ಮತ್ತಿತರ ನಿವೃತ್ತ ಯೋಧರು ಹಾಗೂ ಹುತಾತ್ಮ ಯೋಧರ ಪತ್ನಿಯರನ್ನು ಸನ್ಮಾನಿಸಲಾಯಿತು.

ಕಾಂಗ್ರೆಸ್ ಭವನ: ನಗರದ ಜಿಲ್ಲಾ ಕಾಂಗ್ರೆಸ್ ಭವನದಲ್ಲೂ ಕಾರ್ಯಕ್ರಮ ನಡೆಯಿತು. ವಂದೇಮಾತರಂ ಗೀತೆ ಹಾಡುವ ಜತೆಗೆ ಪ್ರತಿಜ್ಞೆ ಸ್ವೀಕರಿಸಿದರು. ಮಾಜಿ ಸಚಿವ ಕೆ.ಎ.ನಿಸಾರ್ ಅಹಮ್ಮದ್, ಕೂಡಾ ಮಾಜಿ ಅಧ್ಯಕ್ಷ ಅಥಾವುಲ್ಲಾ ಷರೀಫ್, ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಎಲ್.ಎ.ಮಂಜುನಾಥ್, ಕೆಪಿಸಿಸಿ ಒಬಿಸಿ ಉಪಾಧ್ಯಕ್ಷ ಎಸ್.ಮಂಜುನಾಥ್, ಕಿಸಾನ್‌ಖೇತ್ ಜಿಲ್ಲಾ ಧ್ಯಕ್ಷ ಊರುಬಾಗಿಲು ಶ್ರೀನಿವಾಸ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಸಾದ್ ಬಾಬು, ಎಸ್ಸಿ ಘಟಕ ಜಿಲ್ಲಾಧ್ಯಕ್ಷ ಕೆ. ಜಯದೇವ, ಎ.ಟಿ ವಿಭಾಗ ಜಿಲ್ಲಾಧ್ಯಕ್ಷ ನಾಗರಾಜ್, ಅಲ್ಪಸಂಖ್ಯಾತ ಘಟಕದ ಇಕ್ಬಾಲ್ ಅಹಮದ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net