

ಕೋಲಾರ: ಜಿಲ್ಲೆಯಲ್ಲಿ ಕರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮರಣ ಪ್ರಮಾಣ ಹೆಚ್ಚಾಗದಂತೆ ಮುನ್ನೆಚರಿಕೆ ವಹಿಸಿ ಸೋಂಕಿತರಿಗೆ ಚಿಕಿತ್ಸೆ ನೀಡಬೇಕು ಎಂದು ಜಿಲ್ಲಾಧಿಕಾರಿ ಸಿ.ಸತ್ಯಭಾಮ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಡಳಿತ ಭವನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕರೊನಾ ಸಂಬಂಧ ಕೈಗೊಂಡಿರುವ ಅಗತ್ಯ ಕ್ರಮಗಳ ಕುರಿತು ಚರ್ಚಿಸಲು ಕರೆದಿದ್ದ ಆರೋಗ್ಯ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ರೋಗಿಗಳಿಗೆ ಪೌಷ್ಟಿಕ ಆಹಾರ ನೀಡುವ ಮೂಲಕ ಅವರಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸಬೇಕು. ಇದರಿಂದ ಕಡಿಮೆ ಅವಧಿಯಲ್ಲಿ ಗುಣವಾಗುತ್ತಾರೆ. ದ್ವಿದಳ ಧಾನ್ಯ, ಮೊಳಕೆ ಕಾಳು, ಮೊಟ್ಟೆ, ಬಾಳೆಹಣ್ಣು, ಚಪಾತಿ ನೀಡುತ್ತಿದ್ದು, ಇನ್ನೂ ಹೆಚ್ಚಿನ ಪೌಷ್ಟಿಕ ಆಹಾರ ನೀಡಲು ಕ್ರಮವಹಿಸಬೇಕು ಎಂದು ಜಿಲ್ಲಾ ಶಸ್ತ್ರ ಚಿಕಿತ್ಸಕರಿಗೆ ಸೂಚಿಸಿದರು.
ಜಿಲ್ಲೆಯಲ್ಲಿ ಪ್ರಸ್ತುತ 63 ಪಾಸಿಟಿವ್ ಸಕ್ರಿಯ ಪ್ರಕರಣಗಳಿದ್ದು, ಆರ್.ಎಲ್. ಜಾಲಪ್ಪ ಆಸ್ಪತ್ರೆಯಲ್ಲಿ 27 ಹಾಗೂ ಎಸ್.ಎನ್.ಆರ್. ಆಸ್ಪತ್ರೆಯಲ್ಲಿ 36 ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. 57 ಮಂದಿ ಗುಣವಾಗಿ ಬಿಡುಗಡೆ ಹೊಂದಿದ್ದಾರೆ. ಜೂನ್ 10ರಿಂದ ಜೂನ್ ಅಂತ್ಯದ ವೇಳೆಗೆ 4,333 ಗಂಟಲು ದ್ರವ ಪರೀಕ್ಷೆ ಮಾಡಲಾಗಿದೆ. ಸರಾಸರಿ ಪ್ರತಿದಿನ 206 ಜನರ ಟೆಸ್ಟ್ ಮಾಡಲಾಗುತ್ತಿದ್ದು, ಇದನ್ನು 320ಕ್ಕೆ ಹೆಚ್ಚಿಸಲಾಗುವುದು ಎಂದರು.
ಎಸ್.ಎನ್.ಆರ್. ಆಸ್ಪತ್ರೆಯಲ್ಲಿ 200 ಬೆಡ್ ವ್ಯವಸ್ಥೆಯಿದ್ದು, ಇನ್ನೂ 100 ಬೆಡ್ ವ್ಯವಸ್ಥೆ ಮಾಡಲಾಗುವುದು. ಹೆಚ್ಚಿನ ಪ್ರಕರಣ ಕಂಡು ಬಂದರೆ ಕೆಜಿಎಫ್ ಸಂಭ್ರಮ್ ಆಸ್ಪತ್ರೆಯಲ್ಲಿ 200 ಬೆಡ್, ಬಂಗಾರಪೇಟೆಯ ಶ್ಯಾಮ್ ಆಸ್ಪತ್ರೆಯಲ್ಲಿ 150 ಬೆಡ್ ವ್ಯವಸ್ಥೆ ಮಾಡಿಕೊಳ್ಳಲಾಗುವುದು. ಚಿಕಿತ್ಸೆ ನೀಡಲು 5 ಫಿಜಿಷಿಯನ್‌ಗಳಿದ್ದು, ಪ್ರಕರಣ ಹೆಚ್ಚಾದರೆ ಖಾಸಗಿ ಆಸ್ಪತ್ರೆಗಳ ಫಿಜಿಷಿಯನ್‌ಗಳನ್ನು ತೆಗೆದುಕೊಳ್ಳಲಾಗುವುದು. ಕರೋನಾ ಚಿಕಿತ್ಸೆ ನೀಡಲು ವೈದ್ಯರ 10 ತಂಡ ರಚಿಸಲಾಗುವುದು ಎಂದರು.
ಜಿಲ್ಲೆಯಲ್ಲಿ 41,000 ಪಿಪಿಇ ಕಿಟ್ , 14,400 ಎನ್-95 ಮಾಸ್ಕ್, ಅಗತ್ಯ ಸಂಖ್ಯೆಯ ವೆಂಟಿಲೇಟರ್ ಲಭ್ಯವಿದೆ. ಡಿಜಿಟಲ್ ನರ್ವ್ ಸೆಂಟರ್‌ನಲ್ಲಿ ವಾರ್‌ರೂಂ ತೆರೆದಿದ್ದು, ಕೋವಿಡ್ ಸಂಬಂಧಿತ ಸಹಾಯವಾಣಿಗೆ ಕರೆ ಮಾಡಿ ಗೊಂದಲ ನಿವಾರಿಸಿಕೊಳ್ಳಬಹುದು ಎಂದರು.
ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಎಸ್.ಜಿ.ನಾರಾಯಣಸ್ವಾಮಿ ಮಾತನಾಡಿ, ಎಸ್.ಎನ್.ಆರ್. ಆಸ್ಪತ್ರೆಯಲ್ಲಿ ಸಜ್ಜುಗೊಳಿಸಿರುವ 200 ಹಾಸಿಗೆಗಳಲ್ಲಿ 90 ಬೆಡ್‌ಗಳು ಶಂಕಿತರಿಗೆ , 70 ಬೆಡ್ ಪಾಸಿಟಿವ್ ಬಂದವರಿಗೆ ಉಳಿದ 40 ಅನ್ನು ಐಸಿಯು ಬೆಡ್‌ಗಳಾಗಿ ಮೀಸಲಿಡಲಾಗಿದೆ ಎಂದರು.
ಅಪರ ಜಿಲ್ಲಾಧಿಕಾರಿ ಬಿ.ಶಿವಸ್ವಾಮಿ, ಡಿಎಚ್‌ಒ ಡಾ.ಎಸ್.ಎನ್.ವಿಜಯ್‌ಕುಮಾರ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಚಾರಿಣಿ, ಜಾಲಪ್ಪ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಮೊಹೀನುದ್ದೀನ್ ಅಜಿಂ ಉಪಸ್ಥಿತರಿದ್ದರು.