

ಕೋಲಾರ: ಕೌಟುಂಬಿಕ ಕಲಹದಿಂದ ಬೇಸತ್ತು ಇಬ್ಬರು ಮಕ್ಕಳೊಂದಿಗೆ ಬುಧವಾರ ನಗರದ ಕೋಡಿಕಣ್ಣೂರು ಕೆರೆಯಲ್ಲಿ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆಯನ್ನು ರಕ್ಷಿಸಿ ಸಾಂತ್ವನ ಕೇಂದ್ರಕ್ಕೆ ದಾಖಲಿಸಲಾಗಿದೆ.
ಕೆರೆಯಂಗಳದ ಕೆಲವೆಡೆ ಮಣ್ಣು ಅಗೆದು ಹೊಂಡಗಳನ್ನಾಗಿಸಿದ್ದು ಅದರಲ್ಲಿ ತುಂಬಿರುವ ಗಲೀಜು ನೀರಿನಲ್ಲಿ ಮಕ್ಕಳೊಂದಿಗೆ ಮುಳುಗಲು ಹೋಗಿದ್ದಾಗ ಕೆರೆ ಏರಿಯ ಮೇಲಿನ ರಸ್ತೆಯಲ್ಲಿ ಕಾರ್ಯ ನಿಮಿತ್ತ ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸುತ್ತಿದ್ದ ನಗರದ ನಿವಾಸಿ, ಮನ್ವಂತರ ಪರಿಸರ ಪಡೆ ಸಂಚಾಲಕ ಎ.ಬಾಲನ್ ಗಮನಿಸಿ ತಕ್ಷಣ ಮಹಿಳೆ ಮತ್ತು ಮಕ್ಕಳನ್ನು ರಕ್ಷಿಸಿ ಗ್ರಾಮಾಂತರ ಪೊಲೀಸರಿಗೆ ಒಪ್ಪಿಸಿದ್ದಾರೆ.
ಸಲ್ಮಾ(25) ನಗರದ ರಹಮತ್ ನಗರದ ನಿವಾಸಿ. ಗಂಡನಿಂದ ದೂರವಾಗಿರುವುದರಿಂದ ತಂದೆ ಮನೆಯಲ್ಲಿದ್ದಾರೆ. ಕೌಂಟುಂಬಿಕ ಕಲಹದಿಂದ ತಂದೆ ಗದರಿಸಿದ್ದರಿಂದ ನೊಂದು ಆತ್ಮಹತ್ಯೆಗೆ ಯತ್ನಿಸಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.ಜಿಲ್ಲಾಧಿಕಾರಿ ಸೂಚನೆ ಮೇರೆಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ಮಹಿಳೆಯನ್ನು ಕೌನ್ಸೆಲಿಂಗ್ ನಡೆಸಿ ನಂತರ ಸಾಂತ್ವನ ಕೇಂದ್ರಕ್ಕೆ ಒಪ್ಪಿಸಿದ್ದಾರೆ.