ತಲೆ ಅಡ ಇಟ್ಟಾದರೂ ಅಭಿವೃದ್ಧಿಗೆ ಮುಂದಾಗುವೆ

23-klr-7
Published on

ಕೋಲಾರ: ಅವಿಭಜಿತ ಜಿಲ್ಲೆಯಲ್ಲಿ ಜೆಡಿಎಸ್ ಸಂಘಟಿಸಿ ಎಲ್ಲ ಕ್ಷೇತ್ರಗಳಲ್ಲೂ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳುವ ಮೂಲಕ ಎಚ್.ಡಿ.ಕುಮಾರಸ್ವಾಮಿ ಅವರನ್ನು ಮತ್ತೆ ಮುಖ್ಯಮಂತ್ರಿ ಗಾದಿಗೇರಿಸಲು ಪಣತೊಟ್ಟು ಕಾರ್ಯನಿರ್ವಹಿಸುವೆ. ಎಚ್‌ಡಿಕೆ ಮತ್ತೆ ಸಿಎಂ ಆದಲ್ಲಿ ನನ್ನ ತಲೆ ಅಡ ಇಟ್ಟಾದರೂ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಮುಂದಾಗುವೆ ಎಂದು ವಿಧಾನಪರಿಷತ್ ನೂತನ ಸದಸ್ಯ ಇಂಚರ ಗೋವಿಂದರಾಜು ಹೇಳಿದ್ದಾರೆ.

ನಗರ ಹೊರವಲಯದ ಕೊಂಡರಾಜನಹಳ್ಳಿಯ ಶ್ರೀ ಆಂಜನೇಯಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ಸುದ್ದಿಗಾರರೊಂದಿಗೆ ಮಾತನಾಡಿ, ಜಿಲ್ಲಾ ಮುಖಂಡರು, ಕಾರ್ಯಕರ್ತರ ಆಶಯದಂತೆ ಪಕ್ಷದ ವರಿಷ್ಠರು ನನಗೆ ಜವಾಬ್ದಾರಿಯುತ ಸ್ಥಾನ ನೀಡಿದ್ದಾರೆ. ಪಕ್ಷ ಸಂಘಟನೆಯೊಂದಿಗೆ ಜಿಲ್ಲೆಯ ಸಮಸ್ಯೆಗಳಿಗೆ ಮೇಲ್ಮನೆಯಲ್ಲಿ ಧ್ವನಿಯಾಗುವೆ ಎಂದು ಭರವಸೆ ನೀಡಿದರು.

ಪಕ್ಷದಲ್ಲಿ ನಿಷ್ಠಾವಂತ ಸಾಮಾನ್ಯ ಕಾರ್ಯಕರ್ತರಿಗೂ ಉನ್ನತ ಸ್ಥಾನಮಾನ, ಅವಕಾಶ ಹುಡುಕಿಕೊಂಡು ಬರುತ್ತದೆ ಎಂಬುದಕ್ಕೆ ನಾನೇ ಉದಾಹರಣೆ. ನನ್ನ ಜೀವನ ಚರಿತ್ರೆ ಬಿಳಿ ಹಾಳೆಯಂತಿದ್ದು, ಕೈ, ಬಾಯಿ ಶುದ್ಧವಾಗಿದೆ. ಯಾರಿಗೂ ಅನ್ಯಾಯ ಮಾಡಿಲ್ಲ. ಸಮಾಜಸೇವೆ ಮಾಡಿಕೊಂಡು ಬಂದಿದ್ದೇನೆ. ಇಷ್ಟು ದಿನ ನಮ್ಮ ತಾಲೂಕು, ಜಿಲ್ಲೆ ಎನ್ನುವಂತಿತ್ತು. ಈಗ ನನ್ನ ಜಿಲ್ಲೆ, ರಾಜ್ಯ ಎನ್ನುವ ಜವಾಬ್ದಾರಿ ಬಂದಿದೆ. ಇದು ನನ್ನ ಕೊನೇ ಅಧ್ಯಾಯ. ಶಾಸಕ ಕೆ.ಶ್ರೀನಿವಾಸಗೌಡರ ಸಲಹೆ ಸೂಚನೆ, ಅನುಭವ ಪಡೆದು ಮುನ್ನಡೆಯುವೆ ಎಂದರು.

ಶಾಸಕ ಕೆ.ಶ್ರೀನಿವಾಸಗೌಡ ಮಾತನಾಡಿ, ಕ್ಷೇತ್ರದಲ್ಲಿ ಎರಡು ಬಾರಿ ಸೋತಿದ್ದ ನನ್ನನ್ನು ಕಳೆದ ಚುನಾವಣೆಯಲ್ಲಿ ಗೆಲ್ಲಿಸಿಕೊಂಡು ಬರಲು ಗೋವಿಂದರಾಜು ಬಲಗೈ ರೀತಿ ಕೆಲಸ ಮಾಡಿದ್ದಾರೆ ಎಂದರು.

ವಿಧಾನಪರಿಷತ್ ಸದಸ್ಯ ತೂಪಲ್ಲಿ ಚೌಡರೆಡ್ಡಿ, ಒಕ್ಕಲಿಗರ ಸಂಘದ ನಿರ್ದೇಶಕ ವಕ್ಕಲೇರಿ ರಾಮಚಂದ್ರ, ಎಪಿಎಂಸಿ ಅಧ್ಯಕ್ಷ ಮಂಜುನಾಥ್, ಮಾಜಿ ಅಧ್ಯಕ್ಷ ವಡಗೂರು ಡಿ.ಎಲ್. ನಾಗರಾಜ್, ಜಿಪಂ ಸದಸ್ಯ ನಂಜುಂಡಪ್ಪ, ಜೆಡಿಎಸ್ ತಾಲೂಕು ಅಧ್ಯಕ್ಷ ಬಾಬುಮೌನಿ, ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಮುದುವಾಡಿ ಮಂಜುನಾಥ್, ನಗರಸಭೆ ಸದಸ್ಯ ರಾಕೇಶ್, ಮುಖಂಡರಾದ ಕುರುಬೂರು ಶಂಕರೇಗೌಡ, ವಿ. ಮುನಿರಾಜು, ಬಣಕನಹಳ್ಳಿ ನಟರಾಜ್, ಸಿಎಂಆರ್ ಹರೀಶ್, ಮುದುವಾಡಿ ಶ್ರೀನಿವಾಸ್, ಲೆಕ್ಕಪರಿಶೋಧಕ ದೇವರಾಜ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಯಲವಾರ ಸೊಣ್ಣೇಗೌಡ, ಜಿಪಂ ಮಾಜಿ ಅಧ್ಯಕ್ಷೆ ಮಂಗಮ್ಮ ಮುನಿಸ್ವಾಮಿ, ನಗರಸಭೆ ಮಾಜಿ ಸದಸ್ಯ ಮಂಜುನಾಥ್, ದ್ಯಾವರಪ್ಪ, ಸುಬ್ರಮಣಿಗೌಡ, ಲಕ್ಷ್ಮೀನಾರಾಯಣ ಇದ್ದರು.

ಟೆಂಪಲ್ ರನ್: ಕೊಂಡರಾಜನಹಳ್ಳಿ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ಗೋವಿಂದರಾಜು ದರ್ಗಾ ಮೊಹಲ್ಲಾದ ಮಸೀದಿಗೆ ಭೇಟಿ ನೀಡಿ ಗಾಂಧಿವನದಲ್ಲಿನ ಗಾಂಧಿ ಪ್ರತಿಮೆ, ನಗರದ ಬಂಗಾರಪೇಟೆ ವೃತ್ತದ ಡಾ.ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿದ ನಂತರ ಮೆಥೋಡಿಸ್ಟ್ ಚರ್ಚ್‌ಗೆ ಭೇಟಿ ನೀಡಿದರು. ಮಧ್ಯಾಹ್ನ ನಿವಾಸಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಪಕ್ಷದ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳಿಂದ ಅಭಿನಂದನೆಗಳ ಮಹಾಪೂರವೇ ಹರಿಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net