ಮಠಗಳಿಗೆ ಭಕ್ತರ ಸಹಕಾರ ಅಗತ್ಯ

22-klr-13
Published on

ಮಡಿವಾಳ: ಸಾರ್ವಜನಿಕರು ಹಾಗೂ ಭಕ್ತರು ಸಹಕಾರ ನೀಡಿದಾಗ ಮಠಗಳು ಅಭಿವೃದ್ಧಿಹೊಂದಿ ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಸಮಾಜಕ್ಕೆ ಕೊಡುಗೆ ನೀಡಲು ಸಾಧ್ಯ ಎಂದು ಶಾಸಕ ಕೆ. ವೈ ನಂಜೇಗೌಡ ಅಭಿಪ್ರಾಯಪಟ್ಟರು.

ತೊರ‌್ನಹಳ್ಳಿ ಗ್ರಾಪಂನ ಬೆಳ್ಳಾವಿ ಗ್ರಾಮದಲ್ಲಿ ಶ್ರೀಮದ್ ಬೆಳ್ಳಾಪುರಿ ವೀರಧರ್ಮ ಸಂಸ್ಥಾಪನಾ ಮಠದ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಘಟಕದಿಂದ ಸೋಮವಾರ ಆಯೋಜಿಸಿದ್ದ ಬೆಳ್ಳಾಪುರಿ ವೀರಧರ್ಮ ಸಂಸ್ಥಾಪನಾ ಮಠಾಧ್ಯಕ್ಷ ಬ್ರಹ್ಮಪಟ್ಟದ ಮಹಾಂತ ಶಿವಾಚಾರ್ಯ ಸ್ವಾಮೀಜಿ 49ನೇ ಜನ್ಮದಿನ ಹಾಗೂ ಬೆಳ್ಳಾವಿ ಸಂಸ್ಥಾಪನಾ ಮಠದ ಮಹಾದ್ವಾರ, ಸಿಸಿ ರಸ್ತೆ ಲೋಕಾರ್ಪಣೆ ಮಾಡಿ ಮಾತನಾಡಿದರು.

ಮಠವನ್ನು ಪಕ್ಷಾತೀತವಾಗಿ ಬೆಳೆಸಲು ಸಂಪೂರ್ಣ ಸಹಕಾರ ನೀಡಲಾಗುವುದು. ಮಹಾಂತ ಶಿವಾಚಾರ್ಯ ಸ್ವಾಮೀಜಿಗಳು ಮುಖ್ಯಮಂತ್ರಿಗಳಿಗೆ ಆಪ್ತರಾಗಿರುವುದರಿಂದ ಮಠ ಹಾಗೂ ಗ್ರಾಮದ ಅಭಿವೃದ್ಧಿಗೆ ಹೆಚ್ಚಿನ ಅನುದಾನ ತರಬೇಕು ಎಂದರು.

ಬೆಳ್ಳಾವಿ ಗ್ರಾಮದಲ್ಲಿ ಮುಖ್ಯಮಂತ್ರಿಗಳ ಸಹಕಾರದಿಂದ 55 ಲಕ್ಷ ರೂ.ಗಳ ಸಿಸಿ ರಸ್ತೆ ಅಭಿವೃದ್ಧಿ ಮಾಡಲಾಗಿದ್ದು, ಉಳಿದ 400 ಮೀಟರ್ ಸಿಸಿ ರಸ್ತೆಗಳ ಅಭಿವೃದ್ಧಿಗೆ ಸಹಕಾರ ನೀಡಲಾಗಿದೆ. ನನ್ನ ಅವಧಿಯಲ್ಲಿ ಹಂತ-ಹಂತವಾಗಿ ಎಲ್ಲ ರಸ್ತೆ ಅಭಿವೃದ್ಧಿ ಪಡಿಸಲಾಗುವುದು. ತಾಲೂಕಿನ ಅಭಿವೃದ್ಧಿಗೆ ಸಂಬಂಧಪಟ್ಟ ಸಚಿವರು, ಸಿಎಂ ಬಳಿ ಮನವಿ ಮಾಡಿ ಹೆಚ್ಚು ಅನುದಾನ ತರುವುದಾಗಿ ನುಡಿದರು.

ಪಟ್ಟಣದಲ್ಲಿ ಬಸವೇಶ್ವರಸ್ವಾಮಿ ದೇವಾಲಯ ಸಮಿತಿಗೆ ಮಂಜೂರಾದ ಜಮೀನಿನಲ್ಲಿ ಐಟಿಐ ಕಾಲೇಜಿಗೂ ಜಮೀನು ಮಂಜೂರಾಗಿತ್ತು. ಆದರೆ 1.20 ಗುಂಟೆ ಜಮೀನು ಬಸವೇಶ್ವರ ದೇವಾಲಯ ಸ್ವಾಮಿ ಸಮಿತಿಗೆ ಮೀಸಲಿರಿಸಿ 4 ಎಕರೆ ಜಮೀನಿನಲ್ಲಿ ಐಟಿಐ ಕಾಲೇಜು ನಿರ್ಮಿಸಲಾಗುವುದು ಎಂದು ಪ್ರಕಟಿಸಿದರು.

ಮಹಾಂತ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಮುಂದಿನ ದಿನಗಳಲ್ಲಿ ವೀರಶೈವ ಸಮಾಜ ಹಾಗೂ ಭಕ್ತರ ಸಹಕಾರದಿಂದ ಮಾಲೂರು ಪಟ್ಟಣದಲ್ಲಿ ಬಸವೇಶ್ವರ ಅನುಭವ ಮಂಟಪ ನಿರ್ಮಿಸಿ ಸಿಎಂ ಯಡಿಯೂರಪ್ಪ ಅವರಿಂದ ಉದ್ಘಾಟಿಸಲಾಗುವುದು. ಮಠದಿಂದ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಕ್ರಮ ಹೆಚ್ಚು ಹಮ್ಮಿಕೊಳ್ಳಲಾಗುವುದು ಎಂದರು.

ಸಂಜೀವಿನಿ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಹೂಡಿ ವಿಜಯ್‌ಕುಮಾರ್, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಅಧ್ಯಕ್ಷ ಶಿವಶಂಕರಯ್ಯ, ಉಪಾಧ್ಯಕ್ಷ ಕೆ.ವಿ.ಚನ್ನವಿರದೇವರು, ಮಂಜುಳಮ್ಮ, ಮಾಲೂರು ಯೋಜನಾ ಪ್ರಾಧಿಕಾರದ ಅಧ್ಯಕ್ಷ ಸತೀಶ್ ಆರಾಧ್ಯ, ವೀರಶೈವ ಲಿಂಗಾಯತ ಯುವ ವೇದಿಕೆ ಜಿಲ್ಲಾಧ್ಯಕ್ಷ ಷಣ್ಮುಖಯ್ಯ, ತಹಸೀಲ್ದಾರ್ ಮಂಜುನಾಥ್, ತಾಪಂ ಇಒ ವಿ.ಕೃಷ್ಣಪ್ಪ, ಮಠದ ಗೌರವ ಕಾರ್ಯದರ್ಶಿ ಬಿ.ವಿ.ವೀರಬದ್ರಯ್ಯ, ಮುಖಂಡರಾದ ಬಿ.ಸಿ.ರುದ್ರೇಶ್, ಚನ್ನಬಸವಪ್ಪ ಒಡೆಯರ್, ನಂಜುಂಡಪ್ಪ, ಅಕ್ಕನ ಬಳಗದ ಅಧ್ಯಕ್ಷೆ ವನಜಮ್ಮ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net