ಹೂವು ಬೆಳೆಗಾರರ ನಷ್ಟ ಪರಿಹಾರಕ್ಕೆ 2.43 ಕೋಟಿ ರೂ. ಬಿಡುಗಡೆ

21-klr-1 Alternative
Published on

ಕೋಲಾರ: ಲಾಕ್‌ಡೌನ್ ಘೋಷಣೆಯಿಂದ ಹೂವಿನ ಬೆಳೆಗೆ ಬೇಡಿಕೆ ಇಲ್ಲದೆ ಬೆಳೆಗಾರರು ನಷ್ಟ ಅನುಭವಿಸಿರುವ ಹಿನ್ನೆಲೆಯಲ್ಲಿ ಸರ್ಕಾರ ೋಷಿಸಿರುವ ಪರಿಹಾರದಡಿ ಜಿಲ್ಲೆಗೆ 2.43 ಕೋಟಿ ರೂ. ಬಿಡುಗಡೆಯಾಗಿದ್ದು, ಮೊದಲ ಹಂತದಲ್ಲಿ ಖಾತೆಗಳಿಗೆ ಹಣ ಜಮಾ ಮಾಡುವ ಪ್ರಕ್ರಿಯೆ ಪ್ರಗತಿಯಲ್ಲಿದೆ.

ಜಿಲ್ಲೆಯಲ್ಲಿ 2019-20ನೇ ಸಾಲಿನಲ್ಲಿ 2109.38 ಹೆಕ್ಟೇರ್‌ನಲ್ಲಿ ಚೆಂಡು ಹೂವು, ಗುಲಾಬಿ, ಇನ್ನಿತರ ಹೂವುಗಳನ್ನು ಬೆಳೆಯುತ್ತಿದ್ದು, ರಾಜ್ಯದ ವಿವಿಧೆಡೆ ಹಾಗೂ ನೆರೆಯ ಆಂಧ್ರ, ತಮಿಳುನಾಡು ಇನ್ನಿತರ ಕಡೆ ಹೆಚ್ಚು ರವಾನೆಯಾಗುತ್ತಿತ್ತು. ಲಾಕ್‌ಡೌನ್‌ನಿಂದ ಬೆಳೆಗಾರರು ಸಂಕಷ್ಟಕ್ಕೆ ಗುರಿಯಾಗಿದ್ದರು. ಸಂಕಷ್ಟಕ್ಕೆ ಸ್ಪಂದಿಸಿದ ರಾಜ್ಯ ಸರ್ಕಾರ ಹೆಕ್ಟೇರ್‌ಗೆ 25,000 ರೂ. ಪರಿಹಾರ ಘೋಷಿಸಿ ಮಾ.24ರಿಂದ ಮೇ 15ರವರೆಗೆ ಎಲ್ಲ ಬಗೆಯ ಹೂವು ಬೆಳೆ ಕಟಾವಿಗೆ ಬಂದು ಬೇಡಿಕೆ ಇಲ್ಲದೆ ನಷ್ಟ ಅನುಭವಿಸಿರುವ ರೈತರು ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಿತ್ತು.

ಜಿಲ್ಲೆಗೆ ಸರ್ಕಾರದ ಪರಿಹಾರಧನವಾಗಿ 2.43 ಕೋಟಿ ರೂ.ಬಿಡುಗಡೆ ಆಗಿದೆ. ಜಿಲ್ಲೆಯಲ್ಲಿ 2178 ತಾಕುಗಳಲ್ಲಿ 1025 ಹೆಕ್ಟೇರ್ ಪ್ರದೇಶದಲ್ಲಿ ಹೂ ಬೆಳೆ ನಷ್ಟಕ್ಕೀಡಾಗಿದ್ದು, ಮುಂಗಾರು, ಹಿಂಗಾರು ಬೆಳೆ ಸಮೀಕ್ಷೆಯಲ್ಲಿರುವಂತೆ 1121 ತಾಕುಗಳ ಪೈಕಿ ಎಫ್‌ಐಡಿ ಸಂಖ್ಯೆ ಹೊಂದಿರುವ ರೈತರಿಗೆ ತಾಲೂಕು, ಹೋಬಳಿ ಮಟ್ಟದ ಸಮಿತಿ ಅನುಮೋದನೆಯೊಂದಿಗೆ ಮೊದಲ ಹಂತದಲ್ಲಿ ಡಿಬಿಟಿ ಮೂಲಕ ಖಜಾನೆಯ ಕೆ-2ಗೆ ಸಲ್ಲಿಕೆಯಾಗಿದ್ದು, ಎರಡ್ಮೂರು ದಿನದೊಳಗೆ ರೈತರ ಖಾತೆಗೆ ಹಣ ಜಮಾ ಆಗಲಿದೆ.

ಎಫ್‌ಐಡಿ ಸಂಖ್ಯೆ ಹೊಂದಿಲ್ಲದ ರೈತರ 1796 ತಾಕುಗಳಲ್ಲಿ ಹೂವು ಬೆಳೆದಿದ್ದವರಲ್ಲಿ 463 ಜನ ಆರ್‌ಟಿಸಿ, ಆಧಾರ್ ಸಂಖ್ಯೆ, ಪಾಸ್‌ಬುಕ್ ಜೆರಾಕ್ಸ್, ಪಡಿತರ ಚೀಟಿ ಹಾಗೂ ಪಾಸ್‌ಪೋರ್ಟ್ ಅಳತೆ ಭಾವಚಿತ್ರ ಸಲ್ಲಿಸಿದ್ದರೆ ಉಳಿದವರು ಇನ್ನೂ ದಾಖಲೆ ಒದಗಿಸದಿರುವುದರಿಂದ ಪರಿಹಾರ ಧನ ಜಮೆ ವಿಳಂಬವಾಗುತ್ತಿದೆ.

ಎಫ್‌ಐಡಿ ಸಂಖ್ಯೆ ಹೊಂದಿಲ್ಲದ ರೈತರು ಎಫ್‌ಐಡಿ ಸಂಖ್ಯೆ ಸೃಜಿಸಲು ಸೂಕ್ತ ದಾಖಲೆಯನ್ನು ತಾಲೂಕು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರಿಗೆ ಸಲ್ಲಿಸಲು ಮೇ 30 ಕೊನೇ ದಿನ ನಿಗದಿಪಡಿಸಲಾಗಿತ್ತು. ಆದರೆ ಹೆಚ್ಚಿನ ಸಂಖ್ಯೆಯಲ್ಲಿ ರೈತರು ದಾಖಲಾತಿ ಸಲ್ಲಿಸದ ಹಿನ್ನೆಲೆಯಲ್ಲಿ ಜೂ. 26 ಸಂಜೆ 5 ಗಂಟೆಯೊಳಗೆ ಸಲ್ಲಿಸಲು ಕಡೇ ದಿನ ನಿಗದಿಪಡಿಸಲಾಗಿದೆ. ನಂತರ ಸಲ್ಲಿಕೆಯಾಗುವ ಅರ್ಜಿ ಹಾಗೂ ದಾಖಲಾತಿಗಳನ್ನು ಪರಿಹಾರ ಧನಕ್ಕೆ ಪರಿಗಣಿಸುವುದಿಲ್ಲ ಎಂದು ಉಪ ನಿರ್ದೇಶಕಿ ಎಂ.ಗಾಯತ್ರಿ ತಿಳಿಸಿದ್ದಾರೆ.

ಇದಲ್ಲದೆ ಹೂವು ಬೆಳೆದು ನಷ್ಟಕ್ಕೀಡಾಗಿರುವ ರೈತರಿಂದ ಪರಿಹಾರಕ್ಕೆ ಅರ್ಜಿ ಆಹ್ವಾನಿಸಲಾಗಿ 2708 ಅರ್ಜಿಗಳು ಸಲ್ಲಿಕೆಯಾಗಿದ್ದು, ಅರ್ಜಿಗಳನ್ನು ಹೋಬಳಿ ಮಟ್ಟದ ಸಹಾಯಕ ತೋಟಗಾರಿಕೆ ಅಧಿಕಾರಿ, ಕೃಷಿ ಅಧಿಕಾರಿ ಮತ್ತು ಗ್ರಾಮ ಲೆಕ್ಕಾಧಿಕಾರಿಗಳನ್ನೊಳಗೊಂಡ ಸಮಿತಿ ಪರಿಶೀಲಿಸಿ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಿದ ನಂತರ ಎರಡನೇ ಹಂತದಲ್ಲಿ ಪರಿಹಾರ ಧನ ರೈತರ ಖಾತೆಗೆ ಜಮಾ ಆಗಲಿದೆ.

ಹೂವು ಬೆಳೆಗಾರರಿಗೆ ನೀಡಲು 2.43 ಕೋಟಿ ರೂ. ಬಿಡುಗಡೆಯಾಗಿದ್ದು, ಸರ್ಕಾರದ ಮಾರ್ಗಸೂಚಿಯಂತೆ ಮೊದಲ ಹಂತದಲ್ಲಿ ಬೆಳೆ ಸಮೀಕ್ಷೆಯಲ್ಲಿರುವ ರೈತರ ಬೆಳೆ ವಿಸ್ತೀರ್ಣಕ್ಕೆ ಅನುಗುಣವಾಗಿ ಪರಿಹಾರ ಪಾವತಿಸುವ ಪ್ರಕ್ರಿಯೆ ವಿವಿಧ ಹಂತದಲ್ಲಿ ಪ್ರಗತಿಯಲ್ಲಿದೆ. ಎಂ.ಗಾಯತ್ರಿ, ಉಪನಿರ್ದೇಶಕಿ, ತೋಟಗಾರಿಕೆ ಇಲಾಖೆ ಸರ್ಕಾರ ಹೆಕ್ಟೇರ್‌ಗೆ 25,000 ರೂ, ಘೋಷಿಸಿರುವ ಮೊತ್ತ ಸಾಲದಾದರೂ ಸಂಕಷ್ಟದ ಸಂದರ್ಭದಲ್ಲಿ ಹೂವಿನ ಎಸಳಿನಷ್ಟಾದರೂ ಪರಿಹಾರ ಸಿಗುತ್ತಿದೆ ಎಂಬುದಷ್ಟೇ ಸಮಾಧಾನ. ಆದಷ್ಟು ಬೇಗ ಖಾತೆಗೆ ಹಣ ಜಮಾ ಮಾಡಿದರೆ ಅನುಕೂಲ. ವೆಂಕಟೇಶಪ್ಪ, ರೈತ ಕೋಲಾರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net