

ಕೋಲಾರ: ನಗರದಾದ್ಯಂತ ಚೂಡಾಮಣಿ ಸೂರ್ಯಗ್ರಹಣದ ಹಿನ್ನೆಲೆಯಲ್ಲಿ ಭಾನುವಾರ ದೇವಾಲಯಗಳು ಗ್ರಹಣ ಮೋಕ್ಷ ಕಾಲ ಮಧ್ಯಾಹ್ನ 1.34ರ ನಂತರ ಸ್ವಚ್ಛತಾ ಕಾರ್ಯ ನಡೆಸಿ ಪೂಜಾ ವಿಧಿ ಆರಂಭಿಸಲಾಯಿತು.
ಬಹುತೇಕ ಎಲ್ಲ ದೇವಾಲಯಗಳು ಶನಿವಾರ ರಾತ್ರಿ ಮುಚ್ಚಿದ ನಂತರ ಭಾನುವಾರ ಗ್ರಹಣ ಮೋಕ್ಷದ ನಂತರವೇ ಬಾಗಿಲು ತೆರೆಯಿತು. ಕೆಲ ದೇವಾಲಯಗಳಲ್ಲಿ ಮುಂಜಾನೆ ಪೂಜೆ ಮುಗಿಸಿದ ನಂತರ ದೇವಾಲಯಗಳನ್ನು ಬಂದ್ ಮಾಡಲಾಯಿತು.
ನಗರದ ಕೆಇಬಿ ಕಾಲನಿಯ ವಿದ್ಯಾ ಗಣಪತಿ ದೇವಾಲಯ, ಪಂಚಮುಖಿ ಹನು, ಶನೈಶ್ವರಸ್ವಾಮಿ, ಸತ್ಯಮ್ಮ, ವೇಣುಗೋಪಾಲಸ್ವಾಮಿ, ಪಿಸಿ ಬಡಾವಣೆಯ ಶ್ರೀ ಕೋದಂಡರಾಮಸ್ವಾಮಿ ದೇವಾಲಯ ಸೇರಿ ಅನೇಕ ದೇವಾಲಯಗಳನ್ನು ಗ್ರಹಣದಿಂದಾಗಿ ಮುಚ್ಚಲಾಗಿತ್ತು. ಮಧ್ಯಾಹ್ನ ಮೂರ್ತಿಗಳನ್ನು ತೊಳದು ಸ್ವಚ್ಚತಾ ಕಾರ್ಯ ನಡೆಸಿದ ನಂತರ ಪೂಜೆ ಆರಂಭಿಸಲಾಯಿತು.
ಹೋಮಹವನ: ಕೆಲ ದೇವಾಲಯಗಳಲ್ಲಿ ಕೆಲವು ರಾಶಿ ನಕ್ಷತ್ರಗಳವರಿಗೆ ಗ್ರಹಣ ದೋಷವಿದ್ದ ಕಾರಣ ವಿಶೇಷ ಹೋಮ, ಹವನ ನಡೆಸಲಾಯಿತು. ನಗರದ ಅಮಾನಿಕೆರೆ ಕಟ್ಟೆ ಮೇಲಿನ ಶ್ರೀ ಗಣಪತಿ, ಪರಶುರಾಮ ಹಾಗೂ ಗುರು ದಕ್ಷಿಣಾಮೂರ್ತಿ ದೇವಾಲಯದಲ್ಲಿ ಮಧ್ಯಾಹ್ನ 2.30ರಿಂದ ಸಂಜೆ 5.30ರವರೆಗೆ ಗ್ರಹಣ ದೋಷವಿರುವ ದೋಷವಿರುವ ಕೃತಿಕ ನಕ್ಷತ್ರ, ರೋಹಿಣಿ ನಕ್ಷತ್ರ, ವೃಷಭ ರಾಶಿ, ಮೃಗಶಿರ ನಕ್ಷತ್ರ, ಮಿಥುನ ರಾಶಿ, ಆರಿದ್ರಾ ನಕ್ಷತ್ರ, ಪುನರ್ವಸು ನಕ್ಷತ್ರ, ಸಿಂಹರಾಶಿ, ಕನ್ಯಾರಾಶಿಯವರು ನವಧಾನ್ಯಗಳು, ಗೋಧಿಯನ್ನು ದಾನ ನೀಡಿ ದೋಷ ಪರಿಹಾರಕ್ಕೆ ಪ್ರಾರ್ಥಿಸಿದರು. ಅರ್ಚಕ ಸಿ. ಸೋಮಶೇಖರ ದೀಕ್ಷಿತ್ ಪೂಜಾಕೈಂಕರ್ಯ ನೆರವೇರಿಸಿದರು.
ಗ್ರಹಣ ಮೋಕ್ಷದ ನಂತರ ಸಂಜೆ ದೇವಾಲಯಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಹರಿದು ಬಂದರು. ಕರೊನಾ ಭೀತಿಯಿಂದ ದೇವಾಲಯಗಳಿಗೆ ಬರುವ ಸಂಖ್ಯೆ ಕ್ಷೀಣಿಸಿತ್ತಾದರೂ ಗ್ರಹಣದ ನಂತರ ಜನರ ಬರುವಿಕೆ ಹೆಚ್ಚಾಯಿತು.
ಅಂಗಡಿ, ಮುಂಗಟ್ಟು ಕ್ಲೋಸ್: ಸೂರ್ಯಗ್ರಹಣದ ಹಿನ್ನೆಲೆಯಲ್ಲಿ ಕೆಲ ಅಂಗಡಿ ಮುಂಗಟ್ಟು ಮುಚ್ಚಿದ್ದವು, ಗ್ರಹಣ ಮೋಕ್ಷದವರೆಗೆ ಜನರ ದಟ್ಟಣೆಯೂ ಕಡಿಮೆ ಇತ್ತು. ಕೋಲಾರದಲ್ಲೂ ಚೂಡಾಮಣಿ ಸೂರ್ಯಗ್ರಹಣ ಗೋಚರಿಸಿದೆ. ನೆರಳಿನಾಟವನ್ನು ಕೆಲವರು ತಮ್ಮ ಕ್ಯಾಮರಾದಲ್ಲಿ ಸೆರೆ ಹಿಡಿದರೆ ಇನ್ನು ಕೆಲವರು ಸೋಲಾರ್ ದರ್ಶಕದ ಮೂಲಕ ಗ್ರಹಣ ವೀಕ್ಷಿಸಿದರು.