

ಕೋಲಾರ: ನಗರದ ಸರ್.ಎಂ.ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗಣದ ಆವರಣದಲ್ಲಿ ಮರಗಳನ್ನು ಕಡಿದಿರುವುದಕ್ಕೆ ಕ್ರೀಡಾಪಟುಗಳು ಮತ್ತು ಪರಿಸರ ಪ್ರೇಮಿಗಳಿಂದ ಆಕ್ರೋಶ ವ್ಯಕ್ತವಾಗಿದೆ.
ಮರ ಕಡಿಯುವುದಕ್ಕೆ ಅರಣ್ಯ ಇಲಾಖೆಯಿಂದ ಅನುಮತಿ ಪಡೆಯದೆ ಹನನ ಮಾಡಿರುವುದು ಕಾನೂನು ಬಾಹಿರವಾದ್ದರಿಂದ ಜಿಲ್ಲಾಧಿಕಾರಿ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ಕತ್ತರಿಸಿದ ಮರಗಳನ್ನು ಎಲ್ಲಿಗೆ ಸಾಗಿಸಲಾಗಿದೆ, ಇದರಿಂದ ಇಲಾಖೆಗೆ ಆಗಿರುವ ನಷ್ಟವೆಷ್ಟು ಎಂದು ಪ್ರಶ್ನಿಸಿರುವ ಕ್ರೀಡಾಪಟುಗಳು ಕಾನೂನು ಪ್ರಕಾರ ಹರಾಜು ಹಾಕದಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ದೇವಿಕಾರಾಣಿ ಅವರು ಇಲಾಖೆಯ ಆಸ್ತಿ ತನ್ನ ಸ್ವಂತದ್ದು ಎಂದು ಭಾವಿಸಿರುವಂತಿದೆ. ಕ್ರೀಡಾ ವಸತಿ ಶಾಲೆಯಲ್ಲಿದ್ದ ಹಳೇ ದಿನಪತ್ರಿಕೆ ಇನ್ನಿತರ ವಸ್ತುಗಳನ್ನೂ ಜಿಲ್ಲಾಡಳಿತದ ಗಮನಕ್ಕೆ ತರದೆ ವಿಲೇವಾರಿ ಮಾಡಿರುವುದು ಸರಿಯಲ್ಲ ಎಂದು ಹಿರಿಯ ಕ್ರೀಡಾಪಟು ಹಾಬಿ ರಮೇಶ್ ಅನುಮಾನ ವ್ಯಕ್ತಪಡಿಸಿದ್ದಾರೆ.
ಜಿಲ್ಲಾ ಕ್ರೀಡಾಂಗಣದಲ್ಲಿ ಅಭಿವೃದ್ಧಿ ಕಾಮಗಾರಿ ನಡೆಯುವ ವೇಳೆ ಗೆದ್ದಲು ಹಿಡಿದಿದ್ದ ಹಳೇ ಮರ ತೆರವುಗೊಳಿಸಲಾಗಿದೆ, ಅರಣ್ಯ ಇಲಾಖೆಯಿಂದ ಅನುಮತಿ ಪಡೆಯಬೇಕೆಂದು ನನಗೆ ಯಾರು ಹೇಳಿರಲಿಲ್ಲ. ಕ್ರೀಡಾ ವಸತಿ ನಿಲಯದಲ್ಲಿ ಸ್ವಚ್ಛತೆಗಾಗಿ ಅಲ್ಪ ಪ್ರಮಾಣದಲ್ಲಿ ದಾಸ್ತಾನು ಮಾಡಿದ್ದ ಹಳೇ ಪೇಪರ್, ಪ್ಯಾಕಿಂಗ್‌ಗೆ ಬಳಸಿದ ಡಬ್ಬಗಳನ್ನು ಗುಜರಿಗೆ ಹಾಕಲಾಗಿದೆ, ಯಾವುದೇ ಅಕ್ರಮ ನಡೆಸಿಲ್ಲ, ಅನಗತ್ಯ ಟೀಕೆ ಬೇಸರ ತಂದಿದೆ. ದೇವಿಕಾರಾಣಿ, ಸಹಾಯಕ ನಿರ್ದೇಶಕಿ, ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕೋಲಾರ