ಉತ್ತಮ ಜೀವನ ಪದ್ಧತಿಗೆ ಮಾಸ್ಕ್ ಬಳಸಿ

18-klr-2
Published on

ಕೋಲಾರ: ದೇಶದಲ್ಲಿ ಕಂಪ್ಯೂಟರ್, ಶೌಚಗೃಹ ಬಳಕೆ ರೂಢಿಯಾಗಿರುವಂತೆ ಉತ್ತಮ ಜೀವನ ಪದ್ಧತಿಗೆ ಮಾಸ್ಕ್ ಬಳಕೆಯೂ ರೂಢಿಯಾಗಬೇಕು ಎಂದು ಜಿಲ್ಲಾಧಿಕಾರಿ ಸಿ.ಸತ್ಯಭಾಮ ಹೇಳಿದರು.

ಜಿಲ್ಲಾಡಳಿತ ಭವನದಲ್ಲಿ ಗುರುವಾರ ಮಾಸ್ಕ್ ದಿನಾಚರಣೆ ಪ್ರಯುಕ್ತ ಸರ್ಕಾರಿ ನೌಕರರ ಸಂಘದಿಂದ ನೀಡಿದ 20,000 ಮಾಸ್ಕ್‌ಗಳನ್ನು ವಿತರಿಸಿ ಮಾತನಾಡಿ, ಕರೊನಾ ಹೆಚ್ಚುತ್ತಿದ್ದರೂ ಎಚ್ಚರಿಕೆ ಮರೆತಿದ್ದೇವೆ. ಕರೊನಾ ಸಂಪೂರ್ಣ ಮುಕ್ತವಾಗುವವರೆಗೂ ಮಾಸ್ಕ್ ಬಳಕೆ ರೂಢಿಸಿಕೊಳ್ಳಬೇಕು, ಜಪಾನ್‌ನಂತೆ ಸದಾ ಮಾಸ್ಕ್ ಬಳಸುವುದರಿಂದ ಉತ್ತಮ ಜೀವನ ಪದ್ಧತಿ ನಮ್ಮದಾಗುತ್ತದೆ ಎಂದರು.

ಜಿಲ್ಲೆಯ ಕರೊನಾ ಸೋಂಕಿತರಲ್ಲಿ 28 ಮಂದಿ ಗುಣವಾಗಿದ್ದಾರೆ. 19 ಮಂದಿ ಚಿಕಿತ್ಸೆಯಲ್ಲಿದ್ದಾರೆ. ಸೋಂಕಿತರಲ್ಲಿ 45 ವರ್ಷದ ವ್ಯಕ್ತಿಯೊಬ್ಬರು ಇತರ ಕಾಯಿಲೆಯಿಂದ ಬಳಲುತ್ತಿರುವುದರಿಂದ ಆರೋಗ್ಯ ವಿಷಮಸ್ಥಿತಿಯಲ್ಲಿದೆ. ಜಿಲ್ಲೆಗೆ ಕಪ್ಪುಚುಕ್ಕೆಯಾಗುವುದನ್ನು ತಪ್ಪಿಸಲು ಪ್ರಕರಣವನ್ನು ಸವಾಲಾಗಿ ಸ್ವೀಕರಿಸಿ ಜೀವ ಉಳಿಸಲು ಎಲ್ಲ ಪ್ರಯತ್ನ ನಡೆಸಲಾಗುತ್ತಿದೆ ಎಂದರು.

ಎಎಸ್ಪಿ ಬಿ.ಶಿವಸ್ವಾಮಿ ಮಾತನಾಡಿ, ಕರೊನಾ ವಾರಿಯರ್ಸ್ ಪಟ್ಟಿಯಲ್ಲಿ ಕೆಲ ಇಲಾಖೆಯನ್ನು ಮಾತ್ರ ಸೇರಿಸಲಾಗಿದೆ. ಆದರೆ ಎಲ್ಲ ಇಲಾಖೆ ಅಧಿಕಾರಿ, ಸಿಬ್ಬಂದಿ ಕೆಲಸ ಮಾಡಿರುವುದರಿಂದ ಅವರನ್ನೂ ಪಟ್ಟಿಗೆ ಸೇರಿಸಬೇಕೆಂಬ ಸರ್ಕಾರಿ ನೌಕರರ ಸಂಘದ ಮನವಿ ಬಗ್ಗೆ ಸರ್ಕಾರದ ಗಮನಕ್ಕೆ ತರಲಾಗುವುದು ಎಂದರು.

ಮಾಲೂರಿನ ಸಿಲ್ವರ್ ಕ್ರಸ್ಟ್ ಗಾರ್ಮೆಂಟ್ಸ್‌ನ ಪ್ರತಿನಿಧಿ ಗಾಯತ್ರಿ, ಡಿಡಿಎಲ್‌ಆರ್ ಗೋಪಾಲಯ್ಯ, ಸರ್ಕಾರಿ ನೌಕರರ ಸಂಘದ ರಾಜ್ಯ ಕಾರ್ಯದರ್ಶಿ ಸುರೇಶ್‌ಬಾಬು, ಮಾಜಿ ಜಿಲ್ಲಾಧ್ಯಕ್ಷ ಕೆ.ಎನ್.ಮಂಜುನಾಥ್ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net