ಪೇಟೆಚಾಮನಹಳ್ಳಿಗೆ ಒಲಿದ ಅದೃಷ್ಟ

inchara nomination
Published on

ಪಾ.ಶ್ರೀ.ಅನಂತರಾಮ್ ಕೋಲಾರ

ನಗರದ ಅತ್ಯಂತ ಹಳೇ ಹಾಗೂ ಪ್ರತಿಷ್ಠಿತ ಬಡಾವಣೆಗಳಲ್ಲಿ ಪೇಟೆಚಾಮನಹಳ್ಳಿಯೂ ಒಂದು. 65 ವರ್ಷಗಳ ಹಿಂದೆ ನಗರಸಭೆ ವ್ಯಾಪ್ತಿಗೆ ಒಳಪಟ್ಟು ರೈತಪರ ಹೋರಾಟಗಾರ, ಮಾಜಿ ಶಾಸಕ ದಿವಂಗತ ಪಿ.ವೆಂಕಟಗಿರಿಯಪ್ಪ ಅವರ ಸ್ಮರಣಾರ್ಥ ಪಿಸಿ ಬಡಾವಣೆಯಾಗಿದೆ.

ವಿಧಾನಸಭೆಯಿಂದ ಮೇಲ್ಮನೆಗೆ ನಡೆಯಲಿರುವ ಚುನಾವಣೆಗೆ ಜೆಡಿಎಸ್ ಅಭ್ಯರ್ಥಿ ಆಗಿರುವ ಇಂಚರ ಗೋವಿಂದರಾಜು ಪಿಸಿ ಬಡಾವಣೆಯಲ್ಲಿ ಅರಳಿರುವುದು ವಿಶಿಷ್ಟ. ಭೂ ಚಳವಳಿಯ ನೇತಾರ ದಿ. ಪಿ.ವೆಂಕಟಗಿರಿಯಪ್ಪ ಸಹ ಇದೇ ಬಡಾವಣೆ ನಿವಾಸಿಯಾಗಿದ್ದರು. ಕೋಲಾರ ವಿಧಾನಸಭಾ ಕ್ಷೇತ್ರದಿಂದ 1962 ಮತ್ತು 1967ರಲ್ಲಿ ಎರಡು ಬಾರಿ ಪಕ್ಷೇತರರಾಗಿ ಆಯ್ಕೆಯಾಗಿ ಮೂಲಕ ಬಡಾವಣೆಯ ಹಿರಿಮೆ-ಗಿರಿಮೆ ಹೆಚ್ಚಿಸಿದ್ದಾರೆ.

ಕಮ್ಯೂನಿಸ್ಟ್ ತತ್ವ ಸಿದ್ಧಾಂತಕ್ಕೆ ಮಾರು ಹೋಗಿದ್ದ ಪಿ.ವೆಂಕಟಗಿರಿಯಪ್ಪ ಅವರನ್ನು ಕಾಂಗ್ರೆಸ್ಸಿಗರು ಸೆಳೆಯುವಲ್ಲಿ ಸಫಲರಾಗಿದ್ದರಿಂದ 1988-1994ರವರೆಗೆ ವಿಧಾನ ಪರಿಷತ್ ಸದಸ್ಯರಾಗುವ ಅವಕಾಶ ಸಿಕ್ಕಿತು.

ಗೋವಿಂದರಾಜು ವಿದ್ಯಾರ್ಥಿ ದೆಸೆಯಿಂದಲೇ ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು, ರಾಜಕಾರಣಿಗಳಿಗೆ ಚುನಾವಣೆ ಸಂದರ್ಭದಲ್ಲಿ ಆರ್ಥಿಕ ನೆರವು ನೀಡುವ ಮೂಲಕ ಎಲ್ಲಾ ಪಕ್ಷಗಳ ಜತೆ ಒಳ್ಳೆಯ ಸಂಪರ್ಕವಿಟ್ಟುಕೊಂಡಿದ್ದಾರೆಯಾದರೂ ಜೆಡಿಎಸ್ ಪಕ್ಷದ ಮಾಸ್ಟರ್ ಮೈಂಡ್ ಎಂದೇ ಕರೆಯಲ್ಪಡುವ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಗರಡಿಯಲ್ಲಿ ಕಲಿತ ರಾಜಕೀಯ ಪಟ್ಟುಗಳ ಫಲದಿಂದ ಮೇಲ್ಮನೆಗೆ ಆಯ್ಕೆಯಾಗಲಿರುವ ಅದೃಷ್ಟಶಾಲಿಗಳಲ್ಲಿ ಒಬ್ಬರಾಗಿದ್ದಾರೆ.

ಬಿಕಾಂ ಪದವಿ ಮುಗಿಸಿರುವ ಇಂಚರ ಮೇಲ್ಮನೆಗೆ ಹೋಗಲು ಶತಪ್ರಯತ್ನ ನಡೆಸಿದ ಜೆಡಿಎಸ್‌ನ ಹಿರಿಯರನ್ನು ಹಿಂದಿಕ್ಕಿ ದೊಡ್ಡಗೌಡರ ಆಶೀರ್ವಾದ ಪಡೆದು ರಾಜಕೀಯ ವಲಯದಲ್ಲಿ ಅಚ್ಚರಿ ಮೂಡಿಸಿದ್ದಾರೆ. ಪಿಸಿ ಬಡಾವಣೆಯಲ್ಲಿ ಈಗ ಪಿ.ವೆಂಕಟಗಿರಿಯಪ್ಪ ಕೇವಲ ನೆನಪಾಗಿ ಉಳಿದಿದ್ದಾರೆ. ಇವರ ಮನೆಗೆ ಕೂಗಳತೆಯಲ್ಲಿರುವ ಇಂಚರ ನಿವಾಸ ಮುಂದಿನ ದಿನಗಳಲ್ಲಿ ಜೆಡಿಎಸ್ ಶಕ್ತಿ ಕೇಂದ್ರವಾಗುವ ಲಕ್ಷಣ ಕಾಣಬರುತ್ತಿದೆ.

ಕೋಲಾರ ಮತ್ತು ಚಿಕ್ಕಬಳ್ಳಾಪುರ ಸೇರಿ ಒಕ್ಕಲಿಗರು ಹೆಚ್ಚಿರುವ ಜಿಲ್ಲೆಗಳಲ್ಲಿ ಪಕ್ಷ ಸಂಘಟನೆ ಜವಾಬ್ದಾರಿ ಹೊರಲಿರುವ ಗೋವಿಂದರಾಜು ಈಗಾಗಲೆ ಜಿಲ್ಲಾ ಕೇಂದ್ರದಲ್ಲಿ ಪಕ್ಷದ ಚಟುವಟಿಕೆಗಳಿಗೆ ಸೂರು ಹುಡುಕಲು ಆಪ್ತರಿಗೆ ಸೂಚಿಸಿದ್ದಾರೆ ಎನ್ನಲಾಗಿದೆ.

ಕೋಲಾರ-ಬಂಗಾರಪೇಟೆ ರಸ್ತೆಯಲ್ಲಿರುವ ಪಕ್ಷಕ್ಕೆ ಸೇರಿದ ನಿವೇಶನದಲ್ಲಿ ಕಚೇರಿ ಕಟ್ಟಡ ನಿರ್ಮಾಣವಾಗಬೇಕೆಂಬುದು ಅನೇಕರ ಆಸೆಯಾಗಿದ್ದು ಇಂಚರ ಕನಸಿನ ಕಟ್ಟಡ ಎಲ್ಲಿ ನಿರ್ಮಾಣವಾಗುತ್ತದೋ ನೋಡಬೇಕು.

ಪಕ್ಷದ ವರಿಷ್ಠರ ಮೇಲಿನ ನಂಬಿಕೆಯಿಂದ ಜೆಡಿಎಸ್ ಸೇರಿರುವ ಇಂಚರ ಎದುರು ಅನೇಕ ಸಮಸ್ಯೆ ಮತ್ತು ಸವಾಲುಗಳಿವೆ. ಎರಡೂ ಜಿಲ್ಲೆಯಲ್ಲಿ ಇರುವುದು ಒಬ್ಬರು ಜೆಡಿಎಸ್ ಶಾಸಕರು ಮಾತ್ರ, ವಿಧಾನ ಪರಿಷತ್ ಪ್ರತಿನಿಧಿಸುತ್ತಿರುವ ಪದವೀಧರರ ಕ್ಷೇತ್ರದ ಆರ್.ಚೌಡರೆಡ್ಡಿ ಬಗ್ಗೆ ಜಿಲ್ಲೆಯಲ್ಲಿ ಅಷ್ಟೇನು ಒಲವಿಲ್ಲ, ಇಂಚರಗೆ ಪಕ್ಷವನ್ನು ತಳದಿಂದ ಕಟ್ಟಲು ಕಾಂಗ್ರೆಸ್ ಮತ್ತು ಬಿಜೆಪಿ ಜತೆ ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡಿರುವ ಮುಖಂಡರು ಅವಕಾಶ ನೀಡುವರೇ ಎಂಬುದು ಜಿಜ್ಞಾಸೆಯನ್ನುಂಟು ಮಾಡಿದೆ.

ಜೆಡಿಎಸ್‌ಗೆ ಎರಡೂ ಜಿಲ್ಲೆಯಲ್ಲಿ ತಕ್ಕಮಟ್ಟಿಗೆ ಅಲ್ಪಸಂಖ್ಯಾತರು, ಹಿಂದುಳಿದ ವರ್ಗ ರಕ್ಷಣೆ ನೀಡುತ್ತ ಬಂದಿದೆಯಾದರೂ ಜಿಲ್ಲೆಯವರೇ ಆದ ನಸೀರ್ ಅಹ್ಮದ್ ಸಹ ಮತ್ತೊಮ್ಮೆ ಮೇಲ್ಮನೆಗೆ ಪ್ರವೇಶ ಮಾಡುತ್ತಿರುವುದರಿಂದ ಈ ವರ್ಗವನ್ನು ಒಲಿಸಿಕೊಳ್ಳಲು ದೊಡ್ಡಮಟ್ಟದಲ್ಲಿ ರಣತಂತ್ರ ರೂಪಿಸುವುದು ಇಂಚರಾಗೆ ಸವಾಲಾಗಬಹುದು.

ಸುಂದರ ನಗರ ನಿರ್ಮಾಣಕ್ಕೆ ಆಸೆ: ಜಿಲ್ಲಾ ಕೇಂದ್ರವಾಗಿರುವ ಕೋಲಾರ ನಗರ ಹಳ್ಳಿಗಿಂತ ಕಡೆಯಾಗಿದೆ, ಸರ್ಕಾರ ಮತ್ತು ಜನರ ಸಹಕಾರದಿಂದ ಸುಂದರ ನಗರವನ್ನಾಗಿಸಬೇಕೆಂಬುದು ನನ್ನ ಕನಸು. ಪಕ್ಷ ಸಂಘಟನೆಗೆ ಕ್ರಿಯಾಶೀಲ ಕಾರ್ಯಕರ್ತರ ಪಡೆ ರಚಿಸಿ ಅವರ ಮೂಲಕ ಜನರ ವಿಶ್ವಾಸ ಗಳಿಸುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುವೆ, ನನಗೆ ರಾಜಕೀಯಕ್ಕಿಂತ ಜನ ಸೇವೆ ಮುಖ್ಯ, ಶೀಘ್ರ ನನ್ನ ಕನಸಿನ ಯೋಜನೆಗಳನ್ನು ಪ್ರಕಟಿಸಿ ಜಾರಿಗೆ ತರಲು ಶ್ರಮಿಸುವೆ ಎಂದು ಇಂಚರಾ ಗೋವಿಂದರಾಜು ವಿಜಯವಾಣಿಗೆ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net