

ಕೋಲಾರ: ನನ್ನ ಪತಿಗೆ ಹೆಣ್ಣು ಮಕ್ಕಳ ಮೇಲೆ ಅಪಾರ ಗೌರವವಿದೆ, ಬಂಗಾರಪೇಟೆ ಸೇರಿ ಜಿಲ್ಲೆಯ ವಿವಿಧೆಡೆ ಕೆಲಸ ಮಾಡಿರುವ ಸ್ಥಳಗಳಲ್ಲಿ ಹೆಸರು ಕೆಡಿಸಿಕೊಂಡಿಲ್ಲ, ಆದರೂ ಕೆಲವರು ತೇಜೋವಧೆಗಾಗಿ ಇಲ್ಲ ಸಲ್ಲದ ಆರೋಪ ಮಾಡಿದ್ದಾರೆ ಎಂದು ಶ್ರೀನಿವಾಸಪುರ ಎಪಿಎಂಸಿ ಸಹಾಯಕ ಕಾರ್ಯದರ್ಶಿ ಪಿ.ಎಸ್.ಜಗನ್ನಾಥ್ ಪತ್ನಿ ಲತಾ ಅಳಲು ತೋಡಿಕೊಂಡಿದ್ದಾರೆ.
ಕರ್ತವ್ಯದಲ್ಲಿದ್ದ ನನ್ನ ಗಂಡನ ಮೇಲೆ ಜೂ.9ರಂದು ಎಪಿಎಂಸಿ ಅಧ್ಯಕ್ಷ, ಕಾರ್ಯದರ್ಶಿ ಮತ್ತು ಇನ್ನಿತರರ ಸಮ್ಮುಖದಲ್ಲಿ ಕೆಲವರು ಹಲ್ಲೆ ಮಾಡಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಮಾಡಿದ್ದಾರೆ, ಒಂದು ವೇಳೆ ನನ್ನ ಪತಿ ತಪ್ಪು ಮಾಡಿದ್ದರೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬಹುದಿತ್ತು ಎಂದು ಸೋಮವಾರ ಕುಟುಂಬ ಸದಸ್ಯರೊಂದಿಗೆ ವಿಜಯವಾಣಿ ಕಚೇರಿಗೆ ಬಂದು ತಪ್ಪಿಸ್ಥರಿಗೆ ಶಿಕ್ಷೆಯಾಗಬೇಕೆಂದು ಕೋರಿದ್ದಾರೆ.
ಪತಿ ಮೇಲಿನ ಹಲ್ಲೆಗೆ ಸಮಿತಿ ಅಧ್ಯಕ್ಷರು ಹಾಗೂ ಕಾರ್ಯದರ್ಶಿಯ ಪ್ರಚೋದನೆ ಕಾರಣವಾಗಿರುವುದು ವಿಡಿಯೋದಲ್ಲಿ ಸ್ಪಷ್ಟವಾಗಿದೆ, ಘಟನೆಯಿಂದ ನನ್ನ ಪತಿ ಮಾನಸಿಕವಾಗಿ ವೇದನೆ ಅನುಭವಿಸುತ್ತಿದ್ದಾರೆ, ನಮ್ಮ ಅತ್ತೆ ಅಘಾತಕ್ಕೆ ಒಳಗಾಗಿದ್ದಾರೆ ಎಂದು ಹೇಳಿಕೊಂಡಿದ್ದಾರೆ.
ಕೃಷಿ ಮಾರುಕಟ್ಟೆ ನಿರ್ದೇಶಕರಿಗೆ ದೂರು: ನಮ್ಮ ಮೇಲೆ ಉದ್ದೇಶಪೂರ್ವಕವಾಗಿ ಹಲ್ಲೆ ನಡೆದಿದೆ, ಸಮಿತಿ ಅಧ್ಯಕ್ಷ ಎನ್.ರಾಜೇಂದ್ರ ಪ್ರಸಾದ್ ಮತ್ತು ಕಾರ್ಯದರ್ಶಿ ಎಂ.ವೇಣುಗೋಪಾಲ್ ಕಂಪ್ಯೂಟರ್ ವಿಭಾಗದಲ್ಲಿ ಕೆಲಸ ಮಾಡುವ ಹೆಣ್ಣು ಮಕ್ಕಳನ್ನು ನನ್ನ ವಿರುದ್ಧ ಎತ್ತಿಕಟ್ಟಿ ಹಲ್ಲೆ ಮಾಡಿಸಿದ್ದಾರೆ ಎಂದು ಪಿ.ಎಸ್.ಜಗನ್ನಾಥ್ ಕೃಷಿ ಮಾರುಕಟ್ಟೆ ನಿರ್ದೇಶಕರಿಗೆ ದೂರು ನೀಡಿದ್ದಾರೆ.
ಜೂ.9ರಂದು ನನ್ನನ್ನು ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳು ಕರೆಸಿಕೊಂಡು ಹೆಣ್ಣು ಮಕ್ಕಳಿಗೆ ಕಿರುಕುಳ ನೀಡುತ್ತಿರುವ ಬಗ್ಗೆ ದೂರು ಬಂದಿದ್ದು, ಕ್ಷಮಾಪಣೆ ಪತ್ರ ಬರೆದುಕೊಡುವಂತೆ ತಾಕೀತು ಮಾಡಿದರು. ತಪ್ಪು ಮಾಡಿಲ್ಲವಾದ್ದರಿಂದ ಕ್ಷಮೆ ಕೇಳುವುದಿಲ್ಲವೆಂದು ಹೇಳಿದ್ದರಿಂದ ನನ್ನ ಮೇಲೆ ಹಲ್ಲೆ ನಡೆದಿದೆ, ಸಮಿತಿಯ ಕೆಲ ಅಕ್ರಮಗಳಿಗೆ ನಾನು ಸಹಕರಿಸಿಲ್ಲವೆಂಬ ಕಾರಣಕ್ಕೆ ತೇಜೋವಧೆ ಮಾಡಲೆಂದೇ ಹಲ್ಲೆ ನಡೆಸಿ ವಿಡಿಯೋ ವೈರಲ್ ಮಾಡಲಾಗಿದ್ದು, ಪರಿಶೀಲನೆ ನಡೆಸಿ ನ್ಯಾಯ ಒದಗಿಸುವಂತೆ ಪತ್ರದಲ್ಲಿ ಕೋರಿದ್ದಾರೆ.
ಘಟನೆ ಕುರಿತು ಹೆಚ್ಚಿನ ಮಾಹಿತಿಗಾಗಿ ಕಾರ್ಯದರ್ಶಿ ವೇಣುಗೋಪಾಲ್ ಅವರನ್ನು ವಿಜಯವಾಣಿ ಸಂಪರ್ಕಿಸಲು ಪ್ರಯತ್ನಿಸಿದರೂ ಸಂಪರ್ಕ ಸಾಧ್ಯವಾಗಿಲ್ಲ.