

ಕೋಲಾರ: ವೈದ್ಯಕೀಯ ವೃತ್ತಿಯ ಮೇಲೆ ಆಕರ್ಷಣೆ ಪಡೆದು ರೋಗಿಗಳ ನಂಬಿಕೆಗೆ ಧಕ್ಕೆ ಉಂಟು ಮಾಡುವ ಆಮಿಷಗಳನ್ನು ಧಿಕ್ಕರಿಸಬೇಕು ಎಂದು ಮುಂಬೈನ ಎನ್‌ಎಸ್‌ಇ ಅಕಾಡೆಮಿ ನಿರ್ದೇಶಕ ಡಾ. ಕೆ.ಆರ್.ಎಸ್.ಮೂರ್ತಿ ಹೇಳಿದರು.
ಶ್ರೀ ದೇವರಾಜ ಅರಸು ಉನ್ನತ ಶಿಕ್ಷಣ ಹಾಗೂ ಸಂಶೋಧನಾ ಸಂಸ್ಥೆಯಲ್ಲಿ ಶುಕ್ರವಾರ ಆಯೋಜಿಸಿದ್ದ 2019ನೇ ಸಾಲಿಗೆ ಸ್ನಾತಕೋತ್ತರ ಪದವಿ ಮತ್ತು ಡಿಪ್ಲೊಮಾ ವಿಭಾಗದ ಹತ್ತನೇ ವರ್ಚುವಲ್ ಘಟಿಕೋತ್ಸವದಲ್ಲಿ ಮಾತನಾಡಿ, ಹಣ ಗಳಿಕೆ ವೃತ್ತಿಯ ಧ್ಯೇಯ ಆಗಬಾರದು, ಸೇವಾ ಮನೋಭಾವದಿಂದ ಕಾರ್ಯನಿರ್ವಹಿಸಿ ಎಂದು ಕಿವಿಮಾತು ಹೇಳಿದರು.
ವೈದ್ಯಕೀಯ ಕ್ಷೇತ್ರದಲ್ಲಿ ಹೊಸ ಸಂಶೋಧನೆಗಳು ನಡೆಯುತ್ತಿರುವಂತೆಯೇ ಹೊಸ ಸವಾಲುಗಳು ಎದುರಾಗುತ್ತಿದೆ. ವೃತ್ತಿಯಲ್ಲಿ ಸವಾಲಿಗೆ ಪರಿಹಾರ ಕಂಡುಕೊಂಡು ಮುನ್ನಡೆಯುವುದು ಇಂದಿನ ಅನಿವಾರ್ಯತೆಯೂ ಹೌದು. ವೃತ್ತಿಯ ಚಲನಶೀಲತೆ ವೇಗಕ್ಕೆ ಹೊಂದಿಸಿಕೊಳ್ಳುವವರು ಸಮಾಜದಲ್ಲಿ ಯಶಸ್ವಿಯಾಗಿ ಮುನ್ನಡೆಯಲು ಸಾಧ್ಯ ಎಂದರು.
ಕಲಿಕೆ ಪೂರ್ಣಗೊಳಿಸಿ ವೈದ್ಯಕೀಯ ವೃತ್ತಿಗೆ ಕಾಲಿಡುವವರಿಗೆ ಅನುಭವ ಪಾಠ ಕಲಿಸುತ್ತದೆ. ಇದು ವೃತ್ತಿಯಲ್ಲಿ ಪರಿಪಕ್ವತೆ ಸಾಧಿಸಲು ನೆರವಾಗುತ್ತದೆ. ಭಾರತೀಯ ವೈದ್ಯಕೀಯ ಪಿತಾಮಹ ಚರಕ ಪ್ರತಿಪಾಧಿಸಿದ ನೀತಿ ಸಂಹಿತೆಯನ್ನು ವೈದ್ಯರೂ ವೃತ್ತಿ ಜೀವನದಲ್ಲಿ ಪಾಲಿಸಬೇಕೆಂದು ಹೇಳಿದರು.
ದೇವರಾಜ ಅರಸು ಉನ್ನತ ಶಿಕ್ಷಣ ಹಾಗೂ ಸಂಶೋಧನಾ ಸಂಸ್ಥೆ ಕುಲಾಧಿಪತಿ ಡಾ.ಎಸ್.ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಕುಲಾಧಿಪತಿ ಡಾ.ಜಿ ಪ್ರದೀಪ್ ಕುಮಾರ್, ಸಂಸ್ಥೆ ಉಪಾಧ್ಯಕ್ಷ ರಾಜೇಶ್ ಎನ್. ಜಗದಾಳೆ, ಕಾರ್ಯದರ್ಶಿ ಜಿ.ಎಚ್.ನಾಗರಾಜ್, ಹಣಕಾಸು ನಿರ್ದೇಶಕ ಎ. ರಾಜೇಂದ್ರ ಹಾಜರಿದ್ದರು.
ಹೆಚ್ಚು ಅಂಕ ಗಳಿಸಿದ ಸ್ನಾತಕೋತ್ತರ ಪದವಿಯ 5 ವಿದ್ಯಾರ್ಥಿಗಳು, ಡಿಪ್ಲೊಮಾ, ಎಂಬಿಬಿಎಸ್, ಎಂಎಸ್ಸಿ, ಮತ್ತು ಬಿಎಸ್ಸಿಯ ಒಬ್ಬರಿಗೆ ಚಿನ್ನದ ಪದಕ ಪ್ರದಾನ ಹಾಗೂ ಒಟ್ಟು 294 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು.